ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಮಶಾನದಲ್ಲಿ ಬಿಡುಗಡೆಯಾಗಲಿದೆ 'ಖಾಲಿ ಶಿಲುಬೆ'!

By Prasad
|
Google Oneindia Kannada News

ಬೆಂಗಳೂರು, ಏ. 22 : ಕನ್ನಡ ಸಾಹಿತ್ಯ ಪರಿಷತ್ತು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ರವೀಂದ್ರ ಕಲಾಕ್ಷೇತ್ರ, ಎಚ್ಎನ್ ಕಲಾಕ್ಷೇತ್ರ... ಇವು ಬೆಂಗಳೂರಿನ ಪುಸ್ತಕ ಪ್ರೇಮಿಗಳ ಅತ್ಯಂತ ಜನಪ್ರಿಯ ತಾಣಗಳು. ಇಡೀ ವಾರ ಕೆಲಸ ಮಾಡಿ ದಣಿದವರಿಗೆ ವಾರಾಂತ್ಯದಲ್ಲಿ ಸ್ನೇಹಿತರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಲು ದಕ್ಕಿರುವ ವೆಲ್ಕಂ ಅವಕಾಶ.

ಇವಿಷ್ಟು ಸ್ಧಳಗಳನ್ನು ಹೊರತುಪಡಿಸಿದರೆ ಬೆಂಗಳೂರಿನ ಬೇರೆ ಸ್ಥಳಗಳಲ್ಲಿ ಪುಸ್ತಕ ಬಿಡುಗಡೆಯಾಗುವುದು ತೀರ ಅಪರೂಪ. ಬರೀ ಅಲ್ಲೇನು ಮಾಡುವುದು ಅಂತ ಕೆಲವೊಬ್ಬರು ತಮ್ಮ ಮನೆಯ ಟೆರೇಸಿನ ಮೇಲೆಯೋ, ಮಾಲ್ ಗಳಲ್ಲೋ ಪುಸ್ತಕಗಳ ಹೆರಿಗೆ ಮಾಡಿಸಿ ಸುಖಿಸುತ್ತಾರೆ. ಆದರೆ, ರುದ್ರಭೂಮಿಯಲ್ಲಿ ಅಂದರೆ ಸ್ಮಶಾನದಲ್ಲಿ ಪುಸ್ತಕ ಬಿಡುಗಡೆಯಾಗಿದ್ದನ್ನು ಕೇಳಿದ್ದೀರಾ? ಅಂಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಾ?

ಇಲ್ಲವಾದರೆ, ನಿಮಗೊಂದು ಅಪರೂಪದ ಅವಕಾಶ ಕೂಡಿಬಂದಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಜಿಂಕೆ ಪಾರ್ಕ್ ಪಕ್ಕದ ಮಸಣದಲ್ಲಿ, ಇದೇ ಭಾನುವಾರ ಏ.27ರಂದು ಸಂಜೆ 4.30 ಗಂಟೆಗೆ ಪುಸ್ತಕ ಬಿಡುಗಡೆಯ ಭಾಗ್ಯ ಕಾಣುತ್ತಿದೆ. "ಸ್ಮಶಾನ ಅಂದ್ರೆ ಅಂತ್ಯವಲ್ಲ, ಆರಂಭ" ಎಂದಿರುವ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರು ರಚಿಸಿರುವ 'ಖಾಲಿ ಶಿಲುಬೆ' ಪಾಪಿಯೊಬ್ಬನ ಪ್ರೇಮ ಪದ್ಯಗಳು ಬಿಡುಗಡೆಯಾಗುತ್ತಿದೆ.

Kannada book release in burial ground

ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿಕೊಂಡು ಗಡಿಬಿಡಿಯಿಂದ ಹೋಗುವ ಹಾಗೂ ಇಲ್ಲ. ಪುಸ್ತಕ ಬಿಡುಗಡೆಗೆ ಬಂದವರನ್ನು ಹಿಡಿದಿಟ್ಟುಕೊಳ್ಳಲು ನಾನಾ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ಪಾಕಿಸ್ತಾನ ಮೂಲದ ಖ್ಯಾತ ಹಿಂದೂಸ್ತಾನಿ ಗಾಯಕ ಹರಿಕೃಷ್ಣ ಪಾವಾಜೀ ಅವರಿಂದ ಸಲಾಫಿ, ಕವ್ವಾಲಿ ಗಾಯನವಿದೆ. ಅಂತಾರಾಷ್ಟ್ರೀಯ ಹಿಂದೂಸ್ತಾನಿ ಗಾಯಕ ಸಮೀರ್ ಆತ್ರೇಯ ಅವರಿಂದಲೂ ಹಾಡುಗಾರಿಕೆಯಿದೆ.

"ಯಾವ ಗೋರಿಯ ಮೇಲೆ ಅರಳಿದ ಹೂವಿಗೂ ಹೆಣದ ವಾಸನೆ ಇರುವುದಿಲ್ಲ!" ಎಂಬ ಟಿಪ್ಪಣಿಯಿರುವ ಕವನ ಸಂಕಲನವನ್ನು ಹಿರಿಯ ಸಾಹಿತಿ ಬೋಳುವಾರು ಮಹಮ್ಮದ್ ಕುಂಞ ಅವರು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕವಿ, ವಿದ್ಯಾರ್ಥಿ ಸಮರಜಿತ್ ಲಂಕೇಶ್ ಭಾಗವಹಿಸುತ್ತಿದ್ದಾರೆ. ಟೈಮ್ ಲೈನ್ ಕ್ರಿಯೇಷನ್ಸ್ ಈ ಪುಸ್ತಕ ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಹೊತ್ತಿದೆ.

ಸ್ಮಶಾನದಲ್ಲಿ ಪುಸ್ತಕ ಬಿಡುಗಡೆಯಾ? ಎಂದು ಜಾಸ್ತಿ ತಲೆ ಕೆಡಿಸಿಕೊಳ್ಳದೆ, ಹೆಚ್ಚು ಚಿಂತೆ ಮಾಡದೆ ಈ ಅಪರೂಪದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಸುಶ್ರಾವ್ಯವಾದ ಸಂಗೀತ ಆಲಿಸಿರಿ. ಸ್ನೇಹಿತರನ್ನು ಕರೆದುಕೊಂಡು ಬಂದು ಇತರ ಸ್ನೇಹಿತರಿಗೂ ಪರಿಚಯಿಸಿ. ಹಳೆ ಸ್ನೇಹಿತರು, ಬಂಧುಗಳು ಭೇಟಿಯಾದರೆ ಆತ್ಮೀಯವಾಗಿ ಮಾತನಾಡಿಸಿ. ಪ್ರೇತಾತ್ಮಗಳೇನಾದರೂ ಇದ್ದರೆ ಅವಕ್ಕೂ ನಿಮ್ಮನ್ನು ಭೇಟಿಯಾಗುವ, ಸಂಗೀತ ಕೇಳುವ ಅವಕಾಶ!

English summary
In an unique attempt, Kannada book (collection of poems - Khali Shilube) will be released in burial ground in Chamarajpet, Bangalore on 27th April, Sunday. The book is written by journalist Chakravarthy Chandrachud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X