ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿಲನಾಡಿನ ಊರುಗಳಿಗೆ ಸೆಡ್ಡು ಹೊಡೆದ ಬೆಂಗಳೂರು!

By Prasad
|
Google Oneindia Kannada News

ಬೆಂಗಳೂರು, ಏ. 28 : ಎಂಬತ್ಮೂರು ವರ್ಷಗಳ ದಾಖಲೆ ಧೂಳಿಪಟವಾಗಿದೆ. ಭಾರತೀಯ ಹವಾಮಾನ ಇಲಾಖೆ ನಮೂದಿಸಿದಂತೆ ಬೆಂಗಳೂರಿನ ತಾಪಮಾನ ಸೋಮವಾರ ಮಧ್ಯಾಹ್ನ 3 ಗಂಟೆಗೆ 39 ಡಿಗ್ರಿ ಸೆಂಟಿಗ್ರೇಡ್. ಗುಲಬರ್ಗ, ಬಳ್ಳಾರಿ, ರಾಯಚೂರು, ಬೀದರ್, ಬಿಜಾಪುರ ಜಿಲ್ಲೆಗಳಿಗೆ ಬೆಂಗಳೂರು ಸೆಡ್ಡು ಹೊಡೆಯುವ ದಿನಗಳು ದೂರವೇನಿಲ್ಲ!

1996ರಲ್ಲಿ ಬೆಂಗಳೂರಿನಲ್ಲಿ 37.3 ಡಿಗ್ರಿ ಸೆಂಟಿಗ್ರೇಡ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. 1931ರಲ್ಲಿ ಗರಿಷ್ಠ ತಾಪಮಾನ 38.9 ಡಿಗ್ರಿ ಸೆಲ್ಶಿಯಸ್ಸಿಗೆ ಮುಟ್ಟಿತ್ತು.ಈ ದಾಖಲೆಯನ್ನು ಸೋಮವಾರದ ತಾಪಮಾನ ಧೂಳಿಪಟ ಮಾಡಿದೆ. ಅಭಿನಂದನೆಗಳು ಬೆಂಗಳೂರು. ಈ ದಾಖಲೆಯ ಓಟ ಹೀಗೇ ಸಾಗಲಿ. ಅಂದ ಹಾಗೆ, ಮೇ ತಿಂಗಳ ದಿನಗಳಲ್ಲಿ ತಾಪಮಾನ ಇನ್ನೂ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಈಗಾಗಲೆ ಹೇಳಿದೆ.

ಮಧ್ಯಾಹ್ನವಾಗುತ್ತಿದ್ದಂತೆ ರಸ್ತೆಗೆ ಕಾಲಿಟ್ಟರೆ ಭಗ್ಗನೆ ರಾಚುವ ಹಬೆ, ವಿಪರೀತ ವಾಹನ ದಟ್ಟಣೆ, ಅರ್ದಂಬರ್ಧ ರಿಪೇರಿ ಮಾಡಿ ಬಿಡಲಾದ ಪಾದಚಾರಿ ಮಾರ್ಗದ ಧೂಳನ್ನು ಎಬ್ಬಿಸಿಕೊಂಡು ಹೋಗುವ ಬಸ್ಸು ಕಾರುಗಳು, ಕಾರ್ಬನ್ ಡೈಆಕ್ಸೈಡ್ ಉಗುಳುತ್ತ ಸಾಗುವ ವೋಲ್ವೋ ಬಸ್ಸುಗಳು, ಕೈಮುರಿದು ನಿಂತಂತಿರುವ ಅಕ್ಕಪಕ್ಕದ ಗಿಡಮರಗಳು ಬೆಂಗಳೂರಿಗರ ಜೀವನವನ್ನು ಅಸಹನೀಯವಾಗಿಸುತ್ತಿವೆ.

Bangalore touches highest ever temperature

ಜೊತೆಗೆ, ಒಣಗಿಹೋಗಿರುವ ಕೆರೆಕಟ್ಟೆಗಳು, ಆ ಕೆರೆಗಳ ಬದಿಯಲ್ಲಿ ಮುಗಿಲೆತ್ತರಕ್ಕೆ ನಿಲ್ಲುತ್ತಿರುವ ವಸತಿ ಸಮುಚ್ಚಯಗಳು, ಭೂಮಿಯನ್ನು ಬಗೆಯುತ್ತಿರುವ ಬೋರ್ ವೆಲ್ ಗಳು ಅಂತರ್ಜಲವನ್ನು ಬಸಿದುಬಿಟ್ಟಿವೆ. ಕಳೆದ ವರ್ಷ ಆದ ಉತ್ತಮ ಮಳೆಯ ಲಾಭವನ್ನು ಸಂಪೂರ್ಣವಾಗಿ ಪಡೆಯಲು ಬೆಂಗಳೂರು ವಿಫಲವಾಗಿದೆ. ನೀರ ಹನಿಯ ಪ್ರಯೋಜನ ಬೆಂಗಳೂರಿನ ಅನೇಕರಿಗೆ ಇನ್ನೂ ತಿಳಿದಂತಿಲ್ಲ.

ಸಿಗ್ನಲ್ ಅಷ್ಟು ದೂರ ಇರುವಾಗ ಕೆಂಪು ದೀಪ ಅಂಟಿಕೊಂಡರೆ ಪಕ್ಕದಲ್ಲಿ ಎಲ್ಲಾದರೂ ಗಿಡದ ನೆರಳು ಸಿಗುತ್ತದೆಂದು ನೋಡುವವರೇ ಹೆಚ್ಚು. ಈ ಬಿಸಿಲಲ್ಲಿ ಯಾವೋನು ಹೆಲ್ಮೆಟ್ ಹಾಕ್ಕೊಳ್ತಾನೆ ಅಂತ ಹೆಲ್ಮೆಟ್ ಇಲ್ಲದೆ ಅಡ್ಡಾಡುತ್ತಿರುವ ದ್ವಿಚಕ್ರ ವಾಹನ ಚಾಲಕರು ಅಲ್ಲೇ ನಿಂತಿದ್ದ ಪೊಲೀಸರನ್ನು ಕ್ಯಾರೆ ಅನ್ನುವುದಿಲ್ಲ. ಅಂಥವರನ್ನು ಬೆವರು ಸುರಿಸುತ್ತ ನಿಂತಿರುವ ಸಂಚಾರಿ ಪೊಲೀಸರು ಹಿಡಿಯಲು ಕೂಡ ಅಷ್ಟಾಗಿ ಯತ್ನಿಸುತ್ತಿಲ್ಲ.

ಎಳೆನೀರು ಮಾರಾಟಗಾರರಿಗೆ ಮಾತ್ರ ಭರ್ಜರಿ ಯಾಪಾರ. ಕೆಲ ದಿನಗಳ ಹಿಂದೆ 20 ರುಪಾಯಿ ಇದ್ದ ಎಳೆನೀರು ಬೆಲೆ ಈಗ ಕ್ವಾರ್ಟರ್ ಸೆಂಚುರಿಗೆ ಏರಿದೆ. ಬೆವರೊರೆಸಿಕೊಳ್ಳುತ್ತ ಕುಡಿಯಸು ಬರುವವರು ತಕರಾರು ಮಾಡುತ್ತಿಲ್ಲ, ಮಾಡುವಂತೆಯೂ ಇಲ್ಲ. ಇಷ್ಟು ಬಿಸಿಲೇರಿದರೆ ಸಂಜೆ ಮಳೆ ಗ್ಯಾರಂಟಿ ಅನ್ನುತ್ತಿದ್ದವರು ಕಾಯುತ್ತಲೇ ಇರುವಂತಾಗಿದೆ.

ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಮಹಿಳೆಯರು ಮುಖಕ್ಕೆ ವೇಲ್ ಕಟ್ಟಿಕೊಂಡು, ರಸ್ತೆಯಲ್ಲಿ ಅಡ್ಡಾಡುವವರು ಕೊಡೆ ಹಿಡಿದುಕೊಂಡು ಬಿಸಿಲಿನ ಝಳದಿಂದ ಪಾರಾಗುವ ಉಪಾಯ ಕಂಡುಕೊಂಡಿದ್ದಾರೆ. ಗಂಡಸರಿಗೆ ಛತ್ರಿ ಹಿಡಿದುಕೊಂಡು ಅಡ್ಡಾಡುವುದೆಂದರೆ ಯಾಕೋ ಹಿಂದೇಟು.


ಗುಲಬರ್ಗದಲ್ಲಿ ಅತಿ ಹೆಚ್ಚು ತಾಪಮಾನ : ಭಾನುವಾರ ಗುಲಬರ್ಗದಲ್ಲಿ 41.4 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ದಾಖಲಾಗಿದೆ. ಬಳ್ಳಾರಿ ಮತ್ತು ರಾಯಚೂರಿನಲ್ಲಿ ಬಿಸಿಲು ಸ್ಪರ್ಧೆಗಿಳಿದಿದ್ದು, 42 ಡಿಗ್ರಿ ತಲುಪಿದೆ ಎಂಬ ವರದಿ ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿ ಪ್ರಕಾಶ್ ಅವರು ಹೇಳಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಆದಿತ್ಯವಾರ 40 ಡಿಗ್ರಿ ದಾಟಿದೆ. [ಏನ್ ಬಿಸಿಲೈತ್ರಿ ಧಾರವಾಡದಾಗ]

ಈ ಬಿಸಿಲಿನ ನಡುವೆಯೂ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ, ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಕೆಲವೆಡೆ ಮಳೆಯಾಗಿ ತಂಪೆರೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 6 ಸೆಂ.ಮೀ., ಶಿವಮೊಗ್ಗದ ಹೊಸನಗರದಲ್ಲಿ, ಚಿಕ್ಕಮಗಳೂರಿನ ಬಾಳೆಹೊನ್ನೂರು, ದಕ್ಷಿಣ ಕನ್ನಡದ ಮಣಿಯಲ್ಲಿ, ಹಾವೇರಿ ಜಿಲ್ಲೆಯ ಹಿರೇಕೇರೂರ, ಗುಲಬರ್ಗಾದ ಜೇವರ್ಗಿ, ಚಾಮರಾಜನಗರದ ಬಂಡೀಪುರದಲ್ಲಿ ತಲಾ 3 ಸೆಂ.ಮೀ..

English summary
According to Indian Meteorological department Bangalore has touched 39 degree Celsius on 28th April around 3 PM. Probably this is highest ever temperature recorded in Bangalore. Gulbarga, Bellary and Raichur are also boiling at 42 degree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X