ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಎರಡು ದಿನಗಳ ಅಮೆರಿಕನ್ನಡೋತ್ಸವ

By ಮವಾಸು
|
Google Oneindia Kannada News

ಉತ್ತರ ಅಮೆರಿಕೆಯಲ್ಲಿ ಸುಮಾರು 90 ಸಾವಿರಕ್ಕೂ ಹೆಚ್ಚು ಕರ್ನಾಟಕ ಜನರಿದ್ದಾರೆ. ಪ್ರತಿ ವರ್ಷ ಜೂನ್-ಜುಲೈ-ಆಗಸ್ಟ್ ತಿಂಗಳುಗಳಲ್ಲಿ ಬಹುತೇಕ ಕನ್ನಡಿಗರು ತಮ್ಮ ರಜೆಯ ದಿನಗಳನ್ನು ಕಳೆಯಲು ಕರ್ನಾಟಕಕ್ಕೆ ಬರುತ್ತಾರೆ. ಅದೂ ಅಲ್ಲದೇ ಬಹಳಷ್ಟು ಕನ್ನಡಿಗರು ತಮ್ಮ ವ್ಯವಹಾರಕ್ಕಾಗಿ ಕರ್ನಾಟಕಕ್ಕೆ ಪ್ರತಿ ತಿಂಗಳು ಭೇಟಿ ಕೊಡುತ್ತಿರುತ್ತಾರೆ.

"ನಾವಿಕ" (ನಾವು ವಿಶ್ವ ಕನ್ನಡಿಗರು - North America Vishwa Kannada Association) 2011ರಲ್ಲಿ ಬೆಂಗಳೂರಿನಲ್ಲಿ ಅಮೆರಿಕನ್ನಡೋತ್ಸವವನ್ನು ಪ್ರಥಮ ಬಾರಿಗೆ ಕರ್ನಾಟಕ ಸರಕಾರದ NRI Forumನ ಸಹಯೋಗದೊಂದಿಗೆ ನಡೆಸಿ ಅನಿವಾಸಿ ಕನ್ನಡಿಗರ ಪ್ರತಿಭಾ ಪ್ರದರ್ಶನವನ್ನೂ ನಡೆಸಿತ್ತು. ಭಾರಿ ಸಂಖ್ಯೆಯಲ್ಲಿ ಬೆಂಗಳೂರಿನ ಜನತೆ ಭಾಗವಹಿಸಿದ ಒಂದು ಯಶಸ್ವಿ ಸಮ್ಮೇಳನವಾಗಿತ್ತು. [ಮೊದಲ ಅಮೆರಿಕನ್ನಡೋತ್ಸವ]

ಈ ಬಾರಿ ನಮ್ಮ ಎರಡನೇ ಅಮೆರಿಕನ್ನಡೋತ್ಸವವನ್ನು 2014ರ ಜುಲೈ 12 ಹಾಗೂ 13ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಬೇಕೆಂದು ನಿರ್ಧರಿಸಲಾಗಿದೆ. ಇದರ ಅಂಗವಾಗಿ ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ (ಕರ್ನಾಟಕ ಸರಕಾರ) ಸಹಭಾಗಿತ್ವದಲ್ಲಿ ಔದ್ಯಮಿಕ ಸಮಾವೇಶವನ್ನು ಏರ್ಪಡಿಸಿದ್ದೇವೆ. ಇದರಲ್ಲಿ ಉತ್ತರ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಹಾಗೂ ಇತರ ದೇಶಗಳಿಂದ ಉದ್ಯಮಿಗಳು ಭಾಗವಹಿಸುತ್ತಿದ್ದಾರೆ.

Navika 2nd Americannadotsava in Bangalore

ಕರ್ನಾಟಕ ಸರಕಾರದ ಪರವಾಗಿ ಸಂಬಂಧಪಟ್ಟ ಇಲಾಖಾ ಮಂತ್ರಿಗಳು, ಉನ್ನತ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಇದರ ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯವನರನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಅವರುಗಳು ಆಗಮಿಸಲಿದ್ದಾರೆ.

ಎರಡು ವರ್ಷಕ್ಕೊಮ್ಮೆ ನಡೆಸಲಾಗುವ ಈ ಉತ್ಸವದ ಉದ್ಧೇಶ ಸ್ಥಳೀಯ ಕನ್ನಡಿಗರ ಹಾಗೂ ಅನಿವಾಸಿ ಕನ್ನಡಿಗರ ಬಾಂಧವ್ಯವನ್ನು ಬೆಳೆಸುವುದು. ತವರಿನಿಂದ ದೂರವಿದ್ದರೂ ಮುಂದಿನ ತಲೆಮಾರಿಗೂ ಕನ್ನಡದವನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮ ಸಂಸ್ಥೆಯದು. ಇದರಲ್ಲಿ ಯಾವುದೇ ರಾಜಕೀಯ ಉದ್ಧೇಶವಾಗಲೀ, ಧಾರ್ಮಿಕ ಉದ್ಧೇಶವಾಗಲಿ ಇಲ್ಲ. ಸಾಂಸ್ಕೃತಿಕದ ಎಳೆಯನ್ನು ತೆಗೆದುಕೊಂಡು ರಾಜ್ಯದ ಕನ್ನಡಿಗರೊಂದಿಗೆ ಸಂಬಂಧ ಜೋಡಿಸುವ ಕಾರ್ಯವೇ ಇದರ ಉದ್ಧೇಶ. ಸರಕಾರದ ಧನ ಸಹಾಯವೂ ಅಷ್ಟು ಮುಖ್ಯವಲ್ಲ. ಅವರು ಕೊಡುವ ಧನ ಸಹಾಯ ಮನೆಗೆ ಬಂದ ಹೆಣ್ಣು ಮಗಳಿಗೆ ಅರಿಶಿನ ಕುಂಕುಮ ಕೊಟ್ಟು ಗೌರವಿಸುವ ಸಾಂಕೇತಿಕವಷ್ಟೆ.

ಕನ್ನಡ ಬೆಳೆಸಿ, ಉಳಿಸಿ, ಮುಂದಿನ ಪೀಳಿಗೆಗೆ ಸಾಗಿಸಲು ಅನಿವಾಸಿ ಕನ್ನಡಿಗರು ವಿಶ್ವದ ಎಲ್ಲೆಡೆ ಹರಸಾಹಸ ಪಡುತ್ತಿದ್ದಾರೆ. ಕರ್ಮಭೂಮಿಯಲ್ಲೂ ಕನ್ನಡ ಉಳಿಯಬೇಕೆಂಬುದು ಅನಿವಾಸಿ ಕನ್ನಡಿಗರ ಹಂಬಲ. ಮಕ್ಕಳಿಗಾಗಿ ಉಚಿತ ಕನ್ನಡ ಕಲಿ ಶಾಲೆಗಳನ್ನು ಎಲ್ಲಾ ಪ್ರಮುಖ ನಗರಗಳಲ್ಲಿ ತೆರೆಯಲಾಗಿದೆ. ಹಿರಿಯ ಕನ್ನಡಿಗರು ವಾರಕ್ಕೊಮ್ಮೆ ಕನ್ನಡವನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ. ಕನ್ನಡ ಸಂಘಗಳ ಮೂಲಕ ವರ್ಷಕ್ಕೆ 5-6 ಸಮಾರಂಭಗಳನ್ನು ನಡೆಸಿ ಮಕ್ಕಳಿಗೆ ದೊಡ್ಡವರಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಮಾಡಿಕೊಡಲಾಗುತ್ತದೆ.

ಅದೂ ಅಲ್ಲದೇ ವರ್ಷಕ್ಕೆ 5-6 ಕನ್ನಡ ಚಲನ ಚಿತ್ರಗಳನ್ನೂ ಪ್ರದರ್ಶಿಸಲಾಗುವುದು. ಕರ್ನಾಟಕದಿಂದ ಬರುವ ಕಲಾವಿದರನ್ನು ಆದರದಿಂದ ಸ್ವಾಗತಿಸಿ ಅವರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಎರಡು ವರ್ಷಕ್ಕೊಮ್ಮೆ ವಿಶ್ವ ಕನ್ನಡ ಸಮ್ಮೇಳನವನ್ನು ಹಮ್ಮಿಕೊಳ್ಳುತ್ತೇವೆ. ಇದರಲ್ಲಿ 3ರಿಂದ 4 ಸಾವಿರ ಕನ್ನಡ ಕುಟುಂಬದವರು ಭಾಗವಹಿಸಿ ಕನ್ನಡದ ಜಾತ್ರೆಯಂತೆ ಆಚರಿಸುತ್ತೇವೆ. ಅನಿವಾಸಿ ಕನ್ನಡಿಗರನ್ನು ರಂಜಿಸಲು ಕರ್ನಾಟಕದಿಂದ ಕಲಾವಿದರ ತಂಡವೇ ಬರುತ್ತದೆ. ಇದರಿಂದಾಗಿ ಹೊಸ ಪೀಳಿಗೆಯ ಮಕ್ಕಳುಗಳು, ದಿನದಲ್ಲಿ ಹೆಚ್ಚು ಸಮಯ ಆಂಗ್ಲ ಭಾಷೆಯ ಮಕ್ಕಳೊಂದಿಗೆ ಕಳೆದರೂ ಕನ್ನಡದ ಕಂಪನ್ನು ಮಕ್ಕಳಲ್ಲಿ ಹಿಡಿದಿಡುವುದರಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿ ಕೊಳ್ಳುವುದರಲ್ಲಿ ಹೆಮ್ಮಯಾಗುತ್ತದೆ.

ಅಮೆರಿಕನ್ನಡೋತ್ಸವ ಅನಿವಾಸಿಗಳ ಸಾಹಿತ್ಯ ಗೋಷ್ಠಿಯೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮ ಅನಿವಾಸಿಗಳಿಂದ ಹಲವಾರು ಮನೊರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎರಡೂ ದಿನವೂ ಬೆಳಗ್ಗೆ 10ರಿಂದ ಪ್ರಾರಂಭವಾಗುವ ಕಾರ್ಯಕ್ರಮ, ರಾತ್ರಿ 10ರವರೆಗೆ ಇರುತ್ತದೆ. ಜುಲೈ 12ರಂದು ಸಂಜೆ ಅನಿವಾಸಿಗಳದೊಂದು ವಾದ್ಯಗೋಷ್ಠಿ ವಿಶೇಷ ಕಾರ್ಯಕ್ರಮ. ಜುಲೈ 13ರಂದು ಕಲಾಗಂಗೋತ್ರಿಯವರಿಂದ "ಮೈಸೂರು ಮಲ್ಲಿಗೆ" ನಾಟಕ ಹಾಗೂ ಸಂಜೆ "ಅನಿವಾಸಿ ಬಾಂಧವ್ಯ" ಎಂಬ ವಿಶೇಷ ಕಾರ್ಯಕ್ರಮವಿರುತ್ತದೆ. ಈ ಅನಿವಾಸಿ ಬಾಂಧವ್ಯ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಹೊರದೇಶಗಳಿಗೆ ಭೇಟಿಕೊಟ್ಟ ಕಲಾವಿದರು, ಸಾಹಿತಿಗಳು ಹಾಗೂ ರಾಜಕಾರಣಿಗಳು ತಮ್ಮ ಸಿಹಿ ಕಹಿ ಅನುಭವಗಳನ್ನು ಹಂಚಿಕೊಳ್ಳಲು ಒಂದು ವೇದಿಕೆ. 15ಕ್ಕೂ ಹೆಚ್ಚು ಕನ್ನಡದ ಶ್ರೇಷ್ಠ ಗಾಯಕರುಗಳು ವೇದಿಕೆಯಲ್ಲಿ ಹಾಡಲಿದ್ದಾರೆ.

ಸಮಾರೋಪ ಕಾರ್ಯಕ್ರಮಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ|| ಜಿ. ಪರಮೇಶ್ವರ್ ಹಾಗೂ ಮಾಜಿಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಭಾಗವಹಿಸಲಿದ್ದಾರೆ.

English summary
NAVIKA (North America Vishwa Kannada Association) is celebrating two days Americannadotsava in Bangalore on July 12 and 13, 2014. American Kannadigas exhibit their talent in front of Bangalore citizen. Siddaramaiah will be inaugurating this 2nd festival in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X