ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ಸಚಿವರಿಗೆ ಬೆಳಗಾವಿ ನಾಗರಿಕನ ಮನವಿ

By ಮಹಾಂತೇಶ ವಕ್ಕುಂದ
|
Google Oneindia Kannada News

ರೈಲ್ವೆ ಸಚಿವರಿಗೊಂದು ಮನವಿ,

ಭವ್ಯ ಭಾರತದ 16ನೇ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ದೇಶದ ಜನರಲ್ಲೆಲ್ಲ ಅನೇಕಾನೇಕ ಆಸೆ ಆಕಾಂಕ್ಷೆಗಳನ್ನೇ ಮೂಡಿಸಿದ್ದಾರೆ. ಇಲ್ಲಿಯವರೆಗೆ ಭ್ರಷ್ಟಾಚಾರ, ಅನಾವಶ್ಯಕ ಹಾಗು ಅಸಮಂಜಸ ಬೆಲೆ ಏರಿಕೆ, ನಿರಾಸೆ ಹಾಗೂ ಅಭಿವೃದ್ಧಿ ಹೀನ ಪರಿಸ್ಥಿತಿಗಳ ಕಂಡು ರೋಸಿ ಹೋಗಿದ್ದ ಜನಕ್ಕೆ ಹೊಸ ಅಪೇಕ್ಷೆ, ನೀರಿಕ್ಷೆಗಳು ಮೂಡಿರುವುದಂತೂ ನಿಜ.

ಮೊದಿಯವರೊಬ್ಬರೇ ಅಲ್ಲದೇ ಅವರ ಸಂಪುಟ ಸೇರಿರುವ ನಮ್ಮವರೇ ಆದ 4 ಜನ ಸಚಿವರ ಮೇಲೂ ನಮ್ಮ ನಿರೀಕ್ಷೆಗಳು ಹೆಚ್ಚಿವೆ. ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗುವ ಕನ್ನಡಿಗರು ಮೊದಲಿನಿಂದಲೂ ಕಮ್ಮಿನೇ ಅಲ್ಲದೇ ಕರ್ನಾಟಕಕ್ಕೆ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಯಾವುದೇ ಪ್ರಮುಖ ರೈಲ್ವೆ ಅಭಿವೃದ್ಧಿಗಳಾಗಿರುವುದು ಅತಿ ವಿರಳ. ಹೀಗಿರುವಾಗ ಮಾನ್ಯ ಹಸನ್ಮುಖಿ ಸದಾನಂದ ಗೌಡ್ರು ನಮ್ಮ ಕೇಂದ್ರ ರೈಲ್ವೆ ಸಚಿವರಾಗಿ, ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟ ಹಾಗೂ ಸರ್ಕಾರದ ಪರವಾಗಿ ಮಂಡಿಸಲಿರುವ ಚೊಚ್ಚಲ ರೈಲ್ವೇ ಬಜೆಟ್ ಮೇಲೆ ಎಲ್ಲರ ಕಣ್ಣಿದೆ, ಏನೆಲ್ಲವನ್ನು ಈ ಬಜೆಟ್ ಹೊತ್ತು ತರಬಹುದೆಂಬ ನಿರೀಕ್ಷೆಗಳು ನಮ್ಮಲ್ಲೆಲ್ಲ ಕುತೂಹಲವನ್ನೂ ಮೂಡಿಸಿದೆ.

ಈ ನಿಟ್ಟಿನಲ್ಲಿ ಮಾನ್ಯ ರೈಲ್ವೆ ಸಚಿವರಿಗೆ ಬೆಳಗಾವಿಯ ರೈಲ್ವೇ, ಅಲ್ಲಿರುವ ವ್ಯವಸ್ಥೆ, ಸಮಸ್ಯೆ ಹಾಗೂ ಅವಶ್ಯಕತೆಗಳ ಒಂದು ವಿಶ್ಲೇಷಣೆ ನೀಡುತ್ತಿದ್ದೇನೆ. ಪ್ರಮುಖವಾಗಿ ಹೇಳಬೇಕೆಂದರೆ ಸದಾನಂದ ಗೌಡ್ರು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಅಂದಿನ ರೈಲ್ವೆ ಇಲಾಖೆಯ ಹೈ-ಸ್ಪೀಡ್ ಟ್ರೈನ್ ಪ್ರಸ್ತಾವಕ್ಕೆ ಕರ್ನಾಟಕದಲ್ಲಿ ಬೆಂಗಳೂರಿನಿಂದ ಬೆಳಗಾವಿಯ ಮಾರ್ಗವನ್ನು ಸೂಚಿಸಿದ್ದರು. ರಾಷ್ಟ್ರೀಯ ಹೆದ್ಧಾರಿಗೆ ಸಮಾನಾಂತರವಾಗಿ ಓಡಬಹುದಾದ ಈ ಮಾರ್ಗ ಕರ್ನಾಟಕದ ಪ್ರಮುಖ ನಗರಗಳು ಹಾಗೂ ದಕ್ಷಿಣದಿಂದ ಉತ್ತರಕ್ಕೆ ಕರ್ನಾಟಕದುದ್ದ ಸಂಚರಿಸಬಲ್ಲ ಈ ರೈಲು ಉದ್ಯಮಗಳ ಬೆಳವಣಿಗೆಗೆ ಸಹಕಾರಿಯಾಗಬಲ್ಲುದು ಎಂಬುದನ್ನ ಪರಿಗಣಿಸಿ ಅವರು ಈ ಸೂಚನೆ ನೀಡಿದ್ದು ಸಮಂಜಸವಾಗಿತ್ತು.

ಅದೇ ಸಮಯದಲ್ಲಿ ಸದಾನಂದ ಗೌಡ್ರು ಧಾರವಾಡ-ಬೆಳಗಾವಿ ಮಾರ್ಗ, ತುಮಕೂರು-ಚಿತ್ರದುರ್ಗ ಹೊಸ ಮಾರ್ಗಗಳ ಅಭಿವೃದ್ಧಿಗೂ ಕೇಳಿಕೊಂಡಿದ್ದರು. ರಾಜ್ಯದ ಉದ್ದಗಲಕ್ಕೂ ಅವಶ್ಯಕತೆ ಇರುವಲ್ಲಿ ರೈಲುಗಳಿಗೆ ಇಟ್ಟಿದ್ದ ಬೇಡಿಕೆಗಳಲ್ಲಿ ಕೆಲವೇ ಕೆಲವು ಮಂಜೂರಾದರೆ, ಕೆಲವು ಕೇವಲ ಸರ್ವೇ ಎಂಬ ಕಾಲಹರಣದಲ್ಲೇ ಮಣ್ಣಾದವು, ಇನ್ನು ಕೆಲವು ಆಗಿನ ರೈಲ್ವೆ ಮಂತ್ರಿಗಳ ಕಿವಿ ಮೇಲೂ ಬಿಳಲಿಲ್ಲವೇನೋ. ಆದರೆ ಇಂದು ಆ ಬೇಡಿಕೆಗಳನ್ನು ಮುಂದಿಟ್ಟ ನಮ್ಮ ಗೌಡರ ಕೈಯಲ್ಲೇ ಅಧಿಕಾರವಿದೆ. ಅವರು ಪ್ರಸ್ತಾಪಿಸಿದ್ದ ಆ ಮಾರ್ಗಗಳು, ಆ ರೈಲುಗಳು ಇಂದು ಅವರು ತೋರಿಸುವ ಹಸಿರು ಭಾವುಟಕ್ಕೆ ಓಡುವ ಕಾಲವು ಬಂದಿದೆ. ಅವರು ಒಳ್ಳೆಯ ಬಜೆಟ್ ನೀಡಲಿ, ಭಾರತೀಯ ರೈಲು ಅಧುನಿಕರನಗೊಳ್ಳಲಿ ಎನ್ನುವ ಹಾರೈಕೆ ನಮ್ಮದು.

ಈ ಎಲ್ಲ ಸಂಧರ್ಭಗಳನ್ನು ಪರಿಗಣಿಸಿ ಬೆಳಗಾವಿಯ ನಾಗರಿಕರ ಪರವಾಗಿ ನಾನು ಕೇಳಿಕೊಳ್ಳುವುದೇನೆಂದರೆ, ರಾಜ್ಯದ ಎರಡನೇ ರಾಜಧಾನಿಯ ಪಟ್ಟಕ್ಕೇರಿರುವ ನಮ್ಮೂರಿಗೆ ಸರಿಯಾದ ರೈಲು ಹಾಗು ರೈಲು ಸೌಲಭ್ಯ ಕಲ್ಪಿಸಿಕೊಡಿ.

ಸುಮಾರು ವರ್ಷಗಳಿಂದ ಬರಿ ಸರ್ವೆಯಲ್ಲೇ ಕಾಲಹರಣ ಮಾಡುತ್ತಿರುವ ಧಾರವಾಡ-ಕಿತ್ತೂರು-ಬೆಳಗಾವಿ ಮಾರ್ಗ ಅತೀ ಪ್ರಮುಖ ಅವಶ್ಯಕತೆ. ರಾತ್ರಿ 9 ಘಂಟೆಗೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 5.30ಕ್ಕೆ ಹುಬ್ಬಳ್ಳಿ ತಲುಪುವ ರಾಣಿ ಚನ್ನಮ್ಮ ರೈಲು ಹುಬ್ಬಳ್ಳಿಯಿಂದ ಬೆಳಗಾವಿ ತಲುಪುವಷ್ಟರಲ್ಲಿ ಬೆಳಿಗ್ಗೆ 9.30 ಗಂಟೆಗಳಾಗುತ್ತದೆ. ಹೆದ್ದಾರಿಯಲ್ಲಿ 1-1.30 ಘಂಟೆಯಲ್ಲಿ ಕ್ರಮಿಸಬಹುದಾದ ದಾರಿಯನ್ನು ರೈಲು ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಸುತ್ತಿ ಬರಲು 4 ಘಂಟೆಗಳ ಕಾಲಹರಣವಾಗುತ್ತೆ. ಆದರೆ ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ಮಾರ್ಗ ರೂಪಗೊಂಡರೆ ಈ ದೂರ ಕ್ರಮಿಸಲು ರೈಲಿಗೆ 1.30 ಘಂಟೆಯಷ್ಟೇ ಸಾಕಾಗಬಹುದು.

ಬೆಳಗಾವಿ, ಧಾರವಾಡ ಹಾಗು ಹುಬ್ಬಳ್ಳಿ ಉತ್ತರ ಕರ್ನಾಟಕದ ಜನನಿಬಿಡ ಹಾಗು ಕ್ರಿಯಾಶೀಲ ನಗರಗಳು. ದಿನ ನಿತ್ಯ ಬೆಳಗಾವಿ-ಧಾರವಾಡ/ಹುಬ್ಬಳ್ಳಿ ನಡುವೆ ಸಾವಿರಾರು ಜನ ಸಂಚರಿಸುತ್ತಾರೆ. ಈಗಿನ ಪರಿಸ್ಥಿತಿಯಲ್ಲಿ ಅವರಿಗೆಲ್ಲ ರಸ್ತೆ ಸಾರಿಗೆಯೇ ಆಧಾರ. ಈ ಹೊಸ ಮಾರ್ಗ ರೂಪಗೊಂಡರೆ ದಿನ ನಿತ್ಯ ಈ ತ್ರಿವಳಿ ನಗರಗಳ ನಡುವೆ ಓಡಾಡುವ ಜನರಿಗೆ ಅನುಕೂಲ ಮಾಡಿಕೊಡುವುದಲ್ಲದೆ, ಹುಬ್ಬಳ್ಳಿ ಬೆಳಗಾವಿ ನಡುವಿನ ಅಂತರವನ್ನು ಸುಮಾರು 2.30 ಘಂಟೆ ಕಡಿಮೆ ಮಾಡಿದಂತಾಗುವುದು. ಈ ಹೊಸ ಮಾರ್ಗ ಜನಶತಾಬ್ದಿ ಹಾಗು ಇಂಟರ್ಸಿಟಿ ರೈಲುಗಳನ್ನು ಬೆಂಗಳೂರಿನಿಂದ ಬೆಳಗಾವಿಯವರೆಗೆ (ಸದ್ಯ ಈ ಎರಡು ರೈಲು ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುತ್ತವೆ) ವಿಸ್ತರಿಸಲು ಸಹಕರಿಸಬಲ್ಲದು. ಹುಬ್ಬಳ್ಳಿ-ಬೆಳಗಾವಿ ನಡುವೆ ಪುಶ್-ಪುಲ್ ರೈಲು ಸಂಚರಿಸಿದರೆ ಈ ಭಾಗದ ಜನರಿಗೆ ಅನುಕೂಲವಾಗುವುದಲ್ಲದೆ ಜನಸಾಮಾನ್ಯರ ಮೇಲೆ ನಡೆಯುತ್ತಿರುವ ಖಾಸಗಿ ರಸ್ತೆ ಸಾರಿಗೆಯವರ ಹಣ ದರೋಡೆಯನ್ನು ತಡೆಯಬಹುದು.

ಇನ್ನು ತುಮಕೂರು-ಚಿತ್ರದುರ್ಗ ಮಾರ್ಗಕ್ಕೆ ಒತ್ತು ಕೊಟ್ಟು ಆ ಮಾರ್ಗದ ಅಭಿವೃದ್ಧಿಯಾದರೆ ಒಟ್ಟಾರೆಯಾಗಿ ಬೆಂಗಳೂರು-ಬೆಳಗಾವಿಯ ನಡುವಿನ ಅಂತರವನ್ನು ಸುಮಾರು 3-4 ಘಂಟೆಗಳ ಕಾಲ ಕಡಿತಗೊಳಿಸಬಹುದು. ಹೀಗಾದರೆ ಬೆಂಗಳೂರಿನಿಂದ-ಹುಬ್ಬಳ್ಳಿಯವರೆಗೆ ಹಾಗೂ ದಕ್ಷಿಣ ಭಾರತದ ಇನ್ಯಾವುದೇ ಭಾಗದಿಂದ ಹುಬ್ಬಳ್ಳಿ/ಧಾರವಾಡಕ್ಕೆ ಆಗಮಿಸುವ ಯಾವುದೇ ರೈಲುಗಳು ಯಾವುದೇ ಹೆಚ್ಚಿನ ಸಮಯ ವ್ಯರ್ಥವಿಲ್ಲದೆ ಬೆಳಗಾವಿಯವರೆಗೂ ಸಂಚರಿಸಬಹುದು. ಉತ್ತರದಿಂದ ಬರುವ ರೈಲುಗಳು ಈ ಮಾರ್ಗವಾಗಿ ಸಂಚರಿಸಿದ್ದಲ್ಲಿ ಹುಬ್ಬಳ್ಳಿ ಅಥವಾ ದಕ್ಷಿಣದ ಇನ್ನಾವುದೇ ಭಾಗಕ್ಕೆ ತೆರಳಲು ಬೇಕಾಗುವ ಸಮಯದಲ್ಲಿ ಗಣನೀಯ ಇಳಿಕೆಯಾಗುವುದಂತೂ ನಿಶ್ಚಿತ.

ಈ ಹೊಸ ರೈಲು ಮಾರ್ಗ ವಿದ್ಯಾರ್ಥಿಗಳು ಹಾಗು ಬಡವರ ಪಾಲಿನ ಆಶಾಕಿರಣವಾಗಬಲ್ಲುದು. ಹೊಸ ಮಾರ್ಗದ ಅಭಿವೃದ್ಧಿಯೊಂದಿಗೆ ಬೆಳಗಾವಿಯ ರೈಲು ನಿಲ್ದಾಣವನ್ನು ಉನ್ನತ ದರ್ಜೆಗೇರಿಸುವುದು ನಮ್ಮ ಕೋರಿಕೆ. ಭಾರತಿಯ ಸೇನೆ ಹಾಗೂ ವಾಯುದಳದ ಪ್ರಮುಖ ಘಟಕಗಳನ್ನು ಹೊಂದಿರುವ ಬೆಳಗಾವಿಗೆ ಈ ಎಲ್ಲ ಸೌಲಭ್ಯಗಳ ಅತೀವ ಅವಶ್ಯಕತೆ ಇದೆ. ಇಲ್ಲಿರುವ ಉದ್ಯಮಿಗಳು, ಉದ್ಯಮಗಳು, ಜನಸಾಮಾನ್ಯರು ಹೊಸ ರೈಲು ಮಾರ್ಗ ಹಾಗೂ ಹೊಸ ಸವಲತ್ತುಗಳ ಅಪಾರ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ.

ಈ ಕಾರಣದಿಂದ ಮಾನ್ಯ ರೈಲ್ವೆ ಮಂತ್ರಿಗಳು ಈ ಭಾಗದ ರೈಲ್ವೆ ಅಭಿವೃದ್ಧಿಗೆ ಸಹಕರಿಸಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಾಂದಿಯಾಗಬೇಕೆಂಬ ಈ ಭಾಗದ ಜನರ ಕೋರಿಕೆಗೆ ಸ್ಪಂದಿಸಿದರೆ ಅದೇ ನಮಗೆ ಹರ್ಷ.

ಇಂತಿ,
ಮಹಾಂತೇಶ ವಕ್ಕುಂದ
(ಬೆಳಗಾವಿ ನಾಗರಿಕರ ಪರವಾಗಿ)

English summary
An open letter To Union Railway Minister D.V. Sadananda Gowda with proposals for Belgaum. Mahantesh Vakkunda has urged Sadananda Gowda to provide extended rail facility to fecilitate the passengers in that region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X