ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಸಿದ್ದರಾಮಯ್ಯ ಭಾಷಣದಲ್ಲೇನಿತ್ತು?

|
Google Oneindia Kannada News

ಬೆಂಗಳೂರು, ಆ.15 : 68ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ, ಸೇನಾ ಪಡೆಗಳಿಂದ ಗೌರವವಂದನೆ ಸ್ವೀಕರಿಸಿದರು. ನಂತರ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳನ್ನು ನೆನಪು ಮಾಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಹಿಂಸೆಯ ಮಂತ್ರದ ಮೂಲಕವೇ ಬ್ರಿಟಿಷರನ್ನು ಮಣಿಸಿ, ದೇಶವನ್ನು ಗುಲಾಮಗಿರಿಯಿಂದ ಬಿಡುಗಡೆಗೊಳಿಸಿದ ಈ ಹೋರಾಟ ಅನನ್ಯವಾದುದು ಎಂದು ಬಣ್ಣಿಸಿದರು. [ಮೋದಿ ಭಾಷಣದ ಮುಖ್ಯಾಂಶಗಳನ್ನು ನೋಡಿ]

ರಾಜಕೀಯ ಸ್ವಾತಂತ್ರ್ಯದ ಜೊತೆಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನೂ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ತಲುಪಿಸುವುದೇ ಅರ್ಥಪೂರ್ಣ ಸ್ವಾತಂತ್ರ್ಯಾಚರಣೆ ಎಂದು ನಮ್ಮ ಸರ್ಕಾರ ನಂಬಿದೆ ಎಂದ ಹೇಳಿದ ಸಿದ್ದರಾಮಯ್ಯ ಅವರು, ಇದು ನಮ್ಮ ಸರ್ಕಾರದ ಧ್ಯೇಯವೂ ಹೌದು ಎಂದರು.

Siddaramaiah

ಭಾಷಣದಲ್ಲಿ ಮಹಾತ್ಮಾ ಗಾಂಧಿಜೀಯವರ ಮಾತನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು "ಹೆಣ್ಣು ಮಕ್ಕಳು ನಡುರಾತ್ರಿಯಲ್ಲಿಯೂ ನಿರ್ಭೀತಿಯಿಂದ ರಸ್ತೆಗಳಲ್ಲಿ ಓಡಾಡುವ ಮತ್ತು ದೇಶದ ಪ್ರತಿಯೊಬ್ಬ ಪ್ರಜೆಯೂ ಹಸಿವಿನಿಂದ ಮುಕ್ತರಾಗುವ ದಿನವೇ ನಮಗೆ ನಿಜವಾದ ಸ್ವಾತಂತ್ರ್ಯ ದಿನ" ಎಂದು ಮಹಾತ್ಮ ಗಾಂಧಿ ಹೇಳಿದ್ದರು. ನಮ್ಮ ಸರ್ಕಾರದ ಸಂಕಲ್ಪವೂ ಇದೇ ಆಗಿದೆ. ಹಸಿವು, ಬಡತನ, ಅನಕ್ಷರತೆ, ಅನಾರೋಗ್ಯ ಹಾಗೂ ಭಯಮುಕ್ತ ಕರ್ನಾಟಕದ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ಮಖ್ಯಾಂಶಗಳು

* ಈ ಬಾರಿ ಮುಂಗಾರು ಮಳೆ ಆರಂಭದಲ್ಲಿ ಕುಂಠಿತವಾದರೂ ನಂತರ ನಿರೀಕ್ಷೆಯಂತೆ ಮಳೆಯಾಗುತ್ತಿರುವುದು ಸಮಾಧಾನಕರ. ರಾಜ್ಯದ ಬಹುತೇಕ ಜಲಾಶಯಗಳು ತುಂಬಿವೆ, ವಿದ್ಯುತ್ ಕೊರತೆ ಕಡಿಮೆಯಾಗಿದೆ, ರೈತರ ಮುಖಗಳಲ್ಲಿ ಸಂತಸದ ಮುಗುಳ್ನಗೆ ಕಾಣುತ್ತಿವೆ. ಇದು ನನಗೆ ಸಂತೃಪ್ತಿ ಹಾಗೂ ಸಮಾಧಾನ ತಂದಿದೆ.

* ಮತದಾರರಿಗೆ ನೀಡಿದ ವಚನಪಾಲನೆಯೇ ನಿಜವಾದ ರಾಜಧರ್ಮ ಎಂದು ನಂಬಿದವನು ನಾನು. ಈ ಬದ್ಧತೆಯಿಂದಾಗಿಯೇ ಚುನಾವಣಾ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ 165 ಭರವಸೆಗಳಲ್ಲಿ 95 ಭರವಸೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಇನ್ನೂ ಕೆಲವು ಅನುಷ್ಠಾನದ ಹಾದಿಯಲ್ಲಿವೆ. ಈ ಆಯವ್ಯಯದಲ್ಲಿಯೂ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿರುವ ಮತ್ತಷ್ಟು ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.

* ಕರ್ನಾಟಕ ರಾಜ್ಯದ ನೀರಿನ ಹಕ್ಕಿನ ರಕ್ಷಣೆಗಾಗಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ರೈತರ ವಿಶ್ವಾಸ ಗಳಿಸಿದೆ. ಮಕ್ಕಳು ನಮ್ಮ ಭವಿಷ್ಯದ ವಾರಸುದಾರರು. ಸುಶಿಕ್ಷಿತ, ಸಂಸ್ಕಾರವಂತ ಮತ್ತು ಆರೋಗ್ಯಪೂರ್ಣ ಭವಿಷ್ಯದ ಪ್ರಜೆಗಳನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದೇ ಹಾದಿಯಲ್ಲಿ ಸಾಗುತ್ತಿರುವ ನಮ್ಮ ಸರ್ಕಾರ ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಬಡಮಕ್ಕಳಿಗೆ ವಸತಿಶಾಲೆಗಳ ನಿರ್ಮಾಣವೂ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ.

* ರಾಜ್ಯದಲ್ಲಿ 5.05 ಲಕ್ಷ ವೈಯುಕ್ತಿಕ ಶೌಚಾಲಯಗಳನ್ನು ನಿರ್ಮಿಸಿರುವುದನ್ನು ಪ್ರಪ್ರಥಮ ಬಾರಿಗೆ ಸಾಮಾಜಿಕ ತಪಾಸಣೆ ನಡೆಸಿ ದೃಢಪಡಿಸಲಾಗಿದೆ. ನಿರ್ಮಲ ಭಾರತ್ ಅಭಿಯಾನ ಯೋಜನೆಯಡಿ ಗೃಹ ಶೌಚಾಲಯದ ಜೊತೆಗೆ ಸ್ನಾನ ಗೃಹಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

* ಆರೋಗ್ಯ ಕ್ಷೇತ್ರ ನಮ್ಮ ಸರ್ಕಾರದ ಕಾಳಜಿಯ ಕ್ಷೇತ್ರಗಳಲ್ಲೊಂದು. ಇದೇ ಉದ್ದೇಶದಿಂದ ಗ್ರಾಮೀಣ ಪ್ರದೇಶದ ಜೊತೆಯಲ್ಲಿ ನಗರ ಪ್ರದೇಶಗಳಿಗೂ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ವಿಸ್ತರಿಸಲಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜೀವ್ ಗಾಂಧಿ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಈ ಸೌಲಭ್ಯದ ಅನ್ವಯ ಸುಮಾರು ನಾಲ್ಕು ಕೋಟಿ ಬಡವರು ದೊಡ್ಡ ಆಸ್ಪತ್ರೆಗಳಲ್ಲಿ ವಿವಿಧ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

* ಶಾಲೆಗಳಲ್ಲಿ ಒಂದನೇ ತರಗತಿಗೆ ಹೆಣ್ಣು ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಉತ್ತೇಜಿಸಲು ಪ್ರತಿ ಹೆಣ್ಣು ಮಗುವಿನ ಪ್ರತಿದಿನದ ಹಾಜರಾತಿಗೆ ಎರಡು ರೂ. ಪ್ರೋತ್ಸಾಹಧನ ನೀಡುವ ವಿನೂತನ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ಈ ಸೌಲಭ್ಯದಿಂದಾಗಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಒಟ್ಟಾರೆ ದಾಖಲಾತಿ ಹೆಚ್ಚಾಗಿದೆ.

* ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ನಮ್ಮೆಲ್ಲರ ಮನಸ್ಸನ್ನು ಕಲಕಿರುವುದು ನಿಜ. ಇದನ್ನು ತಡೆಯಲು ನಮ್ಮ ಸರ್ಕಾರ ಕಟಿಬದ್ದವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಬಿಗಿಗೊಳಿಸಲಾಗಿದೆ. ಪೊಲೀಸರನ್ನು ಜಾಗೃತಗೊಳಿಸಲಾಗಿದೆ. ಹೆಣ್ಣಿನ ಮಾನ ಮತ್ತು ಪ್ರಾಣಗಳ ಮೇಲೆ ದೌರ್ಜನ್ಯ ನಡೆಸುವ ದುಷ್ಕರ್ಮಿಗಳ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಹತ್ತು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ.

* ಇತ್ತೀಚಿನ ದಿನಗಳಲ್ಲಿ ಜ್ಞಾನದೇಗುಲಗಳೆಂದು ಬಣ್ಣಿಸಲಾಗುವ ಶಾಲಾ-ಕಾಲೇಜುಗಳಲ್ಲಿಯೂ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಕಳವಳಕಾರಿ ಬೆಳವಣಿಗೆ. ಇದನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅದು ಸರ್ಕಾರಿ ಶಾಲೆ ಇರಲಿ ಅಥವಾ ಖಾಸಗಿ ಶಾಲೆ ಇರಲಿ, ಮಕ್ಕಳು ಶಾಲಾ ಆವರಣಕ್ಕೆ ಪ್ರವೇಶಿಸಿದ ಕ್ಷಣದಿಂದ ಅವರು ಶಾಲೆ ಮುಗಿಸಿ ಹೊರಬರುವವರೆಗೂ, ಮಕ್ಕಳ ಸುರಕ್ಷತೆಗೆ ಶಾಲೆಯೇ ಹೊಣೆ.

* ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಕಾನೂನು ಮತ್ತು ಆರ್ಥಿಕ ನೆರವು ಒಳಗೊಂಡಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯದ ಎಲ್ಲಾ 30 ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಬೆಂಗಳೂರು ನಗರದ ಐದು ಆಸ್ಪತ್ರೆಗಳಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗುವುದು.

* ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಕಾನೂನಿಗೆ ತಿದ್ದುಪಡಿ ತರುವ ಹಾಗೂ ಶಿಕ್ಷೆಯ ಮಾಣವನ್ನು ಹೆಚ್ಚಿಸುವ ಕುರಿತು ಅಧ್ಯಯನ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ನೀಡಲು ಮಾಜಿ ಸಚಿವರಾದ ಶ್ರೀ ಎಂ.ಸಿ. ನಾಣಯ್ಯ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಮೂರು ತಿಂಗಳೊಳಗೆ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ.

* ಅಕ್ರಮ ಗಣಿಗಾರಿಕೆಯನ್ನು ತಡೆಯಲು ನಮ್ಮ ಸರ್ಕಾರ ಕಟಿಬದ್ದವಾಗಿದೆ. ಇದಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರನ್ನು ಇ-ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದೆ. 2014-15ನೇ ಸಾಲಿನಲ್ಲಿ ಏಪ್ರಿಲ್‌ನಿಂದ ಜುಲೈ 2014ರ ತಿಂಗಳವರೆಗೆ ಕಬ್ಬಿಣದ ಅದಿರು ಗಣಿ ಗುತ್ತಿಗೆಯಿಂದ 7.8 ದಶಲಕ್ಷ ಮೆಟ್ರಿಕ್ ಟನ್ ಅದಿರು ಮಾರಾಟವಾಗಿ, 216.80 ಕೋಟಿ ರೂ. ರಾಜಧ ಸಂಗ್ರಹವಾಗಿದೆ.

* ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೂನಿಕೋಡ್ ಅಕ್ಷರ ವಿನ್ಯಾಸ, ಪರಿವರ್ತಕಗಳು, ಮೊಬೈಲ್‌ನಲ್ಲಿ ಕನ್ನಡ ಬಳಕೆ, ಬ್ರೈಲ್ ಲಿಪಿಯಲ್ಲಿ ಕನ್ನಡ ಬಳಕೆ ಒಳಗೊಂಡಂತೆ ಕನ್ನಡದಲ್ಲಿ ನಾಲ್ಕು ಯೂನಿಕೋಡ್ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಮಾಡಲಾಗಿದೆ. ಸಮಗ್ರ ಸಾಂಸ್ಕೃತಿಕ ನೀತಿ ರೂಪಿಸಲು ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ಸಾಂಸ್ಕೃತಿಕ ನೀತಿಯ ಕರಡು ಪರಿಶೀಲನಾ ಹಂತದಲ್ಲಿದೆ. [ಮುಖ್ಯಮಂತ್ರಿಗಳ ಭಾಷಣದ ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ]

English summary
Karnataka Chief Minister Siddaramaiah delivers Independence Day address from the Manik shah parade ground in Bangalore on August 15, here is highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X