ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಸಹ ಪ್ರಯಾಣಿಕರಾಗಿದ್ದ ಮೋದಿ-ವಘೇಲಾ

By * ಶ್ರೀವತ್ಸ ಜೋಶಿ
|
Google Oneindia Kannada News

ಅದು, 1990ರ ಬೇಸಿಗೆಕಾಲ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಅರ್ಹತಾಪರೀಕ್ಷಣಾರ್ಥಿ(probationer)ಗಳಾಗಿದ್ದ ನಾನು ಮತ್ತು ನನ್ನೊಬ್ಬ ಸ್ನೇಹಿತೆ ಲಕ್ನೋದಿಂದ ದಿಲ್ಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದೆವು. ನಮ್ಮ ಬೋಗಿಯಲ್ಲಿಯೇ ಇಬ್ಬರು ಎಂಪಿಗಳೂ ಇದ್ದರು. ಅದೇನೂ ತೊಂದರೆಯಿಲ್ಲ, ಆದರೆ ಅವರೊಂದಿಗೆ ಪ್ರಯಾಣಿಸುತ್ತಿದ್ದ ಇನ್ನೂ ಹತ್ತುಹನ್ನೆರಡು ಮಂದಿಯ ವರ್ತನೆ ಮಾತ್ರ ಭಯಾನಕವಾಗಿತ್ತು.

ಮೊದಲನೆಯದಾಗಿ ಅವರಿಗೆ ರಿಸರ್ವೇಶನ್ ಇರಲಿಲ್ಲ. ನಮ್ಮ ಸೀಟು/ಬರ್ತ್‌ಗಳನ್ನು ತೆರವುಗೊಳಿಸಿ ನಾವು ಬೇಕಿದ್ದರೆ ಲಗ್ಗೇಜ್ ಮೇಲೆ ಕುಳಿತುಕೊಳ್ಳಬೇಕೆಂದು ಆಗ್ರಹಿಸಿದರು. ಕೆಟ್ಟ ಮಾತುಗಳನ್ನಾಡಿದರು. ನಾವಾದರೋ ಒಳಗೊಳಗೇ ಉರಿದುಕೊಳ್ಳುತ್ತ ಮೈಮುದುಡಿಕೊಂಡು ಇರುವುದಲ್ಲದೆ ಇನ್ನೇನು ಮಾಡಿಯೇವು? ನಿಜಕ್ಕೂ ಅದೊಂದು ಕರಾಳರಾತ್ರಿ. ಆತ್ಮಗೌರವ ಮತ್ತು ಅವಮಾನದ ನಡುವಿನ ತೆಳುರೇಖೆಯ ಮೇಲೆ ನಾವಿದ್ದೆವು. ಬೇರೆ ಪ್ರಯಾಣಿಕರು ಮತ್ತು ಟಿಟಿಇ ಸಹ ಅಲ್ಲಿ ಇರಲೇಇಲ್ಲವೇನೊ ಅನಿಸುವಷ್ಟು ನಮ್ಮ ಮನಗಳಲ್ಲಿ ಈ ಕ್ರೂರಮುಖಗಳೇ ತುಂಬಿಕೊಂಡಿದ್ದವು.

ಮಾರನೆ ದಿನ ಬೆಳಿಗ್ಗೆ ದಿಲ್ಲಿ ತಲುಪಿದೆವು. ನಿಜ, ಶಾರೀರಿಕವಾಗಿ ನಮಗೇನೂ ಆಘಾತವಾಗಿರಲಿಲ್ಲ, ಆದರೆ ಮಾನಸಿಕವಾಗಿ ಪೂರ್ಣ ಜರ್ಝರಿತರಾಗಿದ್ದೆವು. ನನ್ನ ಸ್ನೇಹಿತೆಯಂತೂ ಎಷ್ಟು ಘಾಸಿಗೊಂಡಿದ್ದಳೆಂದರೆ ನಮ್ಮ ಮುಂದಿನಹಂತದ ತರಬೇತಿ ಅಹಮದಾಬಾದ್‌ನಲ್ಲಿದ್ದದ್ದಕ್ಕೆ ತಾನು ಹಾಜರಾಗಲು ಬಯಸುವುದಿಲ್ಲ, ದಿಲ್ಲಿಯಲ್ಲೇ ಉಳಿದುಬಿಡುತ್ತೇನೆ ಎಂದು ನಿರ್ಧರಿಸಿದಳು!

ನಾನು ಏನಾದರಾಗಲಿ ಎಂದು ಅಹಮದಾಬಾದ್‌ಗೂ ಹೋಗುವ ತೀರ್ಮಾನ ಮಾಡಿದೆ. ಏಕೆಂದರೆ ಉತ್ಪಲಪರ್ಣ ಹಜಾರಿಕಾ ಎಂಬ ಇನ್ನೊಬ್ಬ ಬ್ಯಾಚ್‌‌ಮೇಟ್ (ಈಗ ರೈಲ್ವೆ ಬೋರ್ಡ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್) ನನ್ನೊಂದಿಗೆ ಪಯಣಿಸುವವಳಿದ್ದಳು. ದಿಲ್ಲಿಯಿಂದ ಅಹಮದಾಬಾದ್‌ಗೆ ಹೋಗುವ ರಾತ್ರಿರೈಲನ್ನು ನಾವು ಹತ್ತಿದೆವು. ನಮಗೆ ಕನ್‌‌ಫರ್ಮ್ಡ್ ಬರ್ತ್‌ಗಳು ಸಿಕ್ಕಿರಲಿಲ್ಲ, ವೈಟಿಂಗ್‌ಲಿಸ್ಟ್‌ನಲ್ಲಿದ್ದೆವು.

Modi and Vaghela

ಪ್ರಥಮದರ್ಜೆ ಬೋಗಿಯ ಟಿಟಿಇಯನ್ನು ನಾವು ಭೇಟಿಯಾದೆವು. ಅಹಮದಾಬಾದ್‌ಗೆ ಹೋಗುತ್ತಿದ್ದೇವೆ ಎಂದೆವು, ಅವರೇನಾದರೂ ನಮಗೆ ಸಹಾಯಮಾಡಿಯಾರೇ ಎಂಬ ಆಸೆಯಿಂದ. ರೈಲಿನಲ್ಲಿ ಬರ್ತ್‌ಗಳೆಲ್ಲ ಬುಕ್ ಆಗಿದ್ದರೂ, ನಮಗೆ ನೆರವಾಗುವ ಇರಾದೆಯಿಂದ ಅವರು ಒಂದು ಕೂಪೆ (ಇಬ್ಬರು ಪ್ರಯಾಣಿಸುವ ಕಂಪಾರ್ಟ್‌‍ಮೆಂಟ್)ಯತ್ತ ನಮ್ಮನ್ನೊಯ್ದರು.

ಅದರಲ್ಲಿ ಆಗಲೇ ಇಬ್ಬರು ಗಂಡಸರು ಇದ್ದರು. ಉಟ್ಟಿದ್ದ ಖಾದಿ ವಸ್ತ್ರಗಳಿಂದಾಗಿ ರಾಜಕಾರಣಿಗಳಂತೆ ಕಾಣುತ್ತಿದ್ದರು. "ಚಿಂತಿಸಬೇಡಿ. ಅವರಿಬ್ಬರು ಸಭ್ಯ ವ್ಯಕ್ತಿಗಳು. ಈ ಮಾರ್ಗದ ರೈಲುಗಳಲ್ಲಿ ಆಗಾಗ ಪ್ರಯಾಣಿಸುತ್ತಿರುತ್ತಾರೆ. ಗಾಬರಿಪಡಬೇಕಾದ್ದೇನಿಲ್ಲ" ಎಂದರು ಟಿಟಿಇ. ಆ ವ್ಯಕ್ತಿಗಳ ಪೈಕಿ ಒಬ್ಬರು ಸುಮಾರು ನಲ್ವತ್ತರ ಹರೆಯದವರು, ಸಾಮಾನ್ಯ ಸಹೃದಯ ಚಹರೆಯವರು. ಇನ್ನೊಬ್ಬರು ಸುಮಾರು ಮೂವತ್ತೈದು ದಾಟಿದವರಷ್ಟೇ ಇರಬಹುದು. ಸೌಮ್ಯವೇ ಆದರೂ ಅಷ್ಟೇನೂ ಪ್ರಭಾವಿತವಲ್ಲದ ಚಹರೆ. ಕೂಪೆಯ ಒಂದು ಮೂಲೆಗೆ ಅವರಿಬ್ಬರೂ ಸೇರಿಕೊಂಡು, ನಮಗೆ ಕುಳಿತುಕೊಳ್ಳಲು ಸ್ಥಳ ಕೊಟ್ಟರು.

ನಮಗೆ ಅವರ ಪರಿಚಯ ತಿಳಿಸಿದರು. ಗುಜರಾತ್‌ನ ಇಬ್ಬರು ಬಿಜೆಪಿ ನಾಯಕರೆಂದು ಹೇಳಿದರು. ಹೆಸರುಗಳನ್ನೂ ಹೇಳಿದರಾದರೂ ತತ್‌‌ಕ್ಷಣಕ್ಕೆ ನನ್ನ ಮನಸ್ಸಿನಲ್ಲಿ ದಾಖಲಾಗಲಿಲ್ಲ. ಸಹಪ್ರಯಾಣಿಕರ ಹೆಸರು ನೆನಪಿಟ್ಟುಕೊಂಡು ಆಗಬೇಕಾದ್ದಾದರೂ ಏನು? ನಾವೂ ಪರಿಚಯ ಹೇಳಿಕೊಂಡೆವು.

ಅಸ್ಸಾಂ ರಾಜ್ಯದವರು, ರೈಲ್ವೆ ಪ್ರೊಬೆಷನರ್ಸ್ ಎಂದೆವು. ಸಂಭಾಷಣೆ ಅದೂಇದೂ ವಿಚಾರಗಳತ್ತ ಹೊರಳಿ ಭೂಗೋಳ, ಚರಿತ್ರೆ, ರಾಜಕೀಯ ಇತ್ಯಾದಿ ಎಲ್ಲವೂ ಬಂತು. ನನ್ನ ಸ್ನೇಹಿತೆ ದಿಲ್ಲಿ ವಿಶ್ವವಿದ್ಯಾಲಯದಿಂದ ಚರಿತ್ರೆಯಲ್ಲಿ ಸ್ನಾತಕೋತ್ತರ ಶಿಕ್ಷಿತೆ, ಜಾಣೆ ಆದ್ದರಿಂದ ಮಾತುಕತೆಯಲ್ಲಿ ಆಸಕ್ತಿಯಿಂದ ಪಾಲ್ಗೊಂಡಳು. ನಾನೂ ಅಷ್ಟಿಷ್ಟು ದನಿಗೂಡಿಸಿದೆ. ಮಾತಿನ ಮಂಥನವು 'ಹಿಂದೂ ಮಹಾಸಭಾ' ಮತ್ತು ಮುಸ್ಲಿಂ ಲೀಗ್‌ಗಳ ರಚನೆ ಏಕಾಯ್ತು ಎನ್ನುವ ವಿಚಾರವನ್ನೂ ತಲುಪಿತು!

ಇಬ್ಬರು ಗಂಡಸರಲ್ಲಿ ಹಿರಿಯಾತ ತುಂಬ ಉತ್ಸುಕ ಮಾತುಗಾರ. ಇನ್ನೊಬ್ಬಾತ ಬಹುಮಟ್ಟಿಗೆ ಮೌನವಾಗಿಯೇ ಇದ್ದ, ಆದರೆ ಆತನ ಮೈಮನಗಳು ನಮ್ಮ ಸಂಭಾಷಣೆಯಲ್ಲೇ ಮಗ್ನವಾಗಿದ್ದವೆಂಬುದು ಚಲನವಲನಗಳಿಂದ ತಿಳಿಯುತ್ತಿತ್ತು. ನಾನು ಶ್ಯಾಮಪ್ರಸಾದ ಮುಖರ್ಜಿಯವರ ನಿಧನದ ಬಗ್ಗೆ ಪ್ರಸ್ತಾಪಿಸಿದೆ.

ಅದನ್ನೇಕೆ ಇನ್ನೂ ಒಂಥರ ನಿಗೂಢ ಎಂದೇ ಪರಿಗಣಿಸಲಾಗುತ್ತಿದೆ ಎಂದು ಪ್ರಶ್ನಿಸಿದೆ. ಆತ ಥಟ್ಟನೆ ಕೇಳಿದ- "ಶ್ಯಾಮಪ್ರಸಾದ ಮುಖರ್ಜಿಯವರ ಬಗ್ಗೆ ನಿಮಗೆ ಹೇಗೆ ಗೊತ್ತು?" ಆಮೇಲೆ ನಾನು ವಿವರಿಸಿದೆ, ನನ್ನ ತಂದೆ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಆ ವಿವಿಯ ಉಪಕುಲಪತಿಗಳಾಗಿದ್ದ ಶ್ಯಾಮಪ್ರಸಾದ ಮುಖರ್ಜಿಯವರು ಅಸ್ಸಾಂನಿಂದ ಬಂದ ವಿದ್ಯಾರ್ಥಿಗೆ ಶಿಷ್ಯವೇತನ ಏರ್ಪಾಡುಮಾಡಿದ್ದರು. ನನ್ನ ತಂದೆ ಅದನ್ನು ಕೃತಜ್ಞತಾಪೂರ್ವಕ ಸ್ಮರಿಸುತ್ತಿದ್ದರು, ಮತ್ತು, ಶ್ಯಾಮಪ್ರಸಾದ ಮುಖರ್ಜಿಯವರ ಅಕಾಲಿಕ (1953ರಲ್ಲಿ 51ರ ವಯಸ್ಸಿನಲ್ಲಿ) ಮರಣದ ಬಗ್ಗೆ ಅವರಿಗೆ ದುಃಖವಿತ್ತು ಎಂದೆ.

A train journey and two names to remember

ಆ ಕಿರಿಯ ವ್ಯಕ್ತಿ ಆಕಡೆಗೆ ಹೊರಳಿ ತನ್ನಷ್ಟಕ್ಕೇ ಮಾತನಾಡಿಕೊಂಡನೋ ಎಂಬಂತೆ "ಇವರಿಗೆ ಇಷ್ಟೆಲ್ಲ ವಿಚಾರಗಳು ತಿಳಿದಿವೆಯೆಂದರೆ ಒಳ್ಳೆಯದೇ ಆಯ್ತು" ಎಂದು ಮೆಲುದನಿಯಲ್ಲಿ ಹೇಳಿದಂತಾಯ್ತು.

ಒಡನೆಯೇ ಹಿರಿಯ ವ್ಯಕ್ತಿ ನಮ್ಮನ್ನುದ್ದೇಶಿಸಿ, "ನೀವು ಗುಜರಾತ್‍‌ನಲ್ಲಿ ನಮ್ಮ ಪಕ್ಷವನ್ನೇಕೆ ಸೇರಬಾರದು?" ಎಂದು ಕೇಳಿದರು. ನಮಗೋ ನಗು ಬಂತು. ನಾವು ಗುಜರಾತ್‌‍ನವರಲ್ಲ ಎಂದೆವು. ಆಗ ಕಿರಿಯಾತ "ಅದಕ್ಕೇನಂತೆ? ತೊಂದರೆ ಏನಿಲ್ಲ. ಪ್ರತಿಭೆ ಎಲ್ಲಿಯದಾದರೂ ನಮ್ಮ ರಾಜ್ಯದಲ್ಲಿ ಸ್ವಾಗತವಿದೆ" ಎಂದರು. ಹಾಗೆನ್ನುವಾಗ ಆತನ ಮುಖಭಾವದಲ್ಲಿದ್ದ ಉತ್ಸಾಹದ ಕಿಡಿಯನ್ನು ನಾನು ಖಂಡಿತ ಗಮನಿಸಿದ್ದೆ.

ಸ್ವಲ್ಪ ಹೊತ್ತಿನಲ್ಲಿ ರಾತ್ರಿಯ ಊಟ ಬಂತು. ನಾಲ್ಕು ಸಸ್ಯಾಹಾರಿ ಥಾಲಿಗಳು. ಮಾತಿಲ್ಲದೆ ಎಲ್ಲರೂ ಊಟ ಮಾಡಿದೆವು. ಹಣ ತೆಗೆದುಕೊಳ್ಳುವವ ಬಂದಾಗ, ಆ ಕಿರಿಯಾತ ನಮ್ಮ ನಾಲ್ಕೂ ಮಂದಿಯ ಹಣವನ್ನು ತಾನೇ ಪಾವತಿಸಿದ! ನಾನು ಕ್ಷೀಣಧ್ವನಿಯಲ್ಲಿ "ಧನ್ಯವಾದಗಳು" ಎಂದೆನಾದರೂ ಆತ ಅದೇನೂ ದೊಡ್ಡವಿಷಯವೇ ಅಲ್ಲ ಎಂಬಂತೆ ನಯವಾಗಿ ತಿರಸ್ಕರಿಸಿದ. ಆಗಲೂ ಅಷ್ಟೇ. ಆತನ ಕಣ್ಣುಗಳಲ್ಲೇನೋ ವಿಶೇಷ ಹೊಳಪು ಇದ್ದದ್ದನ್ನು ನಾನು ಗಮನಿಸಿದ್ದೆ. ಮಾತು ಕಡಿಮೆ, ಕೇಳುವಿಕೆಯೇ ಹೆಚ್ಚು ಆ ಆಸಾಮಿಯದು.

ಟಿಟಿಇ ಬಂದವರೇ 'ನಿಮಗೆ ಬರ್ತ್‌ಗಳನ್ನು ಕೊಡುವುದಕ್ಕೆ ಎಲ್ಲೂ ಬರ್ತ್‌ಗಳು ಖಾಲಿ ಇಲ್ಲ' ಎಂದು ನಿಟ್ಟುಸಿರಿಟ್ಟರು. ಒಡನೆಯೇ ಈ ಇಬ್ಬರು ಗಂಡಸರು ಎದ್ದುನಿಂತು, "ಪರವಾಇಲ್ಲ ನಾವು ನಿಭಾಯಿಸುತ್ತೇವೆ" ಎಂದು ಹೇಳಿದವರೇ ಕೂಪೆಯ ನೆಲದ ಮೇಲೆ ವಸ್ತ್ರ ಹಾಸಿ ಮಲಗಿಬಿಟ್ಟರು, ತಮ್ಮೆರಡು ಬರ್ತ್‌ಗಳನ್ನು ನಮಗೆ ಬಿಟ್ಟುಕೊಟ್ಟರು!

ಎಂಥ ವ್ಯತ್ಯಾಸ! ಹಿಂದಿನ ರಾತ್ರಿಯಷ್ಟೇ ನಾವು ಲಕ್ನೋ-ದಿಲ್ಲಿ ರೈಲಿನಲ್ಲಿ ಬೇರೆಕೆಲವು ರಾಜಕಾರಣಿಗಳು ಮತ್ತು ಗೂಂಡಾಗಳ ಕಂಪನಿಯಲ್ಲಿ ಭಯಭೀತರಾಗಿ ಪಯಣಿಸಿದವರು ಇವತ್ತು ಇಲ್ಲಿ ಈ ಇಬ್ಬರು ರಾಜಕಾರಣಿಗಳೊಂದಿಗೆ ಒಂದೇ ಕೂಪೆಯಲ್ಲಿ ನಿರ್ಭೀತರಾಗಿ ಪ್ರಯಾಣಿಸುತ್ತಿದ್ದೇವೆ!

ಮಾರನೆ ದಿನ ಬೆಳಿಗ್ಗೆ ರೈಲು ಅಹಮದಾಬಾದ್ ತಲುಪಿತು. ಅಲ್ಲಿ ನಮಗೆ ವಸತಿವ್ಯವಸ್ಥೆ ಏನಿದೆ ಎಂದು ಅವರಿಬ್ಬರೂ ನಮ್ಮನ್ನು ಕೇಳಿದರು. ಸಮಸ್ಯೆಯೇನಾದರೂ ಇದ್ದರೆ, ನನ್ನ ಮನೆಗೆ ಬಂದು ಉಳಕೊಳ್ಳಬಹುದು ಎಂದು ಹಿರಿಯಾತ ನಮಗೆ ಹೇಳಿದರು. ಆದರೆ ಆ ಸನ್ನಿವೇಶದಲ್ಲಿ ಕಿರಿಯಾತ ತುಸು ಗಲಿಬಿಲಿಗೊಂಡವನಂತೆ ಕಾಣುತ್ತಿತ್ತು. "ನಾನೊಬ್ಬ ಅಲೆಮಾರಿ. ಸರಿಯಾದ ಸೂರು ಇಲ್ಲದವನು. ಆದರೆ ಈತನ ಆಹ್ವಾನವನ್ನು ನೀವು ಯಾವ ಸಂಕೋಚವೂ ಇಲ್ಲದೆ ಸ್ವೀಕರಿಸಬಹುದು." ಎಂದು ಹೇಳಿದರು. ಅವರಿಬ್ಬರಿಗೂ ನಾವು ಧನ್ಯವಾದ ಹೇಳಿದೆವು. ವಸತಿಗೆ ನಮಗೆ ಆಗಲೇ ವ್ಯವಸ್ಥೆ ಆಗಿದೆ, ಏನೂ ಚಿಂತೆಯಿಲ್ಲ ಎಂದೆವು.

ರೈಲು ನಿಲ್ಲುವ ಮೊದಲು ನಾನು ನನ್ನ ಡೈರಿಯನ್ನು ತೆಗೆದು ಅವರಿಬ್ಬರ ಹೆಸರುಗಳನ್ನು ಬರೆದುಕೊಳ್ಳಲು ಉಧ್ಯುಕ್ತಳಾದೆ. ಅಷ್ಟು ವಿಶಾಲಹೃದಯದ ಇಬ್ಬರು ಸಹಪ್ರಯಾಣಿಕರ ಹೆಸರುಗಳನ್ನು ಮರೆಯುವುದು ತರವಲ್ಲ, ಅದಲ್ಲದೇ ರಾಜಕಾರಣಿಗಳ ಬಗ್ಗೆ ನನಗಿದ್ದ ಅಭಿಪ್ರಾಯವನ್ನು ಸಂಪೂರ್ಣವಾಗಿ ಬದಲಿಸಿದವರು ಇವರು. ಹೇಗೆ ಮರೆಯಲಿ? ಇಬ್ಬರ ಹೆಸರುಗಳನ್ನು ಡೈರಿಯಲ್ಲಿ ಗೀಚಿಕೊಂಡೆ: ಶಂಕರಸಿಂಘ ವಾಘೇಲಾ, ಮತ್ತು, ನರೇಂದ್ರ ಮೋದಿ.

ಈ ಘಟನೆಯ ಬಗ್ಗೆ 1995ರಲ್ಲೇ ನಾನು ಅಸ್ಸಾಮಿನ ದಿನಪತ್ರಿಕೆಯೊಂದರಲ್ಲಿ ಬರೆದೆ. ಗುಜರಾತ್‍‌ನ ಇಬ್ಬರು ಅಜ್ಞಾತ ರಾಜಕಾರಣಿಗಳು, ಅಸ್ಸಾಮ್‍‍‌ನಿಂದ ಬಂದ ಇಬ್ಬರು ಸೋದರಿಯರಿಗಾಗಿ ರೈಲು ಕೂಪೆ ಲಕ್ಷುರಿಯನ್ನು ಬಿಟ್ಟುಕೊಟ್ಟವರು, ಖಂಡಿತವಾಗಿಯೂ ಕೃತಜ್ಞತೆಗೆ ಪಾತ್ರರು ಎಂಬ ಧಾಟಿಯಲ್ಲಿ ಬರೆದಿದ್ದೆ.

ಆಮೇಲೆ ಆ ವ್ಯಕ್ತಿಗಳು ಪ್ರಖ್ಯಾತರಾಗುತ್ತಾರೆಂದಾಗಲೀ ಅವರ ಬಗ್ಗೆ ಆಮೇಲೆ ಕೇಳುತ್ತೇನೆ/ಓದುತ್ತೇನೆ ಎಂದಾಗಲೀ ನನಗೆ ದೇವರಾಣೆಗೂ ಗೊತ್ತಿರಲಿಲ್ಲ. 1996ರಲ್ಲಿ ವಾಘೇಲಾ ಗುಜರಾತ್‌ನ ಮುಖ್ಯಮಂತ್ರಿ ಆದರು. ನಾನು ಸಂತೋಷಪಟ್ಟೆ. 2001ರಲ್ಲಿ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾದರು. ಮೂಕವಿಸ್ಮಿತಳಾಗುವ ಸರದಿ ನನ್ನದು! (ಕೆಲ ತಿಂಗಳುಗಳ ನಂತರ ಅಸ್ಸಾಮಿನ ಇನ್ನೊಂದು ಪತ್ರಿಕೆಯೂ ನನ್ನ ಆ 1995ರ ಲೇಖನವನ್ನು ಮರುಪ್ರಕಟಿಸಿತ್ತು). ಇದೀಗ ನರೇಂದ್ರ ಮೋದಿ ಭಾರತದ ಪ್ರಧಾನಮಂತ್ರಿ!

ಆತನ ಮುಖವನ್ನು ಟಿವಿಯಲ್ಲಿ ನೋಡಿದಾಗಲೆಲ್ಲ ನನಗೆ ಅವತ್ತು ರೈಲಿನ ಕೂಪೆಯಲ್ಲಿನ ಆ ಊಟ, ಆ ಸೌಜನ್ಯ, ಅಂಥ ರಾತ್ರಿಯಲ್ಲಿ ಮನೆಯಿಂದ ದೂರದಲ್ಲಿ ರೈಲಿನಲ್ಲಿ ಪಯಣಿಸುವಾಗ ಸಿಕ್ಕಿದ ಸುರಕ್ಷತೆಯ ಭಾವನೆ- ಎಲ್ಲವೂ ನೆನಪಾಗುತ್ತವೆ. ಗೌರವಭಾವದಿಂದ ನತಮಸ್ತಕಳಾಗುತ್ತೇನೆ.

* * *

ಶ್ರೀವತ್ಸ ಜೋಶಿ ಸೇರಿಸಿದ್ದು:

ವನೇ ರಣೇ ಶತ್ರುಜಲಾಗ್ನಿಮಧ್ಯೇ
ಮಹಾರ್ಣವೇ ಪರ್ವತಮಸ್ತಕೇ ವಾ
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ
ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ ||

[ನೀತಿಶತಕದಿಂದಾಯ್ದ ಸುಭಾಷಿತ. "ಕಾಡಿನಲ್ಲಿ, ಯುದ್ಧಭೂಮಿಯಲ್ಲಿ, ಶತ್ರುಗಳ ನಡುವೆಯೋ, ನೀರು ಅಥವಾ ಬೆಂಕಿಯ ಅಪಾಯದಲ್ಲಿಯೋ, ಸಾಗರದ ನಡುವೆಯೋ, ಪರ್ವತದ ತುದಿಯಲ್ಲಿಯೋ, ಮಲಗಿರುವ ಸ್ಥಿತಿಯಲ್ಲೋ, ಇನ್ನಾವುದೇ ವಿಷಮಸ್ಥಿತಿಯಲ್ಲೋ ಇರುವವರನ್ನು ಹಿಂದೆ ಮಾಡಿದ ಪುಣ್ಯಕಾರ್ಯಗಳು ರಕ್ಷಿಸುತ್ತವೆ." ]

ಸೂಚನೆ: 'The Hindu' ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೀನಾ ಶರ್ಮಾ ಅವರ ಇಂಗ್ಲಿಷ್ ಲೇಖನವನ್ನು ಶ್ರೀವತ್ಸ ಜೋಶಿ ಕನ್ನಡಕ್ಕೆ ಅನುವಾದಿಸಿದ್ದಾರೆ.

English summary
A train journey and two names to remember : Shankersinh Vaghela and Narendra Modi, who between them left a lasting impression on two strangers in 1990, in Ahmedabad in May 2014. Of two co-travellers who surprised the writer Leena Sarma with their graciousness, 24 years ago
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X