ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ಯಾಚಾರ, ಪಿಜಿ ನಿಯಂತ್ರಣಕ್ಕೆ ತಜ್ಞ ಸಮಿತಿ ರಚನೆ

By Prasad
|
Google Oneindia Kannada News

ಬೆಂಗಳೂರು, ಜು. 2 : ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ಹಾಗೂ ಪೇಯಿಂಗ್ ಗೆಸ್ಟ್ (ಪಿ.ಜಿ.)ಗಳ ನಿಯಂತ್ರಣಕ್ಕಾಗಿ ಸರ್ಕಾರವು ಶೀಘ್ರದಲ್ಲಿಯೇ ಉಭಯ ಸದನಗಳ ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗುವುದೆಂದು ಗೃಹ ಸಚಿವರಾದ ಕೆ.ಜೆ. ಜಾರ್ಜ್ ಅವರು ವಿಧಾನ ಪರಿಷತ್‌ನಲ್ಲಿ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಬುಧವಾರ ಸದಸ್ಯರಾದ ಮೋಟಮ್ಮ ಹಾಗೂ ತಾರಾ ಅನುರಾಧ ಅವರು ನಿಯಮ 72ರ ಅಡಿಯಲ್ಲಿ, ಉದ್ಯೋಗ ನಿಮಿತ್ತ ದೇಶದ ಮೂಲೆಮೂಲೆಗಳಿಂದ ಹೆಣ್ಣುಮಕ್ಕಳು ನಗರಕ್ಕೆ ಬಂದು ಪೇಯಿಂಗ್ ಗೆಸ್ಟ್ ನಲ್ಲಿ ನೆಲೆಸುತ್ತಿದ್ದಾರೆ. ಆದರೆ, ಪೇಯಿಂಗ್ ಗೆಸ್ಟ್ ಗಳಲ್ಲಿ ಮಹಿಳೆಯರ ಅತ್ಯಾಚಾರ ಮತ್ತು ಕೊಲೆ ನಡೆಯುತ್ತಿದ್ದು, ಅವರಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸುರಕ್ಷತೆಯಿಲ್ಲದೆ ಪಿ.ಜಿ.ಯಲ್ಲಿ ಇತ್ತೀಚೆಗೆ ಹೆಣ್ಣು ಮಗಳೊಬ್ಬಳ ಮೇಲೆ ನಡೆದ ಅತ್ಯಾಚಾರದ ಘಟನೆ ಬಗ್ಗೆ ಗಮನ ಸೆಳೆದು, ನಗರದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಪಿ.ಜಿ. ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸರ್ಕಾರ ನಿಯಂತ್ರಣ ಹಾಕಲು ನಿಯಮಾವಳಿಯನ್ನು ರೂಪಿಸಬೇಕಿದೆ ಎಂದು ಆಗ್ರಹಿಸಿದರು.

Govt to set up committee to curb crime in paying guest

ಬೆಂಗಳೂರು ಪೊಲೀಸ್ ಠಾಣೆಗಳ ಪರಿಮಿತಿಯಲ್ಲಿ ಅಂದಾಜು 1307 ಪಿ.ಜಿ. ಕೇಂದ್ರಗಳಿದ್ದು, ಪೊಲೀಸ್ ವತಿಯಿಂದ ಎಲ್ಲಾ ಪಿ.ಜಿ. ಕೇಂದ್ರಗಳಿಗೆ ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಪಿ.ಜಿ. ಕೇಂದ್ರಗಳನ್ನು ನಿಯಂತ್ರಿಸಲು ಮತ್ತು ನೋಂದಣಿ ಮಾಡಲು ಯಾವುದೇ ನೀತಿ ನಿಯಮಾವಳಿಗಳು ಲಭ್ಯವಿಲ್ಲ ಎಂದು ಗೃಹ ಸಚಿವರು ವಿವರಿಸಿದರು.

ಬೆಂಗಳೂರು ನಗರ ಪೊಲೀಸ್ ವತಿಯಿಂದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪಿ.ಜಿ. ಕೇಂದ್ರಗಳೊಂದಿಗೆ ಆಯಾ ಪೊಲೀಸ್ ಠಾಣೆಯ ಠಾಣಾಧಿಕಾರಿಯು ನಿರಂತರ ಸಂಪರ್ಕದಲ್ಲಿದ್ದು, ಭದ್ರತೆಗಾಗಿ ಸಿ.ಸಿ.ಟಿ.ವಿ. ಕ್ಯಾಮೆರಾ, ಖಾಸಗಿ ಭದ್ರತಾ ಸಿಬ್ಬಂದಿ, ಬಂದು ಹೋಗುವವರ ನೋಂದಣಿ ಪುಸ್ತಕ ಮುಂತಾದವುಗಳನ್ನು ಪಾಲಿಸುವಂತೆ ಪಿ.ಜಿ. ಮಾಲೀಕರಿಗೆ ಈಗಾಗಲೇ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಎಲೆಕ್ಟ್ರಾನಿಕ್ ಸಿಟಿ ದೊಡ್ಡತೋಗೂರು ಬಳಿ ಪಿ.ಜಿ. ಕೇಂದ್ರದಲ್ಲಿ ನಡೆದ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದ ಸಚಿವರು, ಕೆಲವು ವಿಕೃತ ಮನಸ್ಸಿನವರು ನಡೆಸುವ ಇಂತಹ ಘಟನೆಗಳಿಂದ ತಲೆ ತಗ್ಗಿಸುವಂತಾಗುತ್ತದೆ. ಆದ್ದರಿಂದ ಕಾಲಮಿತಿಯೊಳಗೆ ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಆಯೋಗದೊಂದಿಗೆ ಚರ್ಚಿಸಿ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾನೂನು ತಜ್ಞರು, ಸಾಮಾಜಿಕ ಕಳಕಳಿಯುಳ್ಳ ಸಮಾಜ ಸೇವಕರನ್ನೊಳಗೊಂಡಂತೆ ನಿವೃತ್ತ ಹೈಕೋರ್ಟ್ ಜಡ್ಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗುವುದೆಂದರು.

ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿಸುವ 53 ಅತ್ಯಾಚಾರ ಪ್ರಕರಣಗಳಲ್ಲಿ 48 ಪ್ರಕರಣಗಳ ಅಪರಾಧಿಗಳನ್ನು ಬಂಧಿಸಲಾಗಿದೆ. ಅಪರಾಧಿ ಎಷ್ಟೇ ಪ್ರಭಾವಿಯಾಗಿದ್ದರೂ ಅತ್ಯಾಚಾರ ಪ್ರಕರಣವನ್ನು ಕೂಡಲೇ ದಾಖಲಿಸಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ವರ್ಷ 10 ಹಾಗೂ ಮುಂದಿನ ವರ್ಷ ಇನ್ನು 10 ಮಹಿಳಾ ಪೊಲೀಸ್ ಠಾಣೆಗಳನ್ನು ನೀಡುವ ಮೂಲಕ ಸರ್ಕಾರ ಪ್ರತಿ ಜಿಲ್ಲೆಗೊಂದು ಮಹಿಳಾ ಠಾಣೆಗಳನ್ನು ಆರಂಭಿಸಲಿದೆ ಎಂದರು.

ಸದನದಲ್ಲಿ ಚರ್ಚೆಯಾದ ಈ ವಿಷಯದ ಬಗ್ಗೆ ಸದಸ್ಯರಾದ ಬಿ.ಜೆ. ಪುಟ್ಟಸ್ವಾಮಿ, ಶಾಣಪ್ಪ, ಜಗ್ಗೇಶ್, ಉಗ್ರಪ್ಪ, ಜಯಮಾಲಾ, ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಅವರು ಪಿ.ಜಿ. ಕೇಂದ್ರಗಳನ್ನು ಹೋಟೆಲ್ ಉದ್ಯಮದ ರೀತಿಯಲ್ಲಿಯೇ ನೋಂದಾಯಿಸುವ ವ್ಯವಸ್ಥೆಯನ್ನು ಹಾಗೂ ಹೆಚ್ಚು ಆದಾಯವಿರುವ ಇವರಿಂದ ಶೇಕಡಾ 5ರಿಂದ 10ರಷ್ಟು ತೆರಿಗೆಯನ್ನು ವಸೂಲಿ ಮಾಡುವುದು ಸೇರಿದಂತೆ, ಅಪರಾಧಿಗಳಿಗೆ ಉಗ್ರ ಶಿಕ್ಷೆಯಾಗುವಂತೆ ಕಾನೂನಿನಲ್ಲಿ ಕಠಿಣ ಕಾಯಿದೆಗಳನ್ನು ತರುವಂತೆ ಅಗ್ರಹಿಸಿದರು.

English summary
Karnataka government has decided to set up committee to keep tab on increasing crime in paying guests. The committee to include MLAs, MLCs, advocates, expert advisers. KG Goerge was answering to the questions raised by Tara Anuradha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X