ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಿನ ಜನತೆಯ ದಶಕಗಳ ಕನಸು ನನಸು

By Mahesh
|
Google Oneindia Kannada News

ಚಿಕ್ಕಮಗಳೂರು, ನ.20:: ನಗರದ ಹಿರೇಮಗಳೂರಿನಲ್ಲಿ ನಿರ್ಮಾಣವಾಗಿರುವ ನೂತನ ರೈಲು ನಿಲ್ದಾಣದ ಆವರಣದಲ್ಲಿ ಮಂಗಳವಾರ ನೈರುತ್ಯ ರೈಲ್ವೆ ಹಮ್ಮಿಕೊಂಡಿದ್ದ ಸಮಾರಂಭ­ದಲ್ಲಿ ಚಿಕ್ಕಮಗಳೂರು-ಕಡೂರು ನೂತನ ರೈಲ್ವೆ ಮಾರ್ಗವನ್ನು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆ ಮಾಡಿದರು. ಈ ಮೂಲಕ ಜಿಲ್ಲೆಯ ಜನತೆಯ ಹಲವು ದಶಕಗಳ ಕನಸು ನನಸಾಗಿದೆ.

1978ರಲ್ಲಿ ಶಂಕುಸ್ಥಾಪನೆಯಾದ ರೈಲ್ವೆ ಕಾಮಗಾರಿ ಮುಗಿದು 45 ಕಿ.ಮೀ ಕಡೂರು -ಚಿಕ್ಕಮಗಳೂರು ರೈಲು ಮಾರ್ಗಕ್ಕೆ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಚಿಕ್ಕಮಗಳೂರು, ಕಡೂರು ನೂತನ ರೈಲು ಚಿಕ್ಕಮಗಳೂರು ರೈಲ್ವೆ ಸ್ಟೇಷನ್ ನಿಂದ ಕಡೂರಿಗೆ ಹೊರಟಿತು.

ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ತತ್ತರಿಸಿ ಹೋಗಿದ್ದ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರಿಗೆ ರಾಜಕೀಯವಾಗಿ ಮರುಜೀವ ನೀಡಿದ ಚಿಕ್ಕಮಗಳೂರು ಜಿಲ್ಲೆಗೆ ರೈಲು ಸಂಪರ್ಕ ಕಲ್ಪಿಸುವುದಾಗಿ 1978ರಲ್ಲಿ ಭರವಸೆ ನೀಡಿದ್ದರು. ನಂತರದ ಕೆಲವು ದಿನಗಳಲ್ಲಿ ಕಡೂರು-ಚಿಕ್ಕಮಗಳೂರು ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದಿನಿಂದ ಇಂದಿನವರೆಗೆ ಕುಂಟುತ್ತಾ ಸಾಗಿದ್ದ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಸಮರ್ಪಣೆಯಾಗಿದೆ.

ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲು ವಿಶೇಷ ಆಸಕ್ತಿ ವಹಿಸಿದ್ದರು. ರೈಲ್ವೆ ಮಂಡಳಿ ಸರ್ವೆ ಕಾರ್ಯಕ್ಕಾಗಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು

ಮೂರುವರೆ ದಶಕಗಳ ನಂತರ ಮಲೆನಾಡು ಜಿಲ್ಲೆ ಚಿಕ್ಕಮಗಳೂರಿಗೆ ರೈಲ್ವೆ ಸಂಪರ್ಕ ಸೌಲಭ್ಯ ದೊರೆತಿದ್ದಕ್ಕೆ ಜನತೆ ಹರ್ಷದಿಂದ ರೈಲು ಏರಿ ಮೊದಲ ಪ್ರಯಾಣದ ಸುಖ ಅನುಭವಿಸಿದರು. ಹಲವರು ಸಿಹಿ ಹಂಚಿ ಸಂಭ್ರಮಪಟ್ಟರು. ರೈಲಿನ ಬಗ್ಗೆ ಇನ್ನಷ್ಟು ವಿವರ ಹಾಗೂ ಚಿತ್ರಗಳನ್ನು ಮುಂದೆ ಓದಿ...

ಬಂದಿದ್ದ ಗಣ್ಯರು

ಬಂದಿದ್ದ ಗಣ್ಯರು

ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್, ಕೆ.ಎಚ್.ಮುನಿಯಪ್ಪ, ಆಸ್ಕರ್ ಫರ್ನಾಂಡೀಸ್, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಶಾಸಕರಾದ ಸಿ.ಟಿ.ರವಿ, ವೈ.ಎಸ್.ವಿ.ದತ್ತ, ಸಂಸದ ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಉಸ್ತುವಾರಿ ಸಚಿವ ಅಭಯ್ ಚಂದ್ರ ಜೈನ್, ವಿಧಾನಪರಿಷತ್ ಸದಸ್ಯರಾದ ಮೋಟಮ್ಮ, ಗಾಯತ್ರಿ ಶಾಂತೇಗೌಡ, ಎಂ.ಶ್ರೀನಿವಾಸ್, ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಜಿ.ಪಂ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ತಾ.ಪಂ ಅಧ್ಯಕ್ಷೆ ಅಂಬಿಕಾ ಶಿವಕುಮಾರ್ ಮುಂತಾದ ಗಣ್ಯರು ಹಸಿರು ನಿಶಾನೆ ತೋರಿದರು.

ಖರ್ಗೆ ಭರವಸೆ

ಖರ್ಗೆ ಭರವಸೆ

'ಚಿಕ್ಕಮಗಳೂರು-ಸಕಲೇಶಪುರ ನೂತನ ರೈಲು ಮಾರ್ಗಕ್ಕೆ ಪರಿಸರ ಇಲಾಖೆ ಅನುಮತಿ ದೊರೆತು, ರಾಜ್ಯ ಸರ್ಕಾರ ತನ್ನ ಪಾಲಿನ ಶೇ 50 ಅನುದಾನ ಮತ್ತು ಭೂಮಿ ಸ್ವಾಧೀನ ಪಡಿಸಿಕೊಟ್ಟ ತಕ್ಷಣವೇ 652 ಕೋಟಿ ರು ಅಂದಾಜು ವೆಚ್ಚದ ಈ ಯೋಜನೆ­ಯನ್ನು ಮುಂದಿನ ಬಜೆಟ್ ನಲ್ಲಿ ಸೇರಿಸಿ ಕಾಮಗಾರಿ ಪ್ರಾರಂಭಿಸಲಾಗುವುದು' ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು

ಸಕಲೇಶಪುರ ಮಾರ್ಗ

ಸಕಲೇಶಪುರ ಮಾರ್ಗ

ಕೇಂದ್ರ ಸಚಿವ ಖರ್ಗೆ ಅವರು ನೀಡಿರುವ ಭರವಸೆ ಈಡೇರಿದರೆ ಹಾಸನ ಮಂಗಳೂರು ಮಾರ್ಗಕ್ಕೆ ಚಿಕ್ಕಮಗಳೂರಿನಿಂದ ಪ್ರಯಾಣಿಕರು ಸೇರಿಕೊಳ್ಳಬಹುದಾಗಿದೆ.

ಶಿವಮೊಗ್ಗ-ಕಡೂರು-ಚಿಕ್ಕಮಗಳೂರು ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ ಪ್ರವಾಸಿ ತಾಣಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗುತ್ತದೆ.ಸಕಲೇಶಪುರ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಗೂ ಕೂಡ ಶಿಲಾನ್ಯಾಸ ನೆರವೇರಿಸಿರುವುದು ಶುಭ ಸೂಚನೆ.ಇಲ್ಲಿಂದ ಮುಂದಿನ ಸರಣಿ ಚಿತ್ರಗಳ ಕೃಪೆ: ನಮ್ಮ ಚಿಕ್ಕಮಗಳೂರು ಫೇಸ್ ಬುಕ್ ಪುಟ
ವೇಳಾ ಪಟ್ಟಿ

ವೇಳಾ ಪಟ್ಟಿ

ನವೆಂಬರ್ 19ರಂದು ಪ್ರಾರಂಭವಾದ ಕಡೂರು-ಚಿಕ್ಕಮಗಳೂರು ರೈಲು ಪ್ರತಿದಿನ ಬೆಳಗ್ಗೆ 6.15ಕ್ಕೆ ಹೊರಟು ಕಡೂರು-ಬೀರೂರು, ತರೀಕೆರೆ ಮಾರ್ಗವಾಗಿ ಬೆಳಗ್ಗೆ 9.30ಕ್ಕೆ ಶಿವಮೊಗ್ಗ ತಲುಪಲಿದೆ. ರಾತ್ರಿ 9.30ಕ್ಕೆ ಶಿವಮೊಗ್ಗದಿಂದ ನಿರ್ಗಮಿಸುವ ರೈಲು ಚಿಕ್ಕಮಗಳೂರಿಗೆ 11 ಗಂಟೆಗೆ ಆಗಮಿಸಲಿದೆ.

ಚಿತ್ರ ಕೃಪೆ: ರುದ್ರೇಶ್ ಕುಂದೂರು, ಚಿಕ್ಕಮಗಳೂರು
ಸಂಪರ್ಕ ರೈಲು

ಸಂಪರ್ಕ ರೈಲು

ಇಂಟರ್ ಸಿಟಿ, ದಾದರ್ ಎಕ್ಸ್ ಪ್ರೆಸ್, ಶತಾಬ್ದಿ ರೈಲುಗಳಿಗೆ ಸಂಪರ್ಕ ಕಲ್ಪಿಸಲಿದೆ. ಇದರಿಂದ ಬೆಂಗಳೂರು, ಮುಂಬೈ, ಹುಬ್ಬಳ್ಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸಕಲೇಶಪುರಕ್ಕೆ ಸಂಪರ್ಕ ಸಿಕ್ಕರೆ ಹಾಸನ ಬೆಂಗಳೂರು ಮಾರ್ಗದ ರೈಲಿಗೂ ಜನ ತೆರಳಬಹುದು.

ತರಾತುರಿ ಇಲ್ಲ

ತರಾತುರಿ ಇಲ್ಲ

ನೈರುತ್ಯ ರೇಲ್ವೆ ಇಲಾಖೆಯ ಉನ್ನತ ಅಧಿಕಾರಿಗಳ ತಂಡ ಅಕ್ಟೋಬರ್ ತಿಂಗಳು ಪೂರ್ತಿ ಕಡೂರು- ಚಿಕ್ಕಮಗಳೂರು ರೇಲ್ವೆ ಹಳಿ ಹಾಗೂ ವೇಗಮಿತಿ ಯಂತ್ರದ ಪರಿಶೀಲನೆ ನಡೆಸಿ ಎಲ್ಲವೂ ಸರಿಯಾಗಿದೆ ಎಂದು ಘೋಷಿಸಿದರು.

ಕಡೂರು- ಚಿಕ್ಕಮಗಳೂರು ರೇಲ್ವೆ ಮಾರ್ಗದ 45 ಕಿ.ಮೀ. ಉದ್ದದ ಹಳಿಗಳನ್ನು ಅಧಿಕಾರಿಗಳು ಶುಕ್ರವಾರ ಸಹ ಮತ್ತೊಮ್ಮೆ ಹಳಿ ಪರಿಶೀಲನೆ ನಡೆಸಿದ್ದರು. ಇಂದಿರಾ ಗಾಂಧಿ ಅವರ ಹುಟ್ಟುಹಬ್ಬದ ದಿನದಂದೇ ಲೋಕಾರ್ಪಣೆ ಮಾಡಲು ತರಾತುರಿಯಿಂದ ಯೋಜನೆ ಪೂರ್ಣಗೊಂಡಿದೆ ಎಂಬ ಆರೋಪವನ್ನು ಅಧಿಕಾರಿಗಳು ಅಲ್ಲಗೆಳೆದಿದ್ದಾರೆ.
 ಶತಮಾನದ ಇತಿಹಾಸ ?

ಶತಮಾನದ ಇತಿಹಾಸ ?

ಚಿಕ್ಕಮಗಳೂರು-ಕಡೂರು ರೈಲು ಮಾರ್ಗದ ಕನಸು ಕೇವಲ 36 ವರ್ಷಗಳ ಕನಸಲ್ಲ ಬದಲಿಗೆ ನೂರು ವರ್ಷಗಳ ಇತಿಹಾಸವಿದೆ ಎಂಬ ಮಾತಿದೆ.

ಚಿಕ್ಕಮಗಳೂರಿನ ಶ್ರೀ ಕೃಷ್ಣರಾಜೇಂದ್ರ ಗಿರಿಧಾಮಕ್ಕೆ(ಕೆಮ್ಮಣ್ಣು ಗುಂಡಿ) ಖಾಸಗಿ ಭೇಟಿಗಾಗಿ ಬಂದು ತಂಗಿದ್ದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಚಿಕ್ಕಮಗಳೂರು ಟೌನ್ ಮುನ್ಸಿಪಲ್ ನವರು ಕೊಟ್ಟ ಕಡೂರು-ಚಿಕ್ಕಮಗಳೂರು ರೈಲು ಸಂಪರ್ಕಕ್ಕಾಗಿ ಮನವಿ ಮಾಡಿದ್ದರು ಎನ್ನಲಾಗಿದೆ. ಇದಕ್ಕೆ ಸ್ವತಃ ಮಹಾರಾಜರು ಪತ್ರ್ತ ಮುಖೇನ ಉತ್ತರಿಸಿದ್ದರು.

ಜೂನ್ 8, 1913 ರಂದು ಮುನ್ಸಿಪಲ್ ಕೌನ್ಸಿಲ್ ಮನವಿಗೆ ಪೂರಕವಾಗಿ ಮೈಸೂರು ಮಹಾರಾಜರ ಉತ್ತರ ರೂಪ ನೀಡಿ ತಮಗೆ ನೀಡಲಾದ ಸ್ವಾಗತದ ಬಗ್ಗೆ ವಿಶೇಷ ಸಂತಸವನ್ನು ವ್ಯಕ್ತಪಡಿಸಿ, ಚಿಕ್ಕಮಗಳೂರಿನಲ್ಲಿ ಕಳೆದ 15 ವರ್ಷಗಳಿಂದ ಅಂಥ ಅಭಿವೃದ್ದಿ ಆಗಿಲ್ಲದಿರುವುದು ವಿಷಾದನೀಯ. ಇನ್ನು ಮುಂದೆ ಇಲ್ಲಿ ಅಭಿವೃದ್ಧಿ ಕಾರ್ಯಗಳು ಸಾಂಗವಾಗಿ ನಡೆಯಲಿ ಎಂದು ಆಶಿಸಿದ್ದಾರೆ.

ಮೈಸೂರು ಒಡೆಯರ್ ಭರವಸೆ

ಮೈಸೂರು ಒಡೆಯರ್ ಭರವಸೆ

ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಪತ್ರದಲ್ಲಿ ಕಡೂರು-ಚಿಕ್ಕಮಗಳೂರು ರೈಲು ಸಂಪರ್ಕದ ಬಗ್ಗೆ ಉಲ್ಲೇಖಿಸುತ್ತಾ, ಕಡೂರು-ಹಾಸನ ರೈಲು ಮಾರ್ಗದ ಸರ್ವೆ ಈಗ ಪ್ರಗತಿಯಲ್ಲಿದೆ. ಈ ತೋಟಗಳ ಜಿಲ್ಲೆಗೆ (ಪ್ಲಾಂಟಿಂಗ್ ಡಿಸ್ಟ್ರಿಕ್ಟ್ ) ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಅದರ ಖರ್ಚು ವೆಚ್ಚಗಳ ಬಗ್ಗೆ ಚಿಂತಿಸಲಾಗುವುದು ಎಂದಿದ್ದರು. ಆದರೆ, ನಂತರ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆದ ಬಗ್ಗೆ ಮಾಹಿತಿ ಇಲ್ಲ.

ಬಹುದಿನದ ಕನಸು ಸಾಕಾರ

ಬಹುದಿನದ ಕನಸು ಸಾಕಾರ

ಒಟ್ಟಾರೆ ಮಲೆನಾಡಿನ ಹೆಬ್ಬಾಗಿಲು, ಕಾಫಿನಾಡಿನ ಬಹುದಿನದ ಕನಸಾದ ಕಡೂರು-ಚಿಕ್ಕಮಗಳೂರು ರೈಲು ಪ್ರಯಾಣ ನವೆಂಬರ್ 19ರಿಂದ ಸಾಕಾರಗೊಂಡಿದೆ.

ಇಂದಿರಾಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ತಂದಿತ್ತ ಚಿಕ್ಕಮಗಳೂರು ಜಿಲ್ಲೆಗೆ ರೈಲು ಸಂಪರ್ಕ ಕಲ್ಪಿಸುವ ಕನಸಿಗೆ ನೀರೆರೆದಿದ್ದರು ನಂತರ ಎಚ್.ಡಿ.ದೇವೇಗೌಡರು ಪ್ರಧಾನಿಯಾದಾಗ ಮತ್ತೆ ಆ ಕನಸು ಚಿಗುರೊಡೆಯಿತು. ಹಲವಾರು ನಾಯಕರ ಪ್ರಯತ್ನದಿಂದಾಗಿ ಕಡೂರಿನಿಂದ ಜಿಲ್ಲಾ ಕೇಂದ್ರಕ್ಕೆ ರೈಲು ಸಂಚಾರ ಆರಂಭವಾಗಿದೆ.ಚಿತ್ರ ಕೃಪೆ: ಜೀವನ್ ಮೂಡಿಗೆರೆ

English summary
Kadur-Chikmagalur railway service inaugurated on former PM Indira Gandhi's birthday (Nov.19). It was a historic day for Chikmagalur as the century-old railway project became a reality. The Union Ministers, who spoke during the inauguration of the line, said it was a gift to Indira Gandhi on her birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X