ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮಾನ ನಾಪತ್ತೆ : ಗುರೂಜಿ ಹೀಲಿಂಗ್, ಮಾನ ಹರಾಜು

By Mahesh
|
Google Oneindia Kannada News

ಇಡೀ ಜಗತ್ತಿನ ತಂತ್ರಜ್ಞಾನಕ್ಕೊಂದು ಸವಾಲಾಗಿ ಪರಿಣಮಿಸಿರುವ ಮಲೇಷಿಯಾ ಏರ್ ಲೈನ್ಸ್ ನಾಪತ್ತೆ ಪ್ರಕರಣ ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ನಾಪತ್ತೆಯಾಗಿ ಒಂದು ವಾರದ ನಂತರ ಅದರ ಬಗ್ಗೆ ಸುಳಿವು ಸಿಗಲಿದೆ ಎಂದು ಮಲೇಷಿಯಾದಲ್ಲಿ ಚೆನ್ನೈ ಮೂಲದ ಜ್ಯೋತಿಷಿ ಹೇಳಿಕೆ ನೀಡಿದ್ದರಿಂದ ಹಿಡಿದು, ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ, ಬ್ರಿಟನ್, ಚೀನಾ ಶೋಧಕರು ಕೂಡಾ ವಿಮಾನದ ಗುರುತು ಪತ್ತೆ ಬಗ್ಗೆ ಖಚಿತ ಮಾಹಿತಿ ಒದಗಿಸಲು ವಿಫಲರಾಗಿದ್ದಾರೆ. ಮಲೇಷಿಯಾ ಪ್ರಧಾನಿ ನಜೀಬ್ ರಜಾಕ್ ಅವರು ಕೂಡಾ ಮಾಹಿತಿ ಕೊರತೆಯನ್ನು ಒಪ್ಪಿಕೊಂಡಿದ್ದಾರೆ.

ಈ ನಡುವೆ ವಿಮಾನ ಅಪಹರಣವಾಗಿರುವುದು ಖಚಿತ ಅಲ್ ಖೈದಾದ 9/11 ದಾಳಿ ಮಾದರಿಯಲ್ಲಿ ಭಾರತದ ಮೇಲೆ ದಾಳಿ ಮಾಡಬಹುದು ಎಂದು ಬಿಲ್ ಕ್ಲಿಂಟನ್ ಅಧಿಕಾರ ಅವಧಿಯಲ್ಲಿ ಉಪ ಕಾರ್ಯದರ್ಶಿಯಾಗಿದ್ದ ಸ್ಟ್ರೋಬೆ ಟಾಲ್ಬೋಟ್ ಅವರು ಹೇಳಿಕೆ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅನೇಕ ಟಿವಿ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಈ ನಡುವೆ ಕನ್ನಡ ಸುದ್ದಿ ವಾಹಿನಿಯಲ್ಲಿ ಇತ್ತೀಚೆಗೆ ಪ್ರಸಾರವಾದ ರಾಮಚಂದ್ರ ಗುರೂಜಿ ಅವರ 'ಸೋಲ್ ಹೀಲಿಂಗ್ ' ಕಾರ್ಯಕ್ರಮಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಗೂಗಲ್ ಪ್ಲಸ್ ಹಾಗೂ ಫೇಸ್ ಬುಕ್ ನಲ್ಲಿ ಬಂದ ಪ್ರತಿಕ್ರಿಯೆಗಳನ್ನು ಇಲ್ಲಿ ಯಥಾವತ್ತು ಪ್ರಕಟಿಸಲಾಗಿದೆ. ಹಕ್ಕುಗಳ ಲೇಖಕರದ್ದು-ಒನ್ ಇಂಡಿಯಾ ಕನ್ನಡ ನ್ಯೂಸ್ ಡೆಸ್ಕ್

ಯಾರೋ ಪುಣ್ಯಾತ್ಮ ಈ ದರಿದ್ರ ಸ್ವಾಮೀಜಿಯ ಕಾರ್ಯಕ್ರಮವನ್ನು ಯೂಟ್ಯೂಬಲ್ಲಿ ಅಪ್-ಲೋಡ್ ಮಾಡಿದ್ದಾನೆ. ನಿರೀಕ್ಷಿಸಿದಂತೆಯೇ ಕಾರ್ಯಕ್ರಮಕ್ಕೆ ಅನೇಕ ಜನ ಉಗಿದು ಕಾಮೆಂಟಿಸಿದ್ದಾರೆ. ನೂರಾರು ಜನ ಇನ್ನೂ ಮುಂದೆ ಹೋಗಿ ಕನ್ನಡವನ್ನೂ ಕನ್ನಡಿಗರನ್ನೂ ಹೀಯಾಳಿಸಿ ಪ್ರತಿಕ್ರಯಿಸಿದ್ದಾರೆ. ಹಾಗೆ ಬರೆದಿರುವ ಅನೇಕರು ಕನ್ನಡಿಗರಲ್ಲ ಅನ್ನುವುದನ್ನು ನಾವು ಗಮನಿಸಬೇಕು

ಒಬ್ಬ ತಲೆಕೆಟ್ಟ ಗುರೂಜಿಯಿಂದ ನಾವೆಲ್ಲ ಅನ್ನಿಸಿಕೊಳ್ಳಬೇಕಾಗಿದೆ. ತನ್ನ ಟಿ ಆರ್ ಪಿ ಗಾಗಿ ಜಗತ್ತಿನೆದುರು ಕನ್ನಡದ ಮಾನ ಕಳೆಯುತ್ತಿರುವ ಕನ್ನಡ ಚಾನೆಲ್ -ಗಳನ್ನು ಏನು ಮಾಡಬೇಕು??:- ರೋಹಿತ್ ಚಕ್ರತೀರ್ಥ

Public condemn Ramachandra Guruji's show on Malaysian flight

***

ಅಲ್ಲಿ 239 ಜನ ನತದೃಷ್ಟರ ಬಂಧುಬಳಗದವರೆಲ್ಲ ಎದೆಬಡಿದುಕೊಂಡು ರೋದಿಸುತ್ತಿದ್ದಾರೆ, ಘಟನೆ ಸಂಭವಿಸಿ ಐದು ದಿನಗಳಾದರೂ ಏನು ಎತ್ತ ಎಂಬ ಮಾಹಿತಿಯಿಲ್ಲದೆ ವಿಲವಿಲ ಒದ್ದಾಡುತ್ತಿದ್ದಾರೆ. ಪರಸ್ಪರ ಸಾಂತ್ವನ ಹೇಳಿಕೊಳ್ಳುತ್ತಿದ್ದಾರೆ, ಪುಟ್ಟಪುಟ್ಟ ಮಕ್ಕಳು ಸಹ ಮೋಂಬತ್ತಿ ಉರಿಸಿ ಹೂವುಗಳನ್ನಿಟ್ಟು ಪ್ರೀತಿಯ ಸಂದೇಶ ಬರೆಯುತ್ತಿದ್ದಾರೆ. ಮರಳಿ ಬನ್ನಿ ಎಂದು ಗೋಗರೆಯುತ್ತಿದ್ದಾರೆ. ದೇಶಭಾಷೆ ಜಾತಿಧರ್ಮಗಳ ಗಡಿ ಮೀರಿ ಜನರು ದುಃಖದಲ್ಲಿ ಭಾಗಿಯಾಗಿದ್ದಾರೆ, ಪ್ರಾರ್ಥನೆಗಳಲ್ಲಿ ತೊಡಗಿದ್ದಾರೆ. ಏನೋ ಪವಾಡ ಸಂಭವಿಸಬಹುದು ಎಂದು ಇನ್ನೂ ಆಸೆಯಿಟ್ಟುಕೊಂಡಿದ್ದಾರೆ. ದೇಶವಿದೇಶಗಳ ರಕ್ಷಣಾದಳಗಳು, ಸ್ವಯಂಸೇವಕರು ಹಗಲಿರುಳೆನ್ನದೆ ಶೋಧಕಾರ್ಯ ಮುಂದುವರಿಸಿದ್ದಾರೆ.

ಇವರೆಲ್ಲರೂ ಮನುಷ್ಯತ್ವವನ್ನು ಇನ್ನೂ ಜತನವಾಗಿರಿಸಿಕೊಂಡಿರುವವರು. ಹೆರವರ ದುಃಖ, ನೋವು ಏನು ಎಂಬುದನ್ನು ಅರಿತವರು. ಇವರೆಲ್ಲರನ್ನೂ ದೇವರು ಚೆನ್ನಾಗಿಟ್ಟಿರಲಿ.

ಇತ್ತ, ಬೌದ್ಧಿಕ ದಾರಿದ್ರ್ಯದಿಂದ ನರಳುತ್ತಿರುವ ಕನ್ನಡ ವಾರ್ತಾವಾಹಿನಿಗಳ ಪೈಕಿಯದೊಂದು, ಮೂರು ಪಿಶಾಚಿಗಳನ್ನು ಸ್ಟುಡಿಯೋಗೆ ಕರೆಸಿ ಅವುಗಳಿಂದ ನಾಟಕ ಆಡಿಸಿತು. ಅವುಗಳಿಗೂ ಒಂದಿಷ್ಟು ಕಾಸು ಕೊಟ್ಟಿತು. ಮುಗ್ಧ ಪ್ರೇಕ್ಷಕರ ಮೇಲೆ ಮಂಕುಬೂದಿ ಎರಚಿತು. ತನ್ನ ಟಿಆರ‍್‌ಪಿ ಹೆಚ್ಚಿತು ಎಂದು ಜಾಹಿರಾತುದಾರರಿಂದ ಇನ್ನಷ್ಟು ಕಾಸು ಪೀಕಿತು.

"ಪಕ್ಕದ ಗುಡಿಸಲಿಗೆ ಬೆಂಕಿ ಬಿದ್ದಿದೆ. ಬನ್ನಿ, ಬೆಂಕಿ ಆರಿಹೋಗುವ ಮೊದ್ಲು ಬೀಡಿ ಹಚ್ಕೊಳ್ಳೋಣ" ಎಂಬ ರೀತಿಯಲ್ಲಿ ಅಕ್ಷರಶಃ ತನ್ನ ದರಿದ್ರತನದ ಪರಮಾವಧಿಯನ್ನು ತೋರಿಸಿತು. ಅದ್ಯಾವುದೋ ಹಿಪ್ನಾಟಿಸಂ ಗುರೂಜಿಯಂತೆ. ಅದಕ್ಕೆ ಇಂಗ್ಲೀಷ್ ಬೇರೆ ಕೇಡು. ಟೇಕಾಫ್ ಅನ್ನೋದಕ್ಕೆ ಟೇಕಪ್ ಎನ್ನುತ್ತಿತ್ತು. ಡೆಸ್ಟಿನೇಶನ್ ಅನ್ನೋಕೆ ಡೆಸ್ಟಿನಿ, ಬೆವರೇಜಸ್ ಅನ್ನೋದಕ್ಕೆ ಬ್ರೇವರಿ, ಎಕ್ಸ್‌ಪೀರಿಯೆನ್ಸಿಂಗ್ ಅನ್ನೋದಕ್ಕೆ ಎಕ್ಸ್‌ಪ್ರೈಸಿಂಗ್, ಟರ್ಬುಲೆನ್ಸ್ ಅನ್ನೋದಕ್ಕೆ ಟರ್ಬುಲೆನ್ಸಿ. ಗುರೂಜಿಪಿಶಾಚಿಯೊಂದಿಗೆ ಅವೆರಡು 'ಸಬ್ಜೆಕ್ಟ್' ಪ್ರೇತಾತ್ಮಗಳಂತೆ. "ಫಿಮೇಲ್ ಲೇಡಿ" ಅಂತ ಹೇಳುತ್ತಿತ್ತು ಒಂದು (ಬಹುಶಃ ಮೇಲ್ ಲೇಡಿ ಬೇರೆ ಇರುತ್ತೋ ಏನೋ). ಗಂಡುಪ್ರೇತವಂತೂ "ಓಶನ್ ಕ್ರ್ಯಾಶ್ ಆಗ್ತಾ ಇದೆ" ಅಂತ ಒದರಿತು!

ಗುರೂಜಿ ಪಿಶಾಚಿಯ ಮಾತುಗಳನ್ನಷ್ಟೇ ಕೇಳಬೇಕಿದ್ದ ಪ್ರೇತಾತ್ಮಗಳು ಚಾನೆಲ್ ನಿರೂಪಕಿ ಸಿಂಗರಿಸಿಕೊಂಡು ನಗುಮುಖದಿಂದ ಇದೆಲ್ಲ ತಮಾಷೆ ನೋಡುತ್ತಿದ್ದವಳು "ಕಾಕ್‌‍ಪಿಟ್‌‍ನಿಂದ ಏನಾದ್ರೂ ಎನೌನ್ಸ್ ಮಾಡಿದ್ರಾ?" ಎಂದು ಕೇಳಿದಾಗ ಆಕೆಯ ಪ್ರಶ್ನೆಗೂ ಉತ್ತರಿಸಿದವು! ಯಾಕೋ ಲೈವ್ ಫೋನ್-ಇನ್ ಮಾಡಿ ಪ್ರೇಕ್ಷಕರಿಂದಲೂ ಪ್ರಶ್ನೆ ಕೇಳಿಸಿಕೊಳ್ಳುವ ಆಲೋಚನೆ ಬಂದಿರಲಿಲ್ಲ ಚಾನೆಲ್ ಮುಖ್ಯಸ್ಥ ದುರಾತ್ಮನಿಗೆ. ಹಾಂ! "ಸ್ಪಾಟ್ ಡೆತ್" ಎಂಬೋ ಪದಪುಂಜ ನಾಟಕದ ಕ್ಲೈಮಾಕ್ಸ್‌ನಲ್ಲಿ ಬಳಸಿಕೊಳ್ಳೋಣ, ಒಳ್ಳೇ ಇಂಪಾಕ್ಟ್ ಕೊಡುತ್ತೆ ಎಂದು ಮೊದಲೇ ಸ್ಕ್ರಿಪ್ಟ್ ತಯಾರಿಸುವಾಗ ಮಾತಾಡಿಕೊಂಡಿದ್ದವೋ ಏನೋ ಈ ಪಿಶಾಚಿಗಳು.

ಈ ನಾಟಕ ಆಡಿದವರ, ನಾಟಕವನ್ನು ಆಡಿಸಿದವರ, ಸ್ವಂತ ಅಣ್ಣ ತಂಗಿ ಅಕ್ಕ ತಮ್ಮ ಅಪ್ಪ ಅಮ್ಮ ಗಂಡ ಹೆಂಡತಿ ಅಥವಾ ಕುಟುಂಬಸ್ಥರು, ಸಂಬಂಧಿಕರು ಯಾರಾದರೂ 239 ಜನರ ಪೈಕಿ ಇರುತ್ತಿದ್ದರೆ ಗೊತ್ತಾಗುತ್ತಿತ್ತು ಅವರಿಗೆ ನೋವು, ಸಂಕಟ ಎಂದರೇನೆಂದು. ಥೂ ಇವುಗಳ ಹಣೆಬರಹಕ್ಕೊಂದಿಷ್ಟು.- ಶ್ರೀವತ್ಸ ಜೋಶಿ

English summary
Public took social networking sites like facebook, google plus to condemn Ramachandra Guruji's show on Malaysian flight. Noted subconscious memory and soul healing expert from India, Ramachandra Guruji, speaks to the souls of missing passengers of Malaysian Airlines on a Live Kannada TV show on Mar.12,2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X