ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ಬಗ್ಗೆ ಭಾರತ ರತ್ನ ಸಿಎನ್ಆರ್ ರಾವ್ ಏನನ್ತಾರೆ?

By Srinath
|
Google Oneindia Kannada News

ಬೆಂಗಳೂರು: ಅಪಾರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಗೆ ಇನ್ನು ಮೂರೇ ದಿನ ಬಾಕಿ. ಇನ್ನೇನಿದ್ದರು ಮೂರನೆಯ ದಿನ ಮತದಾರನದ್ದೇ ಕಾರುಬಾರು. ಅದಕ್ಕೂ ಮುನ್ನ ಮತದಾರರಿಗೆ 16 ಲೋಕಸಭಾ ಚುನಾವಣೆಗಳನ್ನು ಹತ್ತಿರದಿಂದ ಕಂಡಿರುವ ಆದರೆ ರಾಜಕೀಯವಾಗಿ ಎಂದೂ ಗುರುತಿಸಿಕೊಳ್ಳದ ವ್ಯಕ್ತಿಯೊಬ್ಬರು ಚುನಾವಣೆಗಳ ಬಗ್ಗೆ ಏನು ಹೇಳಿದ್ದಾರೆ ಎಂದು ತಿಳಿಸುವ ಪುಟ್ಟ ಪ್ರಯತ್ನ ಇಲ್ಲಿದೆ.

ಹೌದು ಅವರು ಸಿಎನ್ನಾರ್ ರಾವ್! ಎಲೆ ಮರೆಯ ಕಾಯಿಯಂತೆ ವೈಜ್ಞಾನಿಕವಾಗಿ ದೇಶ ಸೇವೆಯಲ್ಲಿ ತೊಡಗಿ 'ಭಾರತ ರತ್ನ' ಎನಿಸಿಕೊಂಡ ನಮ್ಮ ಕನ್ನಡಿಗರೇ ಆದ ಸಿಎನ್ನಾರ್ ಅವರು ಒನ್ಇಂಡಿಯಾಕನ್ನಡ ಜತೆ ಮನಬಿಚ್ಚಿ ಮಾತನಾಡಿದ್ದಾರೆ.

ಸಂದರ್ಶನದ ಆರಂಭದಲ್ಲಿ 'ರಾಜಕೀಯಕ್ಕೂ ನನಗೂ ದೂರ ದೂರ, ರಾಜಕೀಯ ಸಂದರ್ಶನ ಬೇಡ' ಎಂದಿದ್ದ ಸಿಎನ್ನಾರ್, ಮುಂದೆ ಪಟಪಟನೆ ಮಾತನಾಡುತ್ತಾ ಹೋದಂತೆ ರಾಜಕೀಯವನ್ನು ಅವರು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರಲ್ಲಾ ಎಂದು ನಿಜಕ್ಕೂ ಆಶ್ಚರ್ಯವಾಯಿತು.

ಅಂದಹಾಗೆ ಸಿಎನ್ನಾರ್ ಸರ್ ಸ್ವಾತಂತ್ರ್ಯಕ್ಕೂ ಮುನ್ನ ಹುಟ್ಟಿದವರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಸೆಂಟ್ರಲ್ ಕಾಲೇಜು ವಿದ್ಯಾರ್ಥಿ. ಅಲ್ಲಿಂದ ಇದುವರೆಗೂ ಎಲ್ಲಾ ಚುನಾವಣೆಗಳನ್ನೂ ನೋಡಿದ್ದಾರೆ. ಇಂದಿರಾ ಗಾಂಧಿ ಕಾಲದಿಂದ ಹಿಡಿದು ದೇಶದ ಏಳು ಪ್ರಧಾನಿಗಳಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಶುದ್ಧ ಹಸ್ತರು. ಶಕ್ತಿ ಕೇಂದ್ರಕ್ಕೆ ಅಷ್ಟು ಹತ್ತಿರವಿದ್ದರೂ ಎಲ್ಲೂ ಪ್ರಲೋಭೆಗೆ ಒಳಗಾಗದೆ ಉಳಿದಿದ್ದಾರೆ.

'ಪ್ರಧಾನಿಗೇ ಸಲಹೆಗಾರರಾಗಿದ್ದೀರಿ, ನಿಮಗೇನಾದರೂ ಬೇಕಿದ್ದರೆ ಮಾಡಿಸಿಕೊಳ್ಳಿ, ಇಲ್ಲಾಂದ್ರೆ ಸಂಪುಟಕ್ಕೆ ಬನ್ನಿ' ಎಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸೂಕ್ಷ್ಮವಾಗಿ ಹೇಳಿದಾಗ 'ಮೇಡಂ, ನನ್ನದೇನಿದ್ದರೂ ದೇಶ ಸೇವೆಯಷ್ಟೇ!' ಎಂದಿದ್ದರು ಸಿಎನ್ನಾರ್. ಆ ಪಾಲಿಸಿಯನ್ನು ಇತ್ತೀಚೆಗೆ ಪ್ರಧಾನಿ ಎಂಎಂ ಸಿಂಗ್ ಕಾಲದವರೆಗೂ ವ್ರತದಂತೆ ಪಾಲಿಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಪುಟವಿಟ್ಟಂತೆ ಸಿಎನ್ನಾರ್ ಅಪ್ಪಟ ಭಾರತ ರತ್ನ ಆಗಿದ್ದಾರೆ.

ಇಷ್ಟು ಹೇಳಿದ ಮೇಲೆಯೇ, ರಾಜಕೀಯ ಮತ್ತು ಚುನಾವಣೆ ಬಗ್ಗೆ ಸಿಎನ್ನಾರ್ ಅವರು ಮಾತನಾಡಿದರೆ ಅದಕ್ಕೆ (ನಂದಿ)ಬೆಟ್ಟದಷ್ಟು ತೂಕವಿರುತ್ತದೆ ಎಂದು ಈ ಸಂದರ್ಶನ ಮಾಡಿದ್ದು. ಅವರ ಮಾತಿನಲ್ಲೇ ಕೇಳುತ್ತಾ ಹೋಗಿ...

1947ರ ದಿನಗಳು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಮಾಡ್ತಿದ್ದೆ. ಮನೆ... ಎಪಿಎಸ್ ಹೈಸ್ಕೂಲ್ ಪಕ್ಕ ಮಲ್ಲಿಕಾರ್ಜುನ ಟೆಂಪಲ್ ಎದುರು ರಸ್ತೆಯಲ್ಲಿತ್ತು. ಪ್ರಜಾಪ್ರಭುತ್ವ ಎಂಬುದು ಭಾರತಕ್ಕೆ ಒಲಿಯುವುದು ಸಾಧ್ಯವೇ ಇಲ್ಲ ಅಂತನ್ನಿಸುತ್ತಿತ್ತು.

ನಾವು ಯುವಕರು ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶ ಡಿಕ್ಟೇಟರ್ ಶಿಪ್ ಗೆ ಒಳಪಡಬಹುದು ಅಂದುಕೊಂಡಿದ್ದಿವಿ. ಸರ್ವಾಧಿಕಾರಿ ಧೋರಣೆಯ ನೆಹರೂ ಮನಸ್ಸು ಮಾಡಿದ್ದರೆ ಹಾಗೇ ಆಗಬಹುದಿತ್ತೇನೋ! ಆದರೆ ನೆಹರೂದು ಅಪ್ಪಟ ಭಾರತೀಯ ಮನಸ್ಸು ಅಂತ ನಮಗೆ ಅನ್ನಿಸುತ್ತಿತ್ತು. ಕೊನೆಗೆ ದೇಶವನ್ನು ಡಿಕ್ಟೇಟರ್ ಶಿಪ್ ಗೆ ಒಪ್ಪಿಸದೆ, ಮೊದಲ ಪ್ರಧಾನಿಯಾಗಿ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದರು.

ಮುಂದೆ ನಮ್ಮಂತಹ ಯುವಕರಿಗೆ ದೇಶದಲ್ಲಿ ಪ್ರಜಾಪ್ರಭುತ್ವ ಅಂತ ಅನ್ನಿಸುತ್ತಿರಲಿಲ್ಲ. ಚುನಾವಣೆಗಳು ಬಿಡಿ, ಅದು ಇನ್ನೂ ದೂರದ ಮಾತು. ಚುನಾವಣೆ ಅಂದ್ರೆ ಕಾಂಗ್ರೆಸ್ ಅಷ್ಟೇ ಆಗ ಇದ್ದಿದ್ದು. ಆದರೆ ಎಮರ್ಜೆನ್ಸಿ ದಿನಗಳು ಬಂದವಲ್ಲಾ? ಆಗ ಗೊತ್ತಾಯ್ತು ದೇಶಕ್ಕೆ ನಿಜವಾದ ಪ್ರಜಾಪ್ರಭುತ್ವ ಬೇಕೇಬೇಕು ಅಂತ. ಮತ್ತು ಪ್ರಜಾಪ್ರಭುತ್ವದ ನಿಜವಾದ ಅಂತಃಶಕ್ತಿ ಅನಾವರಣ ಆಗಿದ್ದೇ ಆಗ. Full marks to Democracy!

ಆದರೆ ಆಗ ಜನತಾ ಪರಿವಾರ ಸರಕಾರ ಸುಸ್ಥಿರಗೊಳ್ಳದೇ ಹೋಗಿದ್ದು ದೇಶದ ದೌರ್ಭಾಗ್ಯವೇ ಸರಿ. ಈಗ ದೇಶ ಎದುರಿಸುತ್ತಿರುವ ರಾಜಕೀಯ ದುಃಸ್ಥಿತಿಗೆ ಅಂದಿನ ಜನತಾ ಸರಕಾರ ಮತ್ತು ಕಾಂಗ್ರೆಸ್ ನಾಂದಿ ಹಾಡಿದವು.

ಮುಂದೆ ಒಂದೊಂದು ಚುನಾವಣೆಗೂ ಒಂದೊಂದು ಪಕ್ಷ ಹುಟ್ಟಿಕೊಳ್ಳುತ್ತಾ ಬಂತು. ಅದು ದೇಶದ ರಾಜಕೀಯ ದುರವಸ್ಥೆಗೆ ಹೇತುವಾಯಿತು. ಆದರೆ ಮುಂದೆ ಕಿಚಡಿಗಳು ಹೋಗಿ 2-3 ಪಕ್ಷಗಳಷ್ಟೇ ದೇಶವನ್ನಾಳುವ ದಿನಗಳು ಬರಲಿ ಎಂಬುದು ನನ್ನಾಶಯ. ಅದನ್ನು ನಾನು ನೋಡದೇ ಹೋಗಬಹುದು. ಆದರೆ ಭಾರತಕ್ಕೆ ಅಂತಹ ದಿನಗಳು ಬೇಕು, ಬೇಗ ದಕ್ಕಲಿ ಎಂದು ಹಾರೈಸುವೆ.

ನೋಡಿ, ನಮ್ಮನ್ನಾಳಿದ ಬ್ರಿಟೀಶರು ಇಂದಿಗೂ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಅಲ್ಲಿ ಸಂಸತ್ತೇ ಪರಮೋಚ್ಛ. ನಮ್ಮಲ್ಲಿ ರಾಜಕಾರಣಿಗಳು ಬೀದಿಯಲ್ಲಿ ನಿಂತು ಮಾತನಾಡುತ್ತಾರೆ. ಅದೂ ತೀರಾ ಹೊಲಸು. ಇವರ ನಾಲಿಗೆಗೆ ಕಡಿವಾಣ ಬೀಳಲಿಲ್ಲಾಂದ್ರೆ ದೇಶಕ್ಕೆ ಭವಿಷ್ಯ ಇಲ್ಲಾ ಕಣ್ರಿ.

ಆದರೆ Beauty of the Democracy ನೋಡಿ. ಸದ್ಯ ಇಲ್ಲಿ ಇನ್ನೂ ಡೆಮಾಕ್ರಸಿ ಇದೆಯಲ್ಲಾ ಎಂಬುದೇ ದೊಡ್ಡ ಸಂತೋಷದ ವಿಚಾರ. ನಮ್ಮಲ್ಲಿ ರಾಜಕೀಯ ವ್ಯವಸ್ಥೆ ಟಿಪ್ಪು ಡ್ರಾಪಿನಷ್ಟು ಆಳಕ್ಕೆ ಕುಸಿದ್ದಿದ್ದರೂ ನಮ್ಮ ಜನ ಪ್ರಗತಿಪರರಾಗಿದ್ದಾರೆ. ಭಾರತ ಇಂದು ಬೇಕಾದಷ್ಟು ಸಾಧಿಸಿದೆ. ಜನ ಇನ್ನೂ ಸ್ವಲ್ಪ ನೆಮ್ಮದಾಗಿಯಾಗಿ ಬಾಳುವಂತಾಗಿದೆ. ಅದೇ ನಮ್ಮಲ್ಲಿ ನಿಜಾರ್ಥದಲ್ಲಿ ಒಳ್ಳೆಯ Democracy ಇದ್ದಿದ್ದರೆ ದೇಶ ಇನ್ನೂ ಎಷ್ಟು ಸುಭಿಕ್ಷವಾಗುತ್ತಿತ್ತೋ!?

ದಕ್ಷಿಣ ಕೋರಿಯಾ ಮತ್ತು ಭಾರತಕ್ಕೆ ಒಂದೇ ಸಲ ಫ್ರೀಡಂ ಬಂದಿದ್ದು, ಆದ್ರೆ ಅಲ್ಲಿನ ಪ್ರಜಾಪ್ರಭುತ್ವ ನೋಡಿದರೆ, ಆ ದೇಶವನ್ನು ನೋಡಿದರೆ ಸಂತೋಷವಾಗುತ್ತದೆ. ಭಾರತ ಯಾವಾಗ ಹಾಗೆ ಆಗುವುದು.

ಆದರೆ ದೇಶವೊಂದರ ಆಯಸ್ಸು, ಪ್ರಜಾಪ್ರಭುತ್ವ, ಸಂವಿಧಾನ ಇವುಗಳನ್ನು ನೋಡಿದರೆ ಭಾರತ ಶೈಶಾವಸ್ಥೆ ದಾಟಿ, ಪ್ರೌಢಿಮೆಯತ್ತ ಸಾಗುತ್ತಿದೆ. ಈ ಪ್ರೌಢಿಮೆಯ ಕಾಲದಲ್ಲಿ ದಿಕ್ಕುತಪ್ಪುವುದು ವಯೋಸಹಜ. ಹಾಗಾಗದಂತೆ ಲಗಾಮು ಹಾಕಬೇಕು ಈ ರಾಜಕೀಯ ಪಕ್ಷಗಳಿಗೆ. ಅದು ಇಂದಿನ ಹೆಚ್ಚು ತಿಳಿವಳಿಕೆಯುಳ್ಳ ಮತದಾರನಿಂದ ಸಾಧ್ಯ. ಹಾಗಾಗಿ ಮತದಾರ ತಪ್ಪದೇ ಮತ ಚಲಾಯಿಸಬೇಕು.

ಆದರೆ ನಮ್ದು democratic elections ಆಗದೆ America Presidential elections ನಂತಾಗುತ್ತಿದೆ. ಬಿಜೆಪಿಗೆ (ಮೋದಿ) ಒಬ್ರೇ, ಕಾಂಗ್ರೆಸ್ಸಿಗೆ (ರಾಹುಲ್) ಒಂದೇ ಮುಖ... ಹೀಗೆ. ಇಲ್ಲಿ ಪಕ್ಷಕ್ಕೆ ಮಹತ್ವವೇ ಇಲ್ವಾ?

ನಾನು ಇಂದಿರಾ (ಗಾಂಧಿ) ಜತೆ ಕೆಲ್ಸ ಮಾಡಿದೆ. ಆಕೆ ನಿಜವಾದ ಲೀಡರ್. ಅದಾದನಂತರ ರಾಜೀವ್ ಗಾಂಧಿ ಜತೆ ಕೆಲ್ಸ ಮಾಡಿದೆ. ಆ ಮನುಷ್ಯ ನಿಜಕ್ಕೂ ಗ್ರೇಟ್. ಆಸಕ್ತಿ ಇತ್ತು/ ಹುಮ್ಮಸ್ಸು ಇತ್ತು. ದೇಶವನ್ನು ವಿಜ್ಞಾನ/ ತಂತ್ರಜ್ಞಾನದಲ್ಲಿ ಮುನ್ನುಗ್ಗಿಸಿಕೊಂಡು ಹೋಗಬೇಕು ಎಂಬ ತುಡಿತವಿತ್ತು ಆತನಲ್ಲಿ. ವಿಜ್ಞಾನಿಗಳಿಗಿಂತ ಹೆಚ್ಚು ಹುಮ್ಮಸ್ಸು ಇತ್ತು ಕಣ್ರೀ!

ಮುಂದೆ ಚಂದ್ರಶೇಖರ್/ ದೇವೇಗೌಡ ಅವರ ಕಾಲದಲ್ಲೂ ಇದ್ದೆ. ಆದರೆ ಅವರೇ ಇರಲಿಲ್ಲ! ಈ ಮಧ್ಯೆ, ಗುಜ್ರಾಲ್ ಅವರ ಜತೆ ಕೆಲಸ ಮಾಡುವ ಸೌಭಾಗ್ಯ ದೊರೆಕಿತು. ಆತ ನೆಹರೂ ಮಾದರಿ ಒಂದಷ್ಟು ಭರವಸೆಗಳನ್ನು ಮೂಡಿಸಿದ್ರು ಆದರೆ ಕೈಗೂಡಲಿಲ್ಲ.

ಇನ್ನು ನಮ್ಮ ಮನಮೋಹನ್ ಸಿಂಗ್ ! ಒಳ್ಳೆಯ ಬುದ್ಧಿವಂತ, ವಿದ್ಯಾವಂತ, ಜಂಟಲ್ ಮನ್, ಇಂಟಲೆಕ್ಚುಯಲ್ ಆದರೆ ಲೀಡರ್ ಶಿಪ್ ಇಲ್ಲ. (ತಪ್ಪು ಮಾಡಿದರೆ) ಯಾರಿಗೂ ಏನೂ ಹೇಳೋಲ್ಲ. ಅದೇ ಇಂದಿರಾ ಗಾಂಧಿ ಮಿನಿಸ್ಟರುಗಳಿಗೆ ಬೆಂಡ್ ಎತ್ಬಿಡೋರು. ನಾನೇ ಕಣ್ಣಾರೆ ನೋಡಿದ್ದೀನಿ. ನಮ್ಮ ಪ್ರಧಾನಿ ಸಿಂಗ್ ಅವರೂ ಹಾಗಿರಬೇಕಿತ್ತು.

ಯಡಿಯೂರಪ್ಪ ನಿಜವಾದ ಲೀಡರ್:

cnr-rao-interview-to-kannada-oneindia-bangalore

ನನಗೇ ಗೊತ್ತಿಲ್ಲದಂತೆ ನನ್ನಿಂದ ಸಾಕಷ್ಟು ರಾಜಕೀಯ ಮಾತನಾಡಿಸಿಬಿಟ್ರಿ ನೀವು. ಪಾಲಿಟಿಕ್ಸ್ ಬಿಟ್ಟು ಹೇಳಬೇಕು ಅಂದರೆ ಸೈನ್ಸ್ ಕ್ಷೇತ್ರದಲ್ಲಿ ತುಂಬಾ ಅಭಿವೃದ್ಧಿ ಆಗಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಬೆಸ್ಟ್ ಮುಖ್ಯಮಂತ್ರಿ. ಅವರ ಕಾಲದಲ್ಲಿ ಸೈನ್ಸ್ ಗೆ ಬಹಳಷ್ಟು ಒಳ್ಳೆಯದಾಗಿದೆ. ಅವರ ಪಾಲಿಟಿಕ್ಸ್ ಏನೇ ಇರಬಹುದು, ಆದರೆ ರಾಜ್ಯದಲ್ಲಿ ಸೈನ್ಸ್ ಅಭಿವೃದ್ಧಿಗೆ ಮಹತ್ತರ ಕೊಡುಗೆಗಳನ್ನು ನೀಡಿದರು.

ಆದರೂ ಇಡೀ ದೇಶದ ಬಗ್ಗೆ ಹೇಳಬೇಕು ಅಂದರೆ ಸೈನ್ಸ್ ಬಡ್ಜೆಟ್ ಕಡಿಮೆಯಾಗಿದೆ. 'ಎಕಾನಮಿ ಇಲ್ದೆ ಸೈನ್ಸ್ ಇಲ್ಲ; ಸೈನ್ಸ್ ಅಭಿವೃದ್ಧಿಯಿಲ್ದೇ ಎಕಾನಮಿ ಅಭಿವೃದ್ಧಿಯಾಗ್ತಿಲ್ಲ' ಎಂಬಂತಾಗಿದೆ ನಮ್ಮ ಇಂದಿನ ಪರಿಸ್ಥಿತಿ/ ದುಸ್ಥಿತಿ. ಅದಕ್ಕೇ ಮೊದಲು, ನಮ್ಮ ಎಕಾನಮಿ ಇಂಪ್ರೂ ಆಗಬೇಕು. ಅದಾಗಬೇಕು ಅಂದ್ರೆ ಸುಸ್ಥಿರ ಸರಕಾರ ಅಂದ್ರೆ ಏಕಪಕ್ಷದ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯಬೇಕು. ಆ ಏಕ ಪಕ್ಷ ಯಾವುದು ಎಂಬುದನ್ನು ನಿರ್ಧರಿಸಬೇಕಿರುವುದು ನೀವು ಮತದಾರರು. ಹಾಗಾಗಿ ತಪ್ಪದೆ ಮತ ಚಲಾಯಿಸಿ...

I am not BJP/Congress man. But am for India only. ಮುಂದೆ ಯಾವುದೇ ಸರಕಾರ ಬಂದರೂ ಯಾವುದೇ ಪ್ರಧಾನಿ ಕರೆದರೂ ಈ ಹಿಂದಿನಂತೆ ಸಲಹೆಗಾರನಾಗಿ ಸೇವೆ ಸಲ್ಲಿಸುವೆ. ಕರೆಯದಿದ್ದರೆ ಇನ್ನೂ ಹೆಚ್ಚು ಹುಮ್ಮಸ್ಸಿನಿಂದ/ ಇನ್ನೂ ಬೆಟರ್ ಆಗಿ ನನ್ನ ಕ್ಷೇತ್ರದಲ್ಲಿ ರೀಸರ್ಚ್ ಮಾಡುವೆ. ಜೈ ಕರ್ನಾಟಕ, ಜೈ ಭಾರತ್!

English summary
Renowned scientist of Bharat Ratna fame Prof CNR Rao spoke to Oneindia in an exclusive interview and expressed his views on a variety of subjects including the ongoing Lok Sabha election and his association with as many as seven prime ministers of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X