ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿ ಹೇರಿಕೆ. ಕರವೇ ನಾರಾಯಣ ಗೌಡ್ರ ಲೇಖನ - 4

By ಟಿ ಎ ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷರು
|
Google Oneindia Kannada News

ನರೇಂದ್ರ ಮೋದಿಯವರು ಪ್ರಧಾನಿಯಾದ ಸಂದರ್ಭದಲ್ಲಿ ನಾನು ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ 'ಹಿಂದಿಹೇರಿಕೆ'ಯ ವಿಷಯವನ್ನು ಪ್ರಸ್ತಾಪಿಸಿದ್ದೆ. ಅದರ ಕೆಲವು ಸಾಲುಗಳು ಹೀಗಿವೆ-" ದೇಶವನ್ನು ಕಟ್ಟುವ ಬಗೆಯ ಕುರಿತು ಹಲವು ಬಗೆಯ ಅಭಿಪ್ರಾಯಗಳು, ನಿಲುವುಗಳು ಇವೆ. 'ವಿವಿಧತೆಯಲ್ಲಿ ಏಕತೆ' ನಮ್ಮ ಪ್ರಜಾಪ್ರಭುತ್ವದ ವಿಶೇಷ ಗುಣ ಎಂದು ಸಂವಿಧಾನ ಸಾರುತ್ತದೆ.

ನನ್ನಂಥವರು ನಂಬುವುದು ಈ 'ವಿವಿಧತೆಯಲ್ಲಿ ಏಕತೆ' ಎಂಬ ಮೂಲಮಂತ್ರವನ್ನು. ಈ ದೇಶ ಬಹುಭಾಷಿಕರ ನಾಡು, ಬಹು ಸಂಸ್ಕೃತಿಗಳ ನೆಲೆವೀಡು. ಈ ಸಾಂಸ್ಕೃತಿಕ ವೈವಿಧ್ಯತೆ ಜೀವಂತವಾಗಿದ್ದಷ್ಟು ಕಾಲ ಈ ದೇಶ ಒಂದಾಗಿರಲು ಸಾಧ್ಯ. ಒಂದು ವೇಳೆ ಈ 'ಬಹುತ್ವ'ವನ್ನು ಹೊಸಕಿ ಹಾಕಿ 'ಏಕತ್ವ'ವನ್ನು ದೇಶದ ಮೇಲೆ ಹೇರಲು ಹೊರಟರೆ ಅದರ ಪರಿಣಾಮ ಭೀಕರವಾಗುತ್ತದೆ.

Imposing Hindi in State administration, KRV President T A Narayana Gowda letter - 4

ಈ ದೇಶ ಒಂದಾಗಿ ಉಳಿಯುವುದೇ ಕಷ್ಟಸಾಧ್ಯವಾಗುತ್ತದೆ. ಕನ್ನಡಿಗರು ಕನ್ನಡಿಗರಾಗಿಯೇ, ಕನ್ನಡ ಸಂಸ್ಕೃತಿಯನ್ನು ಮುಂದುವರೆಸಿಕೊಂಡೇ ದೇಶದ ಭಾಗವಾಗಿರುವ ಅವಕಾಶ ನೀಡಬೇಕು. ಅದೇ ರೀತಿ ಗುಜರಾತಿಗಳು ಗುಜರಾತಿಗಳಾಗಿಯೇ ಗುಜರಾತಿ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತ ದೇಶದ ಭಾಗವಾಗಬೇಕು. ಆದರೆ ದೇಶವನ್ನು ಆಳಿಕೊಂಡು ಬಂದ, ದೇಶವನ್ನು ನಿಯಂತ್ರಿಸಿಕೊಂಡು ಬಂದ ಶಕ್ತಿಗಳು 'ಬಹುತ್ವ'ದ ಶತ್ರುಗಳಂತೆಯೇ ವರ್ತಿಸುತ್ತಿವೆ.

ಅದಕ್ಕೆ ಅತ್ಯಂತ ಪರಿಣಾಮಕಾರಿಯಾದ ಉದಾಹರಣೆಯೆಂದರೆ ಈಗಲೂ ಆಂತರಿಕ ದಂಗೆಯಿಂದ ಬಸವಳಿದಿರುವ ಈಶಾನ್ಯ ರಾಜ್ಯಗಳು. ಈಶಾನ್ಯ ರಾಜ್ಯಗಳ ಭಾಷೆ, ಸಂಸ್ಕೃತಿಯ ಮೇಲೆ ಸವಾರಿ ಮಾಡಿದ ಪರಿಣಾಮವನ್ನು ನಾವು ಈಗ ಕಣ್ಣಾರೆ ನೋಡುತ್ತಿದ್ದೇವೆ. ಏಕಧರ್ಮ, ಏಕ ಸಂಸ್ಕೃತಿ, ಏಕಭಾಷೆಯನ್ನು ಯಾವುದೇ ಸಮುದಾಯದ ಮೇಲೆ ಹೇರಲು ಯತ್ನಿಸುವುದು ಅತ್ಯಂತ ಅಮಾನವೀಯ ಮತ್ತು ಕ್ರೂರತನ. ಇದು ದೇಶ ಕಟ್ಟುವ ಕೆಲಸ ಅಲ್ಲವೇ ಅಲ್ಲ."

ಕೇಂದ್ರ ಸರ್ಕಾರದ ಮುಂದೆ ಈಗ ಇರುವುದು ಎರಡು ಆಯ್ಕೆ. ಒಂದು ಎಲ್ಲ ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತ, ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಮಾಡಿ ಈ ದೇಶದ ಬಹುತ್ವವನ್ನು ಆ ಮೂಲಕ ಸಾರ್ವಭೌಮತೆಯನ್ನು ಕಾಪಾಡುವುದು.

ಎರಡನೇ ಆಯ್ಕೆ ಆತ್ಮಘಾತಕನದ್ದು, ಹಿಂದಿಯನ್ನು ಬಲವಂತವಾಗಿ ಎಲ್ಲ ರಾಜ್ಯಗಳ ಮೇಲೂ ಹೇರುವ ಮೂಲಕ ಈ ದೇಶದಲ್ಲಿ ಒಡಕಿಗೆ ಕಾರಣವಾಗುವುದು, ಅಖಂಡತೆಗೆ ಕುತ್ತು ತಂದುಕೊಳ್ಳುವುದು.
ಕೇಂದ್ರ ಸರ್ಕಾರ ದೇಶವನ್ನು ಅಖಂಡವಾಗಿ ಉಳಿಸುವ ನಿರ್ಧಾರವನ್ನೇ ಕೈಗೊಳ್ಳುತ್ತದೆ ಎಂಬ ಆಶಾಭಾವನೆ ನನ್ನದು. ಇಲ್ಲದೇ ಹೋದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಂತೂ ಯಾವುದೇ ಸ್ವರೂಪದ ಹೋರಾಟಕ್ಕೂ ಸಜ್ಜಾಗಿಯೇ ಇರುತ್ತದೆ.

English summary
Imposing Hindi in State administration, KRV President T A Narayana Gowda letter - 4
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X