ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈಟ್ ಫೀಲ್ಡ್ ಸೀತಾರಾಮಪಾಳ್ಯ ಕೆರೆಗೆ ಹಸಿರು ಹೊದಿಕೆ

By Rajendra
|
Google Oneindia Kannada News

ಬೆಂಗಳೂರು, ಜು.23: ವೈಟ್ ಫೀಲ್ಡ್ ನಲ್ಲಿರುವ ಸೀತಾರಾಮಪಾಳ್ಯ ಕೆರೆ ಇಂದು ಹಸಿರು ಹೊದಿಕೆಯನ್ನು ಪಡೆಯಿತು. ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾಗಿರುವ ಬ್ರಿಗೇಡ್ ಗ್ರೂಪ್ ಈ ಮಹತ್ಕಾರ್ಯಕ್ಕೆ ಮುನ್ನುಡಿ ಬರೆದಿದೆ.

ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ.ಎ. ರವೀಂದ್ರ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ್ ಆಚಾರ್ಯ, ಬ್ರಿಗೇಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜೈಶಂಕರ್, ಟ್ರಾಪಿಕಲ್ ರೀಸರ್ಚ್ ಡೆವಲಪ್ ಮೆಂಟ್ ಸೆಂಟರ್‍ ನಿರ್ದೇಶಕ ಡಾ. ಅನಿಲ್ ಅಭಿ ಅವರ ಸಮ್ಮುಖದಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ದೊರೆಯಿತು.

ಬ್ರಿಗೇಡ್ ಗ್ರೂಪ್ ಸಂಸ್ಥೆಯು ಸ್ವಯಂ ಸಂಸ್ಥೆಯಾದ ಟ್ರಾಪಿಕಲ್ ರೀಸರ್ಚ್ ಡೆವಲಪ್ ಮೆಂಟ್ ಸೆಂಟರ್ ಜತೆ ಸೇರಿ ವೈಟ್ ಫೀಲ್ಡ್ ನ ಈ ಸೀತಾರಾಮಪಾಳ್ಯ ಕೆರೆಯನ್ನು ಪುನರುಜ್ಜೀವನಗೊಳಿಸಿದ್ದು, ಇದೀಗ ಕೆರೆ ತನ್ನ ಹಿಂದಿನ ಗತವೈಭವವನ್ನು ಸಾರಿ ಹೇಳುವಂತಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಮಾಲಿನ್ಯ ನಿಯಾಂತ್ರಣ ಮಂಡಳಿ ಅಧ್ಯಕ್ಷರಾದ ಡಾ.ವಾಮನ್ ಆಚಾರ್ಯರವರು, "ಕೆರೆಗಳಿಂದ ನಗರವು ಸುಂದರವಾಗುತ್ತದೆ. ಆದರೆ ಈಗ ಕೆರೆಗಳನ್ನು ಆಕ್ರಮಿಸಲಾಗುತ್ತಿದೆ. ಇದನ್ನು ತಡೆಯಬೇಕು. ಕೆರೆಗಳಿಗೆ ಹೋಗುವ ಕಲುಷಿತ ನೀರನ್ನು ಸ್ವಚ್ಚಗೊಳಿಸಿ ಕೆರೆಗೆ ಬಿಡುವ ಕಾರ್ಯವಾಗ ಬೇಕು" ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಗೇಡ್ ಗ್ರೂಪ್ ಸಿಎಂಡಿ ಎಂ.ಆರ್.ಜೈಶಂಕರ್, "ಕೆರೆಯ ಒಂದಷ್ಟು ಭಾಗದಲ್ಲಿ ಗಿಡಗಳನ್ನು ನೆಡಲಾಗಿದ್ದು, ಹಚ್ಚ ಹಸಿರಿನ ಪುಟ್ಟ ಕಾಡು ಬೆಳೆಯುವಂತೆ ಮಾಡಲಾಗಿದೆ. ಈ ಮೂಲಕ ಕೆರೆ ಸದ್ಯದಲ್ಲೇ ಪಕ್ಷಿ ಪ್ರಿಯರ ಸ್ವರ್ಗ ಎನಿಸಲಿದೆ" ಎಂದರು. [ವೈಟ್ ಫೀಲ್ಡ್ ಸೀತಾರಾಮಪಾಳ್ಯ ಕೆರೆಗೆ ಪುನರ್ಜನ್ಮ]

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ.ಎ. ರವೀಂದನವರು, "ಬ್ರಿಗೇಡ್ ಗ್ರೂಪ್ ನವರು ಕೆರೆ ಅಭಿವೃದ್ಧಿ ಮಾಡುತ್ತಿರುವುದು ಪ್ರಶಂಸನೀಯಾವಾಗಿದೆ ಎಂದರು. ಕೆರೆಗಳ ನಗರವಾಗಿದ್ದ ಬೆಂಗಳೂರಿನಲ್ಲಿ ಇಂದು ಕೆರೆಗಳು ಮಾಯವಾಗಿವೆ. ಇರುವ ಕೆರೆಗಳನ್ನು ಅಭಿವೃದ್ಧಿ ಪಡಿಸಿ ಮತ್ತು ಅದರ ನಿರ್ವಹಣೆ ಮಾಡಿದರೆ ಬೆಂಗಳೂರನ್ನು ಪುನಃ ಹಸಿರು ಬೆಂಗಳೂರನ್ನಾಗಿ ಮಾಡಬಹುದು" ಎಂದರು.

23.37 ಎಕರೆ ವಿಸ್ತೀರ್ಣದ ಈ ಕೆರೆಯನ್ನು ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ಇಲ್ಲಿ ಅಂತರ್ಜಲ ಮಟ್ಟ ಕುಸಿದಿತ್ತು. ನೀರಿಲ್ಲದೇ ಮರಗಳು ಒಣಗಿ ಹೋಗುತ್ತಿದ್ದವು. ಕೊಳಚೆ ನೀರು ಹರಿದು ಬರುತ್ತಿತ್ತು. ಅಲ್ಲದೇ, ಹಳೆ ಕಟ್ಟಡಗಳ ಅವಶೇಷಗಳನ್ನು ರಾಶಿ ಹಾಕಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬ್ರಿಗೇಡ್ ಗ್ರೂಪ್ ಈ ಕೆರೆಯನ್ನು ಪುನರುಜ್ಜೀವನಗೊಳಿಸಿ ಮತ್ತೆ ಹಿಂದಿನ ಸ್ಥಿತಿಗೆ ತರುವ ಸಂಕಲ್ಪ ಮಾಡಿತು.

ಕೆರೆಯ ಸುತ್ತ ಹಚ್ಚಹಸಿರಿನ ಮರಗಳು ಬೆಳೆಯಲಿದ್ದು, ಇದರ ಪರಿಣಾಮ ಅಂತರ್ಜಲ ಮಟ್ಟ ಹೆಚ್ಚಳ ಆಗಲಿದೆ ಎಂದು ಬ್ರಿಗೇಡ್ ಗ್ರೂಪ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದರು. ಇದಲ್ಲದೇ, ಕೆರೆಯ ಏರಿಯಲ್ಲಿ 1500 ರಿಂದ 2000 ಸಾವಿರ ಅಲಂಕಾರಿಕಾ ಮರಗಳನ್ನು ಬೆಳೆಸುವ ಉದ್ದೇಶವಿದೆ.

Tree plantation initiative gives Sitarampalya Lake

ಸದ್ಯದಲ್ಲಿ ಕೆರೆಯಲ್ಲಿ ತುಂಬಿರುವ ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಕೊಳಚೆ ನೀರು ಹರಿದು ಬರುತ್ತಿರುವ ಕಾಲುವೆಗಳನ್ನು ಸ್ಥಗಿತಗೊಳಿಸಬೇಕಿದೆ. ಒಟ್ಟಾರೆ ಕೆರೆಯನ್ನು ಸ್ವಚ್ಛಗೊಳಿಸಿ ಸುಂದರವಾದ ಪಾದಚಾರಿ ಮಾರ್ಗ ನಿರ್ಮಾಣ, ಮಕ್ಕಳ ಉದ್ಯಾನ ಮಾಡಲಾಗುತ್ತದೆ ಎಂದೂ ತಿಳಿಸಿದರು.

ಲೋಕಾಯುಕ್ತರು ಕೆರೆಯನ್ನು ಪುನರುಜ್ಜೀವನಗೊಳಿಸಲೆಂದು ರಚಿಸಲಾಗಿದ್ದ ಯೋಜನಾ ವರದಿಗೆ ಅನುಮೋದನೆ ನೀಡಿದ್ದು, ಪುನರುಜ್ಜೀವನ ಕಾರ್ಯ 9 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ ಬ್ರಿಗೇಡ್ ಗ್ರೂಪ್ 1 ಕೋಟಿ ರೂಪಾಯಿಯನ್ನು ಖರ್ಚು ಮಾಡಲಿದೆ.

ಕಾಮಗಾರಿ ಪೂರ್ಣದ ನಂತರ 23.37 ಎಕರೆ ಸುಂದರವಾಗಿ ಕಾಣಲಿದ್ದು, ಸುಮಾರು 13,692 ದಶಲಕ್ಷ ಲೀಟರ್ ನೀರು ಸಂಗ್ರಹವಾಗಲಿದೆ. ಮಕ್ಕಳಿಗೆ ಆಟಕ್ಕೆಂದು ಜಾಗ ಸೇರಿದಂತೆ 300 ರಿಂದ 400 ಮೀಟರ್ ವರೆಗೆ ಜಾಗಿಂಗ್/ವಾಕಿಂಗ್ ಪಾತ್ ನಿರ್ಮಾಣ ಮಾಡಲಾಗುತ್ತದೆ.

ಸುತ್ತಮುತ್ತಲಿನ ಸುಮಾರು 3 ಲಕ್ಷ ಜನರಿಗೆ ಈ ಕೆರೆ ಅಭಿವೃದ್ಧಿ ನಂತರ ಮನೋರಂಜನೆಯ ತಾಣವಾಗಲಿದೆ. ಅಂತರ್ಜಲ ಹೆಚ್ಚಿದರೆ ಹಚ್ಚಹಸಿರು ನಳನಳಿಸಲಿದ್ದು, ಸುತ್ತಮುತ್ತಲಿನ ವಾತಾವರಣ ಆಹ್ಲಾದಕರವಾಗಿರಲಿದೆ. ಪುನರುಜ್ಜೀವನದ ಕಾಮಗಾರಿ ಆರಂಭಿಕ ಹಂತದಲ್ಲಿರುವಾಗಲೇ ಪರ್ಪಲ್ ಮತ್ತು ಗ್ರೇ ಹೆರಾನ್ಸ್ ಮತ್ತು ಇಂಡಿಯನ್ ಕಾರ್ಮೊರೆಂಟ್ಸ್ ಹಕ್ಕಿಗಳು ಇಲ್ಲಿಗೆ ವಲಸೆ ಬರಲು ಆರಂಭಿಸಿರುವುದು ಸಂತಸದ ವಿಚಾರವಾಗಿದೆ. (ಒನ್ಇಂಡಿಯಾ ಕನ್ನಡ)

English summary
Bangalore's Sitarampalya Lake at Whitefield got greener on Wednesday (23rd July), with the tree plantation drive, thanks to the initiative by real estate major, Brigade Group. The Sitarampalya Lake Revival Project is slated for completion in nine months at a cost of Rs 1 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X