ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ್ಲೇ ಹೀಗೆ, ಚುನಾವಣೆಯ ಹೊಸ್ತಿಲಲ್ಲಿ ಇನ್ನು ಹೇಗೋ?

By ಬಾಲರಾಜ್ ತಂತ್ರಿ
|
Google Oneindia Kannada News

ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೋಲಾರ ಜಿಲ್ಲಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಎರಡು ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟ. ನಾನಾ ನೀನಾ ಎನ್ನುವ ಪೈಪೋಟಿಯಲ್ಲಿ ಎರಡೂ ಪಕ್ಷದವರು ಮತದಾರನನ್ನು ಓಲೈಸಲು ಇನ್ನಿಲ್ಲದ ಕಸರತ್ತು ನಡೆಸಿದ್ದರು.

ಹಣ, ಹೆಂಡಕ್ಕಾಗಿ ವೋಟನ್ನು ಮಾರುವ ಮತದಾರ ಪ್ರಭುಗಳಿಗಂತೂ ಸುಗ್ಗಿಯೋ ಸುಗ್ಗಿ. ಆದರೆ ಅವರ ಈ ಸುಗ್ಗಿ ಕೇವಲ ಕ್ಷಣಿಕವಾಗಿತ್ತು. ನಮ್ಮ ಪಕ್ಷದವರಿಗೇ ನಿಮ್ಮ ವೋಟು ಮಡಗ ಬೇಕು ಶಿವಾ... ಎಂದು ಗರಿಗರಿ ನೋಟು ಹಂಚಿದ್ದ ಮತದಾರನಿಗೆ ಎರಡೂ ಪಕ್ಷದವರು ಸಮಾ ಮುಂಡಾಯಿಸಿದ್ರು.

ಮತದಾರ ವೋಟಿಗಾಗಿ ಪಡೆದು ಕೊಂಡಿದ್ದ ಗಾಂಧಿ ತಾತನ ಗರಿಗರಿ ನೋಟು 'ಖೋಟಾ' ನೋಟಾಗಿತ್ತು. ಇನ್ನು ಒರಿಜಿನಲ್ ಚಾಯ್ಸ್ ಎಂದು ಪಡೆದು ಕೊಂಡಿದ್ದ ತೀರ್ಥ ಪದಾರ್ಥಗಳು ಎಷ್ಟರ ಮಟ್ಟಿಗೆ ಒರಿಜಿನಲ್ ಆಗಿತ್ತೋ ಅಥವಾ ಕಳ್ಳಭಟ್ಟಿ ಆಗಿತ್ತೋ?

ಒಂದು ದಿನದ ಕೆಳಗೆ ಬೆಂಗಳೂರಿನ ರಸ್ತೆಬದಿಯ ತರಕಾರಿ ವ್ಯಾಪಾರಿಯ ಬಳಿ ಮಹಿಳೆಯೊಬ್ಬರು ತರಕಾರಿ ಖರೀದಿಸಿ ನೂರು ರೂಪಾಯಿ ನೋಟು ನೀಡುತ್ತಾಳೆ. ಚಿಲ್ಲರೆ ಐವತ್ತು ರೂಪಾಯಿ ನೋಟನ್ನು ವ್ಯಾಪಾರಿ ವಾಪಸ್ ನೀಡುತ್ತಾನೆ. ಮಹಿಳೆ ಈ ನೋಟಿನ ಮಧ್ಯದಲ್ಲಿ ಗೆರೆ ಇಲ್ಲ, ಇದು ಸರಿಯಾದ ನೋಟಲ್ಲ ಎಂದು ಬೇರೆ ನೋಟು ತೆಗೆದು ಕೊಂಡು ಹೋಗುತ್ತಾಳೆ. (ಎಟಿಎಂ ಹುಡುಗಿ ಮತ್ತು ಶನಿವಾರ ಸಂಜೆ)

Fake Indian currency note issues increasing day by day

ಆನೇಕಲ್ ನಿಂದ ನಗರಕ್ಕೆ ವ್ಯಾಪಾರ ಮಾಡಿ ಬಿಡಿಗಾಸು ಸಂಪಾದನೆ ಮಾಡಲು ಬಂದ ವ್ಯಾಪಾರಿ ಇದರಿಂದ ತಬ್ಬಿಬ್ಬಾಗುತ್ತಾನೆ. ಈ ರೀತಿ ಆಗ್ತಾನೇ ಇದೆ ಸಾರ್ ಎಂದು ತನ್ನ ಅಸಾಹಯಕತೆಯನ್ನು ವ್ಯಕ್ತ ಪಡಿಸುತ್ತಾನೆ. ಇಂತಹ ಪ್ರಕರಣಗಳು ಕಳೆದ ಕೆಲ ವಾರಗಳಿಂದ ಅವ್ಯಾಹತವಾಗಿ ನಡೆಯುತ್ತಿದೆ. ಇದು ಖೋಟಾ ನೋಟು ಎನ್ನುವ ಬ್ರಹ್ಮ ರಾಕ್ಷಸ ಸಮಾಜವನ್ನು ಆವರಿಸಿ ಕೊಳ್ಳುತ್ತಿರುವುದಕ್ಕೆ ಕೊಡಬಹುದಾದ ಒಂದೆರರಡು ಉದಾಹರಣೆಗಳು. (2005ರ ಮುಂಚಿನ ನೋಟಿದ್ದರೆ ಖರ್ಚು ಮಾಡಿ)

ಈ ಖೋಟಾ ನೋಟು ಜಾಲ ದಿನದಿಂದ ದಿನಕ್ಕೆ ಯಾವ ರೀತಿ ವ್ಯಾಪಿಸುತ್ತಿದೆಯೆಂದರೆ ಎಟಿಎಂನಲ್ಲಿ ಬರುವ ನೋಟುಗಳೂ ನಕಲಿಯಾಗಿರುವ ಉದಾಹರಣೆಗಳು ಬೇಕಾದಷ್ಟಿವೆ. ಇದರರ್ಥ ಬ್ಯಾಂಕಿನವರಿಗೂ ಚಳ್ಳೆಹಣ್ಣು ತಿನ್ನಿಸಲೂ ಈ ದಂಧೆಕೋರರು ಯಶಸ್ವಿಯಾಗುತ್ತಿದ್ದಾರೆ ಎನ್ನುವುದು ದೇಶದ ಆರ್ಥಿಕ ದೃಷ್ಟಿಯ ವಿಚಾರದಲ್ಲಿ ಗಂಢಾಂತರವೇ ಸರಿ.

ಎಟಿಎಂನಲ್ಲಿ ಪಡೆದುಕೊಂಡ ಹಣದ receipt ಅನ್ನು ಹಣ ಖರ್ಚಾಗುವ ತನಕ ಇಟ್ಟುಕೊಳ್ಳಿ ಎನ್ನುವ ಬೋರ್ಡುಗಳನ್ನು ಬ್ಯಾಂಕುಗಳಲ್ಲಿ ಕಾಣ ಬಹುದಾಗಿದೆ. ವಿತ್ತ ಸಚಿವಾಲಯ ಮತ್ತು ರಿಸರ್ವ ಬ್ಯಾಂಕ್ ಈ ದಂಧೆಯನ್ನು ಹತ್ತಿಕ್ಕಲು ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದು ಕೊಳ್ಳುತ್ತಿದ್ದರೂ ದಂಧೆ ಕೋರರು ಇನ್ನೊಂದು ಮಾರ್ಗ ಹುಡುಕಿ ಕೊಳ್ಳುತ್ತಿರುವುದೂ ಅಷ್ಟೇ ಸತ್ಯ. ಈಗಲೇ ಹೀಗೆ ಇನ್ನು ಸಾರ್ವತ್ರಿಕ ಚುನಾವಣೆ ಈ ಹೊಸ್ತಿಲಲ್ಲಿ ಖೋಟಾ ನೋಟೂಗಳು ಇನ್ನೆಷ್ಟು ಹರಿದಾಡುತ್ತೋ?

ಅಸಲಿ ನೋಟು ಹೇಗಿರುತ್ತದೆ ಎನ್ನುವ ಬಗ್ಗೆ RBI ಮಾರ್ಗಸೂಚಿ ನಮ್ಮ ಓದುಗರಿಗಾಗಿ. ನೀವೂ ಓದಿ, ನಿಮ್ಮವರಿಗೂ ತಿಳಿಸಿ. (ಸಾವಿರ ರೂಪಾಯಿ ಮುಖಬೆಲೆಯ ನೋಟಿನ ಬಗ್ಗೆ, ಇಮೇಜಿನಲ್ಲಿರುವ ನಂಬರಿನಂತೆ ವಿವರಣೆ ನೀಡಲಾಗಿದೆ)

1. ನೋಟಿನ ಎಡಕ್ಕಿರುವ ಹೂವಿನ ವಿನ್ಯಾಸದ ಚಿತ್ರ ಗಮನಿಸಿ. ಹಾಗೇ ನೋಡಿದರೆ ಆ ಜಾಗದಲ್ಲಿ ಮುಖಬೆಲೆ ಕಾಣಿಸುವುದಿಲ್ಲ. ನೋಟನ್ನು ಲೈಟಿಗೆ ಮುಖ ಮಾಡಿ ನೋಡಿದರೆ ಅದರಲ್ಲಿ ನೋಟಿನ ಮುಖಬೆಲೆ ಅಚ್ಚಾಗಿರುತ್ತದೆ.
2. ನೋಟನ್ನು ಲೈಟಿಗೆ ಮುಖ ಮಾಡಿ ನೋಡಿದರೆ ಮಹಾತ್ಮಾ ಗಾಂಧಿಯವರ ವಾಟರ್ ಮಾರ್ಕ್ ಕಾಣಿಸುತ್ತದೆ.
3. ನೋಟನ್ನು ನೇರವಾಗಿ ಇಟ್ಟು ನೋಡಿದರೆ ಹಸಿರು ಮತ್ತು ಕೋನವಾಗಿ ಇಟ್ಟು ನೋಡಿದರೆ ನೀಲಿ ಬಣ್ಣಕ್ಕೆ ಬದಲಾಗುತ್ತದೆ.
4. ನೋಟಿನ ನಂಬರುಗಳು ಪ್ರಕಾಶಮಾನವಾಗಿರುತ್ತದೆ. ಇದನ್ನು ultraviolet ಲೈಟಿನಿಂದ ಕಾಣಬಹುದಾಗಿದೆ.
5. ಈ ಭಾಗದಲ್ಲಿ ಭದ್ರತಾ ದಾರ ಅಳವಡಿಸಲಾಗಿದೆ. ನೋಟನ್ನು ಬೆಳಕಿನಡೆ ಮುಖ ಮಾಡಿ ನೋಡಿದಾಗ ಇಂಗ್ಲಿಷ್ ನಲ್ಲಿ ಬರೆದ RBI ಮತ್ತು ಹಿಂದಿಯಲ್ಲಿ ಬರೆದ 'ಭಾರತ್' ಕಾಣಿಸುತ್ತದೆ.
6. ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮುದ್ರಿತ ಗೊಂಡಿರುತ್ತದೆ. ಹದವಾದ ಶಾಯಿಯಿಂದ (intaglio raised ink) ಮುದ್ರಿತ ಗೊಂಡಿರುತ್ತದೆ. ಆ ಭಾಗವನ್ನು ಸ್ಪರ್ಷಿಸಿದರೆ ತಿಳಿಯ ಬಹುದಾಗಿದೆ.
7. ನೋಟನ್ನು ಬೆಳಕಿನಡೆ ಮುಖ ಮಾಡಿ ನೋಡಿದಾಗ ಸೂಕ್ಷ ಅಕ್ಷರಗಳಲ್ಲಿ ಮೌಲ್ಯವನ್ನು ಬರೆಯಲಾಗಿದೆ.
8. ಭೂತಗನ್ನಡಿಯಲ್ಲಿ ನೋಡಿದರೆ ನೋಟಿನ ಮುಖಬೆಲೆ ಮತ್ತು RBI ಅಕ್ಷರವನ್ನು ಕಾಣಬಹುದಾಗಿದೆ.
9. ಈ ಜಾಗವನ್ನು ಸ್ಪರ್ಷಿಸಿದರೆ ಅನುಭವವಾಗುತ್ತದೆ. ಸ್ವಲ್ಪ ಹಳ್ಳವಾಗಿ ಕೊರೆದಿರುವ ಇದನ್ನು ಅಂಧರ ಅನೂಕಲಕತೆಗಾಗಿ ಬಳಸಲಾಗುತ್ತದೆ.
10. ಬೆಳಕಿನಡೆ ನೋಟನ್ನು ಮುಖಮಾಡಿ ನೋಡಿದಾಗ ನೋಟು ಮುದ್ರಿತವಾದ ವರ್ಷ ಕಾಣಬಹುದಾಗಿದೆ.

ಇನ್ನು 10, 20, 50, 100, 500 ರೂಪಾಯಿ ನೋಟು ಅಸಲೋ, ನಕಲೋ ಪರೀಕ್ಷಿಸಲು RBI ನೀಡಿರುವ ಮಾರ್ಗಸೂಚಿಗಾಗಿ ಇಲ್ಲಿ ಕ್ಲಿಕ್ಕಿಸಿ

English summary
Fake Indian currency note issues increasing day by day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X