ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರಿಗೆ ಲಾಭ? ಯಾರಿಗೆ ನಷ್ಟ? ಲೆಕ್ಕಾಚಾರ ಶುರು

By ಮಧುಸೂದನ ಹೆಗಡೆ
|
Google Oneindia Kannada News

ಬೆಂಗಳೂರು. ಆ. 25 : ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವೇದಿಕೆ ಎಂದೇ ಪರಿಗಣಿಸಲ್ಪಟ್ಟಿದ್ದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದಿದೆ. ಬಳ್ಳಾರಿ ಗ್ರಾಮಾಂತರ, ಚಿಕ್ಕೋಡಿ-ಸದಲಗಾ ಕಾಂಗ್ರೆಸ್‌ ಪಾಲಾಗಿದ್ದರೆ, ಶಿಕಾರಿಪುರದಲ್ಲಿ ಕಮಲ ಅರಳಿದೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಪ್ರತಿಷ್ಠೆ ಕದನಕ್ಕೆ ತೆರೆಬಿದ್ದಿದೆ.

ಚುನಾವಣೆಯಿಂದ ಹೊರಗುಳಿದಿದ್ದ ಜೆಡಿಎಸ್‌ ಫಲಿತಾಂಶ ಬಂದ ನಂತರವೂ ಮೌನಕ್ಕೆ ಶರಣಾಗಿದೆ. ಕಾಂಗ್ರೆಸ್‌ ಇದು ಉತ್ತಮ ಆಡಳಿತಕ್ಕೆ ಸಿಕ್ಕ ಗೆಲುವು ಎಂದು ವಿಶ್ಲೇಷಣೆ ಮಾಡುತ್ತಿದ್ದರೆ, ಬಿಜೆಪಿ ಮುಖಂಡರು ನಾವು ಕಳೆದುಕೊಂಡಿದ್ದು ಏನು ಇಲ್ಲ. ಮುಂದಿನ ಚುನಾವಣೆಗಳತ್ತ ಪಕ್ಷ ಸಂಘಟನೆ ಮಾಡುತ್ತೇವೆ ಎನ್ನುತ್ತಿದ್ದಾರೆ. (ಉಪ ಚುನಾವಣೆ ಫಲಿತಾಂಶ : ಯಾರು, ಏನು ಹೇಳಿದರು?)

ಒಟ್ಟಿನಲ್ಲಿ ರಾಜ್ಯದ ಮೂರು ಕ್ಷೇತ್ರದ ಜನ ಮತ್ತೊಮ್ಮೆ ಮತದಾನ ಮಾಡಿದ್ದಾರೆ. ಹೊಸ ಜನಪ್ರತಿನಿಧಿಯ ಆಯ್ಕೆಯಾಗಿದೆ. ಅದರಂತೆ ಜನರ ನೀರಿಕ್ಷೆ ಭಾರವೂ ಹೆಚ್ಚಾಗಿದೆ. ಚುನಾಯಿತ ಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿಯಲ್ಲಿ ಯಾವ ರೀತಿ ತೊಡಗಿಕೊಳ್ಳುತ್ತಾರೆ ಕಾದು ನೋಡಬೇಕು.

ಕಾಂಗ್ರೆಸ್‌ಗೆ ಟಾನಿಕ್‌ ನೀಡಿದ ಫಲಿತಾಂಶ

ಕಾಂಗ್ರೆಸ್‌ಗೆ ಟಾನಿಕ್‌ ನೀಡಿದ ಫಲಿತಾಂಶ

ಉಪಚುನಾವಣೆ ಫಲಿತಾಂಶ ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ಗೆ ಕೊಂಚ ಮಟ್ಟಿನ ಶಕ್ತಿ ತುಂಬಿದೆ ಎಂದೇ ಹೇಳಬಹುದು. ಆಂತರಿಕ ಕಚ್ಚಾಟ, ಸಚಿವ ಸಂಪುಟ ಪುನಾರಚನೆ ಸಮಸ್ಯೆ, ನಿರಂತರ ಅತ್ಯಾಚಾರ ಪ್ರಕರಣಗಳು, ಅರ್ಕಾವತಿ ಡಿ ನೋಟಿಫಿಕೇಶನ್‌ ಪ್ರಕರಣ, ಎಂಇಎಸ್‌ ಪುಂಡಾಟಿಕೆ ಮತ್ತು ಸರ್ಕಾರದ ಮೃದು ಧೋರಣೆ ಇಂಥ ಅನೇಕ ಸಂಗತಿಗಳು ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತಿದ್ದವು. ವಿಧಾನಮಂಡಲ ಅಧಿವೇಶನದ ವೇಳೆ ಮೇಲಿನ ಸಂಗತಿಯನ್ನೇ ವಿರೋಧ ಪಕ್ಷಗಳು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು. ಆದರೂ ಜನ ಆಡಳಿತ ಪಕ್ಷಕ್ಕೇ ಮತ ನೀಡಿದ್ದಾರೆ.

ಸಿದ್ದರಾಮಯ್ಯ ಸೇಫ್‌

ಸಿದ್ದರಾಮಯ್ಯ ಸೇಫ್‌

ಲೋಕಸಭಾ ಚುನಾವಣೆಯಲ್ಲಿ ತಕ್ಕ ಮಟ್ಟಿನ ಸಾಧನೆ ಮಾಡಿದ್ದರೂ ಆಡಳಿತ ಪಕ್ಷ ನೇತೃತ್ವ ವಹಿಸಿರುವ ಸಿದ್ದರಾಮಯ್ಯ ಅವರಿಗೆ ಅಧಿಕಾರ ಕಳೆದುಕೊಳ್ಳುವ ಆತಂಕ ಒಂದೊಮ್ಮೆ ಎದುರಾಗಿತ್ತು. ಹೈಕಮಾಂಡ್‌ ಸೂಚನೆಯಂತೆ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಎರಡೆರಡು ಬಾರಿ ರಾಜ್ಯಕ್ಕೆ ಆಗಮಿಸಿ ನಾಯಕರ ಕಿವಿ ಹಿಂಡಿದ್ದರು. ಅಸಮರ್ಥರನ್ನು ಸಂಪುಟದಿಂದ ಕೈಬಿಡಲು ಸೂಚಿಸಿದ್ದರು. ಇತ್ತ ಆಂತರಿಕ ಭಿನ್ನಾಭಿಪ್ರಾಯವೂ ಬಿಗಡಾಯಿಸುವ ಹಂತಕ್ಕೆ ತಲುಪಿತ್ತು. ಈ ಎಲ್ಲ ಗೊಂದಲಗಳಿಗೆ ಸದ್ಯದ ಉಪಚುನಾವಣೆ ಫಲಿತಾಂಶ ಉತ್ತರ ನೀಡಿದೆ

ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತ

ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತ

ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಮಾತನಾಡುತ್ತ ಸಂಪುಟ ಪುನಾರಚನೆ ಇಲ್ಲ ಎಂದಿದ್ದರು. ಅಂದರೆ ಉಪಚುನಾವಣೆ ಫಲಿತಾಂಶದ ನಂತರ ವಿಸ್ತರಣೆ ಆಗಲಿದೆಯೇ? ಎಂಬ ಜನರು ಮತ್ತು ಪತ್ರಕರ್ತರ ಪ್ರಶ್ನೆಗೆ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ. ಈಗ ಫಲಿತಾಂಶ ಹೊರಬಿದ್ದಿದೆ ಅಂದರೆ ಸಂಪುಟ ಪುನಾರಚನೆ ಬದಲು ವಿಸ್ತರಣೆ ಆಗಲಿದೆ ಎಂಬ ಊಹಾಪೋಹಕ್ಕೆ ಮತ್ತಷ್ಟು ಪುಷ್ಟಿ ದೊರೆತಿದೆ.

ಕಾಗೋಡು-ಪರಮೇಶ್ವರ್‌ಗೆ ಬ್ಯಾಟಿಂಗ್‌ ಅವಕಾಶ

ಕಾಗೋಡು-ಪರಮೇಶ್ವರ್‌ಗೆ ಬ್ಯಾಟಿಂಗ್‌ ಅವಕಾಶ

ಸಿದ್ದರಾಮಯ್ಯ ಸಂಪುಟದಲ್ಲಿ ಒಟ್ಟು 5 ಖಾತೆಗಳಿಗೆ ಮಂತ್ರಿಗಳು ಬೇಕು. ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌ ಅವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಿದ್ದರ ಹಿನ್ನೆಲೆ ಎಲ್ಲರಿಗೂ ಗೊತ್ತೆ ಇದೆ. ಅಂದರೆ ಪರಮೇಶ್ವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವುದು ಖಚಿತ. ಜತೆಗೆ ಉತ್ತರ ಕರ್ನಾಟಕದ ಇಬ್ಬರಿಗೆ ಮಂತ್ರಿ ಸ್ಥಾನ ದೊರೆಯುವ ನಿರೀಕ್ಷೆಯಿದೆ. ಈ ಬಾರಿಯೂ ಕಾಗೋಡು ತಿಮ್ಮಪ್ಪ ಅವರಿಗೆ ಸಚಿವ ಸ್ಥಾನ ದೊರೆಯದಿದ್ದರೇ ಅವರು ಸ್ಪೀಕರ್‌ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ಆಪ್ತ ವಲಯದಿಂದ ಕೇಳಿಬಂದಿದೆ. ಎ.ಮಂಜು ಮತ್ತು ರಾಯರೆಡ್ಡಿ ಅವರಿಗೂ ಅವಕಾಶ ಒದಗಿ ಬಂದರೇ ಆಶ್ಚರ್ಯವಿಲ್ಲ.

ಬಿಜೆಪಿ ಕಳೆದುಕೊಂಡಿದ್ದು ಏನೂ ಇಲ್ಲ!

ಬಿಜೆಪಿ ಕಳೆದುಕೊಂಡಿದ್ದು ಏನೂ ಇಲ್ಲ!

ಒಂದರ್ಥದಲ್ಲಿ ಫಲಿತಾಂಶ ಅವಲೋಕಿಸಿದರೆ ಬಿಜೆಪಿ ಕಳೆದುಕೊಂಡಿದ್ದು ಏನೂ ಇಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಯಡಿಯೂರಪ್ಪ ಮತ್ತು ಶ್ರೀರಾಮಲು ಈಗ ಕಮಲ ಚಿಹ್ನೆಯಡಿ ಆರಿಸಿ ಬಂದಿರುವ ಸಂಸದರು. ಇತ್ತ ಚಿಕ್ಕೋಡಿಯಲ್ಲಿ ರಾಜೀನಾಮೆ ನೀಡಿ ಸಂಸದರಾಗಿದ್ದು ಕಾಂಗ್ರೆಸ್‌ನ ಪ್ರಕಾಶ್‌ ಹುಕ್ಕೇರಿ.

ಮಾಯವಾದ ಮೋದಿ ಅಲೆ

ಮಾಯವಾದ ಮೋದಿ ಅಲೆ

ರಾಜ್ಯ ಬಿಜೆಪಿ ನಾಯಕರು ಒಗ್ಗಟ್ಟು ಪ್ರದರ್ಶಿಸಿದರೂ ಮಾಯವಾದ ಮೋದಿ ಅಲೆ ಬಿಜೆಪಿಗೆ ಹೊಡೆತ ನೀಡಿತು. ಅಲ್ಲದೇ ಬಳ್ಳಾರಿ ಜನ ಈ ಬಾರಿ ಶ್ರೀರಾಮಲು ಕೈಬಿಟ್ಟರು. ಬಿಜೆಪಿಯಿಂದ ಬಳ್ಳಾರಿಯ ಒಂದು ಕ್ರೇತ್ರ ಕಸಿದುಕೊಳ್ಳಲು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಿದ್ದ ಕಾಂಗ್ರೆಸ್‌ ಯಶಸ್ವಿಯಾಗಿದೆ.

ತವರು ಮನೆಗೆ ಮರಳಿದ್ದ ನಾಯಕರು

ತವರು ಮನೆಗೆ ಮರಳಿದ್ದ ನಾಯಕರು

2013ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ವೈ ಕೆಜೆಪಿ ಕಟ್ಟಿ ಹೋರಾಡಿದ್ದರೇ, ಶ್ರೀರಾಮಲು ಬಿಜೆಪಿಯಿಂದ ಸಿಡಿದು ಬಿಎಸ್‌ಆರ್‌ ಕಟ್ಟಿಕೊಂಡಿದ್ದರು. ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಬ್ಬರು ನಾಯಕರು ತವರು ಮನೆಗೆ ಮರಳಿದ್ದರು. ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿ, ಮೋದಿ ಅಲೆಯ ಲಾಭದೊಂದಿಗೆ ರಾಜ್ಯದಲ್ಲಿ ಬಿಜೆಪಿ 19 ಸ್ಥಾನ ಗಳಿಸಲು ಈ ಎಲ್ಲ ಸಂಗತಿಗಳು ಕಾರಣವಾಗಿದ್ದವು.

ಜೆಡಿಎಸ್‌ನಲ್ಲಿ ಮತ್ತಷ್ಟು ತಳಮಳ

ಜೆಡಿಎಸ್‌ನಲ್ಲಿ ಮತ್ತಷ್ಟು ತಳಮಳ

ಉಪಚುನಾವಣೆಗೆ ಸ್ಪರ್ಧಿಸದೇ ಹೊರಗುಳಿದಿದ್ದರೂ ಫಲಿತಾಂಶದ ನೇರ ಪರಿಣಾಮ ಎದುರಿಸುತ್ತಿರುವುದು ಜಾತ್ಯತೀತ ಜನತಾದಳ. ಪಕ್ಷದೊಳಗಿನ ಭಿನ್ನಾಭಿಪ್ರಾಯ, ನಾಯಕರ ಮಾತಿನ ಚಕಮಕಿಯಿಂದ ಕೊನೆ ಕ್ಷಣದ ವರೆಗೆ ವಿಧಾನಸಭೆಗೆ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಬೆಂಗಳೂರಿನಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಬೀದಿಗೆ ಬಂತು. ಶಿಕಾರಿಪುರದಲ್ಲಿ ಬಹಿರಂಗವಾಗಿಯೇ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಜೆಡಿಎಸ್‌ ಕಾರ್ಯತಂತ್ರ ಫಲನೀಡಲಿಲ್ಲ.

ಜೆಡಿಎಸ್‌ ಮುಂದಿನ ನಡೆ ಏನು?

ಜೆಡಿಎಸ್‌ ಮುಂದಿನ ನಡೆ ಏನು?

ಸಿಎಂ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಮುಖಂಡ ಕುಮಾರಸ್ವಾಮಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದು ಸುಳ್ಳಲ್ಲ. ಜೆಡಿಎಸ್‌ ಮುಂದಿನ ದಿನಗಳಲ್ಲಿ ಯಾರ ಜತೆ ಹೆಚ್ಚಿನ ದೋಸ್ತಿ ಮಾಡಲಿದೆ, ಅಥವಾ ವಿರೋಧ ಕಟ್ಟಿಕೊಳ್ಳಲಿದೆ ಎಂಬುದರ ಮೇಲೆ ಉಪಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್‌ ಪಾತ್ರ ಏನಿತ್ತು ಎಂಬುದನ್ನು ಊಹಿಸಬಹುದು.

English summary
Karnataka assembly bypoll election result announced. Congress won 2 seats and BJP got 1. But, now thinking start's Who gains, who loses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X