ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಗಳ್ಳರ ಕುರಿತು ಸಿದ್ದರಾಮಯ್ಯಗೆ ದೊರೆಸ್ವಾಮಿ ಪತ್ರ

|
Google Oneindia Kannada News

ಬೆಂಗಳೂರು, ಸೆ. 22 : ಎ.ಟಿ.ರಾಮಸ್ವಾಮಿ ವರದಿಯ ಅನ್ವಯ ಭೂ ಗಳ್ಳರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್.ದೊರೆಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಭೂಗಳ್ಳರಿಂದ ಭೂಮಿಯನ್ನು ವಶಪಡಿಸಿಕೊಂಡಿದ್ದರೆ, ಅವರ ಹೆಸರು ಮತ್ತು ಜಮೀನಿನ ವಿವರಗಳನ್ನು ಪತ್ರಿಕೆಗಳ ಮೂಲಕ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಏನಿದು ಎ.ಟಿ.ರಾಮಸ್ವಾಮಿ ವರದಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಭಾವಿ ವ್ಯಕ್ತಿಗಳು ಕಬಳಿಕೆ ಮಾಡಿರುವ ಕುರಿತು 2006ರಲ್ಲಿ ವಿಧಾನಸಭೆಯಲ್ಲಿ ಚರ್ಚೆ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಲು ಎ.ಟಿ.ರಾಮಸ್ವಾಮಿ ನೇತೃತ್ವದ 17 ಮಂದಿಯ ಸಮಿತಿಯನ್ನು ಸ್ಪೀಕರ್ ರಚಿಸಿದ್ದರು. ಎಲ್ಲಾ ಪಕ್ಷಗಳ ಸದಸ್ಯರು ಈ ಸಮಿತಿಯಲ್ಲಿದ್ದರು. ಭೂ ಕಬಳಿಕೆ ಬಗ್ಗೆ ಈ ಸಮಿತಿ ವರದಿ ತಯಾರಿಸಿ ಸರ್ಕಾರಕ್ಕೆ ನೀಡಿತ್ತು.

HS Doreswamy

ಪತ್ರದ ಸಾರಾಂಶ : ಎ.ಟಿ. ರಾಮಸ್ವಾಮಿ ವರದಿಯಲ್ಲಿ ಗುರುತಿಸಲಾಗಿರುವ 34 ಸಾವಿರ ಎಕರೆ ಸರ್ಕಾರಿ ಜಮೀನಿನ ಪೈಕಿ ತೆರವುಗೊಳಿಸಲು ಬಾಕಿ ಇರುವುದು ಕೇವಲ ಐದು ಸಾವಿರ ಎಕರೆ ಮಾತ್ರ ಎಂದು ಪ್ರಕಟಣೆ ನೀಡಿರುವ ಸರ್ಕಾರದ ಕ್ರಮವನ್ನು ಪತ್ರದಲ್ಲಿ ಖಂಡಿಸಿರುವ ದೊರೆಸ್ವಾಮಿ ಅವರು, ವರದಿಯಲ್ಲಿ ಪ್ರಸ್ತಾಪಿಸಿರುವ ಭೂಗಳ್ಳರ ವಶದಲ್ಲಿರುವ ಎಲ್ಲ ಭೂಮಿಯನ್ನೂ ಹಿಂಪಡೆದಿದ್ದರೆ ಅವರ ಹೆಸರು, ಹಿಂಪಡೆದ ಜಮೀನಿನ ವಿವರ, ಭೂಹಗರಣ ನಡೆಸಿದವರಿಗೆ ಆಗಿರುವ ಶಿಕ್ಷೆ, ಅವರಿಗೆ ನೆರವಾದ ಅಧಿಕಾರಿಗಳು, ಶಾಸಕರು ಮುಂತಾದ ವಿವರಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ಈ ವಿವರಗಳನ್ನು ನೀಡದಿದ್ದರೆ ಈ ಪ್ರಕರಣಗಳನ್ನು ಮುಚ್ಚಿ ಹಾಕಿ, ಸತ್ಯಕ್ಕೆ ದೂರವಾದ ಹೇಳಿಕೆ ನೀಡುತ್ತಿರುವುದಾಗಿ ಜನರು ಭಾವಿಸುತ್ತಾರೆ. ಆದ್ದರಿಂದ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡಿ ಜನರನ್ನು ಮರುಳುಗೊಳಿಸುವ ಬದಲು, ನಿಜಸ್ಥಿತಿಯನ್ನು ಜನತೆಗೆ ತಿಳಿಸಿ. ಪಟ್ಟಭದ್ರ ಭೂಗಳ್ಳರನ್ನು ರಕ್ಷಿಸುವ ಬದಲು, ಅವರ ಕೃತ್ಯಗಳನ್ನು ಬಯಲುಗೊಳಿಸಿರುವ ಎ.ಟಿ. ರಾಮಸ್ವಾಮಿ ವರದಿ ಜಾರಿಗೊಳಿಸಿ ಎಂದು ದೊರೆಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ. [ದೊರೆಸ್ವಾಮಿ ಧರಣಿಗೆ ಮಣಿದ ಸರ್ಕಾರ]

ಇಂತಹ ವಿವರಗಳನ್ನು ನೀಡದಿದ್ದರೆ ನಿಮ್ಹಾನ್ಸ್‌ಗೆ ಸೇರಿದ ಜಮೀನಿನಲ್ಲಿ ಬಹುಮಹಡಿ ಕಟ್ಟಡ ಕಟ್ಟಿಕೊಂಡವರಿಗೆ, ಕೆರೆಗಳನ್ನು ಅಡವಿಟ್ಟು ಬ್ಯಾಂಕಿನಿಂದ ಸಾಲಪಡೆದು, ಬ್ಯಾಂಕಿಗೆ ಪಂಗನಾಮ ಹಾಕಿದವರಿಗೆ, ಕೆರೆ ಅಂಗಳವನ್ನು ಹರಾಜಿಗೆ ಇಟ್ಟ ಬ್ಯಾಂಕ್ ಮುಖ್ಯಸ್ಥರಿಗೆ, ಕೆರೆ ಜಾಗಕ್ಕೆ ಸಾಲ ನೀಡಿದ ಮೂರ್ಖ ಬ್ಯಾಂಕಿಗೆ, ಪ್ರಕರಣದಲ್ಲಿ ಭೂಗಳ್ಳರಿಗೆ ನೆರವಾದ ಅಧಿಕಾರಿಗಳಿಗೆ ಯಾವ ಶಿಕ್ಷೆ ನೀಡಿದ್ದೀರಿ ಎಂಬ ಪ್ರಶ್ನೆ ಹುಟ್ಟಿ ಕೊಳ್ಳುತ್ತದೆ ಎಂದು ಪತ್ರದಲ್ಲಿ ದೊರೆಸ್ವಾಮಿ ಉಲ್ಲೇಖಿಸಿದ್ದಾರೆ.

ಇಂತಹ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡುವ ತನಕ ಸತ್ಯಾಗ್ರಹವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿರುವ ದೊರೆಸ್ವಾಮಿ ಅವರು, ಪತ್ರಕ್ಕೆ ಸರ್ಕಾರ ಕೂಡಲೇ ಉತ್ತರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

English summary
Freedom fighter H.S.Doreswamy has sent a letter to Karnataka Chief Minister Siddaramaiah asking him to implement A.T. Ramaswamy report on land Encroachments in Bangalore Urban District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X