ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಟ್ಟು ದಾನ ಕಣೋ... ಸಾವು ಗುಟ್ಟು ಕಣೋ..

By ಟಿ. ಸಿ. ಮಂಜುನಾಥ ಬಾಬು
|
Google Oneindia Kannada News

ಹುಟ್ಟು ದಾನ ಕಣೋ...
... ಸಾವು ಗುಟ್ಟು ಕಣೋ!
ನನ್ನ ದೇಹದ ಬೂದಿ ಗಾಳಿಯಲ್ಲಿ ತೇಲಿ ಬಿಡಿ
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ
ಬೂದಿಗೊಬ್ಬರದಿಂದ ತೆನೆಯೊಂದು ನೆಗೆದುಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಇದು ಕನ್ನಡದ ಹಿರಿಯ ಸಾಹಿತ್ಯ ಚೇತನದ ಕವನ. ಈ ಹಿರಿಯ ಕವಿಗಳು ಕವನದಲ್ಲಿ ತಮ್ಮ ನಿಧನಾನಂತರ ತಮ್ಮ ದೇಹವೂ ಸಹ ಸಾಮಾಜಿಕ ಕಾರ್ಯಕ್ಕೆ ಬಳಸಲೆಂಬ,ಆ ಮೂಲಕ ಸಮಾಜಸೇವೆ ಸಾವಿನ ನಂತರವೂ ಆಗಲೆಂಬ ಆಶಯ ವ್ಯಕ್ತಪಡಿಸುತ್ತಾರೆ.

ಇದು ಅಂದಿನ ಮಾತು.ಆ ಮಾತಿಗೆ ಗೌರವ ಮನ್ನಣೆ ಖಂಡಿತ ಬೇಕೇಬೇಕು. ಆದರೆ ಈಗ ವೈಜ್ಞಾನಿಕವಾಗಿ ಸಮಾಜ ಬದಲಾವಣೆಗೊಳ್ಳುತ್ತಿದೆ. ಬದುಕಿರುವಾಗಲೇ ಧನ್ಯತೆಯನ್ನು ಮನಸಾರೆ ಮಾಡುವ ಅವಕಾಶಗಳು ರಕ್ತದಾನದ ಮೂಲಕ ಲಭ್ಯವಾಗಿದೆ. ಸಾವಿನಂಚಿನ ರೋಗಿಗಳಿಗೆ ವಿವಿಧ ಕಾಯಿಲೆಗಳಲ್ಲಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ರೋಗಿಗಳಿಗೆ ವಿವಿಧ ಗುಂಪಿನ ರಕ್ತಗಳ ಅಗತ್ಯತೆ ಬೀಳಲಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಸ್ಥಾಪಿಸಿರುವ ರಕ್ತ ಬ್ಯಾಂಕ್‌ಗಳ ಮೂಲಕ ರಕ್ತ ಸಂಗ್ರಹಿಸುವ ಕಾರ್ಯ ಈಗಾಗಲೇ ನಡೆದಿದೆ.

ಆದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ವಿಜ್ಞಾನ ಸಾವಿನ ನಂತರವೂ ನಿಗಧಿತ ಅವಧಿಯಲ್ಲಿ ತಮ್ಮ ದೇಹದ ಕಣ್ಣು ಹಾಗೂ ಇತರೆ ಅವಯವಗಳನ್ನು ದಾನ ಮಾಡಬಹುದು. ನೇತ್ರದಾನ ಮಹಾದಾನವಾಗಿದ್ದು, ಸಾವಿನ ನಂತರವೂ ಬದುಕಿರುವ ಅಂಧರ ಬಾಳಿನಲ್ಲಿ ಬೆಳಕು ಚೆಲ್ಲುವ ಕಾರ್ಯ ನಮ್ಮಿಂದ ಸಾಧ್ಯವಾಗುತ್ತದೆ. ಯಾವುದೋ ಅಂದಾನುಕರಣೆಗೆ ಕಣ್ಣು ದಾನ ಮಾಡುವ ಅಗತ್ಯವಿಲ್ಲ. ಅಂಧತ್ವ ನಿವಾರಣೆಗಾಗಿ ಅಥವಾ ಸಾವಿನ ನಂತರವೂ ನಿಗದಿತ ಅವಧಿಯಲ್ಲಿ ನೇತ್ರದಾನ ಮಾಡುವ ಕ್ರಿಯೆ ನಡೆಯಬೇಕು.[ಬೆಳಗಾವಿ ವೈದ್ಯನಿಂದ ತಂದೆಯ ದೇಹ ಛೇದನ!]

donate your body

ಇದೀಗ ಸಾವಿನ ನಂತರ ದೇಹದಾನ ಮಾಡುವ ಕ್ರಿಯೆಯೂ ವೈಜ್ಞಾನಿಕವಾಗಿ ಸಾಧ್ಯವಿದೆ. ಸತ್ತನಂತರ ನಮ್ಮ ದೇಹವನ್ನು ಮಣ್ಣು ಮಾಡುವ, ಸುಡುವ ಬದಲು ನಿರ್ಧಿಷ್ಟ ಅವಧಿಯಲ್ಲಿ ದಾನ ಮಾಡಿದ ದೇಹದಿಂದ ಇತರ ನೊಂದವರಿಗೆ ಉಪಯೋಗವಾಗುವ ಅಂಗಗಳನ್ನು ತೆಗೆದು, ನಂತರ ದೇಹವನ್ನು ಸಂರಕ್ಷಿಸಿಡಲಾಗುವುದು. ಆ ಮೃತದೇಹವನ್ನು ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗಳಿಗೆ ಬಳಸಲಾಗುವುದು.[ದೇಹದಾನ ಮಾಡಿ ಆದರ್ಶ ಮೆರೆದ ದಂಪತಿಗಳು]

ದೇಹದಾನದಿಂದ ಆಗುವ ಮೂಲ ಕಾರ್ಯಗಳೆಂದರೆ ಮಾನವಕೋಟಿಗೆ ಮೃತದೇಹದ ಮೇಲೆ ಆಗುವ ಸಂಶೋಧನೆ ಫಲ ಮುಖ್ಯವಾದುದು. ಅದಕ್ಕಾಗಿಯೇ ದೇಹದಾನ ಪ್ರಮುಖವಾದುದು. ದೇಹದಾನದ ಪ್ರಕ್ರಿಯೆ ಅತ್ಯಂತ ಸರಳ ಹಾಗೂ ಸುಲಭವಾದುದು. ದೇಹದಾನ ಪಡೆಯುವ ಸಂಸ್ಥೆಯಲ್ಲಿ ನಿರ್ಧಿಷ್ಟ ಅರ್ಜಿಗಳಿದ್ದಲ್ಲಿ ಅದನ್ನು ಸಂಪೂರ್ಣವಾಗಿ ತುಂಬಿ ಮೊದಲೇ ಸಂಸ್ಥೆಗೆ ನೀಡಿ ನೊಂದಾಯಿಸಿದರೆ ಸಾಕು.

ದೇಹದಾನ ಅರ್ಜಿಯೇ ದೇಹದಾನ ಸಮ್ಮತಿಯ ಉಯಿಲು. ಉಯಿಲಿನಲ್ಲಿ ದೇಹದಾನ ಮಾಡುವ ವ್ಯಕ್ತಿಯ ಎಲ್ಲ ವಿವರಗಳು, ದೇಹದಾನದಿಂದ ಹಾಗೂ ನಂತರದ ಪ್ರಕ್ರಿಯೆಗಳಿಗೆ ಒಪ್ಪಿಗೆ ನಿಬಂಧನೆ ಹಾಗೂ ವಾರಸುದಾರರ ಒಪ್ಪಿಗೆ ಇರುತ್ತದೆ. ಇದನ್ನು ಸಲ್ಲಿಸಿದ ನಂತರ ಸಂಸ್ಥೆಯು ತನ್ನ ಅನುಮೋದನೆ ಸೂಚಕವಾಗಿ ದೇಹದಾನ ಪ್ರಮಾಣ ಪತ್ರ ನೀಡುತ್ತದೆ. ಅದರಲ್ಲಿ ದೇಹದಾನ ಮಾಡಿದ ವ್ಯಕ್ತಿಯ ಪೂರ್ಣ ವಿವರ, ಮರಣಾನಂತರ ಬಂಧುಗಳು ಮಾಡಬೇಕಾದ ಕ್ರಿಯೆಗಳ ವಿವರಗಳು ಪ್ರಮಾಣ ಪತ್ರದಲ್ಲಿರುತ್ತದೆ.

ಮರಣ ಹೊಂದಿದ ಕೂಡಲೇ ದೇಹದಾನ ಪಡೆಯುವ ಸಂಸ್ಥೆಗೆ ತಕ್ಷಣ ದೂರವಾಣಿ ಮೂಲಕ ತಿಳಿಸಬೇಕು. ಮೃತಪಟ್ಟ ಆರು ಗಂಟೆಯೊಳಗೆ ದೇಹವನ್ನು ಸಂಸ್ಥೆಗೆ ತಲುಪಿಸಿದರೆ ದೇಹದಾನಿಯ ನೇತ್ರಗಳನ್ನು ತೆಗೆದು ಅಂಧರ ಬಾಳಿನ ನೇತ್ರಜ್ಯೋತಿಯನ್ನಾಗಿ ಮಾಡಲಾಗುವುದು. ಮೃತದೇಹವನ್ನು ಸಂಬಂಧಿಸಿದ ಸಂಸ್ಥೆಯೇ ಸುದ್ದಿ ತಲುಪಿದ ಕೂಡಲೇ ತರಿಸಿಕೊಳ್ಳುವ ವ್ಯವಸ್ಥೆ ಮಾಡುವುದು.

ಅಲ್ಲದೆ ದೇಹದಾನ ಉಯಿಲು ಸಂಸ್ಥೆಯಲ್ಲಿ ಅಂಗೀಕಾರವಾದೊಡನೆಯೇ ದೇಹದಾನಿಗೆ ಲ್ಯಾಮಿನೇಟ್ ಮಾಡಿದ ಹಾಗೂ ಸಂಪೂರ್ಣ ವಿವರಗಳುಳ್ಳ ಗುರುತು ಚೀಟಿಯನ್ನು ಸಂಸ್ಥೆ ತಲುಪಿಸುವುದು. ಆ ಗುರುತು ಚೀಟಿಯನ್ನು ದೇಹದಾನ ಮಾಡಿದ ವ್ಯಕ್ತಿಯು ಯಾವಾಗಲೂ ತನ್ನ ಬಳಿ ಇಟ್ಟುಕೊಂಡಿರುವುದು ಅವಶ್ಯಕ. ಆಗ ಆತನಿಗೆ ಯಾವುದೇ ಆಕಸ್ಮಿಕ ಉಂಟಾದಾಗ ಅವರ ಅಂತಿಮ ಇಚ್ಚೆಯನ್ನು ನೆರವೇರಿಸಲು ಅನುಕೂಲವಾಗುವುದು.

ಈಗಾಗಲೇ ಸಾವಿರಾರು ಸಾರ್ವಜನಿಕರು ದೇಹದಾನಕ್ಕೆ ಮುಂದಾಗಿ ನೋಂದಣಿ ಮಾಡಿಸಿದ್ದಾರೆ. ಪ್ರಮುಖರಲ್ಲಿ ಕರ್ನಾಟಕದ ಉಚ್ಚನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಶ್ರೀ ಡಿ. ಎಂ. ಚಂದ್ರಶೇಖರಯ್ಯ, ಶ್ರೀ ಶಿಕಾರಿಪುರ ಹರಿಹರೇಶ್ವರ ಅವರುಗಳ ಮರಣಾನಂತರ ದೇಹವನ್ನು ವೈದ್ಯಕೀಯ ಸಂಶೋಧನೆಗೆ ಈಗಾಗಲೇ ನೀಡಿದ್ದಾರೆ. ಸತ್ತಮೇಲೆ ಮಣ್ಣಾಗುವ, ಹಿಡಿ ಬೂದಿಯಾಗುವ ದೇಹವನ್ನು ವೈಜ್ಞಾನಿಕ ಸಂಶೋಧನೆಗೆ ನೀಡಿದ, ನೀಡುತ್ತಿರುವ, ನೀಡುವ ಎಲ್ಲರೂ ಪ್ರಮುಖರೇ, ಗಣ್ಯರೇ ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ಮರಣಾನಂತರ ನಮ್ಮ ದೇಹವನ್ನು ಸುಡುವ ಬದಲು, ಮಣ್ಣುಮಾಡುವ ಬದಲು ಮಾನವಕೋಟಿಯ ಉದ್ಧಾರಕ್ಕೆ ನಡೆಯುವ ಸಂಶೋಧನೆಗಳಿಗೆ ಬಳಕೆಯಾಗುವ ಮೂಲಕ ನಮ್ಮ ಮರಣಾನಂತರವೂ ಸಮಾಜದ ಉದ್ಧಾರಕ್ಕೆ ನಾವೆಲ್ಲ ಯತ್ನಿಸಬಹುದಲ್ಲವೇ? ಬನ್ನಿ, ನಾವು-ನೀವು ಎಲ್ಲರೂ ಈ ಒಳ್ಳೆಯ ಕಾರ್ಯಕ್ಕೆ ಮುಂದಾಗೋಣ. ತನ್ಮೂಲಕ ಸಮಾಜದ ಋಣ ತೀರಿಸೋಣ.

ನಮ್ಮ ರಾಜ್ಯದಲ್ಲಿ ಈವರೆಗೆ ಸಾವಿರಾರು ಜನರು ತಮ್ಮ ಮರಣಾನಂತರದ ದೇಹದಾನ ಪ್ರಕ್ರಿಯೆಗೆ ನೋಂದಣಿ ಮಾಡಿಸಿದ್ದಾರೆ. ದೇಹದಾನ ನೋಂದಣಿಗೆ ಯಾವುದೇ ವೆಚ್ಚವಾಗುವುದಿಲ್ಲ. ಮರಣಾನಂತರದ ದೇಹದಾನ ಪ್ರಕ್ರಿಯೆಗೆ ನೋಂದಾಯಿಸುವವರು ಹತ್ತಿರದ ಪ್ರಮುಖ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ವಿಜ್ಞಾನ ಕಾಲೇಜನ್ನು ಸಂಪರ್ಕಿಸಬಹುದು ಅಥವಾ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ. ಮರಣಾ ನಂತರ ತಮ್ಮ ದೇಹದಾನ ಮಾಡಿದ ಚೇತನಗಳಿಗೆ, ವೈಜ್ಞಾನಿಕ ಸಂಶೋಧನೆಗಳಿಗೆ ತಮ್ಮ ದೇಹದಾನ ಮಾಡಿದ ಮೃತ್ಯುಂಜಯರಿಗೆ ನಮ್ಮ-ನಿಮ್ಮ ಎಲ್ಲರ ನಮನ.

English summary
Human bodies are used to teach students about the structure of the body and how it works; they may also be used to train surgeons and other healthcare professionals. People decide in advance to donate their body after their death. These donations are highly valued by staff and students at anatomy establishments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X