ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭಾ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

ಕಾರ್ಕಳ, ಏ 1: ಕರ್ನಾಟಕದ ಪ್ರತಿಷ್ಠಿತ ಲೋಕಸಭಾ ಕಣಗಳಲ್ಲಿ ಒಂದಾಗಿರುವ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೇಲೆ ಬಿಜೆಪಿಯಲ್ಲಿ ಹಲವರ ಕಣ್ಣಿತ್ತು. ಸಿಟಿ ರವಿ, ಪ್ರತಾಪ್ ಸಿಂಹ ಹೆಸರುಗಳು ತೇಲಿ ಬಂದಿದ್ದವು. ಆದರೆ, ಕೊನೆಗೆ ಆ ಕ್ಷೇತ್ರ ಒಲಿದಿದ್ದು, ಇತ್ತೀಚೆಗೆ ಕೆಜೆಪಿ ತೊರೆದು ಮತ್ತೆ ಬಿಜೆಪಿಗೆ ಮರಳಿದ ಶೋಭಾ ಕರಂದ್ಲಾಜೆ ಅವರಿಗೆ. ಪ್ರಥಮ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಶೋಭಾ ಅವರ ಮುಂದಿನ ರಾಜಕೀಯ ಭವಿಷ್ಯಕ್ಕೆ ಈ ಚುನಾವಣೆ ಮುನ್ನುಡಿ ಹಾಡಲಿದೆ.

ಕಾಂಗ್ರೆಸ್ ನ ಹಾಲಿ ಸಂಸದ ಜಯಪ್ರಕಾಶ್ ಹೆಗಡೆ ವಿರುದ್ಧ ಮತ್ತು ಹಿಂದೆ ಕೆಜೆಪಿಯಲ್ಲಿ ಸಹೋದ್ಯೋಗಿಗಳಾಗಿದ್ದ ಧನಂಜಯ್ ಕುಮಾರ್ ವಿರುದ್ಧ ಶೋಭಾ ಕರಂದ್ಲಾಜೆ ಸ್ಪರ್ಧೆಗಿಳಿದಿರುವುದು ಈ ಕ್ಷೇತ್ರದಲ್ಲಿ ಭಾರೀ ರಂಗನ್ನೇರಿಸಿದೆ. ಇದನ್ನು ಸವಾಲಾಗಿ ಸ್ವೀಕರಿಸಿರುವ ಶೋಭಾ ಕರಂದ್ಲಾಜೆ, ಕ್ಷೇತ್ರದ ಉದ್ದಗಲಕ್ಕೂ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರ ಸಂದರ್ಶನಕ್ಕೆ ಕಾರ್ಕಳಕ್ಕೆ ಹೋಗಿದ್ದಾಗ ಅಲ್ಲಿ ಬಿಜೆಪಿಯ ತಾಲೂಕು ಮಟ್ಟದ ಸಮಾವೇಶ ನಡೆಯುತ್ತಿತ್ತು. ಸಮಾವೇಶ ಮುಗಿದ ನಂತರ ಶೋಭಾ ಕಾರ್ಕಳದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಕುಕ್ಕುಂದೂರು ಎನ್ನುವಲ್ಲಿ ಧಾರ್ಮಿಕ (ಪಂಜುರ್ಲಿ ವಾರ್ಷಿಕ ನೇಮ ಅಥವಾ ಕೋಲ) ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಜೊತೆಗೆ ನಾವೂ ಆ ಕಾರ್ಯಕ್ರಮಕ್ಕೆ ತೆರಳಿದೆವು. [ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಿರು ಪರಿಚಯ]

ಅಲ್ಲಿಂದ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಶೋಭಾ ಕರಂದ್ಲಾಜೆ ಜೊತೆ ನಡೆಸಿದ ಸಂದರ್ಶನದ ಪ್ರಮುಖಾಂಶ ಇಂತಿದೆ.

Exclusive interview with Udupi - Chikmagaluru BJP candidate Shobha Karandlaje

ಪ್ರ: ಕೆಜಿಪಿ ಕಾರ್ಯಕರ್ತರ ಬೆಂಬಲವಿಲ್ಲದೇ ಚುನಾವಣೆ ಹೇಗೆ ಎದುರಿಸುತ್ತಿದ್ದೀರಿ?

ಶೋಭಾ: ಕೆಜೆಪಿ ಎನ್ನುವ ಪಕ್ಷವೇ ಈಗ ಅಸ್ತಿತ್ವದಲ್ಲಿ ಇಲ್ಲವಲ್ಲ, ಬಿಜೆಪಿ ಜೊತೆಗೆ ವಿಲೀನವಾಗಿದೆ ತಾನೆ. ಕೆಜೆಪಿ ಮತ್ತು ಬಿಜೆಪಿ ನಡುವೆ ಇದ್ದ ಕೆಲವೊಂದು ಗೊಂದಲಗಳು ನಿವಾರಣೆಯಾಗಿವೆ. ಕೆಲವು ಮುಖಂಡರು ಅವರವರ ಸ್ವಾರ್ಥಕ್ಕಾಗಿ ಪಕ್ಷ ತೊರೆದಿದ್ದಾರೆ. ಈಗ ಎಲ್ಲರೂ ಒಗ್ಗಟ್ಟಾಗಿ ಚುನಾವಣೆಗೆ ಕೆಲಸ ಮಾಡುತ್ತಿದ್ದೇವೆ. ನಮ್ಮೆಲ್ಲರ ಗುರಿ ಮೋದಿ ಪ್ರಧಾನಿಯಾಗಬೇಕೆನ್ನುವುದು. ಅದಕ್ಕೆ ಒಂದೊಂದು ಕ್ಷೇತ್ರದಲ್ಲಿ ಜಯಗಳಿಸುವ ಮುಖೇನ ಮೋದಿಗೆ ಬಲ ತುಂಬುವ ಕೆಲಸ ಆಗಬೇಕಾಗಿದೆ.

ಪ್ರ: ಈ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಲು ಬಲವಾದ ಕಾರಣಗಳೇನು?
ಶೋಭಾ : ಇದು ಪಕ್ಷದ ಆಯ್ಕೆ, ಬಿಜೆಪಿ ಚುನಾವಣಾ ಆಯ್ಕೆ ಸಮಿತಿಯ ನಿರ್ಧಾರ. ನಮ್ಮದು ಹೈಕಮಾಂಡ್ ಸಂಸ್ಕೃತಿಯ ಪಕ್ಷವಲ್ಲ. ನಾವೆಲ್ಲಾ ಬಿಜೆಪಿಯ ಶಿಸ್ತಿನ ಸಿಪಾಯಿಗಳು. ಪಕ್ಷ ಎಲ್ಲಿ ಸ್ಪರ್ಧಿಸಲು ಆದೇಶ ನೀಡುತ್ತೋ, ಅದನ್ನು ನಾವು ಪಾಲಿಸುತ್ತೇವೆ. ಸಂಘ ಪರಿವಾರದ ಬೆಂಬಲವಿದೆ, ಬಿಜೆಪಿಗೆ ಇಲ್ಲಿ ಉತ್ತಮ ನೆಲೆಯಿದೆ.

ಪ್ರ: ಜಯಪ್ರಕಾಶ್ ಹೆಗ್ಡೆ ವಿರುದ್ದ ಆಡಳಿತ ವಿರೋಧಿ ಅಲೆ ' ಇಲ್ಲ ' ಅಂತ ಹೇಳ್ತಾರಲ್ಲಾ?
ಶೋಭಾ : ಕಳೆದೆರಡು ವರ್ಷದಲ್ಲಿ ಜಯಪ್ರಕಾಶ್ ಹೆಗ್ಡೆ ಏನೂ ಕೆಲಸ ಮಾಡಿಲ್ಲ ಎನ್ನುವ ಭಾವನೆ ಜನರಲ್ಲಿದೆ. ಅಡಿಕೆ ವಿಚಾರದಲ್ಲಿ ಒಮ್ಮೆಯೂ ಸಂಸತ್ತಿನಲ್ಲಿ ಮಾತನಾಡಿಲ್ಲ ಎನ್ನುವ ಆರೋಪ ಅವರ ಮೇಲಿದೆ. ಸಂಸತ್ತಿನಲ್ಲಿ ಮಾತನಾಡದವರು ಸಂಸತ್ತಿಗೆ ಯಾಕೆ ಹೋಗಬೇಕು? ಮತದಾರ ಮತ್ತೆ ಯಾಕೆ ಅವರನ್ನು ಆಯ್ಕೆ ಮಾಡಬೇಕು? ಸಾಮಾನ್ಯ ಜನರು ಸಂಸತ್ತಿಗೆ ಹೋಗಲು ಆಗದೇ ಇರುವ ಕಾರಣ ಜನರ ಪ್ರತಿನಿಧಿಯಾಗಿ ಸಂಸದರನ್ನು ಆಯ್ಕೆ ಮಾಡಲಾಗುತ್ತದೆ. ಅವರ ಧ್ವನಿಯನ್ನು ಸಂಸತ್ತಿನಲ್ಲಿ ಎತ್ತದ ಸಂಸದರು ನಮಗೆ ಯಾಕೆ ಬೇಕು ಎನ್ನುವ ಭಾವನೆ ಈ ಭಾಗದ ಮತದಾರರಿಗಿದೆ.

ಪ್ರ: ಈ ಚುನಾವಣೆಯಲ್ಲಿ ನಿಮಗೆ ಗಾಡ್ ಫಾದರ್ ಯಾರು?
ಶೋಭಾ : ಮತದಾರರೇ ಗಾಡ್ ಫಾದರ್. ಅವರ ಆಶೀರ್ವಾದ ಇದ್ದರೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಜೊತೆಗೆ, ಯಡಿಯೂರಪ್ಪ ಪಕ್ಷಕ್ಕೆ ಮತ್ತೆ ವಾಪಸಾಗಿರುವುದರಿಂದ ಬಿಜೆಪಿಗೆ ಆನೆಬಲ ತಂದಿದೆ. ಪಕ್ಷದ ಮುಖಂಡರು ಉತ್ತಮ ಬೆಂಬಲ ನೀಡುತ್ತಿದ್ದಾರೆ. ಜನತಾ ಜನಾರ್ಧನನ ಆಶೀರ್ವಾದ, ಕಾರ್ಯಕರ್ತರ ಶ್ರಮದ ಫಲದಿಂದ ಚುನಾವಣೆ ಗೆಲ್ಲುವ ವಿಶ್ವಾಸ ನನ್ನಲ್ಲಿದೆ.

ಪ್ರ: ನಕ್ಸಲರು ಎಂದರೆ ಯಾರು?
ಶೋಭಾ : ನನ್ನ ಮಟ್ಟಿಗೆ ನಕ್ಸಲರು ಎಂದರೆ ನಮ್ಮ ನಿಮ್ಮ ಹಾಗಿರುವ ಮನುಷ್ಯರು. ಆದರೆ ಅವರ ಹೋರಾಟದ ಹಾದಿ ಸರಿಯಲ್ಲ. ರಕ್ತಪಾತ ಹೋರಾಟಕ್ಕೆ ಸರಿಯಾದ ಮಾರ್ಗವಲ್ಲ. ಅವರೂ ಮುಖ್ಯವಾಹಿನಿಗೆ ಬರಬೇಕು. ಮಾತುಕತೆಯಿಂದ ಎಂತಹಾ ಜಟಿಲ ಸಮಸ್ಯೆಗೂ ಪರಿಹಾರ ಸಾಧ್ಯ. ಹಿಂಸಾಚಾರ ಬಿಟ್ಟು ಅವರೂ ಸಮಾಜದಲ್ಲಿ ತಲೆ ಎತ್ತಿ ಬದುಕುವಂತಾಗಬೇಕು.

ಪ್ರ : ಹಾಲಾಡಿ ಶ್ರೀನಿವಾಸ ಶೆಟ್ಟರ ಸಹಕಾರ ಸಿಗುತ್ತಿದೆಯಾ?
ಶೋಭಾ : ಹಾಲಾಡಿ ಶ್ರೀನಿವಾಸ ಶೆಟ್ಟರು ಸಭ್ಯರು, ಪ್ರಾಮಾಣಿಕರು, ನಮ್ಮಿಂದ ತಪ್ಪಾಗಿರಬಹುದು. ಅವರ ಸಹಕಾರಕ್ಕಾಗಿ ಅವರ ನಿವಾಸಕ್ಕೆ ತೆರಳಿ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದೇನೆ. ಪಕ್ಷೇತರ ಅಭ್ಯರ್ಥಿಯಾಗಿ ಜನ ಆಶೀರ್ವಾದ ಮಾಡಿದ್ದಾರೆ, ಹಾಗೇ ಇದ್ದು ಬಿಡುತ್ತೇನೆ ಎಂದಿದ್ದಾರೆ. ಇದು ಅವರ ನಿರ್ಧಾರ. ಆದರೆ ಹಾಲಾಡಿ ಅವರ ಬೆಂಬಲಿಗರು ಪ್ರಚಾರಕ್ಕೆ ನಮ್ಮ ಜೊತೆ ಕೈಜೋಡಿಸಿದ್ದಾರೆ.

ಪ್ರ: ಶಿವಮೊಗ್ಗದಲ್ಲಿ ಮತದಾರ ಸೆಲೆಬ್ರಿಟಿ ಅಭ್ಯರ್ಥಿಗೆ ಆಕರ್ಷಿತರಾದರೇ?
ಶೋಭಾ : ನನ್ನ ಮಟ್ಟಿಗೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರನ್ನು ಸೋಲಿಸುವ ಅಭ್ಯರ್ಥಿಗಳೇ ಇಲ್ಲ. ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ಮಾಡಿರುವ ಅಭಿವೃದ್ದಿಯೇ ಅವರ ಗೆಲುವಿನ ಮಂತ್ರ. ಇನ್ನು ಶಿವಮೊಗ್ಗದ ಜನತೆ ವಿದ್ಯಾವಂತರಿದ್ದಾರೆ. ಹಾಗಾಗಿ ಸೆಲೆಬ್ರಿಟಿ ಅಭ್ಯರ್ಥಿಗೆ ಮತ ಹಾಕುವ ಯಾವ ಪ್ರಮೇಯವೂ ಹುಟ್ಟುವುದೇ ಇಲ್ಲ. ಕ್ಷೇತ್ರದ ಜನತೆ ಯಡಿಯೂರಪ್ಪನವರನ್ನು ಪ್ರೀತಿಸುತ್ತಾರೆ. ಅವರು ಮಾಡಿರುವ ಅಭಿವೃದ್ದಿಯ ಮಂತ್ರವೇ ಅವರ ಗೆಲುವಿಗೆ ಶ್ರೀರಕ್ಷೆ.

English summary
An Exclusive interview with Udupi - Chikmagaluru BJP candidate Shobha Karandlaje.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X