ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ವಿವಾದದ ಬೆನ್ನುಹತ್ತಿದ ಬೇತಾಳ!

By ಮಹೇಶ ಗಜಬರ
|
Google Oneindia Kannada News

ಯಾವುದೇ ರಾಷ್ಟ್ರಗಳ ನಡುವಿನ ಅಥವಾ ರಾಜ್ಯಗಳ ನಡುವಿನ ಗಡಿ ತಂಟೆಗಳು ಎಂದೆಂದಿಗೂ ಮುಗಿಯದ ಅಧ್ಯಾಯಗಳು. ಅದರಲ್ಲೂ ಹಲವು ದಶಕಗಳಿಂದ ನಡೆಯುತ್ತಿರುವ ನಮ್ಮ ಕರುನಾಡು ಮತ್ತು ಪಕ್ಕದ ಮಹಾರಾಷ್ಟ್ರದ ನಡುವಿನ ಗಡಿ ವಿವಾದವಂತೂ ಮಹಾನ್ ಜಿಗುಪ್ಸೆಯ ವಿಷಯ.

ಆ ವಿಷಯದ ಬಗ್ಗೆ ಈಗಾಗಲೇ ತುಂಬಾ ಜನ ಸಾಕಷ್ಟು ಬಾರಿ ಬರೆದಿದ್ದಾರೆ. ನಾನೂ ಕೆಲವು ವರ್ಷಗಳ ಹಿಂದೆ ಈ ಗಡಿ ವಿವಾದದ ಸತ್ಯಾಂಶಗಳೇನು ಎಂದು ತಿಳಿಸುವ ಪ್ರಯತ್ನ ಇದೇ ವೇದಿಕೆಯಲ್ಲಿ ಮಾಡಿದ್ದೆ. ಈಗ ಮತ್ತೆ ಅದರ ಬಗ್ಗೆನೆ ಬರೆದು ನಾನು ಮತ್ತೆ ನಿಮಗೆ ಬೋರು ಹೊಡೆಸುವುದಿಲ್ಲ.

ಆದರೆ ಮೊನ್ನೆ ಮೊನ್ನೆ ನಡೆದ ನಾಮಫಲಕ ವಿವಾದ ಮತ್ತು ಅದರ ನಂತರ ನಡೆದ ಗಲಾಟೆಗಳ ಹಿನ್ನೆಲೆಯಲ್ಲಿ ಒಂದಿಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ.

Karnataka-Maharashtra border dispute revisited

1) ಕನ್ನಡಿಗರಿಗೂ ಇದೆ ಆಕ್ರೋಶ : ಗಡಿ ವಿವಾದವೆಂದರೆ ಅದು ಬರೀ ಬೆಳಗಾವಿ ಮತ್ತು ಯಳ್ಳೂರು ಅಲ್ಲ. ಅದು 814 + 516 = 1330 ಹಳ್ಳಿ ಮತ್ತು ನಗರ ಪ್ರದೇಶಗಳನ್ನು ಒಳಗೊಂಡಿದೆ. ಗಡಿ ಅಭಿವೃದ್ಧಿ ಅಂದರೆ ಅದು ಬರೀ ಬೆಳಗಾವಿಯಲ್ಲಿ ಜುಟ್ಟಿಗೆ ಮಲ್ಲಿಗೆ ತರಹ ಸುವರ್ಣ ಸೌಧ ಕಟ್ಟಿ ಊರಿಗೆಲ್ಲ ಡಂಗುರ ಸಾರಿದ ಹಾಗೇ ಇದೆ. ಇದೇ ಬೆಳಗಾವಿಯ ಬಸ್ ನಿಲ್ದಾಣದ ದರಿದ್ರ ಸ್ಥಿತಿ ಹೇಗಿದೆ ಎಂದು ನೀವು ಇದೇ ಜಾಲತಾಣದಲ್ಲಿ ನೋಡಿರುತ್ತಿರಿ.

ಉಳಿದ ಗಡಿ ಪ್ರದೇಶಗಳಲ್ಲಿ ಕೂಡ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಅತೀ ಹೆಚ್ಚು ಮಳೆ ಬೀಳುವ ಇಲ್ಲಿ ರಸ್ತೆಗಳ ಪಾಡಂತೂ ದೇವರಿಗೆ ಪ್ರೀತಿ. ಈ ಮರುಕ ಸ್ಥಿತಿಯ ಬಗ್ಗೆ ಕರ್ನಾಟಕ ಸರ್ಕಾರದ ವಿರುದ್ದ ಬರೀ ಮರಾಠಿಗರಿಗೆ ಅಷ್ಟೆ ಅಲ್ಲ ಕನ್ನಡಿಗರಿಗೂ ಅಷ್ಟೆ ಆಕ್ರೋಶ ಇದೆ.

2) ತರುಣ ಭಾರತವನ್ನು ಬಿಟ್ಟಿದ್ದೇಕೆ? : ಸರಕಾರ ಎಮ್.ಇ.ಎಸ್ ಅನ್ನು ನಿಷೇಧಿಸಲಿ ಮತ್ತು ಹಾಗೇಯೆ ಕಾನಡಿ ಗುಂಡಾಗಿರಿ ಎಂದೂ ಬರೆಯುತ್ತ ಕರ್ನಾಟಕದ ವಿರುದ್ಧ ಸದಾ ಮುಗ್ಧ ಮರಾಠಿಗರಿಗೆ ತಪ್ಪು ಮಾಹಿತಿ ನೀಡುವ ತರುಣ ಭಾರತ ಎಂಬ ದಿನಪತ್ರಿಕೆ ಮೇಲೆ ಕೂಡ ಕ್ರಮ ಕೈಗೊಳ್ಳಲಿ.

3) ಮಗುವಿನ ಮೇಲೆ ಬಾಸುಂಡೆ! : ಮರಾಠಿಗರ ಮೇಲೆ ಪೊಲೀಸ್ ಮತ್ತು ಇತರೆ ಸರಕಾರಿ ದೌರ್ಜನ್ಯ ನಿಲ್ಲಲಿ. ಮೊನ್ನೆ ಮೊನ್ನೆ ನಡೆದ ನಾಮಫಲಕ ತೆರವು ವಿವಾದದಲ್ಲಿ ಮೊದಲು ಯಳ್ಳೂರಿನ ಜನತೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದು ನಿಜವಾದರೂ ಕೂಡ ನಂತರ ನಮ್ಮ ಪೊಲೀಸರು ಕೂಡ ಕಾನೂನು ಪಾಲನೆ ಹೆಸರಲ್ಲಿ ಸಂಬಂಧವೆ ಇಲ್ಲದ ಅನೇಕರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ನಡೆಸಿದ್ದಾರೆ. ಅದರಲ್ಲಿ ಒಂದುವರೆ ವರ್ಷದ ಮಗುವಿನ ಮೇಲೂ ಬಾಸುಂಡೆ ಬರುವ ಹಾಗೇ ಹೊಡೆದಿದ್ದಾರೆ.

ಈ ತರಹದ ಕಾನೂನು ಕ್ರಮಗಳನ್ನೂ ಪುಂಡ ಪೋಕರಿಗಳ ಮೇಲೆ ತೆಗೆದುಕೊಳ್ಳಬೇಕೇ ಹೊರತು ಮುಗ್ಧರ ಮೇಲೆ ಅಲ್ಲ. ಈ ದೃಶ್ಯಗಳನ್ನು ಪದೇ ಪದೇ ಮರಾಠಿ ಮಾಧ್ಯಮಗಳಲ್ಲಿ ತೋರಿಸುತಿರುವುದರಿಂದ ಸಾಮಾನ್ಯ ಜನ ಮತ್ತು ಮಹಾರಾಷ್ಟ್ರದ ಜನ ಕರ್ನಾಟಕ ಸರಕಾರವನ್ನು ವಿಪರೀತ ಶಪಿಸುತ್ತಿದ್ದಾರೆ.

ನಾನೂ ತುಂಬಾ ಜನರ ಬಾಯಲ್ಲಿ ಕೇಳಿರುವ ಮಾತೆಂದರೆ ಪೋಲಿಸರು ಮತ್ತು ಸರಕಾರಿ ಕಚೇರಿಯವರು ಕನ್ನಡ ಬಾರದೇ ಇರುವ ಬರೀ ಮರಾಠಿ ಮಾತ್ರ ಬರುವವರಿಗೆ ವಿನಾಕಾರಣ ವಿಪರೀತ ಸತಾಯಿಸುತ್ತಾರಂತೆ. ಇದರಿಂದಾಗಿಯೆ ಕೆಲವಷ್ಟು ಜನ ಕರುನಾಡನ್ನು ಶಪಿಸುತ್ತಾರೆ ಮತ್ತು ತಮ್ಮದಲ್ಲದ ತಪ್ಪಿಗೆ ಕರುನಾಡಿನಲ್ಲಿ ತಮ್ಮ ಊರು ಉಳಿದುಕೊಂಡಿದಕ್ಕೆ ಹಳಹಳಿಸುತ್ತಾರೆ.

ಬಹುಶಃ ಮಹಾರಾಷ್ಟ್ರದಲ್ಲಿ ಇರುವ ಕನ್ನಡ ಭಾಷೆಯ ಜನರ ಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಕಿಲ್ಲ. ಅದಕ್ಕಾಗಿಯೆ ನಾನು ಗಡಿ ವಿವಾದಿತ ಸಂಬಂಧಪಟ್ಟ ಪ್ರದೇಶಕ್ಕೆ ಮಾತ್ರ ಸೀಮಿತವಾಗಿ ದ್ವೀಭಾಷಾ ಅಥವಾ ತ್ರೀಭಾಷಾ ಸೂತ್ರವನ್ನು ಆಡಳಿತದಲ್ಲಿ ಅಳವಡಿಸುವುದು ಸೂಕ್ತ ಎಂದು ಭಾವಿಸುತ್ತೇನೆ.

4) ಕನ್ನಡದ ವಿರುದ್ಧ ಥೀಮ್ ಸಾಂಗ್ : ಎರಡು ಕಡೆಯ ಮಾಧ್ಯಮಗಳು ಚ್ಯೂಜಿ ಆಗಿ ಸೆಲೆಕ್ಟಿವ್ಲಿ ತಮಗೆ ಬೇಕಾದನ್ನು ಮಾತ್ರ ತೋರಿಸುತ್ತಿವೆ. ಇದೊಂದು ರೀತಿಯ ದೊಡ್ಡ ಸಮಸ್ಯೆ. ನಿಜವಾಗಿಯೂ ಈ ಗಡಿ ಸಮಸ್ಯೆ ಏನೂ ಎತ್ತ ಅಂತ ತೋರಿಸದೆ ದೃಶ್ಯ ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೆ ನಡೆಯುತ್ತಿವೆ ಮತ್ತು ಹಿಂಸೆಯನ್ನು ಮಾತ್ರ ವೈಭವೀಕರಿಸಿ ತೋರಿಸುತ್ತಿವೆ.

ಉತ್ತಮ ಸಮಾಜಕ್ಕಾಗಿ ತೆಲಗು ಚಿತ್ರರಂಗದ ಪರವಾಗಿ ಕೆಲಸ ಮಾಡುವ ವಾಹಿನಿ ಕನ್ನಡ ಮತ್ತು ಮರಾಠಿ ಎರಡರಲ್ಲೂ ತನ್ನ ವಾಹಿನಿಯನ್ನು ಹೊಂದಿದೆ. ಕನ್ನಡದ ವಾಹಿನಿ ಯಳ್ಳೂರಿನ ಕೆಲವು ಮೂರ್ಖರು ಪೊಲೀಸರು ಮತ್ತು ಮಾಧ್ಯಮದವರ ಹಲ್ಲೆ ಬಗ್ಗೆ ತೋರಿಸಿದರೆ ಅವರದೇ ಮರಾಠಿ ವಾಹಿನಿ ಕೇವಲ ಪೊಲೀಸರು ಮಾಡಿದ ಲಾಠಿ ಪ್ರಹಾರವನ್ನು ಮತ್ತೆ ಮತ್ತೆ ವೈಭವಿಕರಿಸಿ ಇನ್ನೊಂದು ಮಗ್ಗುಲನ್ನು ಮುಚ್ಚಿಡುತಿದೆ.

ಎಷ್ಟೋ ಮಹಾರಾಷ್ಟ್ರದ ಜನರಿಗೆ ಯಳ್ಳೂರಿನ ಪುಂಡರು ಮಾಡಿದ ಕೃತ್ಯವೆ ಗೊತ್ತಿಲ್ಲ. ಹಾಗೆಯೆ, ಎಷ್ಟೋ ಕನ್ನಡಿಗರಿಗೆ ಪೊಲೀಸರು ಎರಡು ವರ್ಷದ ಮಗುವಿನ ಮೇಲೆ ಬಾಸುಂಡೆ ಬರುವ ಹಾಗೆ ಹೊಡೆದಿದ್ದು ಗೊತ್ತಿಲ್ಲ. ಒಂದು ಮರಾಠಿ ವಾಹಿನಿ ಅಂತೂ ಗಡಿನಾಡಿನ ಜನ ಎದ್ದೇಳಿ ಕನ್ನಡಿಗರ ವಿರುದ್ಧ ಹೋರಾಡಿ ಅನ್ನುವ ಥೀಮ್ ಸಾಂಗ್ ಬಿಡುಗಡೆ ಮಾಡಿದೆ. ಇಂತಹ ಅರ್ಧಬಂರ್ಧ ಮಾಹಿತಿಯ ಸುದ್ದಿಗಳನ್ನು ನೋಡಿ ಎರಡು ಕಡೆಯ ಸೋಷಿಯಲ್ ನೆಟ್ ವೀರರು ಒಬ್ಬರ ವಿರುದ್ದ ಇನ್ನೊಬ್ಬರು ಮಹಾನ್ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇದು ತುಂಬಾ ಅಪಾಯಕಾರಿ ಮತ್ತು ಒಂದು ಭಾಷೆಯ ಜನ ಇನ್ನೊಂದು ಭಾಷೆಯನ್ನು ದ್ವೇಷಿಸುವ ಮಟ್ಟಕ್ಕೆ ಹೋಗಿದೆ.

5) ಕರವೇ, ಪುಂಡರನ್ನು ದೂರವಿಡಿ : ಕರವೇ ಇಲ್ಲಿನ ಸ್ಥಿತಿಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳದಿರಲಿ. ಕೇವಲ ಸೋಷಿಯಲ್ ನೆಟ್ನಿಂದ ಚಳವಳಿ ಆಗೋದಿಲ್ಲ ಅದಕ್ಕೆ ಸಂಘಟನೆ ಬೇಕು ಅನ್ನೋದು ನಿಜವಾದರೂ ಉತ್ಕಟ ಕನ್ನಡ ಪ್ರೇಮದ ಹೆಸರಿನಲ್ಲಿ ಬಸ್ಸುಗಳಿಗೆ ಕಲ್ಲು ಹೊಡೆದು, ಬ್ಯಾಂಕುಗಳ ಮೇಲೆ ದಾಳಿ ಮಾಡಿ ಈ ಗಡಿ ಸಮಸ್ಯೆಗೆ ಸಂಬಂಧವೇ ಇಲ್ಲದವರ ಹಲ್ಲೆ ಮಾಡಿ ಆ ಕಡೆಯವರಿಗೆ ಮತ್ತಷ್ಟು ನಮ್ಮವರ ಮೇಲೆ ಹಲ್ಲೆ ಮಾಡಲು ಪ್ರೋತ್ಸಾಹಿಸದಿರಲಿ.

ಕರವೇ ಒಳ್ಳೆಯ ಸಂಘಟನೆ ಆಗಬೇಕಾದರೆ ಇಂತಹ ಪುಂಡ ಪೋಕರಿಗಳನ್ನು ದೂರವಿಟ್ಟು, ಶಾಂತಿಯುತವಾಗಿ ಹೋರಾಡಲಿ. ಅವರು ಕಲ್ಲು ಹೊಡೆಯುತ್ತಾರೆ ಅಂತ ನಿಮ್ಮವರು ಹಾಗೆ ಮಾಡಿದ್ರೆ ಹಿಂಸೆ ಮತ್ತಷ್ಟು ಹೆಚ್ಚಾಗುತ್ತೆ ಹೊರತು ಕಮ್ಮಿ, ಆಗೋದಿಲ್ಲ. ಮಾಧ್ಯಮಗಳಲ್ಲಿ ಕವರೇಜ ಸಿಗುತ್ತೆ ಅಂತ ಬರೀ ಬೆಳಗಾವಿ ಬಗ್ಗೆ ಹೋರಾಡದೆ ಕಾಸರಗೋಡಿನತ್ತ ಕೂಡ ಸರ್ಕಾರದ ಗಮನ ಸೆಳೆಯಲಿ.

6) ಬೆಳಗಾವಿಗೂ ಐಟಿ ಬರಲಿ : ಪ್ರತ್ಯೇಕ ರಾಜ್ಯದ ಬಗ್ಗೆ ಮಾತಾಡೋ ಶೂರರು ಈಗಿರುವ ರಾಜ್ಯದ ಬಗ್ಗೆ ಮತ್ತು ಇಲ್ಲಿನ ಅಭಿವೃದ್ದಿ ಬಗ್ಗೆಯೂ ಗಮನ ಹರಿಸಲಿ. ಹವಾಮಾನ ನೈಸರ್ಗಿಕ ಸೌಂದರ್ಯದಲ್ಲಿ ಮೈಸೂರು ಮತ್ತು ಮಂಗಳೂರಿಗಿಂತ ಯಾವುದರಲ್ಲಿಯೂ ಕಮ್ಮಿ ಇಲ್ಲದ ಇಲ್ಲಿ ಒಂದೆ ಒಂದು ಐಟಿ ಉದ್ಯೋಗ ತರುವ ಯಾವುದೇ ಪ್ರಯತ್ನ ದಾಖಲೆ ಅಂತರದಿಂದ ಗೆಲ್ಲುವ ಈ ಶೂರರಿಂದ ಆಗಿಲ್ಲ.

7) ಬೊಗಳಿ ಕಣ್ಣೀರು ನಿಲ್ಲಿಸಲಿ ಎಂಇಎಸ್ : ಮಹಾರಾಷ್ಟ್ರ ಬೊಗಳೆ ಕಣ್ಣಿರು ಸುರಿಸುವ ಮೊದಲು ಸುಪ್ರೀಂ ಕೋರ್ಟಿನಲ್ಲಿ ಸರಿಯಾದ ಸಮಯಕ್ಕೆ ಹಾಜರಾಗಲೂ ತನ್ನ ವಕೀಲರಿಗೆ ಹೇಳಲಿ. ಸದಾ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಶಿವನೇನೆ ಸರಕಾರದ ಕಿವಿ ಹಿಂಡಿ ಕೋರ್ಟ್ ನ ಕೇಸು ಸರಾಗವಾಗಿ ನಡೆಯುವಂತೆ ಮಾಡಲಿ. ಯಾಕೆಂದರೆ ಆರೇಳು ಬಾರೀ ಅವರ ವಕೀಲರು ಹಿಯರಿಂಗ್ ಗೆ ಹಾಜರಾಗಿಲ್ಲ ಅಂದ ಮೇಲೆ ಗಡಿ ಕೇಸು ಮುಗಿಯುವುದು ಯಾವಾಗ ಮತ್ತು ಮಹಾರಾಷ್ಟ್ರಕ್ಕೆ ಅನ್ಯಾಯವಾಗಿದೆ ಅಂತ ಸುರಿಸುವ ಮೊಸಳೆ ಕಣ್ಣಿರು ನಿಲ್ಲುವುದು ಯಾವಾಗ?

English summary
Karnataka Maharashtra border dispute and name board controvercies re-visited. The dispute cant be solved unless MES activists stop shedding crocodile tears, argues Mahesh Gajabar in Belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X