ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುರ್ತು ದ್ವಾರವಿಲ್ಲದ ವೋಲ್ವೋ ಬಸ್ಸುಗಳಿಗೆ ಬ್ರೇಕ್: ರೆಡ್ಡಿ

By Srinath
|
Google Oneindia Kannada News

volvo-buses-without-emergency-exit-doors-put-on-hold-ramalinga-reddy
ಬೆಳಗಾವಿ, ಡಿ.6- ಆಂಧ್ರದಲ್ಲಿ ಮೆಹಬೂಬ್‌ ನಗರ, ಹಾವೇರಿಯಲ್ಲಿ ವೋಲ್ವೋ ಬಸ್ ದುರಂತಗಳು ಸಂಭವಿಸಿದ ನಂತರ ವೋಲ್ವೋ ಬಸ್ಸು ಸಂಚಾರಕ್ಕೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ. ಮುಖ್ಯವಾಗಿ ತುರ್ತು ನಿರ್ಗಮನ ದ್ವಾರ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದ್ದು, ಅದಕ್ಕೆ ಕಾಲಾವಧಿ ಗಡುವು ನೀಡಲಾಗಿದೆ ಆ ಅವಧಿ ಮುಗಿಯುತ್ತಿದ್ದಂತೆ ತುರ್ತು ನಿರ್ಗಮನ ದ್ವಾರವಿಲ್ಲದ ವೋಲ್ವೋ ಬಸ್ಸುಗಳನ್ನು ಸಂಚಾರಕ್ಕೆ ಬಿಡುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಧಾನ ಪರಿಷತ್ತಿನನಲ್ಲಿ ತಿಳಿಸಿದ್ದಾರೆ.

ಚಳಿಗಾಲ ಅಧಿವೇಶನದ ಅಂತಿಮ ದಿನವಾದ ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ರಘುನಾಥ್ ಮಲ್ಕಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇತ್ತೀಚಿನ ವೋಲ್ವೋ ಬಸ್ಸುಗಳ ದುರಂತದ ನಂತರ ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಹೇಳಿದರು. ವೋಲ್ವೋ ಬಸ್ಸುಗಳಲ್ಲಿ ವಾಣಿಜ್ಯ ಸರಕು ಸಾಗಣೆ ಮಾಡಬಾರದು. ಪ್ರಯಾಣಿಕರ ಸರಕನ್ನು ಮಾತ್ರ ಇಡಬೇಕು ಎಂಬುದು ಸೇರಿದಂತೆ 10-15 ಷರತ್ತುಗಳನ್ನು ಹಾಗೂ ಮಾರ್ಗಸೂಚಿಗಳನ್ನು ನೀಡಲಾಗಿದೆ.
( ಹಾವೇರಿ ದುರಂತ: ಅಪಘಾತಕ್ಕೆ ಸಿದ್ಧವಾಗಿಯೇ ಇದ್ದೆವು )

ಒಂದು ತಿಂಗಳ ಅವಧಿಯಲ್ಲಿ ನಡೆದ ಕಾರ್ಯಾಚರಣೆ ವೇಳೆ ವೋಲ್ವೋ ಬಸ್ಸುಗಳಲ್ಲಿ ಸರಕು ಸಾಗಣೆ, ಸರಿಯಾದ ನಿರ್ವಹಣೆ ಇಲ್ಲದಿರುವುದು ಸೇರಿದಂತೆ ಮತ್ತಿತರ 5199 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಈ ಪೈಕಿ 200 ವಾಹನಗಳ ಪಾರವಾನಗಿಯನ್ನು ರದ್ದು ಮಾಡಲಾಗಿದೆ. ಅಲ್ಲದೆ ಕಂಟ್ರ್ಯಾಕ್ಟ್ ಕ್ಯಾರೇಜ್ ಪದ್ಧತಿಯನ್ನು ನಿಷೇಧಿಸಲಾಗಿದೆ ಎಂದು ಸಚಿವರು ತಿಳಿಸಿದರು.

ವಾಹನಗಳ ಫಿಟ್‌ ನೆಸ್‌ ಅನ್ನು ಕಿರಿಯ ಅಧಿಕಾರಿಗಳು ಪರಿಶೀಲಿಸುತ್ತಿದ್ದರು. ಈಗ ಪ್ರತಿ ತಿಂಗಳು ಹಿರಿಯ ಇಬ್ಬರು ಅಧಿಕಾರಿಗಳು ಪರಿಶೀಲಿಸುವ ನಿಯಮವನ್ನು ಜಾರಿ ಮಾಡಲಾಗಿದೆ. 10 ಸ್ಕ್ವಾಡ್, ತಜ್ಞರ ಸಮಿತಿಯನ್ನು ಮಾಡಲಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಮಾಹಿತಿಯನ್ನು ಕಡ್ಡಾಯ ನಿರ್ವಹಣೆ ಮಾಡಬೇಕು, ಸಾಮರ್ಥ್ಯ ಮೀರಿ ಲಗೇಜ್ ಹಾಕಬಾರದು, ನಿಗದಿತ ವೇಗದಲ್ಲೇ ಬಸ್ ಚಾಲನೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ವೋಲ್ವೋ ಬಸ್ಸಿನ ವಿನ್ಯಾಸ ಬದಲಿಸುವಂತೆ ದೆಹಲಿಯ ನ್ಯಾಷನಲ್ ಆಟೋಮೋಟಿವ್ ಟೆಸ್ಟಿಂಗ್ ಅಂಡ್ ರಿಸರ್ಚ್ ಡೆವಲಪ್‌ ಮೆಂಟ್ ಇನ್‌ ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್‌ ಗೆ ಮನವಿ ಮಾಡಿದ್ದೇವೆ. ಅವರು ಸ್ಪಂದಿಸಿದ್ದಾರೆ. ಕರ್ನಾಟಕಕ್ಕೆ ಬಂದು ಪರಿಶೀಲಿಸಿದ್ದಾರೆ. ಬಸ್ ದುರಂತಕ್ಕೆ ಅತಿ ವೇಗ ಹಾಗೂ ಸಾಮರ್ಥ್ಯ ಮೀರಿ ತುಂಬಿದ್ದ ಲಗೇಜ್ ಕಾರಣ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ( ಜಬ್ಬಾರ್ ಬಸ್ ಅಪಘಾತಕ್ಕೆ ಕಾರಣ ತಿಳಿಯಿತು )

ಕೆಎಸ್‌ಆರ್‌ ಟಿಸಿ ಬಸ್ಸುಗಳಿಗೆ ಹಾಕುವ ಸಾಧನಗಳು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ದೂರುಗಳು ಬಂದಿವೆ. ಹಾಗಾಗಿ ಟೆಂಡರ್ ಪದ್ಧತಿ ಬದಲಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ಹೇಳಿದರು.

ಇದೇ ವೇಳೆ ಸದಸ್ಯ ಅರುಣ ಶಹಾಪುರ ಅವರು ಕೇಳಿದ ಪ್ರಶ್ನೆಗೆ ರಾಜ್ಯದ ಎಲ್ಲಾ ಚೆಕ್‌ ಪೋಸ್ಟ್‌ ಗಳಲ್ಲೂ ಸಿಸಿಟಿವಿ ಅಳವಡಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಪ್ರಮುಖ ಚೆಕ್‌ ಪೋಸ್ಟ್‌ ಗಳಾದ ಅತ್ತಿಬೆಲೆ, ನಂಗಲಿ, ಬಾಗೇಪಲ್ಲಿ, ಗೌರಿಬಿದನೂರು, ರಾಯಲ್ಪಾಡು, ಗುಂಡ್ಲುಪೇಟೆ, ಚಿಕ್ಕಹೊಳೆ ಡ್ಯಾಮ್, ಅಳಂದ, ಹಜರಿ, ಜಳಕಿ, ನಿಪ್ಪಾಣಿ, ರಾಮನಗರ, ಕಾಗವಾಡ, ಹುಮನಾಬಾದ್ ಚೆಕ್‌ ಪೋಸ್ಟ್‌ ಗಳಲ್ಲಿ ಸಿಸಿಟಿವಿ ಅಳವಡಿಸಲು ಸರ್ಕಾರ ಮುಂದಾಗಿದೆ ಎಂದರು.

ಚೆಕ್‌ ಪೋಸ್ಟ್‌ ಗಳಲ್ಲಿ ಅವ್ಯವಹಾರ ನಡೆಯುತ್ತಿರುವ ದೂರುಗಳು ಬಂದಿವೆ. ಆದರೆ, ಅವ್ಯವಹಾರ ತಡೆಗೆ ಸಿಬ್ಬಂದಿ ಕೊರತೆ ಇದೆ. ಎಲ್ಲಾ ಚೆಕ್‌ ಪೋಸ್ಟ್‌ ಗಳಿಗೂ ಸೇರಿ 580 ಮಂದಿ ಸಿಬ್ಬಂದಿ ಬೇಕು. ಆದರೆ, ಈಗಿರುವುದು 285 ಮಂದಿ ಮಾತ್ರ. ಹಾಗಾಗಿ ದೂರು ಬಂದ ಕಡೆ ಗೃಹ ಇಲಾಖೆ ಸಿಬ್ಬಂದಿಯನ್ನು ಬಳಸಿ ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

English summary
Transport Minister B Ramalinga Reddy has informed the house at Belgaum Assembly session that the Volvo buses without emergency exit doors will be put on hold. It is made mandatory after the recent Volvo buse accidents in Andhra and Haveri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X