ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್-ಬಿಜೆಪಿಯನ್ನು ನಿಷೇಧಿಸುವೆ: ಲಾಲು ಪ್ರಸಾದ್

By Srinath
|
Google Oneindia Kannada News

ಪಟನಾ, ಏ.24: ವಿಶ್ವ ಹಿಂದೂ ಪರಿಷತ್‌ ಮುಖಂಡ ಪ್ರವೀಣ್ ತೊಗಾಡಿಯಾ ಮತ್ತು ಬಿಜೆಪಿ ಧುರೀಣ ಗಿರಿರಾಜ್ ಸಿಂಗ್ ಇತ್ತೀಚೆಗೆ ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನು ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ವರಿಷ್ಠ ಲಾಲು ಪ್ರಸಾದ್ ಯಾದವ್ ತೀವ್ರವಾಗಿ ಖಂಡಿಸಿದ್ದಾರೆ.

ಈ ಎರಡೂ ಹಗೆತನ ಹರಡುವ ಕೆಲಸದಲ್ಲಿ ತೊಡಗಿವೆ. ಹಾಗಾಗಿ ಇವುಗಳನ್ನು ನಿಷೇಧಿಸಬೇಕು ಎಂದು ಲಾಲು ಒತ್ತಾಯಿಸಿದ್ದಾರೆ. ಜತೆಗೆ, ಅಕಸ್ಮಾತ್ ತಮ್ಮ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ ಆರ್ ಎಸ್ಎಸ್ಸೇ ಆಗಿರಲಿ ಬಿಜೆಪಿಯೇ ಆಗಲಿ ಅಥವಾ ಹಗೆತನ ಹರಡುತ್ತಿರುವ ಅಂತಹ ಬೇರೆ ಯಾವುದೇ ಸಂಘಟನೆಯನ್ನು ನಿಷೇಧಿಸುವೆ ಎಂದೂ ಲಾಲು ಹೇಳಿದ್ದಾರೆ. ಈ ಎಲ್ಲಾ ಗಲಭೆಕೋರರನ್ನು ಭಾರತದಿಂದಲೇ ಓಡಿಸಲಾಗುವುದು ಎಂದು ಅವರು ಗುಡುಗಿದ್ದಾರೆ.

ban-rss-bjp-for-hate-mongering-demands-rjd-lalu-yadav

ಗಿರಿರಾಜ್ ಒಬ್ಬ ನಾಯಕರೇ ಅಲ್ಲ. ಆರ್ ಎಸ್ಎಸ್ ಮುಖವಾಡವಾಗಿರುವ ಬಿಜೆಪಿ ಭಾರತದಾದ್ಯಂತ ಕೋಮುದ್ವೇಷ ಮತ್ತ ಜನಾಂಗೀಯ ವೈರತ್ವವನ್ನು ಹಬ್ಬಿಸುತ್ತಿದೆ. ಸಿಕ್ಕಿಬಿದ್ದಾಗ ತಕ್ಷಣವೇ ಇಂತಹ ಹೇಳಿಕೆ ಹಿಂಪಡೆಯುವುದಾಗಿ, ಕ್ಷಮೆ ಕೋರುವುದಾಗಿ ನಾಟಕವಾಡುತ್ತಾರೆ ಎಂದು ಲಾಲು ದೂಷಿಸಿದರು.

ಬಿಜೆಪಿಯ ಗಿರಿರಾಜ್‌ ಸಿಂಗ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಕೇವಲ ಸೋಗಲಾಡಿತನದಿಂದ ಯಾವ ಪುರಷಾರ್ಥವನ್ನೂ ಸಾಧಿಸಿದಂತಾಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು. ಒಂದು ವೇಳೆ ಇಂತಹ ಕೋಮುವಾದಿ ಶಕ್ತಿಗಳನ್ನು ಅಧಿಕಾರಕ್ಕೆ ತಂದರೆ ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರೈಸ್ತರ ನಡುವೆ ವಿಷಬೀಜ ಬಿತ್ತಿ ದೇಶವೇ ಹೊತ್ತಿ ಉರಿಯುವಂತೆ ಮಾಡುತ್ತವೆ ಎಂದು ಲಾಲು ಕಳವಳ ವ್ಯಕ್ತಪಡಿಸಿದರು.

ಮತ್ತೆ ಲಾಲುಗೆ ಟಾಂಗ್ ಕೊಟ್ಟ ಸಾಧು:
ಮಾಜಿ ಸಂಸತ್ ಸದಸ್ಯ ಸಾಧು ಯಾದವ್ ಅಲಿಯಾಸ್ ಅನಿರುದ್ಧ ಪ್ರಸಾದ್ ಅವರು ಬುಧವಾರ ಮಹಾರಾಜ್‌ ಗಂಜ್ ಲೋಕಸಭಾ ಕ್ಷೇತ್ರದಿಂದ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. 'ನಾನು ಸ್ವತಂತ್ರ ಅಭ್ಯರ್ಥಿಯಾಗಿ ಉಮೇದುವಾರಿಕೆ ಹಿಂಪಡೆದಿದ್ದೇನೆ. ಕಣದಲ್ಲಿರುವ ಜನತಾದಳ (ಯು) ಅಭ್ಯರ್ಥಿಗೆ ಬೀಳುವ ಮತಗಳು ಹಂಚಿ ಹೋಗುವುದನ್ನು ತಪ್ಪಿಸುವ ಸಲುವಾಗಿ ಸ್ಪರ್ಧೆಯಿಂದ ಹಿಂದೆ ಸರಿಯುವೆ' ಎಂದು ಅವರು ಹೇಳಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರ ಸೋದರ ಮತ್ತು ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಪಕ್ಷದ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಭಾವಮೈದುನರಾಗಿರುವ ಸಾಧು, ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರನ್ನು ಕೊಂಡಾಡಿದರು. ನಿತೀಶ್‌ಕುಮಾರ್ ಬಿಹಾರದಲ್ಲಷ್ಟೇ ಏಕೆ ದೇಶದ ಯಾವುದೇ ರಾಜ್ಯದ ಮುಖ್ಯಮಂತ್ರಿಗಿಂತ ಅತ್ಯುತ್ತಮ ಎಂದು ಸಾಧು ಪ್ರಶಂಸಿಸಿದರು.

ಅಹಮದಾಬಾದಿನಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಸಾಧು ಯಾದವ್ ಇತ್ತೀಚೆಗೆ ಭೇಟಿಯಾಗಿದ್ದರು. ಸಾಧು, ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿತ್ತು. ಬಿಹಾರದಲ್ಲಿ ಸಾಧುರನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂದೂ ಅಭಿಪ್ರಾಯಪಡಲಾಗಿತ್ತು. ಆದರೆ ಬಿಜೆಪಿ ಸ್ಪಂದಿಸದ ಹಿನ್ನೆಲೆಯಲ್ಲಿ ಸಾಧು, ಸರನ್ ಕ್ಷೇತ್ರದಲ್ಲಿ ತನ್ನ ಸಹೋದರಿ ರಾಬ್ಡಿ ದೇವಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿಯೂ ಘೋಷಿಸಿದ್ದರು. ಕೊನೆಗೆ ಮಹಾರಾಜ್‌ ಗಂಜ್‌ ನಿಂದ ನಾಮಪತ್ರ ಸಲ್ಲಿಸಿದ್ದರು. ಇದೀಗ ಸ್ಪರ್ಧೆಯಿಂದ ಹಿಂದೆ ಸರಿದು, ತಮ್ಮ ಭಾವ ಲಾಲುರ ಕಡುವೈರಿ ನಿತೀಶ್ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ.

English summary
Lok Sabha Election 2014 - ban RSS and BJP for hate mongering demands Lalu Yadav. Also Rashtriya Janata Dal (RJD) president Lalu Prasad has said that his party will ban the Rashtriya Swayam Sewak Sangh (RSS) and the Bharatiya Janata Parwty (BJP) for hate mongering if it comes to power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X