ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿತಾ ಪರ ಮತಬೇಟೆ: ಭಲೇ ಅಶೋಕ್ ಮಹಾರಾಜ್

By ಶಂಭೋ ಶಂಕರ
|
Google Oneindia Kannada News

ನಗರದ ಉತ್ತರಹಳ್ಳಿಯಲ್ಲಿ ಭಾನುವಾರ ಜೆಡಿಎಸ್‌ ಪ್ರಚಾರ ಕಾರ್ಯಕ್ರಮದಲ್ಲಿ ಆ ಪಕ್ಷದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್‌ ಅಶೋಕ್‌ ಅವರು ಬಹಿರಂಗವಾಗಿ ಮತಯಾಚಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬಿಜೆಪಿ ಯುವ ಸಾಮ್ರಾಟ ಅಶೋಕ್ ಅನಿತಾ ಪರ ಮತ ಬೇಟೆಗಿಳಿದಿದ್ದಾರಂತೆ ಎಂಬ ಈ ಚಿತ್ರ ಸಹಿತ ಸುದ್ದಿ ನೋಡಿ ಟಿವಿ9ನ ನಾರಾಯಣ ಸ್ವಾಮಿ ಧಾಟಿಯಲ್ಲಿ 'ಹೀಗೂ ಉಂಟೇ?' ಎಂದು ಜನ ಅಶೋಕರ ಮೂಗಿನ ಮೇಲೆ ಬೆರಳಿಟ್ಟು ಕೇಳಿದ್ದಾರೆ.

ನನಗೂ ಹಾಗೇ ಅನ್ನಿಸುತ್ತಿದೆ. ಜತೆಗೆ ಅಶೋಕ್ ಕಿವಿಯ ಮೇಲೆ ಕೈಹಾಕಿ ಹಿಂಡೋಣ ಅನ್ನಿಸುತ್ತಿದೆ. ಅಲ್ಲಾ ಅಶೋಕ್ ಮಹಾರಾಜ್ ಎಲ್ಲಿಗೆ ಬಂತು ನಿಮ್ಮ ದರಿದ್ರ ರಾಜಕೀಯ. ಅಶೋಕಜೀ ನೀವು ದೇವೇಗೌಡರ ಗರಡಿಯಲ್ಲಿ ಪಳಗಿದವರು ಎಂಬುದು ಇಡೀ ಪದ್ಮನಾಭನಗರಕ್ಕೇ ಗೊತ್ತಿದೆ. ಆದರೆ ಅದೇ ಪದ್ಮನಾಭನಗರಕ್ಕೆ ನಿಮ್ಮ ನಿಷ್ಠೆ ಈ ಪರಿಯಿದೆ ಎಂಬುದನ್ನು ಕೇಳಿ ತಿಳಿದು ಯಾವ ಕಡೆಯಿಂದ ನಗಬೇಕೋ ತಿಳಿಯುತ್ತಿಲ್ಲ.

'ನೋಡಲೆರಡು ಕಣ್ಣುಗಳು ಸಾಲದಪ್ಪಾ'

'ನೋಡಲೆರಡು ಕಣ್ಣುಗಳು ಸಾಲದಪ್ಪಾ'

ಆಹಾ ನಿನ್ನೆ ಟಿವಿ ಮಾಧ್ಯಮಗಳಲ್ಲಿ ನೀವು ಅನಿತಾ ಪಕ್ಕ ವಿರಾಜಮಾನರಾಗಿ ಮತಭಿಕ್ಷೆಯಲ್ಲಿ ತೊಡಗಿರುವುದನ್ನು ಕಾಣಲು 'ನೋಡಲೆರಡು ಕಣ್ಣುಗಳು ಸಾಲದಮ್ಮಾ' ಎನ್ನುವಂತಿತ್ತು. ವೃಷಭಾವತಿ ಗಟಾರಕ್ಕೆ ಸುರಿದಿರಾ? ನಿಮ್ಮ ಶಿಸ್ತಿನ ಪಕ್ಷ ಬಿಜೆಪಿಯ ರೀತಿ-ನೀತಿಗಳನ್ನು?

ಬಿಜೆಪಿ ಕಟ್ಟಾಳುಗಳು ಹೇಗೆ ಪ್ರತಿಕ್ರಿಯಿಸುತ್ತಾರೋ!?

ಬಿಜೆಪಿ ಕಟ್ಟಾಳುಗಳು ಹೇಗೆ ಪ್ರತಿಕ್ರಿಯಿಸುತ್ತಾರೋ!?

ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ನೀವು ಎಚ್ಡಿಕೆ ಪಕ್ಕದಲ್ಲಿ ಕುಳಿತು ಮಾತುಕತೆ ನಡೆಸಿದಾಗಲೇ ಅನಿಸಿತ್ತು - ನಿಮ್ಮಲ್ಲಿ ಯಾವುದೇ ಮೌಲ್ಯಗಳು ಉಳಿದಿಲ್ಲ ಎಂದು. ಆದರೆ ನಿನ್ನೆ ಅನಿತಾ ಕುಮಾರಸ್ವಾಮಿ ಜತೆಗೆ ಮತರಥವನ್ನೂ ಏರಿದ್ದು ಬಿಜೆಪಿಯ ಅಖಂಡ ಕಟ್ಟಾಳುಗಳಿಗೆ ನಿಜಕ್ಕೂ ಆಘಾತಕಾರಿಯಾಗಿದೆ. ನೋಡಬೇಕು ನಿಮ್ಮೀ ನಿಲುವಿನ ಬಗ್ಗೆ ಬಿಜೆಪಿ ಕಟ್ಟಾಳುಗಳು ಹೇಗೆ ಪ್ರತಿಕ್ರಿಯಿಸುತ್ತಾರೋ!?

 ಮಾಡೆಲ್ ಹೌಸ್ ಸ್ಟ್ರೀಟಿನ ವೈದ್ಯರು ಏನನ್ನುತ್ತಾರೆ?

ಮಾಡೆಲ್ ಹೌಸ್ ಸ್ಟ್ರೀಟಿನ ವೈದ್ಯರು ಏನನ್ನುತ್ತಾರೆ?

ಅಸಲಿಗೆ ಬಿಜೆಪಿ ಮಾನವನ್ನು ಹೀಗೆ ಬಹಿರಂಗವಾಗಿ ಹರಾಜು ಹಾಕುವ ಪ್ರಸ್ತಾವನೆ ಮುಂದಿಟ್ಟಿದ್ದೇ ನೀವಂತೆ, ಹೌದಾ ಅಶೋಕಜೀ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಪರೋಕ್ಷವಾಗಿ ನಿಮಗೆ ಮಾಡಿದ್ದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ನೀವು ಹೀಗೆ ಮಾಡಿದಿರಂತೆ- ಎಂದು ಮಾಡೆಲ್ ಹೌಸ್ ಸ್ಟ್ರೀಟಿನ ವೈದ್ಯ ಮಹಾಶಯರೊಬ್ಬರು ಅಲವತ್ತುಕೊಂಡಿದ್ದಾರೆ.

ಇದೊಂದು ಅನಂತ ಸಂಗತಿ

ಇದೊಂದು ಅನಂತ ಸಂಗತಿ

ಏನು ಗೊತ್ತಾ! ನಿಮ್ಮ ಮತ್ತೊಬ್ಬ ರಾಜಕೀಯ ಗುರುವಿಗೆ ಪರೋಕ್ಷವಾಗಿ ಪೂರಕ ವಾತಾವರಣ ಸೃಷ್ಟಿಸಲು ಈಗಲೇ ಪೂರ್ವಾಲೋಚನೆ ಮಾಡಿ ದೊಡ್ಡಗೌಡರ ಜತೆ ಕೈಜೋಡಿಸಿದ್ದೀರಂತೆ ಹೌದಾ?

ಅದೆ, ನಿಮ್ಮ ರಾಜಕೀಯ ಗುರು ಬೆಂಗಳೂರು ದಕ್ಷಿಣದಿಂದ ಈ ಬಾರಿಯೂ ಕಣಕ್ಕಿಳಿಯುವ ಸಾಹಸ ಮಾಡಲಿದ್ದಾರೆ. ಆದರೆ ಜನ ಮತ ಹಾಕುತ್ತಾರೆ ಎಂಬ ಗ್ಯಾರಂಟಿ ಅವರಿಗೇ ಇಲ್ಲವಂತೆ. ಹಾಗಾಗಿ ನೀವು ಈಗಿಂದಲೇ ಬೇಸ್ ರೆಡಿ ಮಾಡ್ತಿದ್ದೀರಂತೆ. ಆ ಯೋಜನೆಯ ಪ್ರಕಾರ ಈ ಬಾರಿ ನೀವು ಮಂಡ್ಯ- ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಲು ನೆರವಾದರೆ... ಮುಂದಿನ ವರ್ಷ ಲೋಕಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದವರು ಆ ನಿಮ್ಮ ರಾಜಕೀಯ ಗುರುವಿನ ಗೆಲುವಿಗೆ ಸಹಕರಿಸುತ್ತಾರಂತೆ. ಹೌದಾ, ಗುರುಗಳೇ?

ರಾಜಕೀಯ ತೀರಾ ಕೆಳಮಟ್ಟಕ್ಕೆ ಇಳಿಜಾರಿದೆ

ರಾಜಕೀಯ ತೀರಾ ಕೆಳಮಟ್ಟಕ್ಕೆ ಇಳಿಜಾರಿದೆ

ಏನೋ ಒಟ್ಟಿನಲ್ಲಿ, ಈ ಬಾರಿಯ ಎರಡೂ ಉಪ ಚುನಾವಣೆಗಳು ಯಾವುದೇ ನೈತಿಕತೆಯಿಲ್ಲದೆ, ತೀರಾ ಕೆಳಮಟ್ಟಕ್ಕೆ ಇಳಿಜಾರಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಇನ್ನು ಈವತ್ತಿಗೆ ಬಹಿರಂಗ ಪ್ರಚಾರ ಮುಗಿಯಲಿದೆ. ನಿಮ್ಮ ದೊಂಬರಾಟವೂ ಇನ್ನು ಬಹಿರಂಗವಾಗಿ ಕಾಣಿಸುವುದಿಲ್ಲ. ಆದರೆ ಈ ಎರಡು ಮೂರು ದಿನಗಳೇ ಚುನಾವಣೆಗೆ ಮುಖ್ಯವಲ್ಲವಾ? ಹಣದ ಹೊಳೆ ಹರಿಯುವ ಸಂಧಿ ಕಾಲ ಇದು.
ಅದರಲ್ಲೂ ಶಕ್ತ್ಯಾನುನುಸಾರ ನೀವು ನಿಮ್ಮ ತನು/ಮನ/ಧನ ಮುಡಿಪಾಗಿಡುತ್ತೀರಿ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಆದರೆ ಅದೇ ಬಿಜೆಪಿಯ ಕಟ್ಟಾಳುಗಳನ್ನು ಕಂಡರೆ ಅಯ್ಯೋ ಪಾಪ ಅನಿಸುತ್ತಿದೆ. ಆದರೆ ಅದಕ್ಕೆ ನೀವು ತಲೆಕೆಡಿಸಿಕೊಳ್ಳಬೇಡಿ. ಮುಂದುವರಿಸಿ ನಿಮ್ಮ ರಾಜಕೀಯ ದೊಂಬರಾಟವನ್ನು, ಅಶೋಕ ಮಹರಾಜರೇ...

English summary
Bangalore Rural Lok Sabha by poll campaign Ex BJP Minister R Ashok joins hands with JDS capmaigns for Anitha Kumaraswamy. But our reader Shambho Shankara seems finding some thing fishy and funny in Mr Ashok's political move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X