ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಬಂದ್ : ಕೆಲವು ಖಾಸಗಿ ಶಾಲೆಗಳಿಗೆ ರಜಾ

|
Google Oneindia Kannada News

ಬೆಂಗಳೂರು, ಜು. 30 : ಬೆಂಗಳೂರು ಬಂದ್ ಹಿನ್ನಲೆಯಲ್ಲಿ ಗುರುವಾರ ಕೆಲವು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉಲ್ಲಾಳ್ ಉಪನಗರದ ವಿದ್ಯಾನಿಕೇತನ ಶಾಲೆ ಗುರುವಾರ ರಜಾ ಘೋಷಿಸಿದ್ದು, ಈ ಕುರಿತು ಪೋಷಕರಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಿದೆ.

ಬೆಂಗಳೂರು ಬಂದ್‌ ಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶಿವರಾಮೇಗೌಡ ಹೇಳಿದ್ದಾರೆ. ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯವನ್ನು ನಾವು ವಿರೋಧಿಸುತ್ತೇವೆ. ಆದರೆ, ಇದಕ್ಕೆಲ್ಲ ಬಂದ್ ಮಾಡುವ ಅಗತ್ಯವಿಲ್ಲ ಎಂದು ಹೇಳಿರುವ ಅವರು, ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ಕನ್ನಡ ಪರ ಸಂಘಟನೆಗಳು ಗುರುವಾರ ಬೆಂಗಳೂರು ಬಂದ್ ಗೆ ಕರೆ ನೀಡಿವೆ. ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಇಲಾಖೆ ಇದುವರೆಗೂ ಯಾವುದೇ ಆದೇಶ ಹೊರಡಿಸಿಲ್ಲ. ಸರ್ಕಾರದಿಂದ ಆದೇಶ ಬಂದರೆ ರಜೆ ಘೋಷಿಸಲಾಗುವುದು ಎಂದು ಬೆಂಗಳೂರು ವಿವಿಯ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ತಿಳಿಸಿದ್ದಾರೆ.

ಬಿಎಂಟಿಸಿ, ಮೆಟ್ರೋ ಸೇವೆ ಎಂದಿನಂತೆ ಲಭ್ಯವಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಟೋ ಡ್ರೈವರ್ ಗಳು, ಕ್ಯಾಬ್ ಚಾಲಕರು ಬಂದ್ ಗೆ ಬೆಂಬಲ ನೀಡಿಲ್ಲ. ಬಂದ್ ವಾಪಸ್ ಪಡೆಯುವುದಿಲ್ಲ ಎಂದು ವಾಟಾಳ್ ನಾಗರಾಜ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದೆ ಆದ್ದರಿಂದ ಚಿತ್ರಮಂದಿರಗಳು ತೆರೆದಿರುತ್ತವೆ.

ಬಂದ್ ಗೆ ಮಾಲ್ ಗಳ ಬೆಂಬಲ : ಬೆಂಗಳೂರು ಬಂದ್ ವಾಪಸ್ ಪಡೆಯುವ ಪ್ರಶ್ನೆ ಇಲ್ಲ, ಯಾರು ಬೆಂಬಲ ನೀಡಲಿ ಬಿಡಲಿ ಗುರುವಾರ ಬಂದ್ ಮಾಡುತ್ತೇವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ. ಮಾಲ್ ಗಳು ಬಂದ್ ಗೆ ಬೆಂಬಲ ನೀಡಿವೆ ಎಂದು ಅವರು ಹೇಳಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್, ಗುರುವಾರ ಕರೆ ನೀಡಿರುವ ಬೆಂಗಳೂರು ಬಂದ್ ಅನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ. ಯಾವ ಸಂಘಟನೆಗಳು ಬೇಕಾದರೆ ಬೆಂಬಲ ನೀಡಲಿ ಬಿಡಲಿ ನಾವು ಮಾತ್ರ ಬಂದ್ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

Bangalore Bandh

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಮತ್ತು ರಾಜ್ಯದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಬಂದ್ ಗೆ ಕರೆ ನೀಡಲಾಗಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದರೆ ಅವರು ಮರಾಠಿಗಳ ಪರವಾಗಿದ್ದಾರೆಯೇ? ಎಂದು ವಾಟಾಳ್ ಪ್ರಶ್ನಿಸಿದರು. ಮಾಲ್ ಗಳು ಬಂದ್ ಗೆ ಬೆಂಬಲ ಸೂಚಿಸಿವೆ ಎಂದು ವಾಟಾಳ್ ತಿಳಿಸಿದರು.

12 ಗಂಟೆ : ಕನ್ನಡ ಪರ ಸಂಘಟನೆಗಳು ಗುರುವಾರ ಕರೆ ನೀಡಿರುವ ಬೆಂಗಳೂರು ಬಂದ್ ಗೆ ಚಿತ್ರರಂಗ ಬೆಂಬಲ ನೀಡಿಲ್ಲ. ಗುರುವಾರ ಕನ್ನಡ ಚಿತ್ರಗಳ ಪ್ರದರ್ಶನ, ಚಿತ್ರೀಕರಣ ಮುಂತಾದ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಚ್.ಡಿ.ಗಂಗರಾಜು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಗಂಗರಾಜು ಅವರು, ಅತ್ಯಾಚಾರ ಪ್ರಕರಣಗಳನ್ನು ನಾವು ಖಂಡಿಸುತ್ತೇವೆ. ಈ ಕುರಿತು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ನಾವು ಮನವಿ ಪತ್ರ ಸಲ್ಲಿಸಲಿದ್ದೇವೆ. ಆದರೆ, ಗುರುವಾರ ಚಿತ್ರರಂಗದ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಿಲ್ಲ. ನಿರ್ಮಾಪಕರಿಗೆ ಆಗುವ ನಷ್ಟದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದರು.

ಗುರುವಾರ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬೆಂಗಳೂರ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡುವುದಿಲ್ಲ. ಬಂದ್ ದಿನ ಚಿತ್ರೀಕರಣ, ಚಿತ್ರ ಪ್ರದರ್ಶನ ಮುಂತಾದ ಚಿತ್ರರಂಗದ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

ಹಿಂದಿನ ಸುದ್ದಿ : ಕನ್ನಡ ಪರ ಸಂಘಟನೆಗಳು ಗುರುವಾರ ಕರೆ ನೀಡಿರುವ ಬೆಂಗಳೂರು ಬಂದ್ ಹಿನ್ನಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಗೃಹಸಚಿವರು ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸರಣಿ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಜು.31ರ ಗುರುವಾರ ವಿವಿಧ ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್‌ ಗೆ ಕರೆ ನೀಡಿವೆ. ಬೆಂಗಳೂರು ನಗರ ಪೊಲೀಸರು ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದಾರೆ.

17 ಸಾವಿರ ಪೊಲೀಸ್ : ಗುರುವಾರ 17 ಸಾವಿರ ಪೊಲೀಸರು ನಗರದ ಬಂದೋಬಸ್ತ್‌ ಕಾರ್ಯ­ದಲ್ಲಿ ತೊಡಗಿರುತ್ತಾರೆ. ಜತೆಗೆ ಕ್ಷಿಪ್ರ ಕಾರ್ಯ­ಪಡೆಯ (ಆರ್‌ಎಎಫ್‌) ಎರಡು ಕಂಪೆನಿಗಳು, ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) 52 ತುಕಡಿ, ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್‌) 20 ತುಕಡಿ ಹಾಗೂ 1,000 ಗೃಹ ರಕ್ಷಕ ದಳದ ಸಿಬ್ಬಂದಿ­ಯನ್ನು ಭದ್ರತೆಗೆ ನಿಯೋಜಿ­ಸ­ಲಾ­ಗಿದೆ.

ಸಿಸಿ ಕ್ಯಾಮರಾ ಆಳವಡಿಕೆ : ನಗರದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಸಿಸಿ ಕ್ಯಾಮೆರಾ ಅಳವಡಿಸಲಿದ್ದಾರೆ. ಬಂದ್ ಹೆಸರಿನಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಪಡಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಕೆ.ಜೆ.ಜಾರ್ಜ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ. [ಜುಲೈ 31ರಂದು ಬೆಂಗಳೂರು ಬಂದ್]

ರಸ್ತೆಗಿಳಿಯಲಿವೆ ಬಿಎಂಟಿಸಿ : ಗುರುವಾರ ಬಿಎಂಟಿಸಿ ಬಸ್ಸುಗಳು ಎಂದಿನಂತೆ ಸಂಚಾರ ನಡೆಸಲಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೀಜ್ ಹೇಳಿದ್ದಾರೆ. ಬಸ್ಸುಗಳ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗು­ವು­ದಿಲ್ಲ. ಪ್ರಯಾಣಿಕರ ಅನುಕೂಲ­ಕ್ಕಾಗಿ ಪೊಲೀ­ಸರ ನೆರವು ಪಡೆದು ಸೇವೆ ಒದಗಿ­ಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಸೇವೆ ಗುರುವಾರ ಎಂದಿನಂತೆ ಲಭ್ಯವಿರುತ್ತದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇ­­ಶಕ ಪ್ರದೀಪ್ ಸಿಂಗ್ ಖರೋಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಟೋ ಚಾಲಕರು ಮತ್ತು ಟ್ಯಾಕ್ಸಿ ಡ್ರೈವರ್ ಗಳು ಇದುವರೆಗೂ ಬಂದ್ ಗೆ ಬೆಂಬಲ ನೀಡಿಲ್ಲ.

English summary
Bangalore Police have made elaborate security arrangements in the City by deploying additional forces in the wake of various Kannada organizations called for a Bangalore bandh on Thursday, July 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X