ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಬದುಕು ನನ್ನ ಫೋಟೋಗ್ರಫಿ ಮತ್ತು ಸುಬ್ಬುಲಕ್ಷ್ಮಿ

By Prasad
|
Google Oneindia Kannada News

ಫೋಟೋಗ್ರಫಿಯಲ್ಲಿ ಆಸಕ್ತಿ ಇರುವವರಿಗೆ ಕೆ ಜಿ ಸೋಮಶೇಖರ್ ಅವರ ಹೆಸರು ಚಿರಪರಿಚಿತ. ಮೂಲತಃ ಚಿತ್ರ ಕಲಾವಿದರಾದ ಕೆಜಿಎಸ್, ಫೋಟೋಗ್ರಫಿಗೆ ಬಂದಿದ್ದೇ ಒಂದು ಆಕಸ್ಮಿಕ. ಚಿತ್ರರಚನೆ ಮಾಡಿಮಾಡಿ ತಮ್ಮ ಕಣ್ಣಿನ ದೃಷ್ಟಿ ಮಂಜಾದ ಮೇಲೆ ಅವರು ಕ್ಯಾಮರಾ ಹಿಡಿದುಕೊಂಡಿದ್ದು! 1970ನೇ ಇಸವಿಯಲ್ಲಿ ಕ್ಯಾಮರಾ ಎತ್ತಿಕೊಂಡ ಮೊದಲ ದಿನವೇ ಅವರು ಕ್ಲಿಕ್ಕಿಸಿದ್ದು ಹಿಂದೂಸ್ತಾನಿ ಸಂಗೀತದ ಮೇರು ಗಾಯಕ ಪಂಡಿತ್ ಮಲ್ಲಿಕಾರ್ಜುನ ಮನಸೂರರ ಫೋಟೋವನ್ನು! ಆಮೇಲೆ ಅವರು ಹಿಂದಿರುಗಿ ನೋಡಲಿಲ್ಲ.

ಈಗ ಎಲ್ಲೆಲ್ಲೂ ಕಾಣುತ್ತಿರುವ ತುಂಬುನಗುವಿನ ಕುವೆಂಪು, ಋಷಿಯಂತೆ ಕಾಣುವ ಡಿವಿಜಿ, ಅಪರೂಪಕ್ಕೆ ಗಡ್ಡಧಾರಿಯಾಗಿರುವ ಮಾಸ್ತಿ, ತಮ್ಮ ಮುಖದ ತುಂಬಾ ನವರಸಗಳನ್ನೇ ಉಕ್ಕಿಸುತ್ತಿರುವ ಗುಬ್ಬಿ ವೀರಣ್ಣ, ಗಂಭೀರ ಮುಖಮುದ್ರೆಯ ಎಸ್ ಎಲ್ ಭೈರಪ್ಪ, ದಿವ್ಯವಾಗಿ ಕಾಣುವ ಮದರ್ ತೆರೇಸಾ, ತಿಳಿನಗೆಯ ಗಂಗೂಬಾಯಿ ಹಾನಗಲ್, ಸಿಗರೇಟು ಸೇದುತ್ತಿರುವ ಶಿವರಾಮ ಕಾರಂತ, ಚಿಂತಾಕ್ರಾಂತನಾಗಿರುವ ಎರ್ನೊ ರೂಬಿಕ್, ಹಾಸ್ಯವನ್ನು ಹೊರಹೊಮ್ಮಿಸುತ್ತಿರುವ ಎಂ ಡಿ ರಾಮನಾಥನ್, ಗಾಯನದಲ್ಲಿ ಮುಳುಗಿರುವ ಎಂ ಎಸ್ ಸುಬ್ಬುಲಕ್ಮಿ, ಠಾಕು-ಠೀಕಾಗಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಚೆಲುವಿನ ಖನಿಯಂತಿರುವ ಕಮಲಾ ದಾಸ್, ಅಬೋಧ ನಗುವಿನ ದಲೈಲಾಮಾ, ಏನನ್ನೋ ಯೋಚಿಸುತ್ತಿರುವ ಜೆ ಆರ್ ಡಿ ಟಾಟಾ, ಆಕಸ್ಮಿಕವಾಗಿ ಗೊತ್ತಾದ ವಯೋವೃದ್ಧೆ ತಿರುಮಲಾಂಬಾ... ಹೀಗೆ ಅವರ ಅದ್ವಿತೀಯ ಫೋಟೋಗಳ ಸಂಖ್ಯೆ ಸಾವಿರಕ್ಕೂ ಹೆಚ್ಚು.

Book by KG Somashekar and on MS Subbulakshmi

ಯಾವ ಕಾರಣಕ್ಕೂ ಫ್ಲ್ಯಾಶ್ ಬಳಸದೆ, ಪ್ರಕೃತಿಸಹಜ ನೆರಳು-ಬೆಳಕಿನ ವಿಲಾಸದಲ್ಲೇ ಫೋಟೋಗಳನ್ನು ಕ್ಲಿಕ್ ಮಾಡಿರುವುದು ಕೆಜಿಎಸ್ ಅವರ ಹೆಚ್ಚುಗಾರಿಕೆ. ಇಂಥ ಕೆಜಿಎಸ್ ಅವರ ನೆನಪುಗಳು ಮತ್ತು ಕೆಲವು ಆಯ್ದ ಫೋಟೋಗಳ ಹಿಂದಿನ ಸ್ವಾರಸ್ಯವನ್ನು ಒಳಗೊಂಡಿರುವ ಪುಸ್ತಕ ‘ನನ್ನ ಬದುಕು, ನನ್ನ ಫೋಟೋಗ್ರಫಿ'. ಇದರ ನಿರೂಪಣೆ ಪತ್ರಕರ್ತ ಬಿ ಎಸ್ ಜಯಪ್ರಕಾಶ ನಾರಾಯಣ ಅವರದು.

***
ಹಾಗೆಯೇ ಸಂಗೀತಪ್ರಿಯರಿಗೆ ಎಂ ಎಸ್ ಸುಬ್ಬುಲಕ್ಮಿ ಎಂದರೆ ಚಿರಪರಿಚಿತ. ಅವರ ಕಂಠದಲ್ಲಿ ಹೊಮ್ಮಿರುವ ವೆಂಕಟೇಶ್ವರ ಸುಪ್ರಭಾತವನ್ನು ಕೇಳದ ಭಾರತೀಯನಿಲ್ಲ. ಅವರಷ್ಟು ದೈವದತ್ತವಾದ ಗಂಧರ್ವಪ್ರತಿಭೆ ಪ್ರಾಯಶಃ ಭಾರತದಲ್ಲಿ ಇನ್ನೊಬ್ಬರಿಲ್ಲ. ಆದರೆ, ಇಂಥ ಅಪ್ರತಿಮ ಗಾಯಕಿಯನ್ನು ಕುರಿತು ಕನ್ನಡದಲ್ಲಿ ಬಂದಿರುವ ಕೃತಿಗಳ ಸಂಖ್ಯೆ ಎರಡೇ ಎರಡು! ಈಗ ಈ ಕೊರತೆಯನ್ನು ನೀಗಿಸುವಂಥ ಪುಸ್ತಕ ಬರುತ್ತಿದೆ. ಅದೇ ‘ಸುನಾದ ವಿನೋದಿನಿ ಎಂ ಎಸ್ ಸುಬ್ಬುಲಕ್ಷ್ಮಿ'. ಅದ್ವಿತೀಯ ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಮೊಮ್ಮಗ ಎಸ್ ಕೃಷ್ಣಮೂರ್ತಿಗಳು ಇದರ ಲೇಖಕರು.

ಇವೆರಡೂ ಪುಸ್ತಕಗಳು ಜೂನ್ 22ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಡಿವಿಜಿ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿವೆ. ಚಿಂತಕ-ಬರಹಗಾರ ಚಿರಂಜೀವಿ ಸಿಂಗ್, ಹಿರಿಯ ವಿದ್ವಾಂಸ ಎಸ್ ಆರ್ ರಾಮಸ್ವಾಮಿ ಮತ್ತು ಖ್ಯಾತ ಲೇಖಕ, ಅನುವಾದಕ ಎಸ್ ದಿವಾಕರ್ ಅವರು ಸಮಾರಂಭದ ಮುಖ್ಯ ಅತಿಥಿಗಳು. ಇವೆರಡೂ ಪುಸ್ತಕಗಳ ಪ್ರಕಾಶಕರು- ಆಕೃತಿ ಪುಸ್ತಕ, ರಾಜಾಜಿನಗರ, ಬೆಂಗಳೂರು-10.

ಕಾರ್ಯಕ್ರಮದ ವಿವರ ಮತ್ತೊಮ್ಮೆ

ಪುಸ್ತಕ 1 : ಸುನಾದ ವಿನೋದಿನಿ ಎಂ ಎಸ್ ಸುಬ್ಬುಲಕ್ಷ್ಮಿ
ಲೇಖಕ : ಎಸ್. ಕೃಷ್ಣಮೂರ್ತಿ

ಪುಸ್ತಕ 2 : ನನ್ನ ಬದುಕು ನನ್ನ ಫೋಟೋಗ್ರಫಿ
ಲೇಖಕ : ಕೆ ಜಿ ಸೋಮಶೇಖರ್, (ನಿರೂಪಣೆ) ಬಿ ಎಸ್ ಜಯಪ್ರಕಾಶ್ ನಾರಾಯಣ

ಮುಖ್ಯ ಅತಿಥಿಗಳು : ಚಿರಂಜೀವಿ ಸಿಂಗ್, ಎಸ್ ಆರ್ ರಾಮಸ್ವಾಮಿ, ಎಸ್. ದಿವಾಕರ್

ಉಪಸ್ಥಿತಿ : ಎಸ್. ಕೃಷ್ಣಮೂರ್ತಿ, ಕೆ ಜಿ ಸೋಮಶೇಖರ್, ಬಿ ಎಸ್ ಜಯಪ್ರಕಾಶ ನಾರಾಯಣ

ದಿನ, ಸಮಯ : 22ನೇ ಜೂನ್ 2014, ಬೆಳಗ್ಗೆ 10 ಕ್ಕೆ

ಸ್ಥಳ : ಡಿವಿಜಿ ಸಭಾಂಗಣ, ಗೋಖಲೆ ಸಾರ್ವಜನಿಕ ವಿಚಾರ ವೇದಿಕೆ, ಬುಲ್ ಟೆಂಪಲ್ ರೋಡ್, ಬೆಂಗಳೂರು.

English summary
Gokhale Institute on Bull Temple Road in Basavanagudi, Bangalore will witness release two Kannada books on Sunday, 22nd June, 2014. One, by photographer KG Somashekar (narration by BS Jayaprakash Narayan) and two, on legendary singer MS Subbulakshmi by S Krishnamurthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X