ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಡೆದಾಟಗಳ ನಡುವೆ ಬಿಪ್ಯಾಕ್ ಚರ್ಚೆ ಪ್ಯಾಕಪ್

By ಪ್ರಸಾದ ನಾಯಿಕ
|
Google Oneindia Kannada News

ಬೆಂಗಳೂರು, ಮಾ. 29 : ಡೌನ್ ಡೌನ್ ಕಾಂಗ್ರೆಸ್, ಡೌನ್ ಡೌನ್ ಬಿಜೆಪಿ ಘೋಷಣೆಗಳ ನಡುವೆ 'ಬೋಲೋ ಭಾರತ್ ಮಾತಾಕೀ ಜೈ' ಘೋಷಣೆ ಸತ್ವ ಕಳೆದುಕೊಂಡಿತ್ತು. 'ಶಾಂತಿಯಿಂದ ವರ್ತಿಸಿ' ಎಂಬ ಸಂಘಟಕರ ಮನವಿಯ ಮಾತಿಗೆ ಅಲ್ಲಿ ಕವಡೆ ಕಾಸಿನ ಕಿಮ್ಮತ್ತಿರಲಿಲ್ಲ. ಅವರು ಐವತ್ತು ಜನ ಇದ್ದೇರೇನಂತೆ, ನಾವು ಐನೂರು ಜನರಿದ್ದೇವೆ ಒಂದು ಕೈ ನೋಡೇ ಬಿಡೋಣ ಎನ್ನುವ ಅಬ್ಬರದ ಮಾತುಗಳ ನಡುವೆ ಯಾರೂ ಏನೂ ಮಾಡದಂತಹ ಸನ್ನಿವೇಶ.

ಇದು ಬೆಂಗಳೂರು ಜಯನಗರ 3ನೇ ಬಡಾವಣೆಯಲ್ಲಿರುವ ಎನ್ಎಂಕೆಆರ್‌ವಿ ಕಾಲೇಜಿನ ಮಂಗಳ ಹಾಲ್ ನಲ್ಲಿ ಶನಿವಾರ ಮಧ್ಯಾಹ್ನ ಕಂಡುಬಂದಂತಹ ದೃಶ್ಯ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಒಂದೇ ವೇದಿಕೆಯ ಮೇಲೆ ತಂದು ಬಿಪ್ಯಾಕ್ (ಬೆಂಗಳೂರು ಪಾಲಿಟಿಕಲ್ ಆಕ್ಷನ್ ಕಮಿಟಿ) ಆಯೋಜಿಸಿದ್ದ ಈ ಪ್ರಯೋಗ ಗೌಜು, ಗದ್ದಲ, ಎರಡು ಪಕ್ಷಗಳ ನಡುವಿನ ಹೊಡೆದಾಟ ಬಡಿದಾಟಗಳಿಂದಾಗಿ ಅರ್ಧಕ್ಕೇ ರದ್ದಾಯಿತು. [ಬಿಪ್ಯಾಕ್ ಪ್ರಶ್ನೆಗಳಿಗೆ ಬೆಂ.ದ. ಅಭ್ಯರ್ಥಿಗಳ ಉತ್ತರ]

Bangalore South BPAC program ends in chaos

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಮಸ್ಯೆಗಳು, ಅವರನ್ನು ಸಂಸದರಾಗಿ ಆಯ್ಕೆಯಾಗುವವರು ಹೇಗೆ ನಿಭಾಯಿಸುತ್ತಾರೆ, ಬೆಂಗಳೂರಿನ ಅಭಿವೃದ್ಧಿಗೆ ಯಾವ ರೀತಿ ಶ್ರಮಿಸುತ್ತಾರೆ ಎಂಬುದನ್ನು ಅರಿಯಲು ಬಿಪ್ಯಾಕ್ ಈ ವೇದಿಕೆಯನ್ನು ಕಲ್ಪಿಸಿತ್ತು ಮತ್ತು ಕ್ಷೇತ್ರದ ಮತದಾರರನ್ನು ಕೂಡ ಆಹ್ವಾನಿಸಿತ್ತು. ಆದರೆ, ದುರಾದೃಷ್ಟವಶಾತ್ ಕ್ಷೇತ್ರದ ಮತದಾರರ ಶಕ್ತಿಗಿಂತ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ 'ಶಕ್ತಿ' ಪ್ರದರ್ಶನದಿಂದಾಗಿ ಮತದಾರರ ಕೈ ಮೇಲಾಗಲಿಲ್ಲ, ಅವರು ಯಾವ ಪ್ರಶ್ನೆಗಳನ್ನೂ ಕೇಳಲಾಗಲಿಲ್ಲ.

ಪ್ರೇಕ್ಷಕರ ಗ್ಯಾಲರಿಯಿಂದ ಪ್ರತಿಭಟನೆಯ ದನಿ ಮೊದಲು ಎದ್ದದ್ದು ಬಿಪ್ಯಾಕ್ ಸಂಘಟಕರು ಕನ್ನಡದಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡುವ ಬದಲು ಆಂಗ್ಲ ಭಾಷೆಯಲ್ಲಿ ನಡೆಸಿಕೊಟ್ಟಾಗ. ನಂತರ, ಇನ್ಫೋಸಿಸ್ ಮಾಜಿ ಸಂಸ್ಥಾಪಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಕೂಡ ಇಂಗ್ಲಿಷ್ ಭಾಷೆಯಲ್ಲಿ ಭಾಷಣ ಆರಂಭಿಸಿದಾಗ ಈ ಪ್ರತಿಭಟನೆ ತಾರಕಕ್ಕೇರಿತು. 'ಕನ್ನಡ ಭಾಷೆಯಲ್ಲಿ ಮಾತಾಡಿ' ಎಂಬ ಆಗ್ರಹ ಕೇಳಿಬಂದಿದ್ದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಕೂಡ ದನಿಗೂಡಿಸಿದರು.

"ಕನ್ನಡ ಅಂತೆ ಕನ್ನಡ. ಪಾರ್ಲಿಮೆಂಟಿನಲ್ಲಿ ಕನ್ನಡ ಮಾತಾಡಿದರೆ ಕೆಲಸ ನಡೆಯುತ್ತಾ? ಯಾವ ಭಾಷೆಯಲ್ಲಿ ಮಾತಾಡಿದರೇನಂತೆ ಸಮಸ್ಯೆಗಳಿಗೆ ಪರಿಹಾರ ದೊರಕಿದರೆ ಸಾಕಲ್ಲವೆ?" ಎಂಬ ಮಾತನ್ನು ನಾಲ್ಕನೇ ಸಾಲಿನಲ್ಲಿ ಕೂತಿದ್ದ ಸುಸಂಸ್ಕೃತನಂತೆ ಕಾಣುತ್ತಿದ್ದ ಯುವಕನೊಬ್ಬ ಪಕ್ಕದವನೊಡನೆ ಇಂಗ್ಲಿಷ್ ಭಾಷೆಯಲ್ಲಿ ತನ್ನ ಅಸಮಾಧಾನ ತೋಡಿಕೊಂಡ. ಗದ್ದಲದ ನಡುವೆ ಸದ್ಯ ಆತ ಆಡಿದ ಮಾತುಗಳು ತುಸುದೂರವಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಕಿವಿಗೆ ಬೀಳಲಿಲ್ಲ.

ಬಿಜೆಪಿಯ ಅಭ್ಯರ್ಥಿ ಮತ್ತು ಐದು ಬಾರಿ ಈ ಕ್ಷೇತ್ರದಿಂದ ಸಂಸದರಾಗಿ ಆರನೇ ಬಾರಿ ಕಣಕ್ಕಿಳಿದಿರುವ ಅನಂತ್ ಕುಮಾರ್ ಅವರನ್ನು ಹೊರತುಪಡಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನೀನಾ ನಾಯಕ್ (ಕೊಂಕಣಿ ಮಾತೃಭಾಷೆ) ಮತ್ತು ಜನತಾದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ರುತ್ ಮನೋರಮಾ (ತಮಿಳು ಮಾತೃಭಾಷೆ) ಆಂಗ್ಲ ಮಿಶ್ರಿತ ಕನ್ನಡದಲ್ಲಿ (ಆಗಾಗ ತಡವರಿಸುತ್ತ) ಮಾತನಾಡಿದರು. ಅವರ ಮಾತುಗಳು ಅರ್ಧ ಕನ್ನಡದಲ್ಲಿದ್ದರೂ ಪರಿಸ್ಥಿತಿ ಶಾಂತವಾಗಿಯೇ ಇತ್ತು. ಆದರೆ ಯಾವಾಗ, ಅನಂತ್ ಕುಮಾರ್ ಅವರು ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಬಗ್ಗೆ ಪ್ರಸ್ತಾಪಿಸಿದರೋ ಪರಿಸ್ಥಿತಿ ಹದ್ದುಮೀರಿ ಹೋಯಿತು.

ವೇದಿಕೆಯ ಮುಂದಿನ ಭಾಗ ರಣರಂಗವಾಯಿತು. ಬೋಲೋ ಭಾರತ್ ಮಾತಾಕಿ ಜೈ, ಶಾಂತಿಯಿಂದ ಕುಳಿತುಕೊಳ್ಳಿ ಎಂದು ಅನಂತ್ ಮನವಿ ಮಾಡುತ್ತಿದ್ದರೂ, ಪ್ಲೀಸ್ ಗೋ ಬ್ಯಾಕ್, ಶಾಂತಿಯಿಂದ ವರ್ತಿಸಿ ಎಂದು ನಂದನ್ ನಿಲೇಕಣಿ ವಿನಂತಿಸುತ್ತಿದ್ದರೂ, ಸ್ವಾಮಿ ಗಲಾಟೆ ಮಾಡಬೇಡಿ ಸೀಟಿಗೆ ಹೋಗಿ ಕುಳಿತುಕೊಳ್ಳಿ ಎಂದು ಬಿಪ್ಯಾಕ್ ಕಾರ್ಯದರ್ಶಿ ಜೈರಾಜ್ ಕೇಳುತ್ತಿದ್ದರೂ, ಕೀಪ್ ಕ್ವಯಟ್ ಎಂದು ಬಿಪ್ಯಾಕ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಅವರು ಮೈಕಲ್ಲಿ ಕೂಗಿ ಹೇಳುತ್ತಿದ್ದರೂ ಕೇಳುವಂಥ ಸ್ಥಿತಿಯಲ್ಲಿ ಕಾರ್ಯಕರ್ತರು ಇರಲಿಲ್ಲ.

ಅರ್ಧಕ್ಕೇ ನಿಂತರೂ ಅಲ್ಲಿ ನಡೆದ ಚರ್ಚೆ ಎಂಥದು? ಯಾವ ಪ್ರಶ್ನೆಗಳನ್ನು ಕೇಳಲಾಯಿತು. ಅವುಗಳಿಗೆ ಎಲ್ಲ ನಾಲ್ಕು ಅಭ್ಯರ್ಥಿಗಳು ನೀಡಿದ ಉತ್ತರಗಳು ಎಂಥವು ಎಂಬುದನ್ನು ಮುಂದಿನ ಲೇಖನದಲ್ಲಿ ಓದಿರಿ.

English summary
'Candidates Meet the Citizens' - @BPAC initiative for Bangalore South Lok Sabha constituency was magnificent flop. It was a real Dance of Democracy in NMKRV auditorium, Jayanagar, Bangalore. Political activists, Pro-Kannada and Pro-English people together defeat great effort.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X