ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಪ್ರಧಾನಿ, ದೇವೇಗೌಡರೂ ಬರ್ತಾರೆ; ಸಿದ್ದು ಇಲ್ಲ

By Srinath
|
Google Oneindia Kannada News

ನವದೆಹಲಿ, ಮೇ 24: ಇನ್ನೆರಡು ದಿನಗಳಲ್ಲಿ ಭಾರತದ ನೂತನ ಪ್ರಧಾನಿಯಾಗಿ ಬಿಜೆಪಿಯ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತ ನೀಡಿದ್ದ ಆಹ್ವಾನವನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಸ್ವೀಕರಿಸಿದ್ದು, ಸೋಮವಾರ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

ಸಿದ್ದು ಆಬ್ಸೆಂಟ್ : ಆದರೆ ಕರ್ನಾಟಕದ ಸಿಎಂ ಸಿದ್ದು ಮೋದಿ ಸಮಾರಂಭದಲ್ಲಿ ಗೈರುಹಾಜರಾಗಲಿದ್ದಾರೆ. ಆದರೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸೋಮವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಭಾವಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಲು ನಿಮ್ಮ ಸಹಕಾರ ಹಾಗೂ ಶುಭಾಕಾಂಕ್ಷೆಯ ಅಗತ್ಯವಿದೆ. ಹಾಗಾಗಿ ಮೇ 26ರಂದು ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಪತ್ರದಲ್ಲಿ ಸೂಚಿಸಿದ್ದರು' ಎಂದು ಸಿಎಂ ಕಚೇರಿಯ ಮೂಲಗಳು ತಿಳಿಸಿತ್ತು.

ಆದರೆ ತಾಜಾ ವರದಿಗಳ ಪ್ರಕಾರ ಸಿದ್ದು ಆಬ್ಸೆಂಟ್ ಆಗಲಿದ್ದಾರಂತೆ. ಮತ್ತೊಂದು ಮೂಲಗಳ ಪ್ರಕಾರ, ಮೋದಿ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಸಮಾರಂಭಕ್ಕೆ ಸಿದ್ದು ಗೈರು ಆಗುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುತ್ತಾರಾ ಅಥವಾ ಪಕ್ಷದ ಪ್ರತಿನಿಧಿಯಾಗಿ ಬೇರೆ ಯಾರನ್ನಾದರೂ ಕಳುಹಿಸಿಕೊಡುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ.

Pak PM Nawaz Sharif will attend Narendra Modi's swearing-in
ಷರೀಪ್ ಬರ್ತಾರೆ: ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಸಮಾರಂಭದಲ್ಲಿ ಖುದ್ದು ಭಾಗವಹಿಸುವುದಾಗಿ ತಿಳಿಸಿದ್ದಾರೆ. ಗಮನಾರ್ಹವೆಂದರೆ ಭಾರತದ ಪ್ರಧಾನಿಯೊಬ್ಬರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನೆರೆಯ ಪಾಕಿಸ್ತಾನದ ಪ್ರಧಾನಿ ಆಗಮಿಸುತ್ತಿರುವುದು ಇದೇ ಮೊದಲು. ಅವರ ಜತೆಗೆ ಪುತ್ರಿ ಮತ್ತು ಪ್ರಧಾನಿ ಸಲಹೆಗಾರ ಸರ್ತಾಜ್ ಅಜೀಜ್ ಆಗಮಿಸುತ್ತಿದ್ದಾರೆ. ಷರೀಫ್ ಅವರು ಸಮಾರಂಭದಲ್ಲಿ ಪಾಲ್ಗೊಂದು ಅಂದೇ ವಾಪಸಾಗುತ್ತಾರಾದರೂ ಅದಕ್ಕೂ ಮುನ್ನ ವಾಜಪೇಯಿ ಅವರನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಮಿಲಿಟರಿ ಮುಖ್ಯಸ್ಥರ ತೀವ್ರ ವಿರೋಧದ ನಡುವೆಯೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಸಮಾರಂಭಕ್ಕೆ ಹಾಜರಾಗಲು ಸಮ್ಮತಿ ಸೂಚಿಸಿರುವುದು ದಕ್ಷಿಣ ಏಷ್ಯಾದಲ್ಲಿ ಹೊಸ ಮನ್ವಂತರವೊಂದಕ್ಕೆ ನಾಂದಿ ಹಾಡಿದಂತಾಗಿದೆ. ನೆರೆಯ ಹಲವು ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ ನೀಡಿದಂತೆಯೇ ಪಾಕಿಸ್ತಾನ ಪ್ರಧಾನಿಯವರಿಗೂ ಆಹ್ವಾನ ಕಳುಹಿಸಲಾಗಿತ್ತು. ಆದರೆ, ನವಾಜ್ ಷರೀಫ್ ಸಮಾರಂಭಕ್ಕೆ ಆಗಮಿಸುವ ಬಗ್ಗೆ ಪಾಕಿಸ್ತಾನದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಅಂದಿನಿಂದ ಇಂದಿನವರೆಗೂ ಅಳೆದೂ ತೂಗಿದ ನವಾಜ್ ಷರೀಫ್ ಕೊನೆಗೂ ಮಿಲಿಟರಿ ಅಧಿಕಾರಿಗಳು ಹಾಗೂ ಇತರರ ವಿರೋಧವನ್ನು ಲೆಕ್ಕಿಸದೆ 26ರಂದು ಭಾರತಕ್ಕೆ ಆಗಮಿಸಲು ತಮ್ಮ ಒಪ್ಪಿಗೆ ನೀಡಿರುವುದು ರಾಜಕೀಯ ವಲಯದಲ್ಲಿ ಸಂತಸ ಮೂಡಿಸಿದೆ. ಈ ಕುರಿತಂತೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ನವಾಜ್ ಷರೀಫ್ ಅವರಿಗೆ ಭಾರತ ಸರ್ಕಾರ ಆಹ್ವಾನ ಕಳುಹಿಸಿದ್ದು, ಮತ್ತು ಅದರ ಬಗ್ಗೆ ಷರೀಫ್ ಮೌನ ವಹಿಸಿದ್ದು ವಿಶ್ವದಾದ್ಯಂತ ತೀವ್ರ ಕುತೂಹಲ ಕೆರಳಿಸಿತ್ತು.

ಇಂದು ಬೆಳಗ್ಗೆವರೆಗೂ ನವಾಜ್ ಷರೀಫ್ ಭಾರತಕ್ಕೆ ಆಗಮಿಸುವ ಕಾರ್ಯಕ್ರಮ ಉಯ್ಯಾಲೆಯಲ್ಲೇ ಇತ್ತು. ಕೊನೆಗೂ ನವಾಜ್ ಷರೀಫ್ ಎಲ್ಲ ಕುತೂಹಲಕ್ಕೆ ತೆರೆ ಎಳೆದು ತಮ್ಮ ಒಪ್ಪಿಗೆ ನೀಡಿದ್ದಾರೆ.

ಇದಕ್ಕೂ ಮುನ್ನ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರ ಪುತ್ರಿ, ಪಾಕಿಸ್ತಾನ ಮುಖ್ಯಸ್ಥರು ಭಾರತದ ಪ್ರಧಾನಿ ಪ್ರಮಾಣ ವಚನ ಸಮಾರಂಭಕ್ಕೆ ತೆರಳುವುದರಿಂದ ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯ ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ಉಭಯ ದೇಶಗಳ ನಡುವೆ ಕಳೆದ ಹಲವು ವರ್ಷಗಳಿಂದಲೂ ಉದ್ವಿಗ್ನ ಪರಿಸ್ಥಿತಿ ಇದ್ದು, ಇಂತಹ ಸನ್ನಿವೇಶ ನಿವಾರಣೆಯಾಗಬೇಕಾದರೆ ಎರಡೂ ದೇಶಗಳ ಮುಖ್ಯಸ್ಥರು ಪರಸ್ಪರ ಭೇಟಿಯಾಗಿ ಮಾತನಾಡುವುದು ಒಂದು ಒಳ್ಳೆಯ ಬೆಳವಣಿಗೆ ಎಂದು ಷರೀಫ್ ಪುತ್ರಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

2008ರಲ್ಲಿ ಮುಂಬೈ ದಾಳಿ ಘಟನೆ ನಡೆದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಸ್ವಲ್ಪ ಹದಗೆಟ್ಟಿದೆ. ಗಡಿಭಾಗದಲ್ಲಿ ಪಾಕಿಸ್ತಾನ ನಿರಂತರವಾಗಿ ಕ್ಯಾತೆ ತೆಗೆಯುತ್ತಿದೆ. ಇದರಿಂದಾಗಿ ಎರಡೂ ರಾಷ್ಟ್ರಗಳ ಶಾಂತಿ ಮಾತುಕತೆಯ ಪ್ರಕ್ರಿಯೆಗೆ ಅಡ್ಡಿಯಾಗುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ, ಪಾಕ್ ಪ್ರಧಾನಿಯನ್ನ ಸಮಾರಂಭಕ್ಕೆ ಆಹ್ವಾನಿಸುವ ನರೇಂದ್ರ ಮೋದಿಯ ನಿರ್ಧಾರ ನಿಜಕ್ಕೂ ದಿಟ್ಟವಾಗಿದೆ. ಪಾಕಿಸ್ತಾನ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಆದರೆ, ವಾಜಪೇಯಿ ಆಡಳಿತದಲ್ಲಿ ಲಾಹೋರಿಗೆ ಬಸ್ ಬಿಟ್ಟು ಶಾಂತಿ ಪ್ರಯತ್ನಕ್ಕೆ ಭಾರತ ಮುಂದಾದರೂ ಪಾಕಿಸ್ತಾನದವರು ಕಾರ್ಗಿಲ್ ಯುದ್ಧ ಮಾಡಿ ಬೆನ್ನಿಗೆ ಚೂರಿ ಹಾಕಿದ್ದರು ಎಂಬುದು ನೋವಿನ ಸಂಗತಿ.

English summary
Pak PM Nawaz Sharif will attend Narendra Modi's swearing-in. After days of dilly-dallying and uncertainity over him attending PM designate Narendra Modi's swearing-in ceremony, Pakistan Prime Minister Nawaz Sharif on Saturday accepted the invitation formally and said that he would attend the swearing-in ceremony on May 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X