ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ಜನರಿಗೆ ಅಭಿನಂದನೆ ಸಲ್ಲಿಸಿದ ಮೋದಿ

|
Google Oneindia Kannada News

ಬೆಂಗಳೂರು, ಸೆ. 23 : ಎರಡು ದಿನಗಳ ಭೇಟಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಸಂಜೆ ಬೆಂಗಳೂರಿಗೆ ಆಗಮಿಸಿದರು. ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಮೋದಿ ಅವರನ್ನು ಬಿಜೆಪಿ ನಾಯಕರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ರಾಜ್ಯಪಾಲ ವಜುಭಾಯಿ ರೂಢಬಾಯಿ ವಾಲಾ, ಸಿಎಂ ಸಿದ್ದರಾಮಯ್ಯ ಅವರು ಹೂಗುಚ್ಛ ನೀಡಿ ಸ್ವಾಗತ ಕೋರಿದರು.

ಕರ್ನಾಟಕ ಬಿಜೆಪಿ ಘಟಕದ ವತಿಯಿಂದ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಮೈಸೂರು ಪೇಟ ತೊಡಿಸಿ, ಕೆಂಪೇಗೌಡರ ಬೆಳ್ಳಿಯ ಪ್ರತಿಮೆ ನೀಡಿ ಅವರನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ಸುಮಾರು 10 ಸಾವಿರ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. [ಮೋದಿ ಕರ್ನಾಟಕ ಭೇಟಿಯ ಕಾರ್ಯಕ್ರಮಗಳು]

ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಅನಂತ ಕುಮಾರ್, ಡಿ.ವಿ.ಸದಾನಂದ ಗೌಡ, ಜಿ.ಎಂ.ಸಿದ್ದೇಶ್ವರ್, ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಮುಂತಾದ ನಾಯಕರು ಪಾಲ್ಗೊಂಡಿದ್ದರು.

BJP Karnataka

ಅಭಿನಂದನೆ ಸ್ವೀಕರಿಸಿದ ಮಾತನಾಡಿದ ಪ್ರಧಾನಿ ಮೋದಿ ದೆಹಲಿಯಲ್ಲಿ ಬಿಜೆಪಿಯ ಸ್ಥಿರ ಸರ್ಕಾರ ರಚಿಸಲು ಸಹಕಾರ ನೀಡಿದ ಕರ್ನಾಟಕದ ಎಲ್ಲಾ ಕಾರ್ಯಕರ್ತರು ಮತ್ತು ನಾಯಕರಿಗೆ ಅಭಿನಂದನೆ ಸಲ್ಲಿಸಿದರು. ಸರ್ಕಾರ ಬಡವರ ಪರವಾಗಿರಬೇಕು ಎಂದು ಹೇಳಿದ ಮೋದಿ, ದೇಶದಲ್ಲಿರುವ ಯುವ ಜನರು ದೇಶಸೇವೆಗಾಗಿ 100 ಗಂಟೆಗಳನ್ನು ಮೀಸಲಾಗಿಡಿ ಎಂದು ಕರೆ ನೀಡಿದರು.

ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ

* 30 ವರ್ಷ ಬಳಿಕ ಪೂರ್ಣ ಬಹುಮತದ ಸರ್ಕಾರ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ ಮೋದಿ, ನಿಮ್ಮ ಬೆಂಬಲ ಬಿಜೆಪಿಗೆ ಶಕ್ತಿ ನೀಡಿದೆ. ದೇಶಕ್ಕೆ ಹಲವಾರು ವರ್ಷಗಳ ಬಳಿಕ ಸ್ಥಿರ ಸರ್ಕಾರ ನೀಡಿದ್ದೀರಿ ಅದಕ್ಕಾಗಿ ರಾಜ್ಯದ ಎಲ್ಲಾ ಸಹೋದರ ಸಹೋದರಿಯರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಭಾಷಣ ಆರಂಭಿಸಿದರು.

* ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದಿದ್ದೇನೆ. ಸೆ.25ರಂದು ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಜನ್ಮ ದಿನ ಅಂದಿನಿಂದ ಅ.2ರ ಗಾಂಧಿ ಜಯಂತಿ ತನಕ ಎಲ್ಲಾ ಸಚಿವಾಲಯಗಳನ್ನು ಶುದ್ಧೀಕರಣ ಮಾಡುತ್ತೇವೆ ಎಂದರು.

* ಹಿಂದಿನ ಸರ್ಕಾರಗಳಿಗೆ ಹೊಸ ಕಾನೂನು ಮಾಡುವುದೇ ಹೆಮ್ಮೆಯ ಕೆಲಸವಾಗಿತ್ತು. ನಮ್ಮ ಸರ್ಕಾರ ನಿರುಪಯೋಗಿ ಕಾನೂನುಗಳನ್ನು ತೆಗೆದು ಹಾಕಲು ನಿರ್ಧರಿಸಿದ್ದು, ಅದಕ್ಕಾಗಿ ಒಂದು ತಜ್ಞರ ಸಮಿತಿ ರಚಿಸಿದೆ ಎಂದು ಹೇಳಿದರು.

* ಜನಧನ ಯೋಜನೆ ಬಗ್ಗೆ ಮಾತನಾಡಿದ ಮೋದಿ, ಬ್ಯಾಂಕ್‍ಗಳು ಬಡವರಿಗಾಗಿ ಬೇಕು. ಹಲವಾರು ವರ್ಷಗಳಿಂದ ಬಡವರಿಗೆ ತಲುಪಬೇಕಾದ ಸೌಲಭ್ಯಗಳು ಶ್ರೀಮಂತರಿಗೆ ತಲುಪಿದವು. ಆದ್ದರಿಂದ ನಾವು ಜನಧನ ಯೋಜನೆ ಆರಂಭಿಸಿದೆವು. ಅಲ್ಪಾವಧಿಯಲ್ಲಿ 4 ಕೋಟಿ ಜನರು ಯೋಜನೆಯಡಿ ಖಾತೆ ತೆರೆದಿದ್ದಾರೆ ಎಂದರು.

* ಜನಧನ ಯೋಜನೆಯಡಿ 1 ಲಕ್ಷ ರೂ.ಗಳ ವಿಮೆ ನೀಡಿದ್ದೇವೆ ಎಂದು ಹೇಳಿದ ಮೋದಿ, ಬಡವರಿಗೆ ವಿಮೆ ಸಿಗಬೇಕು, ಬಡವರು ತೀರಿಕೊಂಡರೆ ಪರಿಹಾರ ನೀಡಬೇಕು. ಯೋಜನೆಯಡಿ ಖಾತೆ ತೆರದವರ 30 ಸಾವಿರ ರೂ.ವರೆಗಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು. [ಜನಧನ ಯೋಜನೆ ಎಂದರೇನು?]

* ಸ್ವಚ್ಛತೆ ಬಗ್ಗೆ ಮಾತನಾಡಿದ ಮೋದಿ ದೇಶದಲ್ಲಿ ಸ್ವಚ್ಛತೆ ಕಾಣಿಸಬೇಕು. ವಿದೇಶದಲ್ಲಿ ಎಲ್ಲವೂ ಶುಚಿಯಾಗಿಯೇ ಇರುತ್ತದೆ. ಸಿಂಗಾಪುರ ಎಷ್ಟು ಚೆನ್ನಾಗಿದೆ, ದುಬೈ ಚೆನ್ನಾಗಿದೆ ಎನ್ನುತ್ತೇವೆ, ನಾನು ನನ್ನ ಪ್ರದೇಶವನ್ನು ಗಲೀಜು ಮಾಡೋಲ್ಲ, ಮಾಡಲು ಬಿಡುವುದಿಲ್ಲ ಎಂದು ನೀವು ಸಂಕಲ್ಪ ಮಾಡಿ, ಮಹಾತ್ಮಾ ಗಾಂಧಿ ದೇಶಕ್ಕೆ ಗುಲಾಮಗಿರಿಯಿಂದ ಮುಕ್ತಿ ನೀಡಿದರು. ನಾವು ಭಾರತ ಮಾತೆಯನ್ನು ಗಲೀಜಿನಿಂದ ಮುಕ್ತ ಗೊಳಿಸಬೇಕು ಎಂದು ಕರೆ ನೀಡಿದರು.

ಮೋದಿಗೆ ಸ್ವಾಗತ ಕೋರಿದ ಸಿಎಂ : ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರಿಗೆ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರಾದ ಅನಂತ ಕುಮಾರ್, ಡಿವಿ ಸದಾನಂದ ಗೌಡ ಮುಂತಾದವರು ಸ್ವಾಗತ ಕೋರಿದರು. [ಏನಿದು ತುಮಕೂರಿನ ಫುಡ್ ಪಾರ್ಕ್]

ಎರಡು ದಿನಗಳ ಭೇಟಿಯಾಗಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಿದ್ದು, ಮಂಗಳವಾರ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬುಧವಾರ ಬೆಳಗ್ಗೆ ನರೇಂದ್ರ ಮೋದಿ ಇಸ್ರೋಗೆ ಭೇಟಿ ನೀಡಲಿದ್ದು, ನಂತರ ತುಮಕೂರಿಗೆ ತೆರಳಿ ಫುಡ್ ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ. [ಕರ್ನಾಟಕದ ಬಿಜೆಪಿ ಸಂಸದರ ಪಟ್ಟಿ]

English summary
Prime Minister Narendra Modi was felicitated by Karnataka BJP unit at HAL airport in Bangalore on 23rd September. Modi was welcomed by Governor Vajubhai Wala, Karnataka CM Siddaramaiah and BJP leaders. Modi is in Bangalore to inaugurate Food Park in Tumkur, visit ISRO in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X