ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಷ್ಣೋದೇವಿಗೆ ರೈಲು, ಮೋದಿ ಕನಸು ನನಸು

By Mahesh
|
Google Oneindia Kannada News

ಶ್ರೀನಗರ, ಜು.4: ಜಮ್ಮು-ಕಾಶ್ಮೀರದಲ್ಲಿರುವ ಹಿಂದು ಪುಣ್ಯಕ್ಷೇತ್ರ ವೈಷ್ಣೋದೇವಿಗೆ ತೆರಳುವ ಭಕ್ತಾದಿಗಳ ಅನುಕೂಲಕ್ಕೆ ನೇರ ಸಂಪರ್ಕವಿರುವ ರೈಲು ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಶುಕ್ರವಾರ ನನಸಾಗಿದೆ. ಕಣಿವೆ ರಾಜ್ಯಕ್ಕೆ ಕಾಲಿಟ್ಟಿರುವ ಮೋದಿ ಅವರು ಉಧಂಪುರ- ಕಟ್ರಾ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ.

ವೈಷ್ಣೋದೇವಿ ಕ್ಷೇತ್ರವಿರುವ ತ್ರಿಕೂಟ ಪರ್ವತದ ಬುಡದಲ್ಲಿರುವ ಕಾಟ್ರಾವರೆಗಿನ ರೈಲು ಮಾರ್ಗ ಶುಕ್ರವಾರ ಲೋಕಾರ್ಪಣೆಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ಡೊವಾಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಲ್ಲಿ ತನಕ ಜಮ್ಮು ಹಾಗೂ ಉಧಂಪುರ ನಡುವೆ ಮಾತ್ರ ರೈಲು ಸಂಪರ್ಕವಿತ್ತು. ಈಗ ಇದೇ ರೈಲನ್ನು ಕಟ್ರಾವರೆಗೂ ವಿಸ್ತರಿಸಲಾಗಿದೆ. ಪ್ರಯಾಣಿಕರನ್ನು ಹೊತ್ತ ಮೊದಲ ರೈಲು ಕಟ್ರಾದಿಂದ ಜಮ್ಮುವಿನತ್ತ ಶುಕ್ರವಾರದಿಂದ ಪ್ರಯಾಣ ಆರಂಭಿಸಿದೆ.[ಕಣಿವೆ ರಾಜ್ಯಕ್ಕೆ ಮೋದಿ ಎಂಟ್ರಿ]

ಉಧಂಪುರ- ಕಟ್ರಾ ಮಾರ್ಗದಲ್ಲಿ ಏಳು ಸುರಂಗಗಳು, 30 ಸಣ್ಣ ಹಾಗೂ ಬೃಹತ್‌ ಸೇತುವೆಗಳು ಇವೆ. 25 ಕಿ.ಮೀ. ಉದ್ದದ ಈ ಮಾರ್ಗದ ನಿರ್ಮಾಣಕ್ಕೆ ಅಂದಾಜು 1132.75 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಜಮ್ಮು- ಉಧಂಪುರ ನಡುವೆ 53 ಕಿ.ಮೀ. ಅಂತರವಿದೆ. ಈ ಮಾರ್ಗದಲ್ಲಿ ಈಗಾಗಲೇ ರೈಲುಗಳು ಓಡಾಡುತ್ತಿವೆ. ಇದೀಗ ಉಧಂಪುರ ಹಾಗೂ ಕಟ್ರಾ ಮಾರ್ಗವೂ ಲೋಕಾರ್ಪಣೆಗೊಳ್ಳುತ್ತಿರುವುದರಿಂದ ವೈಷ್ಣೋದೇವಿ ಭಕ್ತರು ತ್ರಿಕೂಟ ಪರ್ವತದ ತಪ್ಪಲಿನವರೆಗೂ ರೈಲಿನಲ್ಲೇ ಪ್ರಯಾಣಿಸಬಹುದಾಗಿದೆ. ಅಲ್ಲಿಂದ ಕುದುರೆ ಅಥವಾ ಹೆಲಿಕಾಪ್ಟರ್‌ ಮೂಲಕ ವೈಷ್ಣೋದೇವಿ ದೇಗುಲ ತಲುಪಬಹುದು. ಇಷ್ಟು ದಿನ ಉಧಂಪುರದಿಂದ ಕಟ್ರಾವರೆಗೆ ರಸ್ತೆ ಮಾರ್ಗದಲ್ಲಿಯೇ ಸಂಚರಿಸಬೇಕಾಗುತ್ತಿತ್ತು.

ಸದ್ಯ ಜಮ್ಮು- ಉಧಂಪುರ ನಡುವೆ ಮೂರು ಲೋಕಲ್‌ ರೈಲುಗಳು ಸಂಚರಿಸುತ್ತಿವೆ. ಅವೆಲ್ಲವನ್ನೂ ಕಟ್ರಾವರೆಗೆ ವಿಸ್ತರಿಸಲಾಗುತ್ತದೆ. ಅಲ್ಲದೆ, ಜಮ್ಮು ಮೇಲ್‌ ಹಾಗೂ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲುಗಳನ್ನು ಕಟ್ರಾವರೆಗೂ ಓಡಿಸುವ ಚಿಂತನೆ ಇದೆ. ಕಟ್ರಾ- ಕಲ್ಕಾ ಎಕ್ಸ್‌ಪ್ರೆಸ್‌ ಹಾಗೂ ನವದೆಹಲಿ- ಕಟ್ರಾ ಎ.ಸಿ. ಎಕ್ಸ್‌ಪ್ರೆಸ್‌ ಸಂಚಾರ ಆರಂಭಿಸುವ ಆಲೋಚನೆ ಇದೆ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಮತ್ತೂಂದು ಪುಣ್ಯ ಕ್ಷೇತ್ರವಾಗಿರುವ ವಾರಾಣಸಿಯಿಂದಲೂ ಕಟ್ರಾಗೆ ಹೊಸ ರೈಲು ಸೇವೆ ಆರಂಭಿಸುವ ಸಾಧ್ಯತೆ ಇದೆ. ಇದಲ್ಲದೆ ವಿವಿಧ ರೈಲ್ವೆ ವಲಯಗಳಿಂದಲೂ ಕಟ್ರಾಗೆ ಸಂಪರ್ಕ ಬೆಸೆಯುವಂತೆ ಕೋರಿಕೆ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವಾರ್ಷಿಕ 1 ಕೋಟಿ ಭಕ್ತರು ವೈಷ್ಣೋದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಇದೀಗ ರೈಲು ಸಂಚಾರ ಆರಂಭವಾಗಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಸೂಕ್ಷ್ಮ ನಿಲ್ದಾಣಗಳಲ್ಲಿ ರೈಲ್ವೆ ರಕ್ಷಣಾ ದಳವನ್ನು ನಿಯೋಜನೆ ಮಾಡಲಾಗಿದೆ. ಕಟ್ರಾ ರೈಲು ನಿಲ್ದಾಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರವಾಸಿ ಮಾರ್ಗದರ್ಶಿ ಕೌಂಟರ್‌, ಲಗೇಜ್‌ ಕೊಠಡಿ, ನಿರೀಕ್ಷಣಾ ಕೊಠಡಿ, ಎಸ್ಕಲೇಟರ್‌, ಲಿಫ್ಟ್, ಪಾರ್ಕಿಂಗ್‌ ತಾಣದ ವ್ಯವಸ್ಥೆ ಮಾಡಲಾಗಿದೆ.

English summary
Prime Minister Narendra Modi flags off inaugural train from Katra in Jammu, the base camp for Vaishno Devi shrine.National Security Advisor Ajeet Doval, Railway Minister DV Sadananda Gowda is accompanying Modi on his maiden visit to the state after he took over as the country's prime minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X