ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದಿಕ್ಕೆಟ್ಟು ಓಡುತ್ತಿದ್ದ ನನ್ನನ್ನು ಜವಾನ ತಡೆಗಟ್ಟಿದ್ದ'

By Prasad
|
Google Oneindia Kannada News

ದ್ರಾಸ್ (ಜಮ್ಮು ಮತ್ತು ಕಾಶ್ಮೀರ), ಜು. 23 : ಪಾಕಿಸ್ತಾನದ ಮೇಲೆ 1999ರಲ್ಲಿ ಭಾರತ ದಿಗ್ವಿಜಯ ಸಾಧಿಸಿದ ಸವಿನೆನಪಿಗಾಗಿ ಜುಲೈ 26ರಂದು ಪ್ರತಿವರ್ಷ 'ಕಾರ್ಗಿಲ್ ವಿಜಯ ದಿವಸ'ವನ್ನು ಆಚರಿಸಲಾಗುತ್ತಿದೆ. 'ಆಪರೇಷನ್ ವಿಜಯ್'ನ 15ನೇ ವಾರ್ಷಿಕೋತ್ಸವದ ವಿಶೇಷ ಲೇಖನಗಳನ್ನು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕಾರ್ಗಿಲ್ ವೀರರ ಕಥೆಗಳನ್ನು ಕಾರ್ಗಿಲ್‌ನಿಂದಲೇ ಒನ್ಇಂಡಿಯಾ ನಿಮಗೆ ನೀಡಲಿದೆ.

ಕಾರ್ಗಿಲ್ ಯುದ್ಧ ನಡೆದ ನೆಲ ಈಗಿನವರೆಗೆ ಕೇವಲ ದಿನಪತ್ರಿಕೆ ಮತ್ತು ಟಿವಿ ವಾಹಿನಿಗಳಿಗೆ ಮಾತ್ರ ಅವಕಾಶ ಮಾಡಿಕೊಟ್ಟಿತ್ತು. ಗ್ರೌಂಡ್ ಜೀರೋ ನೆಲವನ್ನು ಮೆಟ್ಟಿದ ಮೊದಲ ಆನ್ ಲೈನ್ ಪೋರ್ಟಲ್ ಒನ್ಇಂಡಿಯಾ. ಈ ವಿಶೇಷ ಸಂದರ್ಭದಲ್ಲಿ ವಿಶೇಷ ಲೇಖನಗಳನ್ನು ಒನ್ಇಂಡಿಯಾ ನಿಮಗಾಗಿ ನೀಡುತ್ತಿದೆ. ಈ ಸರಣಿಯ ಮೊದಲ ಲೇಖನ ಇಲ್ಲಿದೆ.

I kept on running in fear till an army jawan stopped me

***
ಭಾರತ ಮತ್ತು ಪಾಕಿಸ್ತಾನದ ನಡುವೆ 15 ವರ್ಷಗಳ ಹಿಂದೆ ಯುದ್ಧ ನಡೆದಾಗ ಅವರಿನ್ನೂ ಎಳೆವಯಸ್ಸಿನ ಹುಡುಗರು. ಆದರೆ, ಆ ಯುದ್ಧದ ನೆನಪು ಅವರ ಮನಸ್ಸಿನಲ್ಲಿ ಈಗಲೂ ಅಚ್ಚಳಿಯದೆ ಅಚ್ಚೊತ್ತಿದೆ. ಅಂದು ಅವರು ಕೇಳಿದ ಆ ಗುಂಡಿನ ಮೊರೆತ, ಸಾವಿನ ಆಘಾತ, ಗಾಯದ ಚೀತ್ಕಾರ ಇನ್ನೂ ಅವರ ಮನದಲ್ಲಿ ಮನೆಮಾಡಿದೆ. ಅವರನ್ನು ಭೇಟಿ ಮಾಡಿದ ಒನ್ಇಂಡಿಯಾ ಪ್ರತಿನಿಧಿ ಆ ನೆನಪುಗಳನ್ನು ಮತ್ತೆ ಕೆದಕಿದ್ದಾರೆ. [ಚಿತ್ರಗಳಲ್ಲಿ : ಕಾರ್ಗಿಲ್ ಯುದ್ಧ ಸ್ಮಾರಕ]

ಆ ದಿನ ಶಾಲೆಗೆ ರಜಾ ಘೋಷಿಸಲಾಯಿತು

ಇಂಟರ್ನೆಟ್ ನಡೆಸುವ ಝಾಕಿರ್ : ಒನ್ಇಂಡಿಯಾ ಮೊದಲು ಭೇಟಿ ಮಾಡಿದ್ದು ದ್ರಾಸ್ ನಲ್ಲಿ ಇಂಟರ್ನೆಟ್ ಕೆಫೆ ನಡೆಸುತ್ತಿರುವ ಝಾಕಿರ್ ಅವರನ್ನು. ಯುದ್ಧ ಆರಂಭವಾದಾಗ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಝಾಕಿರ್ ವಯಸ್ಸು ಕೇವಲ 15. ಕಾರ್ಗಿಲ್ ಯುದ್ಧದ ಮೊದಲ ದಿನದ ಕರಾಳ ಅನುಭವದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದು ಹೀಗೆ...

"ಮಧ್ಯಾಹ್ನ ಆಗ ತಾನೆ ಊಟ ಮುಗಿಸಿ ತರಗತಿಯಲ್ಲಿ ಕುಳಿತಿದ್ದೆವು. ಇದ್ದಕ್ಕಿದ್ದಂತೆ ಸ್ಫೋಟದ ಸದ್ದು ಕೇಳಿಸಿತು. ನಮ್ಮ ಟೀಚರ್, ಏನೋ ದೊಂಬಿ ನಡೆಯುತ್ತಿದೆ ಎಂದು ಹೇಳಿ ಮನೆಗೆ ತೆರಳಲು ಹೇಳಿದರು. ಆಗ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದೆ ಎಂಬ ಅರಿವೇ ಇರಲಿಲ್ಲ. ಆದರೆ, ಇಡೀ ರಾತ್ರಿ ಗುಂಡಿನ ಸದ್ದು, ಬಾಂಬ್ ಸ್ಫೋಟ ಮುಂದುವರಿದೇ ಇತ್ತು. ಆಗಲೇ ಅದು ಯುದ್ಧ ಎಂದು ಗೊತ್ತಾಗಿದ್ದು. ಸೇನೆಯವರು ನಮ್ಮನ್ನು ನಂತರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು."

ಸಿಕ್ಕಾಪಟ್ಟೆ ಹೆದರಿ ಪರಾರಿಯಾಗಿದ್ದೆ

ಗುಲಾಮ್ ಕಾದಿರ್ : ಯುದ್ಧ ನಡೆದ ತಲೋಲಿಂಗ್ ಹಿಲ್ ಬದಿಯಲ್ಲಿರುವ ಹಳ್ಳಿಯ ಹುಡುಗ ಗುಲಾಮ್ ಕಾದಿರ್‌ಗೆ ಆಗ ಕೇವಲ 7 ವರ್ಷ. ಐಎಎಸ್ ಮಾಡಬೇಕೆಂಬ ಕನಸು ಹೊದ್ದಿರುವ ಗುಲಾಮ್ ಕಾದಿರ್‌ಗೆ ಭಾರತ-ಪಾಕ್ ಯುದ್ಧದ ಬಗ್ಗೆ ಕೇಳಿದರೆ, ಈಗಲೂ ಅಂದು ಅನುಭವಿಸಿದ ಆಘಾತ ಅನುರಣಿಸುತ್ತಿದೆ ಎಂದು ಹೇಳುತ್ತಾರೆ.

"ಬಾಂಬ್ ಸದ್ದು ಕೇಳುತ್ತಲೇ ಮನೆ ಬಿಟ್ಟು ಓಡಿದೆ, ಓಡುತ್ತಲೇ ಇದ್ದೆ. ನನ್ನ ಮೇಲೆ ನನಗೆ ಪರಿವೆ ಇರಲಿಲ್ಲ. ಸೇನೆಯ ಜವಾನನೊಬ್ಬ ದಿಕ್ಕೆಟ್ಟು ಓಡುತ್ತಿದ್ದ ನನ್ನನ್ನು ತಡೆಗಟ್ಟಿ ಮನೆಗೆ ಕಳಿಸಿದ್ದ. ನಾನಿದ್ದ ಸ್ಥಿತಿಯನ್ನು ನೋಡಿ ನನ್ನ ತಾಯಿ ಗಾಬರಿಯಾಗಿದ್ದಳು. ಆ ದಿನಗಳನ್ನು ನೆನೆದರೆ ಈಗಲೂ ನನಗೆ ಸರಿಯಾಗಿ ನಿದ್ದೆ ಬರುವುದಿಲ್ಲ" ಎಂದು ಕಾದಿರ್ ಹೇಳುತ್ತಾರೆ.

ಇಂಥ ಅನುಭವಗಳು ಕಾದಿರ್ ಮತ್ತು ಝಾಕಿರ್ ಅವರಲ್ಲಿ ಮಾತ್ರ ಮನೆಮಾಡಿಲ್ಲ. ಇಲ್ಲಿನ ಪ್ರತಿಯೊಬ್ಬರಲ್ಲೂ ಒಂದೊಂದು ಯುದ್ಧದಿಂದ ಕಂಗೆಟ್ಟ, ಬಸವಳಿದ, ಶೋಕದ ಕಥೆಗಳಿವೆ. ಯುದ್ಧ ಈಗಲೂ ನಡೆಯುತ್ತಿದೆ ಎನ್ನುವಂತೆ ಅನೇಕರು ಕನವರಿಸುತ್ತಾರೆ. ಆಗಿನ ಹೃದಯ ನಡುಗಿಸುವ ಬಾಂಬಾ ದಾಳಿ, ಗುಂಡಿನ ಸದ್ದು, ಸಾವು-ನೋವು, ಅಳು-ಚೀತ್ಕಾರಗಳು ಅವರ ಬಾಳಿನ ದಿಕ್ಕನ್ನೇ ಬದಲಾಯಿಸಿವೆ. ಹಾಗೆಯೆ, ಇಂಥದು ಮತ್ತೆಂದೂ ಆಗಬಾರದು ಎಂದೂ ಆಶಿಸುತ್ತಾರೆ.

English summary
Our martyrs had laid down their lives at the high altitudes of Kargil on July 26. And remembering them and their contributions in India's victory in the war is the 'Kargil Diwas', which has already begun in Srinagar on July 22nd. Special celebrations would be observed on July 26 at the Kargil war memorial, which would be exclusively covered by OneIndia News reporter Richa Bajpai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X