ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ಳು ಹೇಳೋಕೆ, ಕಣ್ಣೀರು ಸುರಿಸೋಕೆ ಬರಲ್ಲ : ಬಚ್ಚೇಗೌಡ

By ಪ್ರಸಾದ ನಾಯಿಕ
|
Google Oneindia Kannada News

ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಕಾಂಗ್ರೆಸ್ ಅಭ್ಯರ್ಥಿ ಡಾ. ವೀರಪ್ಪ ಮೊಯ್ಲಿ ಮತ್ತು ಜಾತ್ಯತೀತ ಜನತಾದಳದ ನಾಯಕ ಎಚ್.ಡಿ. ಕುಮಾರಸ್ವಾಮಿ, ಮತ್ತು ಇವರಿಬ್ಬರ ವಿರುದ್ಧ ನೇರ ನುಡಿ, ದಿಟ್ಟ ನಡೆಗೆ ಹೆಸರುವಾಸಿಯಾಗಿರುವ ಬಿ.ಎನ್. ಬಚ್ಚೇಗೌಡರ ಸ್ಪರ್ಧೆಯಿಂದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠಿತ ಕಣವಾಗಿ ಪರಿಣಮಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳೆಲ್ಲರೂ ಬಿರುಬಿಸಿಲಲ್ಲಿ ಮತಯಾಚನೆಗೆ ಇಳಿದಿದ್ದಾರೆ.

Chikkaballapur BJP candidate BN Bache Gowda interview

2009ರಲ್ಲಿ ಜಯಶಾಲಿಯಾಗಿದ್ದ ವೀರಪ್ಪ ಮೊಯ್ಲಿ ಮತ್ತು ವಿಧಾನಸಭೆಯ ಸದಸ್ಯರಾಗಿದ್ದರೂ ಮತ್ತೆ ಲೋಕಸಭೆ ಚುನಾವಣೆಗಿಳಿದಿರುವ ಕುಮಾರಸ್ವಾಮಿ ಇಬ್ಬರಿಗೂ ನೀರು ಕುಡಿಸೇ ತೀರುತ್ತೇನೆ ಎಂದು ಪಣತೊಟ್ಟಿರುವ ನೇರ ನುಡಿಯ 72 ವರ್ಷದ ಹಿರಿಯ ಧುರೀಣ ಬಿಎನ್ ಬಚ್ಚೇಗೌಡರ ಜೊತೆ ಒನ್ಇಂಡಿಯಾ ಕನ್ನಡದ ಪ್ರತಿನಿಧಿ ನಡೆಸಿದ ಸಂದರ್ಶನ ಇಲ್ಲಿದೆ. [ಪ್ರತಿಷ್ಠಿತ ಕ್ಷೇತ್ರ : ಚಿಕ್ಕಬಳ್ಳಾಪುರ]

ಜನರನ್ನು ಹೆಚ್ಚಾಗಿ ಬಾಧಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ವ್ಯತ್ಯಯ ನಿವಾರಿಸಲು ತಾವು ಕೈಗೊಳ್ಳಬೇಕಿರುವ ಯೋಜನೆಗಳ ಬಗ್ಗೆ ಬಚ್ಚೇಗೌಡರು ಸ್ಪಷ್ಟವಾಗಿ ವಿವರಿಸಿದ್ದಾರೆ. ಜೊತೆಗೆ, ಚಿಕ್ಕಬಳ್ಳಾಪುರ ಕ್ಷೇತ್ರ ಬೆಂಗಳೂರಿಗೆ ಹೊಂದಿಕೊಂಡಿರುವುದರಿಂದ ಜಿಲ್ಲೆಯಲ್ಲಿ ಸಾಫ್ಟ್ ವೇರ್ ಪಾರ್ಕ್ ನಿರ್ಮಿಸುವ ಕನಸನ್ನೂ ಹೊಂದಿದ್ದಾರೆ. ಅವರ ಜೊತೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.

ಪ್ರಶ್ನೆ : ಸರ್, ಮೊದಲ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಿ. ನಿಮ್ಮ ಇಬ್ಬರು ಪ್ರಮುಖ ಎದುರಾಳಿಗಳು ಈಗಾಗಲೇ ಲೋಕಸಭಾ ಪ್ರತಿನಿಧಿಗಳಾಗಿದ್ದವರು. ಅನುಭವದ ಕೊರತೆ ಕಾಡುತ್ತಿದೆಯಾ?

ಬಚ್ಚೇಗೌಡ : ಖಂಡಿತಾ ಇಲ್ಲ. ನನಗೇನೂ ವ್ಯತ್ಯಾಸ ಅನ್ನಿಸುತ್ತಿಲ್ಲಾ. ಎಲ್ಲಾ ಚುನಾವಣೆಗಳೂ ಒಂದೇ. ಜನತೆಗೆ ನನ್ನಲ್ಲಿ ವಿಶ್ವಾಸ ಇದ್ದರೆ ನನ್ನನ್ನು ಚುನಾಯಿಸುತ್ತಾರೆ.

ಪ್ರಶ್ನೆ : ಜನತೆ ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ನಿಮ್ಮಲ್ಲಿ ಹೆಚ್ಚು ವಿಶ್ವಾಸ ಇಟ್ಟಿದ್ದಾರೆ ಅಂತ ನಿಮಗನ್ನಿಸುತ್ತಾ?

ಬಚ್ಚೇಗೌಡ : ಅದನ್ನು ಚುನಾವಣೆ ನಿರ್ಧರಿಸುತ್ತದೆ. ನಾನು ಇದೇ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವನು. ಈ ಕ್ಷೇತ್ರಕ್ಕೆ ಸೇರಿದ ಹೊಸಕೋಟೆ ವಿಧಾನಸಭಾ ಕ್ಷೇತ್ರವನ್ನು ಹಲವಾರು ಭಾರಿ ಪ್ರತಿನಿಧಿಸಿದ್ದೇನೆ. ಹೊಸಕೋಟೆಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಬೆಂಗಳೂರು ಗ್ರಾಮಾಂತರ ಪ್ರದೇಶಕ್ಕೆ ನಾನು ಮಾಡಿರುವ ಕೆಲಸಗಳು ಈ ಕ್ಷೇತದ ಜನಗಳಿಗೆ ಗೊತ್ತಿದೆ. ಜನತೆಗೆ ನನ್ನ ಬಗ್ಗೆ ಬೇರೆಲ್ಲಾ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ವಿಶ್ವಾಸ ಇದೆ ಅನ್ನೋ ಭರವಸೆ ನನಗಿದೆ.

ಪ್ರಶ್ನೆ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಬಿಜೆಪಿಗೆ ಇರೋ ಅನುಕೂಲಗಳೇನು?

ಬಚ್ಚೇಗೌಡ : ಈಗ ಸನ್ನಿವೇಶ ಬಹಳ ಬದಲಾಗಿದೆ. ದೇಶದಲ್ಲೆಲ್ಲಾ ಬಿಜೆಪಿ ಪರ ಅಲೆ ಇದೆ. ಸದ್ಯ ಈ ಕ್ಷೇತದ ಪ್ರತಿನಿಧಿ(ವೀರಪ್ಪ ಮೊಯ್ಲಿ)ಯ ಬಗ್ಗೆ ಇಲ್ಲಿನ ಜನರಿಗೆಲ್ಲಾ ಬಹಳ ನಿರಾಸೆ ಇದೆ. ಜೊತೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಬಹಳ ನೀರಸ ಆಡಳಿತ ನೀಡಿದೆ. ಯುಪಿಎನ ಭ್ರಷ್ಟಾಚಾರ, ಮತ್ತಿತರ ಹಗರಣಗಳಿಂದ ಜನ ಬೇಸತ್ತಿದ್ದಾರೆ. ಈ ಕ್ಷೇತ್ರದ ಪ್ರತಿನಿಧಿಯಿಂದ ಕ್ಷೇತ್ರಕ್ಕೆ ಏನೇನೂ ಪ್ರಯೋಜನ ಆಗಿಲ್ಲ. ನಾನು ಹಿಂದೆ ಮಾಡಿರೋ ಅಭಿವೃದ್ಧಿ ಕಾರ್ಯಗಳು ನನ್ನನ್ನು ಕೈಬಿಡಲ್ಲ ಅನ್ನೋ ನಂಬಿಕೆ ಇದೆ.

English summary
B.N. Bache Gowda (72) is known for his straight forwardness and bold speeches. The veteran BJP politician has taken on Veerappa Moily (Congress) and H.D. Kumaraswamy (JDS) in Chikkaballapur Lok Sabha election 2014. Bache Gowda shares his ideas in an interview with Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X