ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದನದಲ್ಲಿ ಪ್ರತಿಧ್ವನಿಸಿದ ಕೊಲ್ಲೂರು ದೇವಾಲಯ ವಿವಾದ

|
Google Oneindia Kannada News

ಬೆಂಗಳೂರು, ಜೂ. 25 : ಕೊಲ್ಲೂರು ದೇವಾಲಯದ ಆವರಣದಲ್ಲಿ ಶ್ರೀ ವಿಮಲಾನಂದ ಸ್ವಾಮಿಗಳ ಸಂಸ್ಕಾರ ಮಾಡಿರುವ ವಿವಾದ ಬುಧವಾರ ವಿಧಾಸಭೆಯಲ್ಲಿ ಪ್ರತಿಧ್ವನಿಸಿತು. ದೇವಾಲಯಕ್ಕೆ ಅಪಚಾರವಾಗದಮತೆ ತಜ್ಞರ ಜೊತೆ ಚರ್ಚೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸನದಕ್ಕೆ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಬಿಜೆಪಿಯ ಸುನೀಲ್‌ಕುಮಾರ್ ಅವರು ಕೊಲ್ಲೂರು ದೇವಾಲಯದ ಸಂಸ್ಕಾರ ವಿವಾದದ ಬಗ್ಗೆ ಪ್ರಸ್ತಾಪಿಸಿದರು. ಶಾಸ್ತ್ರ ಮತ್ರು ಸಂಪ್ರದಾಯಗಳಲ್ಲಿ ಗೊಂದಲಗಳಿವೆ. ಸ್ಪಷ್ಟತೆ ಇಲ್ಲ. ವಿಭಿನ್ನ ನಿಲುವುಗಳಿಂದಾಗಿ ವಿಮಲಾನಂದರ ಪಾರ್ಥೀವಶರೀರವನ್ನು ಕ್ಷೇತ್ರದ ಆವರಣದಲ್ಲಿ ಸಂಸ್ಕಾರ ಮಾಡಲಾಗಿದೆ. ಆದ್ದರಿಂದ ಭಕ್ತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ತಜ್ಞರು, ಶಾಸ್ತ್ರ ನಿಪುಣರು ಮತ್ತು ಕಾನೂನು ತಜ್ಞರ ಜತೆ ಚರ್ಚೆ ನಡೆಸಿ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ನಂಬಿಕೆಗಳಿಗೆ ಧಕ್ಕೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸದನಕ್ಕೆ ಭರವಸೆ ನೀಡಿದರು. [ಕೊಲ್ಲೂರು ಮೂಕಾಂಬಿಕೆ ಪೂಜೆ ಸ್ಥಗಿತ]

Siddaramaiah

ದುರುಪಯೋಗಕ್ಕೆ ಅವಕಾಶವಿಲ್ಲ : ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳಿಗೆ ದೊರೆತಿರುವ ವಿಶೇಷ ಸ್ಥಾನಮಾನ ದುರುಪಯೋಗ ವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ. ಹೈ-ಕ ಭಾಗದ ಜಿಲ್ಲೆಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಮೀಸಲಾತಿ ನೀಡುವ ಸೌಲಭ್ಯ ಕಲ್ಪಿಸಲಾಗಿದೆ. ಆ ಭಾಗದ ವಾಸಿಗಳನ್ನು ಗುರುತಿಸಿ ಪ್ರಮಾಣಪತ್ರ ನೀಡಲು ಕಂದಾಯ ವಿಭಾಗದ ಸಹಾಯಕ ಉಪ ಆಯುಕ್ತರನ್ನು ಸಕ್ಷಮ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಕಂದಾಯ ವಿಭಾಗದ ಸಹಾಯಕ ಉಪ ಆಯುಕ್ತರ ಬದಲಾಗಿ ತಹಸೀಲ್ದಾರ್‌ ಅವರಿಗೆ ಈ ಜವಾಬ್ದಾರಿ ವಹಿಸಬೇಕೆಂದು ಶೆಟ್ಟರ್ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

ಬಾಲ ಕಾರ್ಮಿಕರಿಗೆ ಪುನರ್ವಸತಿ : ರಾಜ್ಯದಲ್ಲಿ 1,09,751 ಬಾಲಕಾರ್ಮಿಕರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ. ಬುಧವಾರದ ಕಲಾಪದಲ್ಲಿ ಡಾ.ಎಂ.ಆರ್. ಹುಲಿನಾಯ್ಕರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ 405 ಬಾಲ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಪರಮೇಶ್ವರ್ ನಾಯಕ್ ತಿಳಿಸಿದರು. [ಅಧಿಕಾರಿಗಳೇ ಕನ್ನಡ ಕಲಿಯಿರಿ, ಇಲ್ಲವೇ ಹೊರಡಿ]

1,342 ಕೋಟಿ ವೆಚ್ಚದಲ್ಲಿ ಮನೆ ನಿರ್ಮಾಣ : ಕರ್ನಾಟಕದ 14 ನಗರಗಳಲ್ಲಿ ಕೊಳಗೇರಿ ನಿವಾಸಿಗಳಿಗಾಗಿ 1342 ಕೋಟಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ವಸತಿ ಸಚಿವ ಅಂಬರೀಶ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಗುಡಿಸಲು ಮುಕ್ತ ರಾಜ್ಯಗಳನ್ನು ಮಾಡುವ ಉದ್ದೇಶದಿಂದ ರಾಜೀವ್ ಆವಾಸ್ ಯೋಜನೆಯನ್ನು ಜಾರಿಗೆ ತಂದಿದೆ.

ಇದರ ಸೌಲಭ್ಯ ಪಡೆದುಕೊಂಡು ಈ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅಂಬರೀಶ್ ಮಾತಿಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್‌ ಶಾಸಕ ವೈ.ಎಸ್.ವಿ.ದತ್ತ ಅವರು, ಮನೆಗಳನ್ನು ನಿರ್ಮಾಣ ಮಾಡುವುದಕ್ಕೆ ಒಬ್ಬರೇ ಗುತ್ತಿಗೆದಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರಿಂದ ನಿರ್ಮಾಣ ಕಾರ್ಯ ವಿಳಂಬವಾಗಿ ಮನೆ ಹಂಚಿಕೆ ತಡವಾಗುತ್ತದೆ. ಆದ್ದರಿಂದ ಹೊಸ ನಿಯಮ ಜಾರಿಗೆ ತನ್ನಿ ಎಂದು ಸಲಹೆ ನೀಡಿದರು.

16,200 ಶಿಕ್ಷಕರ ನೇಮಕ : ಮುಂದಿನ ಅಕ್ಟೋಬರ್ ಅಂತ್ಯದ ವೇಳೆಗೆ 16,200 ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಾಗಿ ಸಚಿವ ಕಿಮ್ಮನೆ ರತ್ನಾಕರ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಶಿಕ್ಷಕರ ಕೊರತೆ ಇರುವ ಪ್ರದೇಶಗಳಿಗೆ ನೂತನವಾಗಿ ನೇಮಕವಾದ ಶಿಕ್ಷಕರನ್ನು ಕಳುಹಿಸಲಾಗುತ್ತದೆ. ಸದ್ಯ 12 ಸಾವಿರ ಶಿಕ್ಷರನ್ನು ನೇಮಕ ಮಾಡಿಕೊಳ್ಳಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ ಕಿಮ್ಮನೆ ರತ್ನಾಕರ್ ಹೇಳಿದರು.

ಸಚಿವರು ತಪ್ಪು ಮಾಹಿತಿ ನೀಡಿದ್ದಾರೆ : ಸಚಿವ ಖಮರುಲ್ ಇಸ್ಲಂ ವಿಧಾನಸಭೆಗೆ ತಪ್ಪು ಮಾಹಿತಿ ನೀಡಿ ಹಕ್ಕುಚ್ಯುತಿ ಮಾಡಿದ್ದಾರೆ ಮತ್ತು ಸದನವನ್ನು ತಪ್ಪು ದಾರಿಗೆ ಎಳೆದಿದ್ದಾರೆ ಎಂದು ಗೋ.ಮಧುಸೂದನ್ ನೇತೃತ್ವದ ಹಕ್ಕುಬಾಧ್ಯತಾ ಸಮಿತಿ ಬುಧವಾರ ವರದಿ ಸಲ್ಲಿಸಿದೆ. ವಕ್ಫ್ ಮಂಡಳಿ ಆಸ್ತಿ ದುರುಪಯೋಗಕ್ಕೆ ಸಂಬಂಧಪಟ್ಟಂತೆ ಸಚಿವರು ನೀಡಿದ್ದ ಹೇಳಿಕೆ ಸಂಬಂಧ ವಿಧಾನಪರಿಷತ್ತಿಗೆ ಇಂದು ವರದಿ ಸಲ್ಲಿಸಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದರೂ, ಸಚಿವರು ಮಾತ್ರ ಸದನದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಚಿವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಸಚಿವರ ವಿರುದ್ಧ ಕಾಂಗ್ರೆಸಿಗರ ಅಸಮಾಧಾನ : ಬುಧವಾರದ ಕಲಾಪದಲ್ಲಿ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ತಮ್ಮ ಪಕ್ಷದ ಸಚಿವರ ವಿರುದ್ಧ ಸದನದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಶಿಕ್ಷಣ ಇಲಾಖೆ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ವ್ಯವಸ್ಥೆಗಳಿಲ್ಲ, ಸರ್ಕಾರದಿಂದ ಶಿಕ್ಷಣ ಕ್ಷೇತ್ರಕ್ಕೆ 1,600ಕೋಟಿ ರೂ.ಅನುದಾನ ಘೋಷಿಸಿದ್ದರು, ನೀಡುತ್ತಿರುವುದು ಮಾತ್ರ ಕೇವಲ 4 ಕೋಟಿ ರೂಪಾಯಿ ಎಂದು ಶಿಕ್ಷಣ ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರಕ್ಕೆ ಏಟು ಕೊಟ್ಟ ಅಶೋಕ್ : ಎಡಿಜಿಪಿ ರವೀಂದ್ರನಾಥ್ ಪ್ರಕರಣ ಮತ್ತು ಮಂಗಳೂರು ಜೈಲಿನಲ್ಲಿ ಪೊಲೀಸರ ಮೇಲೆ ಖೈದಿಗಳ ಹಲ್ಲೆ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಿದ ಆರ್.ಅಶೋಕ್ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದರು. ಇದರಿಂದ ಕೆಲವು ಕಾಲ ಅಶೋಕ್ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ನಡುವೆ ವಾಗ್ವಾದ ನಡೆಯಿತು.

English summary
27 days Karnataka Assembly Monsoon session Day Three highlights. What happened in the Assembly today?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X