ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದನದಲ್ಲಿ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಅಂಬರೀಶ್

|
Google Oneindia Kannada News

ಬೆಂಗಳೂರು, ಜೂ.24 : ವಿಧಾನಮಂಡಲ ಅಧಿವೇಶನದ ಎರಡನೇ ದಿನ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆಡಳಿತ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿ, ಕೆಲವು ಸಮಯ ಕಲಾಪವನ್ನು ಮುಂದೂಡಿದ ಪ್ರಸಂಗ ನಡೆಯಿತು. ವಸತಿ ಸಚಿವ ಅಂಬರೀಶ್ ವಾಜಪೇಯಿ ವಸತಿ ಯೋಜನೆಯಡಿ ಮನೆ ಹಂಚುವಲ್ಲಿ ತಾರತಮ್ಯ ಮಾಡಿದ್ದಾರೆ ಎಂಬುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು.

ಮಂಗಳವಾರದ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ವಾಜಪೇಯಿ ವಸತಿ ಯೋಜನೆಯಡಿ ಮನೆ ಹಂಚಿಕೆ ವಿಚಾರದಲ್ಲಿ ವಸತಿ ಸಚಿವ ಅಂಬರೀಶ್ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ ಹೆಚ್ಚು ಮನೆ ಕೊಟ್ಟಿದ್ದಾರೆ. ಬಿಜೆಪಿ ಶಾಸಕರು ಇರುವ ಕಡೆ ಮನೆ ನೀಡಿಲ್ಲ. ಈ ತಾರತಮ್ಯವನ್ನು ಸರಿಪಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು. ಶೆಟ್ಟರ್ ಅವರ ಆರೋಪಕ್ಕೆ ಬಿಜೆಪಿಯ ಇತರ ಶಾಸಕರು ಧ್ವನಿಗೂಡಿಸಿದರು.

Monsoon session

ಅಂಬರೀಶ್ ಉತ್ತರ : ಶೆಟ್ಟರ್ ಆರೋಪಕ್ಕೆ ಉತ್ತರ ನೀಡಿದ ಸಚಿವ ಅಂಬರೀಶ್, ನಾನು ಅಜ್ಞಾತ ವಾಸದಲ್ಲಿದ್ದೆ. ಮೂರು ಲಕ್ಷ ಮನೆ ವಿತರಿಸುವ ಗುರಿ ಹೊಂದಿದ್ದೇವೆ. ಮೊದಲು ಅರ್ಜಿ ಹಾಕಿದವರಿಗೆ ಆದ್ಯತೆ ನೀಡಲಾಗಿದೆ. 142 ಕ್ಷೇತ್ರಗಳಿಗೆ ಮನೆ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಉತ್ತರದಿಂದ ತೃಪ್ತರಾಗದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಗೊಂದಲ ಉಂಟಾಯಿತು. ಆದ್ದರಿಂದ ಸ್ಪೀಕರ್ ಕಾಗೋಡು ತಿಮ್ಮಪ್ಪ ಸದನವನ್ನು ಕೆಲಕಾಲ ಮುಂದೂಡಿದರು. [ಅಧಿವೇಶನದ ಮೊದಲ ದಿನದ ಮುಖ್ಯಾಂಶಗಳು]

ಮಹಿಳೆಯರಿಗೆ ಕೆಲಸ ಕೊಡಿ : ವಿಧಾನಪರಿಷತ್ತಿನಲ್ಲಿ ಬಿಜೆಪಿ ಸದಸ್ಯೆ ತಾರಾ ಅವರು, ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಆದರೆ, ವಿದ್ಯುತ್ ಇಲಾಖೆಯಲ್ಲಿ ಹೆಚ್ಚು ಆದ್ಯತೆ ನೀಡಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದರು.

ತಾರಾ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಡಿ.ಕೆ.ಶಿವಕುಮಾರ್, ಇಲಾಖೆಯಲ್ಲಿ ಎ ಮತ್ತು ಬಿ ದರ್ಜೆಯಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಿದ್ದೇವೆ. ಇದುವರೆಗೆ ಲೈನ್‌ ಮನ್ ಹುದ್ದೆಗಳನ್ನು ಮಹಿಳೆಯರಿಗೆ ನೀಡುತ್ತಿರಲಿಲ್ಲ. ಒಂದು ವೇಳೆ ಮಹಿಳೆಯರು ಕಂಬ ಹತ್ತಲು ಸಿದ್ಧವಿದ್ದರೆ, ಅವರಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳಿದರು. [ಹೈಟೆಕ್ ಆಗಿದೆ ವಿಧಾನ ಪರಿಷತ್ ಸಭಾಂಗಣ]

ಜಾನುವಾರುಗಳಿಗೆ ಲಸಿಕೆ : ಜಾನುವಾರುಗಳಿಗೆ ಕಾಲುಬಾಯಿ ರೋಗ ಹರಡದಂತೆ 7ನೆ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಆಗಸ್ಟ್ ತಿಂಗಳಿನಿಂದ ಆರಂಭಿಸಲಾಗುತ್ತದೆ ಎಂದು ಪಶು ಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಜೆಡಿಎಸ್‌ ಶಾಸಕ ಚೆಲುವರಾಯಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಆರು ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಗಿದೆ. ಆಗಸ್ಟ್‌ ನಲ್ಲಿ ಏಳನೇ ಸುತ್ತಿನ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಅಕ್ರಮ ಕಲ್ಲು ಗಣಿಗಾರಿಕೆ ಇಲ್ಲ : ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಿಷೇಧಿಸಲಾಗಿದೆ. ಒಂದು ವೇಳೆ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

ಹೊಸ ಪೊಲೀಸ್ ಠಾಣೆ ಸ್ಥಾಪನೆ : ರಾಜ್ಯದ ಹಲವು ಕಡೆ ಹೊಸ ಪೊಲೀಸ್ ಠಾಣೆಗಳನ್ನು ಆರಂಭಿಸುವಂತೆ ಬೇಡಿಕೆ ಬಂದಿದೆ. ಹೊಸ ಮಾರ್ಗ ಸೂಚಿಗಳನ್ನು ರಚಿಸಿದ ನಂತರ ಠಾಣೆಗಳ ಮಂಜೂರಾತಿಗೆ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಕೊರಟಗೆರೆ ಶಾಸಕ ಸುಧಾಕರ್ ಲಾಲ್, ಕೋಳಾಲ ಹೋಬಳಿಗೆ ಹೊಸ ಠಾಣೆ ಮಂಜೂರು ಮಾಡುವಂತೆ ಮನವಿ ಮಾಡಿದಾಗ ಗೃಹ ಸಚಿವರು ಈ ಉತ್ತರ ನೀಡಿದರು. ಏಕಾಏಕಿ ಠಾಣೆಗಳನ್ನು ಮಂಜೂರು ಮಾಡಲು ಆಗುವುದಿಲ್ಲ. ಹೊಸ ಮಾರ್ಗ ಸೂಚಿಗಳನ್ನು ರೂಪಿಸಿದ ನಂತರ ಹೊಸ ಠಾಣೆಗಳನ್ನು ಮಂಜೂರು ಮಾಡುವುದಾಗಿ ಸಚಿವರು ಭರವಸೆ ನೀಡಿದರು.

ಒತ್ತುವರಿ ತೆರವಿಗೆ ಟಾಸ್ಕ್‌ಫೋರ್ಸ್ : ನಗರಗಳಲ್ಲಿ ರಾಜಕಾಲುವೆಗಳ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಲು ತಹಸೀಲ್ದಾರ್, ಉಪವಿಭಾಗಾಧಿಕಾರಿಯನ್ನು ಒಳಗೊಂಡಂತೆ ವಿಶೇಷ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸುವಂತೆ ಶಾಸಕ ಮುನಿರಾಜು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ರಾಜಕಾಲುವೆ ಒತ್ತುವರಿ ತೆರವು ಮಾಡಲು ವಿಶೇಷ ಕಾರ್ಯಪಡೆ ರಚಿಸಲಾಗುವುದು ಎಂದರು.

ಜಲಮಂಡಳಿ ಖಾಲಿ ಹುದ್ದೆಗಳ ನೇಮಕ : ಬೆಂಗಳೂರು ಜಲಮಂಡಳಿಯಲ್ಲಿ ಖಾಲಿಇರುವ 799 ಹುದ್ದೆಗಳ ನೇಮಕಾತಿಯನ್ನು ಹಂತ-ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಹೇಳಿದರು. ಮೊದಲ ಹಂತದಲ್ಲಿ 180 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯ ಸುರೇಶ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದರು.

ಶೇ 22ರಷ್ಟು ಹಣ ಸಮಾಜ ಸೇವೆಗೆ : ಇನ್ನು ಮುಂದೆ ಕಾರ್ಖನೆಗಳು ತಮ್ಮ ಲಾಭಾಂಶದಲ್ಲಿ ಶೇ 2ರಷ್ಟು ಹಣವನ್ನು ಸಮಾಜ ಸೇವೆಗಾಗಿ ಬಳಸಬೇಕಾಗಿದೆ. ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಖಾನೆ ಲಾಭಾಂಶದಲ್ಲಿ ಶೇ.2ರಷ್ಟು ಹಣವನ್ನು ಸಮಾಜಸೇವೆಗಾಗಿ ಬಳಸುವುದನ್ನು ಏಪ್ರಿಲ್ ತಿಂಗಳಿನಿಂದಲೇ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗಿಂದು ತಿಳಿಸಿದರು. ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯ ಹಾಗೂ ಅರಣ್ಯ ಅಭಿವೃದ್ಧಿಗಾಗಿ ಈ ಹಣವನ್ನು ಖರ್ಚಿ ಮಾಡಬಹುದಾಗಿದೆ ಎಂದರು.

ಟೋಲ್ ಕುರಿತು ಕೇಂದ್ರಕ್ಕೆ ಮನವಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಕಡಿಮೆ ಮಾಡಬೇಕೆಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. ಗಣೇಶ್ ಕಾರ್ನಿಕ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಶೀಘ್ರವೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಲಾಗುವುದು ಎಂದು ಹೇಳಿದರು.

English summary
27 days Karnataka Assembly Monsoon session. Day Two What happened in the Assembly today?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X