ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೇಪ್ ವಿರೋಧಿ ಬೆಂಗಳೂರು ಬಂದ್ ಗೆ ಶುಭಮಂಗಳ!!

|
Google Oneindia Kannada News

ಬೆಂಗಳೂರು, ಜು. 31 : ಅತ್ಯಾಚಾರ ಪ್ರಕರಣಗಳು ಹಾಗೂ ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯ ಪುಂಡಾಟಿಕೆ ಖಂಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ಬೆಂಗಳೂರು ಬಂದ್ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಶಾಂತಿಯುತವಾಗಿ ಬಂದ್ ನಡೆಸಲು ಸಹಕರಿಸಿದ ನಗರದ ಎಲ್ಲಾ ಜನತೆಗೆ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಧನ್ಯವಾದ ಅರ್ಪಿಸಿದ್ದಾರೆ.

ಟೌನ್ ಹಾಲ್ ನಿಂದ ನಗರದ ಫ್ರೀಡಂ ಪಾರ್ಕ್ ತನಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಫ್ರೀಡಂ ಪಾರ್ಕ್ ಬಳಿ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಹತ್ತು ಮಂದಿ ಮುಖಂಡರಿಗೆ ಮಾತ್ರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ನೀಡಿದರು.

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿದ ನಾಯಕರು ಮನವಿ ಪತ್ರ ಸಲ್ಲಿಸಿದರು. ಅತ್ಯಾಚಾರಿಗಳನ್ನು ಗೂಂಡಾ ಕಾಯ್ದೆಗೆ ಸೇರಿಸದೆ ಗಲ್ಲು ಶಿಕ್ಷೆ ವಿಧಿಸಬೇಕು. ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ಮೂಲಕ ಒಂದು ತಿಂಗಳ ಅವಧಿಯಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಂಡು ತೀರ್ಪು ಪ್ರಕಟಿಸುವ ರೀತಿಯಲ್ಲಿ ನೂತನ ಕಾಯ್ದೆ ಜಾರಿಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.

vatal nagaraj

ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ನಡೆಸಿದ ಪುಂಡಾಟಿಕೆಯನ್ನು ಖಂಡಿಸಿದ ಕನ್ನಡ ಪರ ಹೋರಾಟಗಾರರು ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮುಖ್ಯಮಂತ್ರಿ ಹೇಳಿದ್ದೇನು? : ಕನ್ನಡ ಸಂಘಟನೆಗಳ ಒಕ್ಕೂಟದ ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅತ್ಯಾಚಾರ ತಡೆ ಸಂಬಂಧ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುವುದು. ಎಂ.ಸಿ. ನಾಣಯ್ಯ ನೇತೃತ್ವದಲ್ಲಿ ಇದಕ್ಕಾಗಿ ಸಮಿತಿ ರಚಿಸಲಾಗುತ್ತದೆ, ಸಮಿತಿ ನೀಡುವ ವರದಿ ಆಧಾರದ ಮೇಲೆ ಅತ್ಯಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಸರ್ಕಾರ ಅತ್ಯಾಚಾರಿಗಳ ವಿರುದ್ಧ ಸದ್ಯ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುತ್ತಿದೆ. ಗೂಂಡಾ ಕಾಯ್ದೆಯಡಿ ಬಂಧಿತರಾದವರಿಗೆ ಒಂದು ವರ್ಷದ ತನಕ ಜಾಮೀನು ಸಿಗುವುದಿಲ್ಲ ಎಂದು ಹೇಳಿದರು. [ಗೂಂಡಾ ಕಾಯ್ದೆ ಏನಿದು?]

2.ಗಂಟೆ : ಕನ್ನಡ ಪರ ಸಂಘಟನೆಗಳ ಒಕ್ಕೂಟದ ಪ್ರತಿಭಟನೆಯನ್ನು ಪೊಲೀಸರು ಫ್ರೀಡಂ ಪಾರ್ಕ್ ಬಳಿ ತೆಡೆದಿದ್ದಾರೆ. ವಾಟಾಳ್ ನಾಗರಾಜ್ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ತೆರಳಿದೆ.[ಗುರುವಾರದ ಬಂದ್ ಚಿತ್ರಗಳು]

1.20 : ಅತ್ಯಾಚಾರಿಗಳ ಪರವಾದ ಪ್ರಕರಣಗಳನ್ನು ವಕೀಲರು ತೆಗೆದುಕೊಳ್ಳುವುದಿಲ್ಲ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಸುಬ್ಬಾರೆಡ್ಡಿ ಹೇಳಿದ್ದಾರೆ. ಈ ಕುರಿತು ಶೀಘ್ರದಲ್ಲೇ ಸಭೆ ನಡೆಸಿ ವಕೀಲರು ನಿರ್ಧಾರ ಕೈಗೊಳ್ಳಲಿದ್ದೇವೆ. ಅತ್ಯಾಚಾರಿಗಳ ಪರವಾಗಿ ವಕಾಲತ್ತು ಮಾಡದೆ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ. [ಬಂದ್ ನಲ್ಲಿ ಕರವೇ ನಾರಾಯಣ ಗೌಡ ಏಕಿಲ್ಲ?]

1.00 : ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಬೆಂಗಳೂರು ಬಂದ್ ಫ್ರೀಡಂ ಪಾರ್ಕ್ ಸಮೀಪ ಆಗಮಿಸುತ್ತಿದೆ. ಫ್ರೀಡಂ ಪಾರ್ಕ್ ನಿಂದ ಮುಂದೆ ಹೋಗಲು ಪ್ರತಿಭಟನಾಕಾರರಿಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 10 ಮಂದಿಗೆ ಮಾತ್ರ ಸಿಎಂ ಮನೆಗೆ ಹೋಗಿ ಮನವಿ ಸಲ್ಲಿಸಲು ಅವಾಕಾಶ ಮಾಡಿಕೊಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

12.30 : ಅಖಿಲ ಕರ್ನಾಟಕ ರಾಜ್‌ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅತ್ಯಾಚಾರ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದು, ಬಿಎಂಟಿಸಿ ಬಸ್ ಸೇವೆಯನ್ನು ಸ್ಥಗಿತಗೊಳಿಸಿ ಬಂದ್ ಗೆ ಬೆಂಬ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

12.15 : ಬೆಂಗಳೂರು ಬಂದ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಬೆಂಬಲ ನೀಡಿದ್ದಾರೆ. ಅಪೂರ್ವ ಚಿತ್ರದ ಚಿತ್ರೀಕರಣವನ್ನು ಅವರು ಸ್ಥಗಿತಗೊಳಿಸಿರುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

12 ಗಂಟೆ : ಬನ್ನಪ್ಪ ಪಾರ್ಕ್ ತಲುಪಿದ ಪ್ರತಿಭಟನಾ ಜಾಥಾ, ಸುಮಾರು 10 ಸಾವಿರ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿ.

11.45 : ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿರುವ ಎಂಇಎಸ್, ಶಿವಸೇನೆ ಕಾರ್ಯಕರ್ತರು ಪರಮ ಪಾಪಿಗಳು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ. ಶಿವಸೇನೆ, ಎಂಇಎಸ್ ಸಂಘಟನೆಗಳನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ಯಳ್ಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಟೌನ್ ಹಾಲ್ ನಲ್ಲಿ ಬೃಹತ್ ಪ್ರತಿಭಟನನೆ ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಪರ ಸಂಘಟನೆಗಳಿಂದ ಯಳ್ಳೂರು ಚಲೋ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಯಳ್ಳೂರಿನಲ್ಲಿ ಎಂಇಎಸ್ ವಿರುದ್ಧ ಪ್ರತಿಭಟನೆ ನಡೆಸಿ ಬೆಳಗಾವಿ ನಮ್ಮದು ಎಂದು ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

11.30 : ಬೆಂಗಳೂರು ಬಂದ್ ಗೆ ಕರೆ ನೀಡಿರುವ ವಿವಿಧ ಸಂಘಟನೆಗಳು ಟೌನ್ ಹಾಲ್ ಬಳಿ ಬೃಹತ್ ಪ್ರತಿಭಟನೆ ಆರಂಭಿಸಿವೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

11 ಗಂಟೆ : ಚಂದಾಪುರ ಬಳಿ ಬಿಎಂಟಿಸಿಯ 291ನೇ ನಂಬರ್ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಂದ್ ವೇಳೆ ಈ ಬಸ್ಸು ಸಂಚಾರ ನಡೆಸುತ್ತಿತ್ತು.

10.45 : "ಬಂದ್ ಶಾಂತಿಯುತವಾಗಿ ನಡೆಯುತ್ತಿದೆ. ಇದು ಸರ್ಕಾರದ ವಿರುದ್ಧ ನಡೆಯುತ್ತಿರುವ ಬಂದ್ ಅಲ್ಲ, ಜನ ಜಾಗೃತಿಗಾಗಿ ಬಂದ್ ನಡೆಯುತ್ತಿದೆ. ಬಂದ್ ಬಗ್ಗೆ ವರದಿ ತರಿಸಿಕೊಳ್ಳುತ್ತಿದ್ದೇನೆ" ಎಂದು ಬೆಂಗಳೂರು ನಗರ ಉಸ್ತುವಾರಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

10.30 : ಅರಮನೆ ರಸ್ತೆಯ ಕಾವೇರಿ ಚಿತ್ರಮಂದಿರದ ಬಳಿಯಿಂದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಪ್ರತಿಭಟನಾ ಜಾಥಾ ಆರಂಭಿಸಿದ್ದಾರೆ.

10.15 : ಟೌನ್ ಹಾಲ್, ಮೈಸೂರು ಬ್ಯಾಂಕ್ ವೃತ್ತದ ಬಳಿ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣ ಪ್ರತಿಭಟನೆ ಆರಂಭಿಸಿದೆ.

10 ಗಂಟೆ : ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಲವಂತವಾಗಿ ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ.

9.45 : ಕಪಾಲಿ ಚಿತ್ರಮಂದಿರದಲ್ಲಿ 3 ಶೋ ಸ್ಥಗಿತ

9.30 : ಮೊದಲ ಶಿಫ್ಟ್ ನಲ್ಲಿ 2 ಸಾವಿರ ಬಿಎಂಟಿಸಿ ಬಸ್ಸುಗಳು ಸಂಚರಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

9.15 : ಎಲ್ಲಾ ಮಾಲ್ ಗಳಿಗೆ ಪೊಲೀಸ್ ಬಂದೋಬಸ್ತ್, ಎಲ್ಲಾ ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ರದ್ದು.

ಸಮಯ 9 ಗಂಟೆ : ಬೆಂಗಳೂರು ಬಂದ್ ಗೆ : ಜ್ಯುವೆಲ್ಲರ್ಸ್ ಮಾಲೀಕರು ಬೆಂಬಲ ನೀಡಿದ್ದು, ಜ್ಯುವೆಲ್ಲರ್ಸ್ ಗಳು ಬಂದ್ ಆಗಿವೆ.

ಸಮಯ 8.45 : ಪೀಣ್ಯದ ಎಲ್ಲಾ ಗಾರ್ಮೆಂಟ್ಸ್ ಗಳಿಂದ ಬಂದ್ ಗೆ ಬೆಂಬಲ, ರಜೆ ಘೋಷಣೆ

ಸಮಯ 8.30 : ಬೆಂಗಳೂರು ಬಂದ್ ಗೆ ಬೆಂಬಲ ನರ್ತಕಿ, ಸ್ವಪ್ನ, ಗರುಡಾ ಮಾಲ್ ನಲ್ಲಿ ಚಿತ್ರಪ್ರದರ್ಶನ ಸ್ಥಗಿತ.

ನಗರದ ಪ್ರಮುಖ ವೃತ್ತಗಳಲ್ಲಿ ಇಬ್ಬರು ಸಂಚಾರಿ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳು ನಗರದಲ್ಲಿ ಗಸ್ತು ತಿರುಗುತ್ತಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡುವವರ ಮೇಲೆ ಕಣ್ಣಿಟ್ಟಿದ್ದಾರೆ.

ಗುರುವಾರ ಮುಂಜಾನೆ ಬಿಎಂಟಿಸಿ, ಕೆಎಸ್ಆರ್ ಟಿಸಿ, ಆಟೋಗಳು, ಕ್ಯಾಬ್ ಎಂದಿನಂತೆ ರಸ್ತೆಗೆ ಇಳಿದಿದ್ದು, ಜನರ ಸಂಚಾರ ಆರಂಭವಾಗಿದೆ. ಕೆಲವು ಪ್ರದೇಶಗಳಲ್ಲಿ ಹೋಟೆಲ್ ಗಳು ಬಾಗಿಲು ಮುಚ್ಚಿವೆ. ಜಯನಗರ 4ಬ್ಲಾಕ್ ಬಳಿ ತರಕಾರಿ ಅಂಗಡಿಗಳು ಬಾಗಿಲು ಹಾಕಿವೆ.

ಬಿಎಂಟಿಸಿ ಬೆಂಗಳೂರು ಬಂದ್ ಬೆಂಬಲ ನೀಡಿಲ್ಲ. ಆದ್ದರಿಂದ, ಕನ್ನಡ ಪರ ಸಂಘಟನೆ ಕಾರ್ಯಕರ್ತರು ಬಸ್ ಸಂಚಾರಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಇದೆ. ಎಲ್ಲಾ ಟಿಟಿಎಂಸಿಗಳು ಮತ್ತು ಬಸ್ ಡಿಪೋಗಳ ಮುಂದೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಬಸ್ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.

ಕೆಲವು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳು ಇಂದು ರಜಾ ಘೋಷಿಸಿವೆ. ಯಾವುದೇ ಸರ್ಕಾರಿ ಶಾಲೆಗಳು ರಜೆ ಘೋಷಣೆ ಮಾಡಿಲ್ಲ. ರಜೆ ಘೋಷಣೆ ಮಾಡದ ಖಾಸಗಿ ಶಾಲೆಗಳು ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಿವೆ. ಮೆಜೆಸ್ಟಿಕ್ ಸುತ್ತಮುತ್ತ ಹೋಟೆಲ್ ಗಳು ತೆರದಿವೆ. ಬಸ್ ಸಂಚಾರ ಎಂದಿನಂತೆ ಇದೆ.

ಬೆಳಗ್ಗೆ 10 ಗಂಟೆ ನಂತರ ವಿವಿಧ ಕನ್ನಡ ಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿವೆ. ಟೌನ್ ಹಾಲ್ ನಿಂದ ಮುಖ್ಯಮಂತ್ರಿಗಳ ಮನೆಯವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಸಂಘಟನೆಗಳು ತಮ್ಮ ಮನವಿ ಸಲ್ಲಿಸಲಿವೆ.

English summary
There was mixed response to Bangalore bandh, called by pro-Kannada organisations against sexual assault on women and children. Many traders downed shutters voluntarily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X