ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರ ಕನ್ನಡದ ಶಂಕರ ಬಟ್ ರಿಗೊಂದು ಪತ್ರ

By * ವಿನಾಯಕ್ ಹಂಪಿಹೊಳಿ
|
Google Oneindia Kannada News

ಅಲ್ರೀ ಶಂಕರ್,
ನೀವೇನೋ ಹಳೆಗನ್ನಡ, ತಮಿಳು, ಮಲಯಾಳಂ, ತುಳು, ಹವ್ಯಕ ಕನ್ನಡ ಎಲ್ಲಾ ಓದೀರಿ. ಇವೆಲ್ಲಾ ದ್ರವಿಡ ಭಾಷಾಗಳು, ಹಿಂಗಾಗಿ ಋ, ಖ, ಘ, ಙ, ಛ, ಝ, ಞ, ಠ, ಢ, ಥ, ಧ, ಫ, ಭ ಎವೆಲ್ಲ ಅಕ್ಷರಗಳು ಕನ್ನಡದಾಗ ಬ್ಯಾಡಾ ಅಂತನೂ ಹೇಳೀರಿ. ಅಚ್ಚಗನ್ನಡ ಶಬ್ದದಾಗ ಮಹಾಪ್ರಾಣ ಅಕ್ಷರಗಳು ಬರಂಗಿಲ್ಲ ಅಂತನೂ ಅಂದ್ರಿ. ಜತಿಗೆ, ಷ ಬ್ಯಾಡ ಅಂತನೂ ಅಂದ್ರಿ. ಆ ಬದ್ಲಾವಣಿ ನಿಮ್ಮಿಂದನಽ ಶುರೂನೂ ಮಾಡಿದ್ರಿ.

ನಿಮ್ಮ ಹೆಸರು ಭಟ್ಟ ಅಂತಿತ್ತು ಅದನ್ನು ಬಟ್ ಅಂತ ಮಾಡ್ಕೊಂಡೀರಿ. ಇರ್ಲಿ. ಇಂಗ್ಲೀಷನ್ಯಾಗ ಬರ್ಯೋಮುಂದ ಜ್ವಾಕಿ. ಆದ್ರ ನಿಮ್ಮ ಸಲಹಾ ಸರ್ಕಾರ ಕೇಳ್ತದೋ ಬಿಡ್ತದೋ, ಆದರೆ ಅದಕ್ಕೂ ಮೊದ್ಲ ನನ್ನ ಮಾತಿಗೂ ಸ್ವಲ್ಪ ಬೆಲಿ ಕೊಟ್ಟು ವಿಚಾರ ಮಾಡ್ರೀ..

ನಾವು ಧಾರವಾಡದ ಮಂದಿ. ನಮ್ಮ ಉತ್ತರ ಕರ್ನಾಟಕದ ಕನ್ನಡ, ಕನ್ನಡ ಹೌದೋ ಅಲ್ಲೋ? ಉತ್ತರ ಕರ್ನಾಟಕದ ಕನ್ನಡದಾಗ, ಸಾಹಿತ್ಯ, ಕಾದಂಬರಿ, ಕಾವ್ಯಗಳು ಐತೋ ಇಲ್ಲೋ? ಮುಂದನೂ ಈ ಕನ್ನಡ ಇರ್ಬಕೋ ಬ್ಯಾಡೋ? ನೀವು ಎಲ್ಲ ಮಹಾಪ್ರಾಣಗಳನ್ನು ನಮ್ಮ ಕನ್ನಡದ ಲಿಪಿಯಿಂದ ತಗದ್ರ ನಮ್ಮ ಸಾಹಿತ್ಯಕ್ಕ ಯಾವ ಲಿಪಿ ಇಟ್ಕೋಳೂಣು? ಬೆಂಗ್ಳೂರವ್ರು ಸತ್ಯ ಅನ್ಲಿಕ್ಕೆ ನಿಜ, ದಿಟ ಅನ್ನು ಪದ ಉಪಯೋಗಸ್ತಾರ. [ಶಂಕರ್ ಭಟ್ 'ಎಲ್ಲರ ಕನ್ನಡ'ಕ್ಕೆ ಸಮರ್ಥನೆ]

ಆದ್ರ ನಮ್ದು ಗಂಡ್ ಕನ್ನಡ ನೋಡ್ರಿ. ಖರೇನ ಹೇಳ್ತೀನಿ, ನಾವು 'ಖರೆ' ಅನ್ನುಮುಂದ ವಟ್ಟ 'ಕರೆ' ಅಂತ ಯಾವತ್ತೂ ಅನ್ನಂಗಿಲ್ರೀ. ನೀವು ಹವ್ಯಕರು, ಅಡಿಗಿ ಹೆಂಗಾಗ್ಯದ ಅಂತ ಕೇಳಿದ್ರ 'ಬಾರಿ ಚೊಲೊ ಆಯ್ದು ಮಾರಾಯ' ಅಂತೀರಿ. ಆದ್ರ ನಾವು ನಮ್ಮ ಗಂಡ್ ಕನ್ನಡದಾಗ 'ಭಾರೀ ಛೊಲೋ ಆಗ್ಯದ್ ಲೇ ಮಂಗ್ಯಾ' ಅಂತೀವಿ.

An open letter to Dr. D. N. Shankara Bhat world-renowned linguist

ನಾವು ಕಿಟಕಿ ಅನ್ನಂಗಿಲ್ಲ. ಸ್ಪಷ್ಟ ಖಿಡಕಿ ಅಂತೀವಿ. ಸ್ಪಷ್ಟ ಶಬ್ದದಾಗೂ 'ಷ' ಅಕ್ಷರ ಭಾರೀ ಖಡಕ್ಕಾಗಿ ಬರ್ತೈತಿ ನಮ್ಮ ಮಾತ್ನ್ಯಾಗ. ನಾವು ನಿಮ್ಮಂಗ ಗಂಟೆ ಅನ್ನಂಗಿಲ್ರೀ. ಫಕ್ತ ಘಂಟಿ ಅಂತೀವಿ. ನೀವು ಸೆಲೆ ಅಂತೀರಿ. ನಾವು ನೀರಿನ ಝರಿ ಅಂತೀವಿ. ಅನ್ನಕ್ಕ ಹಚ್ಕೊಳ್ಳಿಕ್ಕೆ ಮೈದಾ ಹಿಟ್ಟಿಲೆ ಝುಣಕ ಅಂತ ಮಾಡ್ತೇವಿ.

ಬಯ್ಯೋಮುಂದ 'ಭಾಮ್ಟ್ಯಾ' ಅಂತ ಬೈತೀವಿ. ನಿಮಗ ಉಚ್ಚಾರ ಮಾಡ್ಲಿಕ್ಕೆ ತ್ರಾಸಾಗ್ತದ, ಅದ್ರ ನಮಗ ಅಗ್ದೀ ಸರಳ ನೋಡ್ರಿ. ಯಾರರೇ ಭಾಳ ದಪ್ಪ್ ಇದ್ರ ಢೇಪ್ಯಾ ಅಂತೀವಿ. ಠೇವಣಿ ಶಬ್ದ ಹೆಂಗದನೋ ಹಂಗ ಬಳಸ್ತೀವಿ. ಬಹಳ ಅನ್ನಂಗಿಲ್ರೀ. ತಟ್ಟೆ ಅನ್ನಂಗಿಲ್ರೀ. ಥಾಬಾಣ ಅಂತೀವಿ. ಕಚ್ಚಿ ಉಡೋ ದೊಡ್ಡ ಪಂಜಾಕ್ಕ ಧೋತ್ರ ಅಂತೀವಿ.

ಧಾರವಾಡ ಊರನ್ನು ತಪ್ಪಿಯೂ ದಾರವಾಡ ಅಂತ ಯಾರೂ ಅನ್ನಂಗಿಲ್ರೀ. ಇನ್ನು ಅಲ್ಲಿ ಸ್ಪೆಷಲ್ ಫೇಮಸ್ ಫೇಡೆನ್ನ ನಾವು ಎಂದರೆ 'ಪೇಡಾ' ಅಂದಿದ್ದನ್ನ ನೀವು ನೋಡೀರೇನು? ಞ ಅಕ್ಷರ ತಗದ್ರ, ನಮ್ಮ ಕಯ್ಯಾರ ಕಿಞ್ಞಣ್ಣ ರೈ ಬಗ್ಗೆ ಏನಂತ ಬರಿಯೂಣು?

ನಾ ಹೇಳೋದಿಷ್ಟ ನೋಡ್ರೀ. ನಮ್ದು ಗಂಡ್ ಕನ್ನಡ ಯಾಕಂದ್ರ ನಾವು ಕಚಟತಪ ಹೆಂಗ್ ಉಪಯೋಗಿಸ್ತೀವೋ ಹಂಗ, ಖಛಠಥಫ ಗಳನ್ನೂ ಉಪಯೋಗಿಸ್ತೀವಿ. ನೀವು ಹಂಗೂ ಎಲ್ಲ ಮಹಾಪ್ರಾಣ ತಗದ್ರ ನಾವು ನಮ್ಮ ಸಾಹಿತ್ಯಕ್ಕ ಮರಾಠಿ, ತೆಲಗು ಲಿಪಿ ನೋಡ್ಕೋಬೇಕಾಗ್ತದ. ಆಗ ಸುಮ್ನ ಲಿಪಿ ಬ್ಯಾರೆ ಆತು ಅಂತ ಬ್ಯಾರೆ ರಾಜ್ಯ ಮಾಡ್ಬಿಡ್ತಾರ ಈ ರಾಜಕಾರಣಿಗಳು.

ಅದಕ್ಕ ಹೇಳ್ಳಿಕತ್ತೀನಿ, ಈಗಿರೋ ಕನ್ನಡದಾಗ ಯಾವ ಅಕ್ಷರಾನೂ ತಗೀಬ್ಯಾಡ್ರಿ. ನಮ್ಮ ಕನ್ನಡ ಜಾತಿಯಿಂದ, ಜಾತಿಗೆ, ಊರಿಂದ ಊರಿಗೆ ಬ್ಯಾರೆ ಬ್ಯಾರೆ ಅದ. ಹಿಂಗಾಗಿ, ನಮ್ಮ ಕನ್ನಡದ ಲಿಪಿ, ಕರಾವಳಿ ಹವ್ಯಕರ ಕನ್ನಡ ಬರಿಲಿಕ್ಕೂ ಬರ್ತಿರ್ಬೇಕು, ರಾಯಚೂರ್ ಸಾಬ್ರ ಕನ್ನಡ ಬರಿಲಿಕ್ಕೂ ಬರ್ತಿರ್ಬೇಕು. ಬೆಳಗಾವಿ ಕನ್ನಡ ಬರಿಲಿಕ್ಕೂ ಬರ್ತಿರ್ಬೇಕು, ಚಾಮರಾಜನಗರದ ಕನ್ನಡ ಬರಿಲಿಕ್ಕೂ ಬರ್ತಿರ್ಬೇಕು.

ಹುಡಗ್ರಿಗೆ 10 ಅಕ್ಷರ ಕಲೀಲಿಕ್ಕೆ ಜಾಸ್ತಿ ಆಗ್ತದ ಅಂತ ಹೇಳಿ ಅವನ್ನೆಲ್ಲ ತಗದು ಈಗಾಗ್ಲೇ ಹುಡಗ್ರಿಗೆ ಗೊತ್ತಿರೊ 10 ಸಾವಿರ ಶಬ್ದಕ್ಕ ಬ್ಯಾರೆ 10 ಸಾವಿರ ಶಬ್ದ ಹುಡಿಕಿ ಅದನ್ನ ಹುಡಗ್ರ ತಲ್ಯಾಗ ತುಂಬುದು ಎಲ್ಲಿ ಶಾಣ್ಯಾತನ?

ಇಂತಿ ನಿಮ್ಮ
ಗಂಡು ಕನ್ನಡದ ಅಭಿಮಾನಿ

ಸೂಚನೆ: ಈ ಲೇಖನ ನಿಲುಮೆಯಲ್ಲಿ ಪ್ರಕಟಿತ ಲೇಖನವಾಗಿದ್ದು, ಇಲ್ಲಿ ಮೂಡಿರುವ ಅಭಿಪ್ರಾಯಕ್ಕೆ ಲೇಖಕರೇ ಹಕ್ಕುದಾರರಾಗಿರುತ್ತಾರೆ.

English summary
Dr. D. N. Shankara Bhat is world-renowned linguist.His thoughts and observations on the development of Kannada, the true grammatical composition of the language, and its word structure, have been revolutionary. But, questions raised about the concept proposed by Shankara Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X