ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೈತನ್ಯದ ಚಿಲುಮೆ, ಛಲಗಾರ ಮೋದಿ ಸಾಧನೆಯ ಕಥೆ

By Mahesh
|
Google Oneindia Kannada News

ನರೇಂದ್ರ ಮೋದಿ ಅವರು ಉತ್ತಮ ವಾಗ್ಮಿಯಷ್ಟೇ ಅಲ್ಲ ನುಡಿದಿದ್ದನ್ನು ಕಾರ್ಯರೂಪಕ್ಕೆ ತರುವ ಸಾಧಕ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಗುಜರಾತಿನ ಏಳಿಗೆಯ ಕನಸು ನನಸು ಮಾಡಿರುವ ಛಲಗಾರ ಈಗ ಭಾರತದ ಭವ್ಯ ಭವಿಷ್ಯದ ಹರಿಕಾರನಾಗಿದ್ದಾರೆ. ಜನ ಸಾಮಾನ್ಯನೊಬ್ಬ ಅರಸನಾಗುವ ದಂತಕತೆ ಮೋದಿ ಜೀವನದಲ್ಲಿ ನಿಜವಾಗಿದೆ.

ನರೇಂದ್ರ ಮೋದಿಯವರು ವಾಸ್ತವ ಮತ್ತು ಆದರ್ಶವನ್ನು ಅರಿತಿರುವ ಒಬ್ಬ ಮಹಾನ್ ಆಶಾವಾದಿ. ಒಬ್ಬನಿಗೆ ಗುರಿ ಇಲ್ಲದಿರುವುದು ಸೋಲಿಗಿಂತ ಹೇಯವಾದುದು ಮತ್ತು ಅದು ಅಪರಾಧ ಎಂಬ ನಿಲುವನ್ನು ಅವರು ತಳೆದಿದ್ದಾರೆ. ದೃಷ್ಟಿಕೋನದಲ್ಲಿ ಸ್ಪಷ್ಟತೆ, ಗುರಿ ಸಾಧಿಸುವ ಛಲ ಮತ್ತು ನಿರಂತರ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ನಂಬಿದ್ದಾರೆ. ನಾಡು ಮತ್ತು ಜನತೆ ಬಗ್ಗೆ ಪರಮ ಕಾಳಜಿಯೇ ಅವರನ್ನು ಜನಪ್ರಿಯತೆ ಉತ್ತುಂಗಕ್ಕೇರಿಸಿದೆ.

ಗುಜರಾತಿನಿಂದ ದೆಹಲಿಯ ನಂ.7 ರೇಸ್ ಕೋರ್ಸ್ ರಸ್ತೆ ಸೇರಿರುವ ಮೋದಿ ಅವರ ಜೀವನ ಅನುಕರಣೀಯ ಹಾಗೂ ಆದರ್ಶಪ್ರಾಯವಾಗಿದೆ. ದೇಶದ ಯುವಕರಲ್ಲಿ ಭರವಸೆಯ ಬೀಜ ಬಿತ್ತಿರುವ ಮೋದಿ ಅವರ ಜೀವನಗಾಥೆಯ ಪಕ್ಷಿನೋಟ ಇಲ್ಲಿದೆ

ಬಾಲ್ಯದಿಂದಲೇ ಸಮಾಜ ಸೇವೆ ಧ್ಯೇಯ

ಬಾಲ್ಯದಿಂದಲೇ ಸಮಾಜ ಸೇವೆ ಧ್ಯೇಯ

ಉತ್ತರ ಗುಜರಾತಿನ ಮೆಹನ್ಸಾ ಜಿಲ್ಲೆಯ ವಿದ್ ನಗರ ನರೇಂದ್ರ ಮೋದಿ 17 ಸೆಪ್ಟೆಂಬರ್, 1950ರಲ್ಲಿ ಹುಟ್ಟಿದರು. ಬಾಲ್ಯದಿಂದಲೇ ಜೀವನ ಮೌಲ್ಯ, ಸೇವಾ ಮನೋಭಾವ, ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡಿದ್ದರು.

ಅರವತ್ತರ ದಶಕದ ಮಧ್ಯದಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಬಾಲಕ ಮೋದಿ, ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ಸ್ವಯಂಪ್ರೇರಣೆಯಿಂದ ಸೇವೆ ಮಾಡಿದ್ದರು.1967ರಲ್ಲಿ ಪ್ರವಾಹ ಪೀಡಿತ ಗುಜರಾತ್ ಜನತೆಯ ಸೇವೆ ಮಾಡಿದ್ದರು. ಆರೆಸ್ಸೆಸ್ ನಿಂದ ಕಲಿತ ಶಿಸ್ತು ಮೋದಿ ಜೀವನದಲ್ಲಿ ಏಳಿಗೆಗೆ ಕಾರಣವಾಯಿತು.

ಅದ್ಭುತ ಸಂಘಟನಾ ಕೌಶಲ್ಯ ಮತ್ತು ಮನಶಾಸ್ತ್ರದ ಅಧ್ಯಯನ ಮಾಡಿದ್ದ ಮೋದಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನ ನಾಯಕರಾಗಿ ಆಯ್ಕೆಯಾಗಿದ್ದರು. ಗುಜರಾತಿನಲ್ಲಿ ಅನೇಕ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಆರೆಸ್ಸೆಸ್ ಸಾಂಗತ್ಯದ ಭದ್ರ ಬುನಾದಿ

ಆರೆಸ್ಸೆಸ್ ಸಾಂಗತ್ಯದ ಭದ್ರ ಬುನಾದಿ

ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಜಾಯಮಾನ ಮೋದಿಗಿಲ್ಲ. ಸೋಲುವುದು, ಹಿಂಜರಿಕೆ ವಿರುದ್ಧ ಪ್ರಬಲವಾಗಿ ಮುನ್ನುಗ್ಗುತ್ತಿದ್ದರು ಈ ಬದ್ಧತೆಯೇ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅವರಿಗೆ ಸಹಕಾರಿಯಾಯಿತು.

ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದೊಡನೆ ತಮ್ಮ ಸಾಂಗತ್ಯವನ್ನು ಆರಂಭಿಸಿದರು. ನಿಸ್ವಾರ್ಥತೆ, ಸಾಮಾಜಿಕ ಜವಾಬ್ದಾರಿ, ಸಮರ್ಪಣಾಮನೋಭಾವ ಮತ್ತು ರಾಷ್ಟ್ರೀಯತೆಯ ಬೀಜ ಅವರಲ್ಲಿ ಮೊಳಕೆಯೊಡೆಯಿತು.

ಆರೆಸ್ಸೆಸ್ ನಲ್ಲಿದ್ದಾಗ ಮೋದಿ ಅವರು ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಂಡರು. ಪ್ರಮುಖವಾಗಿ 1974ರಲ್ಲಿ ನವನಿರ್ಮಾಣ ಭ್ರಷ್ಟಾಚಾರ ವಿರೋಧಿ ಚಳವಳಿ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡ 19 ತಿಂಗಳ (ಜೂನ್ 1975 ರಿಂದ ಜನವರಿ 1977) ತುರ್ತುಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಭೂಗತರಾಗಿಯೇ ಉಳಿದ ಮೋದಿಯವರು ಹೋರಾಟ ನಡೆಸಿದರು. ಪ್ರಜಾಪ್ರಭುತ್ವದ ಉತ್ಸಾಹವನ್ನು ಎತ್ತಿ ಹಿಡಿದರು.

ಸಕ್ರಿಯ ರಾಜಕಾರಣಿ ಸೇವಾ ಮನೋಭಾವ

ಸಕ್ರಿಯ ರಾಜಕಾರಣಿ ಸೇವಾ ಮನೋಭಾವ

1987ರಲ್ಲಿ ಬಿಜೆಪಿ ಸೇರುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಮೋದಿ ಧುಮುಕಿದರು. ಪಕ್ಷ ಸೇರಿದ ಒಂದು ವರ್ಷದಲ್ಲೇ ಗುಜರಾತ್ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು. ಆ ಹೊತ್ತಿಗಾಗಲೆ ಅವರು ಅತ್ಯಂತ ಸಮರ್ಥ ಸಂಘಟನಾಕಾರ ಎಂದು ಎಲ್ಲೆಡೆ ಗುರುತಿಸಿಕೊಂಡಿದ್ದರು.

ಅವರು ಪಕ್ಷದ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿ ಸರಿದಾರಿಯಲ್ಲಿ ಸಾಗುವಂತೆ ಮಾಡುವ ಸವಾಲಿನ ಕಾರ್ಯಗೊಂಡರು. ರಾಜಕೀಯವಾಗಿ ಪ್ರಗತಿ ಕಂಡ ಪಕ್ಷ 1990ರಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಸಾಧ್ಯವಾಯಿತು. ಆದರೆ, ಈ ಮೈತ್ರಿ ಕೆಲವೇ ತಿಂಗಳುಗಳಲ್ಲಿ ಮುರಿದು ಬಿತ್ತು, ಆದರೆ, ಗುಜರಾತ್ ನಲ್ಲಿ 1995ರಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿ ಮೂರನೇ ಎರಡು ಭಾಗ ಬಹುಮತ ಸಾಧಿಸಿ ಅಧಿಕಾರಕ್ಕೆ ಬಂದಿತು. ಆಂದಿನಿಂದ ಗುಜರಾತಿನಲ್ಲಿ ಬಿಜೆಪಿ ಆಡಳಿತ ಮುಂದುವರೆದಿದೆ.

1988 ಮತ್ತು 1995ರ ನಡುವೆ ಗುಜರಾತಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ನರೇಂದ್ರ ಮೋದಿಯವರು ಮಾಸ್ಟರ್ ತಂತ್ರಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಾಷ್ಟ್ರೀಯ ಕಾರ್ಯದರ್ಶಿಯಾದ ಖುಷಿ

ರಾಷ್ಟ್ರೀಯ ಕಾರ್ಯದರ್ಶಿಯಾದ ಖುಷಿ

1995ರಲ್ಲಿ ಅವರು ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾದ ನರೇಂದ್ರ ಮೋದಿ ಅವರಿಗೆ ಭಾರತದ ಐದು ರಾಜ್ಯಗಳ ಉಸ್ತುವಾರಿಯನ್ನು ನೀಡಲಾಯಿತು. ಯುವ ನರೇಂದ್ರ ಮೋದಿ ಅವರಿಗೆ ಸಿಕ್ಕ ಹಿರಿಮೆ ಇದಾಗಿದೆ. 1998ರಲ್ಲಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಹುದ್ದೆ ಅಲಂಕರಿಸಿದರು, 2001ರ ಅಕ್ಟೋಬರ್ ವರೆಗೂ ಈ ಹುದ್ದೆಯನ್ನು ನಿಭಾಯಿಸಿದರು. ಈ ಹುದ್ದೆಯನ್ನು ಅವರು ಭಾರತದ ಅತ್ಯಂತ ಅಭಿವೃದ್ಧಿಶೀಲ ಮತ್ತು ಸಂಪದ್ಭರಿತ ರಾಜ್ಯವಾದ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರೆಗೆ ನಿಭಾಯಿಸಿದರು.

ಎಲ್ ಕೆ ಅಡ್ವಾಣಿಯವರ ಸೋಮನಾಥದಿಂದ ಅಯೋಧ್ಯಾವರೆಗಿನ ರಥಯಾತ್ರೆ (ಅತಿ ದೊಡ್ಡ ಯಾತ್ರೆ) ಮತ್ತು ದಕ್ಷಿಣದ ತುದಿಯಲ್ಲಿರುವ ಕನ್ಯಾಕುಮಾರಿ (ದಕ್ಷಿಣ ಭಾರತ ತುತ್ತತುದಿ) ಯಿಂದ ಉತ್ತರದ ತುದಿಯಲ್ಲಿರುವ ಕಾಶ್ಮೀರದವರೆಗೆ ಯಾತ್ರೆ ನಡೆಸುವ ಗುರುತರ ಜವಾಬ್ದಾರಿಯನ್ನು ಮೋದಿಯವರು ಹೊತ್ತುಕೊಂಡರು. 1998ರಲ್ಲಿ ನವದೆಹಲಿಯಲ್ಲಿ ಬಿಜೆಪಿ ಅಧಿಕಾರ ಸ್ಥಾಪನೆಗೆ ಮೋದಿ ನಿಭಾಯಿಸಿದ ಇದೇ ಎರಡು ರಥಯಾತ್ರೆಗಳು ಕಾರಣ ಎನ್ನಲಾಗಿದೆ.

2001 ಅಕ್ಟೋಬರ್ ನಲ್ಲಿ ಗುಜರಾತ್ ಸರಕಾರವನ್ನು ಮುನ್ನಡೆಸಬೇಕೆಂದು ಅವರಿಗೆ ಪಕ್ಷದ ವರಿಷ್ಠರಿಂದ ಕರೆ ಬಂದಿತು. ಮೋದಿ ಅವರ ಸರ್ಕಾರ ಅಕ್ಟೋಬರ್ 7, 2001ರಂದು ಅಧಿಕಾರವಹಿಸಿಕೊಂಡಾಗ ಗುಜರಾತಿನ ಆರ್ಥಿಕ ಪರಿಸ್ಥಿತಿ ಅನೇಕ ಪ್ರಾಕೃತಿಕ ವಿಕೋಪಗಳ ಜೊತೆ ಹೋರಾಟ ನಡೆಸಿತ್ತು, ಅದೇ ವರ್ಷ ಜನವರಿಯಲ್ಲಿ ಸಂಭವಿಸಿದ ಭಾರಿ ಭೂಕಂಪ ಸೇರಿದಂತೆ ಅನೇಕ ಪ್ರಕೃತಿ ಅನಾಹುತಗಳು ಸರ್ಕಾರವನ್ನು ಕಂಗೆಡಿಸಿತ್ತು. ಆದರೆ, ದೇಶ ವಿದೇಶಗಳನ್ನು ಸುತ್ತಾಡಿ ವಿಪತ್ತು ನಿರ್ವಹಣೆ ಅನುಭವ ಪಡೆದಿದ್ದ ಮೋದಿ ಈ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದರು.

ಗುಜರಾತ್ ದೇಶಕ್ಕೆ ಮಾದರಿಯಾಗಿದೆ

ಗುಜರಾತ್ ದೇಶಕ್ಕೆ ಮಾದರಿಯಾಗಿದೆ

ಇಂದು ಜನರ ನಿರೀಕ್ಷೆಗೂ ಮೀರಿದ ಫಲವನ್ನು ಗುಜರಾತಿನಲ್ಲಿ ಕಾಣಬಹುದಾಗಿದೆ. ಇ-ಆಡಳಿತ, ಬಂಡವಾಳ ಹೂಡಿಕೆ, ಬಡತನ ನಿರ್ಮೂಲನ, ಇಂಧನ, ಎಸ್ಇಜೆಡ್, ರಸ್ತೆ ಅಭಿವೃದ್ಧಿ, ಹಣಕಾಸು ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ಗುಜರಾತ್ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿದೆ. ಗುಜರಾತಿನ ಪ್ರಗತಿ ಕಥೆ ಯಾವುದೇ ಒಂದು ಕ್ಷೇತ್ರದ ಅಭಿವೃದ್ಧಿಯನ್ನು ಆಧಾರವಾಗಿಲ್ಲ ಬದಲಿಗೆ ಎಲ್ಲಾ ಮೂರು ಪ್ರಮುಖ ಕ್ಷೇತ್ರ(ಕೃಷಿ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರ)ಗಳ ಅಭಿವೃದ್ಧಿಯ ಪ್ರತೀಕವಾಗಿದೆ.

ರಾಜ್ಯದ ಪ್ರಗತಿಯಲ್ಲಿ ಗುಜರಾತಿನ ಜನರ ಸಕ್ರಿಯ ಪಾಲುದಾರಿಕೆಯಿಂದ ಇದೆಲ್ಲ ಸಾಧ್ಯವಾಗಿದೆ. ಗುಜರಾತಿನ ತ್ವರಿತ ಪ್ರಗತಿಗೆ ಮೋದಿ ಅವರ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಹಾಗೂ ಜನಪರ, ಉತ್ತಮ ಆಡಳಿತ ಪರ(P2G2) ಮಂತ್ರವೇ ಕಾರಣವಾಗಿದೆ. ಈಗ ಇದೇ ಮಂತ್ರವನ್ನು ದೇಶದೆಲ್ಲೆಡೆ ಹರಡಲು ಮೋದಿ ಸಿದ್ಧರಾಗಿದ್ದಾರೆ.

ಲೋಕಸಭೆ ಚುನಾವಣೆ 2014 ಪ್ರಚಾರ

ಲೋಕಸಭೆ ಚುನಾವಣೆ 2014 ಪ್ರಚಾರ

ಲೋಕಸಭೆ ಚುನಾವಣೆ 2014 ಪ್ರಚಾರ ಹಾಗೂ ಮೋದಿ ಅವರ ಸಂಚಾರ ಇಡೀ ವಿಶ್ವವನ್ನೇ ಬೆಚ್ಚಿ ಬೀಳುವಂತೆ ಮಾಡಿತು. ಮೋದಿ ಕೈಗೊಂಡ ಭಾರತ್ ವಿಜಯ್ ಯಾತ್ರೆ ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತಿನಿಂದ ಪಶ್ಚಿಮ ಬಂಗಾಳ ಹೀಗೆ ದೇಶದ ಉದ್ದಗಲ ತೆರಳಿ ಜನರಲ್ಲಿ ಆಶಾಭಾವನೆ ಬಿತ್ತಿತು. ವಾರಣಸಿಯಲ್ಲಿ ನಡೆಸಿದ ಬೃಹತ್ ಮೆರವಣಿಗೆ, ಆಂಧ್ರಪ್ರದೇಶದ ಸಮಾವೇಶಗಳು ಬಿಜೆಪಿಗೆ ನಿರೀಕ್ಷಿತ ಫಲ ನೀಡಿದವು.

ಆದರೆ, ಮೋದಿ ಹಾದಿ ಸುಗಮವಾಗಿರಲಿಲ್ಲ. ಆರಂಭದಿಂದ ಮೇ.16ರ ಫಲಿತಾಂಶ ಹೊರಬೀಳುವ ತನಕ ಮೋದಿ ವಿರುದ್ಧ ವಿಪಕ್ಷಗಳು ಹರಿಹಾಯ್ದವು, ನರಹಂತಕ, ಸಾಮೂಹಿಕ ಹತ್ಯಾಗಾರ, ಹಿಟ್ಲರ್, ಕಟುಕ ಹೀಗೆ ಅನೇಕ ಪದ ವಿಶೇಷಗಳನ್ನು ಬಳಸಿ ಪ್ರತಿಪಕ್ಷಗಳು ಮೋದಿ ವಿರುದ್ಧ ಪ್ರಚಾರ ನಡೆಸಿದವು. ಹಲವು ಚಾನೆಲ್ ಗಳು ಮೋದಿ ಅವರನ್ನು ಸಂದರ್ಶನ ನಡೆಸಿ ಎಷ್ಟೇ ಕೆರಳಿಸಿದರೂ ತಾಳ್ಮೆಯ ಉತ್ತರ ಸಿಕ್ಕಿದ್ದು ಜನತೆಗೆ ಈ ಮನುಷ್ಯ ನಮ್ಮ ನಾಯಕನಾಗಬಲ್ಲ ಎಂಬ ನಂಬಿಕೆ ಹುಟ್ಟಿಸಿಬಿಟ್ಟಿತು.

ಚಹಾವಾಲನಿಗೂ ಬೆಲೆ ತಂದುಕೊಟ್ಟ ಮೋದಿ ವಿಪಕ್ಷಗಳು ಅಣಕಿಸಿದ್ದನ್ನೇ ಅಸ್ತ್ರವಾಗಿ ಬಳಸಿಕೊಂಡರು. ನಾಮಪತ್ರ ಸಲ್ಲಿಕೆ ಅನುಮೋದಕನಾಗಿ ಚಹಾವಾಲ ಮೋದಿ ಜತೆಗಿದ್ದ, ನಿನ್ನೆ ಪ್ರಮಾಣ ವಚನ ಸ್ವೀಕರಿಸಿದಾಗಲೂ ಅದೇ ಚಹವಾಲ ರಾಷ್ಟ್ರಪತಿ ಭವನದಲ್ಲಿ ಸಂಭ್ರಮವನ್ನು ಕಣ್ಣಾರೆ ಕಂಡ ಎಂಬುದು ಸತ್ಯ.

ಮೋದಿ ಜೀವನದಲ್ಲಿ ಮೊದಲು

ಮೋದಿ ಜೀವನದಲ್ಲಿ ಮೊದಲು

ಮೊದಲ ಬಾರಿಗೆ ವಿಧಾನಸಭೆಗೆ ಮೋದಿ ಪ್ರವೇಶಿಸಿದ್ದು ಮುಖ್ಯಮಂತ್ರಿಯಾಗಿ, ಈಗ ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಿರುವುದು ಪ್ರಧಾನಿಯಾಗಿ ಇದೆಲ್ಲವೂ ಒಬ್ಬ ಸಾಮಾನ್ಯ ವ್ಯಕ್ತಿ ಉನ್ನತ ಮಟ್ಟಕ್ಕೇರಬಹುದು ಎಂಬುದರ ನಿದರ್ಶನ ಹಾಗೂ ಪ್ರಜಾಪ್ರಭುತ್ವದ ಶಕ್ತಿ ಎಂದು ಸ್ವತಃ ಮೋದಿಯೇ ಹೇಳಿದ್ದಾರೆ.

ದೃಷ್ಟಿಕೋನ, ಪರಿಕಲ್ಪನೆ ಮತ್ತು ನಿಗದಿತ ಅವಧಿಯಲ್ಲಿಯೇ ಪೂರೈಸುವ ನೈಪುಣ್ಯತೆ ಮೋದಿಯವರನ್ನು ಉತ್ತಮ ರಾಜನೀತಿಜ್ಞರನ್ನಾಗಿ ಮಾಡಿವೆ. ರಾಜಕೀಯದ ಹಿನ್ನೆಲೆಯಲ್ಲಿದ್ದುಕೊಂಡೂ ಬರೀ ಚುನಾವಣಾ ದೃಷ್ಟಿಯಿಂದ ಚಿಂತಿಸದೆ ಮುಂದಿನ ಜನಾಂಗದ ಬಗೆಗಿನ ಮೋದಿ ಅವರ ಚಿಂತನೆ ನಿಜಕ್ಕೂ ಅನನ್ಯ.

ಯುವ ಮನಸ್ಸಿನ ಮತ್ತು ಚೈತನ್ಯದ ಚಿಲುಮೆಯಾಗಿರುವ ಮೋದಿಯವರು ತಮ್ಮ ಹೊಸಬಗೆ ಚಿಂತನೆ, ದೂರದೃಷ್ಟಿತ್ವ, ಪರಿಕಲ್ಪನೆಗಳನ್ನು ಗುಜರಾತಿನ ಜನರಿಗೆ ಅತ್ಯಂತ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕೆಳ ಹಂತದಿಂದ ರಾಜಕೀಯ ಉತ್ತುಂಗಕ್ಕೇರಿದ ಮೋದಿ ಅವರ ಬದುಕಿನ ಪಯಣದ ಅವಲೋಕನ ಮಾಡಿದರೆ ಸಾಕು ಅವರ ಸಾಧನೆಯ ಕಥೆಗಳು ತೆರೆದುಕೊಳ್ಳುತ್ತದೆ.

ನರೇಂದ್ರ ಮೋದಿ ಒಬ್ಬ ಮಹಾನ್ ಕನಸುಗಾರ

ನರೇಂದ್ರ ಮೋದಿ ಒಬ್ಬ ಮಹಾನ್ ಕನಸುಗಾರ

ನರೇಂದ್ರ ಮೋದಿ ಒಬ್ಬ ಮಹಾನ್ ಕನಸುಗಾರ, ಕನಸನ್ನು ನನಸಾಗಿ ಪರಿವರ್ತಿಸುವ ಸಾಮರ್ಥ್ಯವುಳ್ಳ ಧೀಮಂತ. ಭಾರತವನ್ನು ಮತ್ತೆ ಅಭಿವೃದ್ಧಿ ಪಥದತ್ತ ನಡೆಸುವುದು ಅವರ ಉದ್ದೇಶ. ಜಾತಿ ಮತ ಪಂಥ ಮೀರಿದ ಐಕ್ಯತೆ ದೇಶದಲ್ಲಿ ನೆಲೆಸುವಂತೆ ಮಾಡುವುದು ಅವರ ಕನಸು. ನರೇಂದ್ರ ಮೋದಿಯವರ ಇನ್ನೊಂದು ಶಕ್ತಿಯೆಂದರೆ ಜನರಲ್ಲಿನ ನಂಬಿಕೆ.

ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂಬ ಮಂತ್ರವನ್ನು ಜಪಿಸುವ ಮೋದಿ ಜತೆ ನೀವು ಕೂಡಾ ಕೈ ಜೋಡಿಸಬಹುದು ಹೆಚ್ಚಿನ ವಿವರಗಳಿಗೆ ಮೋದಿ ಅವರ ವೆಬ್ ತಾಣ ಅಥವಾ (@narendramodi) ಟ್ವೀಟ್ ಮಾಡಿ

English summary
From rags to riches, Narendra Damodardas Modi 's life has reached at the cusp of history- from a tea- seller's son to the 15th prime minister of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X