ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಗಾಗಿ ಮಾರೆಮ್ಮನಿಗೆ ಪಾನಕದ ಅಭಿಷೇಕ!

By ಅರುಣ್ ರಾಜ್, ಯಾದಗಿರಿ
|
Google Oneindia Kannada News

Devotees worship Devi Maremma for rain
ಆ ದೇವರು ಭಕ್ತರನ್ನು ಅದ್ಯಾಕೆ ಇಷ್ಟೊಂದು ಆಟವಾಡಿಸುತ್ತಾನೊ ಏನೊ? ಅದರಲ್ಲೂ ಬರಗಾಲದಿಂದ ಕಂಗೆಟ್ಟು ಹೋಗಿರುವ, ಹನಿ ನೀರಿಗಾಗಿಯೂ ಪರಿತಪಿಸುತ್ತಿರುವ ಜನರಿಗೆ ವರುಣ ದೇವ ಆಡಿಸುವ ಆಟವಿದೆಯಲ್ಲ, ಅದನ್ನು ಪದಗಳಲ್ಲಿ ಬಣ್ಣಿಸುವುದು ಸಾಧ್ಯವಿಲ್ಲ. ಯಾಕಪ್ಪಾ ವರುಣ ದೇವ ಹೀಗೆ ಆಟ ಆಡಿಸ್ತೀಯಾ?

ಇಷ್ಟಾದರೂ ಜನರು ವರುಣ ದೇವನ ಮೇಲೆ ಎಳ್ಳಷ್ಟೂ ಕೋಪಿಸಿಕೊಳ್ಳುವುದಿಲ್ಲ. ಮಳೆಗಾರ ಹತ್ತಿರ ಬಂದರೂ ಹನಿ ನೀರು ಸುರಿಯದಿದ್ದಾಗ, ಜಾನುವಾರುಗಳು ನೀರಿ ಆಹಾರವಿಲ್ಲದೆ ಬಡಕಲಾದಾಗ, ಕುಡಿಯಲು ಹಾಳಾಗಲು ಬಳಸಲು ಕೂಡ ತೊಟಕು ನೀರಿಲ್ಲದಾಗ ಅನ್ಯಮಾರ್ಗವಿಲ್ಲದೆ ವರುಣ ದೇವನನ್ನು ನಾನಾ ಪರಿಯಾಗಿ ಆರಾಧಿಸಲು ಆರಂಭಿಸುತ್ತಾರೆ.

ಕೆಲವರು ಹೋಮಹವನ ಮಾಡಿಸುತ್ತಾರೆ, ಕೆಲವರು ಕಪ್ಪೆಗಳನ್ನು ಅದೆಲ್ಲಿಂದಲೋ ಹಿಡಿದುಕೊಂಡು ಬಂದು ವಿವಾಹ ಮಾಡಿಸುತ್ತಾರೆ, ಮತ್ತೆ ಕೆಲವರು ನಾಯಿ ನರಿಗಳನ್ನು ಎಳೆದುಕೊಂಡು ಬಂದು ಅವಕ್ಕರಿವಿಲ್ಲದಂತೆಯೆ ಲಗ್ನಮಹೋತ್ಸವ ಆಚರಿಸಿರುತ್ತಾರೆ, ಮತ್ತೆ ಕೆಲವರು ಕತ್ತೆಗಳಿಗೂ ಮದುವೆಯ ಭಾಗ್ಯ ಕರುಣಿಸಿರುತ್ತಾರೆ. ಇದೆಲ್ಲ ಮಾಡುವುದು ಮಳೆಗಾಗಿ, ಇಳೆಯ ಮೇಲೆ ಬೆಳೆ ನಳನಳಿಸುವುದಕ್ಕಾಗಿ.

ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಯಾದಗಿರಿಯಲ್ಲಿಯೂ ಜನರು ಮಳೆಗಾಗಿ ವರುಣನನ್ನು ಆರಾಧಿಸಲು ಪ್ರತಿವರ್ಷ ವಿಶಿಷ್ಟವಾಗಿ ಆಚರಣೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅದು ಪಾನಕ ಜಾತ್ರೆ. ದೇವಿಗೆ ಪಾನಕ ಮತ್ತು ಅರಿಷಿಣ ನೀರಿನ ಅಭಿಷೇಕ ಮಾಡಿದರೆ ವರುಣ ದೇವ ಒಲಿದು ಧರೆಯನ್ನು ತೋಯಿಸುತ್ತಾನೆ ಎಂಬುದು ಜನರ ನಂಬಿಕೆ. ಇದನ್ನು ಮೂಢನಂಬಿಕೆ ಎಂದು ಕರೆದರೆ ಭಕ್ತಾದಿಗಳು ಸಿಟ್ಟಿಗೆದ್ದಾರು.

ವಿಶಿಷ್ಟ ಆಚರಣೆ : ಯಾದಗಿರಿ ಜಿಲ್ಲೆಯ ಸಾಯಿನಗರ ಗ್ರಾಮದಲ್ಲಿ ಭಕ್ತಾದಿಗಳು ಈ ಪಾನಕ ಜಾತ್ರೆಯನ್ನು ಆಚರಿಸುವ ಬಗೆಯೂ ವಿಶಿಷ್ಟವಾಗಿದೆ. ಇಲ್ಲಿರುವ ಗಾಳಿ ಮಾರೆಮ್ಮ ದೇವಿಗೆ ಪಾನಕ ಮತ್ತು ಅರಿಷಿಣ ನೀರಿನ ಅಭಿಷೇಕ ಮಾಡಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ. ಮಡಿಯುಟ್ಟ ಪುರುಷರು ಮತ್ತು ಮಹಿಳೆಯರು ಹಿತ್ತಾಳೆ ಕೊಡಗಳಲ್ಲಿ ಪಾನಕ ಮತ್ತು ಅರಿಷಿಣ ನೀರನ್ನು ತುಂಬಿಕೊಂಡು ಬಂದು ಮಾರೆಮ್ಮನಿಗೆ ಭಕ್ತಿಯಿಂದ ಅಭಿಷೇಕ ಮಾಡುತ್ತಾರೆ.

ಹೀಗೆ ಮಾಡಿದರೆ ವರುಣ ದೇವ ಕೃಪೆ ತೋರಿ ಮಳೆ ಸುರಿಸುತ್ತಾನೆ, ಬೆಳೆ ಚೆನ್ನಾಗಿ ಬರುತ್ತದೆ, ನಾಡು ಸುಭಿಕ್ಷವಾಗಿರುತ್ತದೆ ಎಂಬುದು ಜನರಲ್ಲಿ ಬಲವಾಗಿ ಊರಿರುವ ನಂಬಿಕೆ. ಕಳೆದ 5 ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬರುತ್ತಿದೆ. ದೇವಿಗೆ ಪ್ರಾಣಿಗಳನ್ನು ಬಲಿಕೊಡುವ ಬದಲು ಅಹಿಂಸಾತ್ಮಕವಾದಂಥ ಈ ಆಚರಣೆ ಎಷ್ಟೋ ಮೇಲು ಅನ್ನುತ್ತಾರೆ ಇಲ್ಲಿನ ಭಕ್ತರು. ಹರಕೆ ಹೊತ್ತ ಮಹಿಳೆಯರು ದೇವಿಗೆ ಸೀರೆ, ಬಳೆಗಳನ್ನು ಕೂಡ ಉಡಿ ತುಂಬುತ್ತಾರೆ. ಮಾರೆಮ್ಮನಿಗೆ ಅಭಿಷೇಕ ಮಾಡಿದ ನಂತರ ಉಳಿದ ಪಾನಕವನ್ನು ಎಲ್ಲರೂ ಹಂಚಿಕೊಂಡು ಕುಡಿಯುತ್ತಾರೆ.

English summary
Devotees worship Devi Maremma in Yadgir district for rain every year. People pour panaka (juice) and Turmeric water on Goddess, believing rain God will show mercy on people hit by drought.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X