ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಕಣಕ್ಕೆ ಪತ್ನಿಪೀಡಿತ ಸಂಘದ ಅಧ್ಯಕ್ಷ!

By Prasad
|
Google Oneindia Kannada News

ಅಹ್ಮದಾಬಾದ್, ಏ. 8 : ಚುನಾವಣಾ ಪ್ರಣಾಳಿಕೆಯನ್ನು ಒಂದೊಂದೇ ಪಕ್ಷಗಳು ಬಿಡುಗಡೆ ಮಾಡುತ್ತಿವೆ. ನಾನಾ ರೀತಿಯ ಭರವಸೆಗಳ ನಡುವೆ ದೇಶದ ಮಹಿಳೆಯರ ರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ವಾಗ್ದಾನ ನೀಡುತ್ತಿವೆ. ಆದರೆ, ಹೆಂಡತಿಯರ ದಬ್ಬಾಳಿಗೆಯಿಂದ ನಜ್ಜುಗುಜ್ಜಾಗಿ ಸೈಲೆಂಟಾಗಿ ಕಣ್ಣೀರುಗರೆಯುತ್ತಿರುವ ಗಂಡಸರಿಗಾಗಿ ಯಾವ ಪಕ್ಷವಾದರೂ ಏನಾದರೂ ಭರವಸೆ ನೀಡಿದೆಯಾ?

ಈ ಪ್ರಶ್ನೆಗೆ ಆಮ್ಮ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಪಕ್ಷದ ಧುರೀಣ ರಾಹುಲ್ ಗಾಂಧಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಜನತಾದಳ (ಜಾತ್ಯತೀತ) ಪಕ್ಷದ ರಾಷ್ಟ್ರೀಯ ನಾಯಕ ಎಚ್.ಡಿ. ದೇವೇಗೌಡ, ಪ್ರೇಮಿಗಳ ದಿನದಂದು ರಜಾ ಘೋಷಿಸಬೇಕೆಂದು ಹೇಳಿರುವ ವಾಟಾಳ್ ನಾಗರಾಜ್ ಏನು ಹೇಳುತ್ತಾರೆ?

Harassed husband enters poll fray

ಈ ರಾಜಕೀಯ ಪಕ್ಷಗಳಿಂದ ನಮಗೇನೂ ಆಗುವುದಿಲ್ಲ, ನಮ್ಮ ಕಣ್ಣೀರನ್ನು ಒರೆಸಲು ಇವರಿಂದ ಸಾಧ್ಯವಿಲ್ಲ, ಇವರು ರೂಪಿಸುವ ಕಾನೂನು ನಂಬಿಕೊಂಡರೆ ನಮಗೆ ನ್ಯಾಯ ದಕ್ಕುವುದಿಲ್ಲ ಎಂಬುದನ್ನು ಮನಗಂಡ, ಅಖಿಲ ಭಾರತ ಪತ್ನಿ ಅತ್ಯಾಚಾರ ವಿರೋಧಿ ಸಂಘದ ಅಧ್ಯಕ್ಷ ದಶರಥ ದೇವಡಾ ಎಂಬುವವರು ಸ್ವತಃ ಲೋಕಸಭೆ ಚುನಾವಣೆಗೆ ಧುಮುಕಿದ್ದಾರೆ.

ಗುಜರಾತ್ ರಾಜ್ಯದ ಅಹ್ಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ದೇವಡಾ ಅವರು ಸಂಸತ್ ಸೇರುವ ಕನಸಿನೊಂದಿಗೆ ಇಳಿದಿದ್ದಾರೆ. ದೇಶದ ಕೌಟುಂಬಿಕ ದೌರ್ಜನ್ಯ ವಿರೋಧಿ ಕಾನೂನು ಪುರುಷರಿಗೇ ವಿರುದ್ಧವಾಗಿದೆ ಮತ್ತು ಮಹಿಳೆಯರ ಪರವಾಗಿದೆ. ಇಷ್ಟು ವರ್ಷಗಳಿಂದ ನಡೆಸಿರುವ ಹೋರಾಟದಿಂದ ನಮಗೆ ಸಿಕ್ಕಿರುವುದಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ನಾನೊಂದು ವೇಳೆ ಸಂಸದನಾಗಿ ಆಯ್ಕೆಯಾದರೆ, ಕಾನೂನು ಪುರುಷ ಮತ್ತು ಸ್ತ್ರೀಯರನ್ನು ಸಮಾನವಾಗಿ ನಡೆಸಿಕೊಳ್ಳಬೇಕು ಮತ್ತು ಪತ್ನಿಯರಿಂದ ಪುರುಷರಿಗಾಗುತ್ತಿರುವ ದೌರ್ಜನ್ಯಕ್ಕೆ ಕೊನೆಹಾಡಬೇಕು ಎಂದು ನುಡಿದಿದ್ದಾರೆ. ಇದಕ್ಕಾಗಿ ಜನರಿಂದಲೇ ಒಂದೊಂದು ರುಪಾಯಿ ಸಂಗ್ರಹಿಸುತ್ತಿರುವ ಅವರು, ಚುನಾವಣಾ ಪ್ರಚಾರಕ್ಕಾಗಿ ಆ ಹಣವನ್ನು ವಿನಿಯೋಗಿಸಬೇಕೆಂದಿದ್ದಾರೆ.

ದೇಶದಾದ್ಯಂತ 52 ಸಾವಿರಕ್ಕೂ ಹೆಚ್ಚು ಪತ್ನಿಯಿಂದ ಪೀಡಿತರಾದ ಗಂಡಂದಿರು ಸಂಘದ ಸದಸ್ಯರಾಗಿದ್ದು, ಸಾವಿರಾರು ಜನ ಈಗಾಗಲೆ ತಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾವು ಗಂಡಸು ಮತ್ತು ಹೆಂಗಸನ್ನು ಸಮಾನವಾಗಿ ಕಾಣದ ಕಾನೂನಿನ ವಿರುದ್ಧ ಹೋರಾಡುತ್ತಿದ್ದೇವೆಯೇ ಹೊರತು ಹೆಂಗಸರ ವಿರುದ್ಧ ಅಲ್ಲ. ಹೀಗಾಗಿ, ಖಂಡಿತವಾಗಿ ಮಹಿಳೆಯರು ಕೂಡ ನಮಗೆ ಖಂಡಿತ ಮತ ಹಾಕುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಆದರೆ, ಅವರ ಈ ಹೋರಾಟ ಅವರನ್ನು ಹಲವಾರು ಬಾರಿ ಸಂಕಷ್ಟಕ್ಕೆ ಕೂಡ ಸಿಲುಕಿಸಿದೆ. ಗುಜರಾತ್ ಹೈಕೋರ್ಟ್ ಅವರಿಗೆ 1 ಲಕ್ಷ ರು. ದಂಡವನ್ನು ವಿಧಿಸಿತ್ತು. ಆದರೆ, ದೇವಡಾ ಬಳಿ ಅಷ್ಟೊಂದು ಹಣವಿಲ್ಲದಿದ್ದರಿಂದ, ದಂಡವನ್ನು ಮನ್ನಾ ಮಾಡಿತ್ತು.

ಇದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ಹಿಂದಿ ಚಿತ್ರನಟ ಪರೇಶ್ ರಾವಲ್ ಸ್ಪರ್ಧೆಗಿಳಿದಿದ್ದರೆ, ರಸ್ತೆ ಬದಿಯಲ್ಲಿ ಚಹಾ ಮಾಡಿ ಜೀವನ ಸಾಗಿಸುತ್ತಿರುವ ದಿನೇಶ್ ವಘೇಲಾ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

English summary
President of Akhil Bharat Patni Atyachar Virodhi Sangh Dashrath Devda has filed nomination from Ahmedabad East lok sabha constituency to fight for men, who were subjected to domestic violence. He is contesting against Paresh Rawal of BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X