ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುಷ್ಪಕ್ ಬಸ್: ಕೊನೆಗೂ ಎಚ್ಚೆತ್ತ ಬಿಎಂಟಿಸಿ

By Srinath
|
Google Oneindia Kannada News

Bangalore BMTC Pushpak buses get double doors facility
ಬೆಂಗಳೂರು, ಏಪ್ರಿಲ್ 5: ರಾಜಧಾನಿ ಜನಕ್ಕೆ ಬಸ್ ಪ್ರಯಾಣ ಸೇವೆ ಒದಗಿಸುವ ಬಿಎಂಟಿಸಿ ಸಂಸ್ಥೆ ಕೊನೆಗೂ ಎಚ್ಚೆತ್ತಿದೆ. ಹೆಸರಿಗೆ ಅನ್ವರ್ಥಕವಾಗದೆ ಪ್ರಯಾಣವನ್ನು ದುರ್ಗಮಗೊಳಿಸುವ ಮತ್ತು ತೀರಾ ಇತ್ತೀಚೆಗೆ ಅತ್ಯಾಚಾರಕ್ಕೆ ಆಶ್ರಯತಾಣವಾಗಬಹುದ ಎಂಬ ಭೀತಿ ವ್ಯಕ್ತವಾದ ಹಿನ್ನೆಲೆಯಲ್ಲಿ ಪುಷ್ಪಕ್ ಬಸ್ಸಿನಲ್ಲಿ ಒಂದಷ್ಟು ಬದಲಾವಣೆ ತರಲು ಸಂಸ್ಥೆ ಬಯಸಿದೆ.

ಆದರೆ ಬಹಳಷ್ಟು 'ಮ್ಯಾನುಫ್ಯಾಕ್ಟರಿಂಗ್ ಡಿಫೆಕ್ಟ್' ಹೊಂದಿರುವ ಈ ಪುಷ್ಪಕ್ ಬಸ್ಸಿನಲ್ಲಿ ಇನ್ನೂ ಸಾಕಷ್ಟು ಬದಲಾವಣೆಗಳನ್ನು ಮಾಡುವ ಅಗತ್ಯವಿದೆ ಎಂಬುದು ದಿನಾ ಹಿಂಸೆ ಅನುಭವಿಸುತ್ತಲೇ ಈ ಬಸ್ಸಿನಲ್ಲಿ ಪ್ರಯಾಣಿಸುವವರ ಪ್ರಾಮಾಣಿಕ ಅನಿಸಿಕೆ. ಸಂಸ್ಥೆ ಎಚ್ಚೆತ್ತುಕೊಳ್ಳಲಿ; ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲಿ ಎಂದು ಆಶಿಸೋಣ.

ಸದ್ಯಕ್ಕೆ ಬಿಎಂಟಿಸಿ ಸಂಸ್ಥೆಯು ಪುಷ್ಪಕ್ ಬಸ್ಸಿಗೆ ತುರ್ತಾಗಿ ಮತ್ತೊಂದು ಬಾಗಿಲನ್ನು ಅಳವಡಿಸುತ್ತಿದೆ. ಇತ್ತೀಚೆಗೆ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಹರ್ಯಾಣಾ ಯುವತಿಯ ಮೇಲೆ ಪುಷ್ಪಕ್ ಬಸ್ಸಿನ ಡ್ರೈವರ್ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸಂಸ್ಥೆ ತಕ್ಷಣ ಒಂದೊಂದೇ ಪುಷ್ಪಕ್ ಬಸ್ಸುಗಳಿಗೆ ಮತ್ತೊಂದು ಬಾಗಿಲನ್ನು ಅಳವಡಿಸತೊಡಗಿದೆ.

ರಾಜಧಾನಿಯಲ್ಲಿ ಒಟ್ಟು 528 ಪುಷ್ಪಕ್ ಬಸ್ಸುಗಳು ರಸ್ತೆ ಮೇಲಿವೆ. ಅವುಗಳ ಪೈಕಿ 100ಕ್ಕೂ ಹೆಚ್ಚು ಬಸ್ಸುಗಳಿಗೆ ಈಗಾಗಲೇ ಮತ್ತೊಂದು ಬಾಗಿಲನ್ನು ಅಳವಡಿಸಲಾಗಿದೆ. ಪುರಾಣ ಪ್ರಸಿದ್ಧ ಪುಷ್ಪಕ ವಿಮಾನದಂತಹ ಸೇವೆ ಒದಗಿಸುವುದಾಗಿ ಹೇಳಿ ಇಡೀ ಬಸ್ಸನ್ನು ಅವ್ಯವಸ್ಥೆಗಳ ಆಗರವನ್ನಾಗಿಸಿತ್ತು. ಅದರಲ್ಲೂ ಒಂಟಿ ಬಾಗಿಲ ಹಿಂಸೆ ಹೇಳತೀರದಾಗಿತ್ತು. ಮಹಿಳೆಯರಂತೂ ಈ ಬಸ್ಸುಗಳಲ್ಲಿ ಪ್ರಯಾಣಿಸುವ ವೇಳೆಗೆ ಹೈರಾಣಗೊಳ್ಳುತ್ತಿದ್ದರು.

ಪುಷ್ಪಕ್ ಬಸ್ಸುಗಳಲ್ಲಿ ಒಂದೇ ಬಾಗಿಲು ಇದ್ದುದ್ದರಿಂದ ಮಹಿಳಾ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದರು ಎಂದು ಸಂಸ್ಥೆಯ ಮುಖ್ಯ ತಾಂತ್ರಿಕ ಇಂಜಿನಿಯರ್ ಸಿಜಿ ಆನಂದ್ ಗಿಳಿಪಾಠ ಒಪ್ಪಿಸಿದ್ದಾರೆ. ಹಾಗಾದರೆ ಇಷ್ಟು ದಿನ ಆ ನ್ಯೂನತೆಯನ್ನು ಸರಿಪಡಿಸಲು ಸಂಸ್ಥೆ ಏಕೆ ಎಚ್ಚತ್ತುಕೊಳ್ಳಲಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಪ್ರಸ್ತುತ ಶಾಂತಿನಗರ ಹಾಗೂ ಕೆಆರ್ ಪುರ ವರ್ಕ್ ಶಾಪ್ ಗಳಲ್ಲಿ ಈ ಅವ್ಯವಸ್ಥೆಯ ಪುಷ್ಪಕ್ ಬಸ್ಸುಗಳ ಜೀರ್ಣೋದ್ಧಾರವಾಗುತ್ತಿದೆ. ಇದರೊಂದಿಗೆ ಪುಷ್ಪಕ್ ಬಸ್ಸುಗಳಲ್ಲಿ ಪ್ರಯಾಣಿಕರನ್ನು ಇನ್ನಿಲ್ಲದಂತೆ ಗೋಳುಹೊಯ್ದುಕೊಳ್ಳುತ್ತಿದ್ದ ಕಂಡಕ್ಟರ್ ಕಮ್ ಡ್ರೈವರ್ ವ್ಯವಸ್ಥೆಯೂ ರದ್ದಾಗಲಿದೆ.

ವಾಸ್ತವವಾಗಿ ಈ ವ್ಯವಸ್ಥೆಯು ಸಂಸ್ಥೆಗೆ ಹಗಲು ದರೋಡೆಗೆ ರಹದಾರಿ ಒದಗಿಸುತ್ತಿತ್ತು. ವಾಣಿಜ್ಯೀಕರಣವಲ್ಲದೆ ಕೇವಲ ಸೇವಾ ಮನೋಭಾವ ಉದ್ದೇಶದ ನಗರ ಬಸ್ ಪ್ರಯಾಣದಲ್ಲಿ ಲಾಭಕೋರ ಖಾಸಗಿ ಕಂಪನಿಗಳಂತೆ ಪುಷ್ಪಕ್ ಬಸ್ ಮೂಲಕ ಸಂಸ್ಥೆ ಸಾಕಷ್ಟು ಹಣ ಮಾಡಿಕೊಂಡಿದೆ ಎಂಬುದು ಪ್ರಯಾಣಿಕರ ಒಟ್ಟಭಿಪ್ರಾಯ.

ಜತೆಗೆ, ಕಂದು ಬಣ್ಣದ ಪುಷ್ಪಕ್ ಬಸ್ ಇನ್ಮುಂದೆ ನೀಲಿ ಮತ್ತು ಬಿಳಿ ಬಣ್ಣದಲ್ಲಿ ಪ್ರಯಾಣಿಕ-ಸ್ನೇಹಿ ಅವತಾರದಲ್ಲಿ ಕಾಣಿಸಿಕೊಳ್ಳಲಿದೆಯಂತೆ.

English summary
As a fall out of rape attempt in a Pushpak bus recently the Bangalore Metropolitan Transport Corporation (BMTC) is conreting one door Pushpak buses into double doors facility buses to protect women passengers. Out of 528 Pushpak buses plying in the city now more than 100 buses are already fitted with another door.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X