ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಅಗತ್ಯಕ್ಕೆ ಸಾಲ ಕೊಟ್ಟವರನ್ನ ಬಲಿಪಶು ಮಾಡ್ಬೇಕಾ?

By Srinath
|
Google Oneindia Kannada News

debt-to-death-debt-burdened-family-suicide-who-should-be-blamed
ಬೆಂಗಳೂರು, ಮೇ 12: ಕಳೆದ ವಾರ ಕುಕ್ಕೆ ಸುಬ್ರಹ್ಮಣ್ಯ ಶ್ರೀಕ್ಷೇತ್ರದಲ್ಲಿ ಬೆಂಗಳೂರಿನ ಅಕ್ಕಸಾಲಿಗರಾದ (ಇವರು ಸಾಲಗರೂ ಹೌದು) ನಂಜುಂಡಯ್ಯ ಮತ್ತು ಅವರ ಕುಟುಂಬದವರು ಸಯನೈಡ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಪ್ರಸಂಗದ ಸಮ್ಮುಖದಲ್ಲಿ ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಕೋರುತ್ತಾ ಒಂದಷ್ಟು ಚರ್ಚಾರ್ಹ ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಕರಣವನ್ನು ಜನರಲೈಸ್ ಮಾಡುತ್ತಾ ಹೇಳುವುದಾದರೆ ನಂಜುಂಡಯ್ಯ ಕುಟುಂಬಸ್ಥರು 'ಸಾಲಗಾರರು ಕಾಟ ಕೊಡುತ್ತಿದ್ದರು' ಎಂದು ಡೆತ್ ನೋಟ್ ಬರೆದಿಟ್ಟು ಹೋಗಿದ್ದಾರೆ. ಇವರೊಬ್ಬರೇ ಅಲ್ಲ. ಇಂತಹ ಆತ್ಮಹತ್ಯೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದನ್ನು ಗಂಭಿರವಾಗಿ ಪರಿಗಣಿಸಿದಾಗ ಇಲ್ಲಿ ತಪ್ಪು ಯಾರದು ಎಂಬ ಬಹು ಮುಖ್ಯ ಪ್ರಶ್ನೆ ಕಾಡುತ್ತದೆ.

ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಜಾಣತನ ಮತ್ತು ಕ್ಷೇಮಕರ ಅಲ್ಲವೇ? ಇಷ್ಟಕ್ಕೂ ಸಾಲಗಾರರ ಮೇಲೆ ಗೂಬೆ ಕೂರಿಸುವುದು ಎಷ್ಟು ಸಮಂಜಸ. ಸಾಲ ಕೊಟ್ಟವರು ಸುಮ್ಮನೇ ಇರುತ್ತಾರಾ? ಸುಮ್ಮನೆ ಏಕಿರಬೇಕು? ಅವರದೂ ದುಡ್ಡು ಅಲ್ಲವೇ? ಅದರ ಮೇಲೆ ಹೆಚ್ಚಿನ ಹಕ್ಕು ಅವರಿಗೇ ತಾನೆ ಇರುವುದು? ಅವರ ದುಡ್ಡನ್ನು ತಂದು ಹೋಳಿಗೆ ಊಟ ಮಾಡುವುದು ಎಷ್ಟು ಸರಿ? ಎಲ್ಲಾ ಆದ ಮೇಲೆ ಸಾಲಗಾರರ ಕಾಟ ಅಂದರೆ ಎಲ್ಲಾ ಮುಗಿಯಿತು ಅಂತ್ಲಾ?

ಈಗ ಉದಾಹರಣೆಗೆ ಯಾವುದೋ ಒಂದು ಪ್ರಕರಣವನ್ನು ತೆಗೆದುಕೊಳ್ಳಿ. ಮಧ್ಯಮ ವರ್ಗದ ವ್ಯಕ್ತಿಯೊಬ್ಬ ಖಾಸಗಿಯವರ ಬಳಿ 10 ಲಕ್ಷ ರೂ ಸಾಲ ಮಾಡಿದ ಅಂತಿಟ್ಟುಕೊಳ್ಳಿ. ಸಾಲ ಮಾಡುವುದಕ್ಕೂ ಮುನ್ನ ಅದನ್ನು ತೀರಿಸುವ ಯೋಗ್ಯತೆ ಇದೆಯೇ? ಎಂದು ಆಲೋಚಿಸಿ ಸಾಲ ಪಡೆಯಬೇಕಾಗಿರುವುದು ಸೂಕ್ತವಲ್ಲವೇ? ಇಲ್ಲಿ ಸಾಲದ ಅಗತ್ಯ ಯಾರಿಗೆ ಇರುವುದಿಲ್ಲ ಹೇಳಿ. ನನಗೂ ಒಂದೈದತ್ತು ಲಕ್ಷ ಕೊಟ್ಟರೆ ಭಾರತಾನೇ ಏಕೆ ಒಂದಷ್ಟು ಪ್ರಪಂಚಾನೂ ನೋಡ್ಕೊಂಡ್ ಬರುವೆ!

ನಮ್ಮ ಅಗತ್ಯಗಳಿಗೆ ಸಾಲ ನೀಡಿದವರನ್ನು ಬಲಿಪಶು ಮಾಡಬೇಕಾ?:
ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಲು ಅಡ್ಡಿ ಯಾಕೆ ಅಲ್ವಾ? ಆದರೆ ಸಾಲ ಕೊಟ್ಟೋನು ಎಲ್ಲಿಗೆ ಹೋಗಬೇಕು? ಕೊಟ್ಟೋನು ಕೋಡಂಗಿ ಆಗಬೇಕಾ? ಈಗ ಈ ಪ್ರಕರಣದಲ್ಲೇ ಆಗಲಿ ಸುಮ್ಮನೇ ಹೇಳೋದಾದರೆ ಮೃತರು ಒಂದೆರಡು ಲಕ್ಷ ಸಾಲ ಪಡೆದಿದ್ದರು ಅಂತಿಟ್ಕೊಳ್ಳಿ. ಆ ಸಾಲ ನೀಡಿದವರು ಈಗ ಎಲ್ಲಿಗೆ ಹೋಗಬೇಕು? ಅವರ ಗತಿಯೇನು?

debt to death: ಸಾಲ ಯಾವತ್ತಿಗೇ ಆಗಲಿ ನಿಕೃಷ್ಟ. ಅಂತಹ ನಿಕೃಷ್ಟ ಸಾಲಕ್ಕೆ ಅಮೂಲ್ಯವಾದ ಜೀವವನ್ನೇ ಬಲಿ ಕೊಡಬೇಕಾ? ಅದೂ ಬಾಳಿ-ಬೆಳಗಬೇಕಾದ ಮಕ್ಕಳೊಂದಿಗೆ ಹೋಲ್ ಸೇಲ್ ಆಗಿ ನಿಕೃಷ್ಟವಾಗಿ ಸಾಯಬೇಕಾ?

ಇನ್ನು ಕಾನೂನು ಬಾಹಿರವಾಗಿ ಸಾಲ ನೀಡುವವರೂ ಇರುತ್ತಾರೆ. ಅವರು ಜಿಗಣೆಯಂತೆ ರಕ್ತ ಹೀರುತ್ತಾ ಸಾಲ ಪಡೆದವರ ಶಕ್ತಿಯನ್ನು ಉಡುಗಿಸಿಬಿಡುತ್ತಾರೆ? ಆದರೆ ಅದಕ್ಕೆ ಯಾಕೆ ಆಸ್ಪದ ಕೊಡಬೇಕು? ಸಾಲ ಮಾಡುವುದೇ ಬೇಡ. ತೀರಾ ಅನಿವಾರ್ಯವಾದರೆ, ವಾಪಸು ಮಾಡುವ ತಾಕತ್ತು ಇದ್ದರೆ ಮಾತ್ರ ಒಂದಷ್ಟು ಕೈಸಾಲ ಮಾಡಿದರೆ ಕ್ಷೇಮವಲ್ಲವೇ?

ಸಾಲ ತೆಗೆದುಕೊಳ್ಳುವುದಕ್ಕೂ ಮುನ್ನ, ಅಥವಾ ಸಾಲಭಾದೆಯಿಂದ ಸಾಯುವ ಮುನ್ನ ಒಮ್ಮೆ ಆಲೋಚಿಸಿ ನೋಡಿ.

ಇದು ಒಂದು ಬೆಂಗಳೂರು, ಕರ್ನಾಟಕದ ಕಥೆ ಅಂತಲ್ಲ, ಎಲ್ಲೆಲ್ಲೂ ಇದೆ ಇದೇ ಕತೆ. ಮನುಷ್ಯ ಪ್ರಲೋಭಗಳಿಗೆ ಒಳಗಾದಷ್ಟೂ ಇಂತಹ ಪ್ರಕರಣಗಳು ಹೆಚ್ಚುತ್ತಾ ಹೋಗುತ್ತವೆ. ನೆರೆಯ ಕೇರಳವನ್ನೇ ತೆಗೆದುಕೊಳ್ಳೀ. ಅಲ್ಲಿ ಇಂತಹ ಸಾಲಗಾರರ ಕಾಟ ಹೇಗಿದೆಯೆಂದರೆ ಸಾವಿರಾರು ಕೋಟಿಗಳಷ್ಟು ಇಂತಹ ಸಾಲದ ವಹಿವಾಟು ಅಲ್ಲಿ ನಡೆಯುತ್ತಿರುತ್ತದೆ. ಅದೊಂದು ದೊಡ್ಡ ಜಾಲ (ಅವು ಅಕ್ಷರಶಃ blade companyಗಳು). ಅದಕ್ಕೆ ಕಡಿವಾಣ ಹಾಕಲೆಂದೇ Operation Kuberan ಎಂದು ಅಲ್ಲಿನ ಸರಕಾರವು ಸಾಲ ನೀಡಿದವರ ವಿರುದ್ಧ ಇಂದಿನಿಂದ ಕಾರ್ಚಾರಣೆಗಿಳಿದಿದೆ.

English summary
Debt to death: Debt-burdened family suicide who should be blamed? Last week four persons of a same family committed suicide inside a private lodge by consuming poison at Kukke Subramanya. But who should be blamed for this? Does not over debt leads to death? Why a loner should be made scapegoat?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X