ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಳಿರಣ್ಣ ಕೇಳಿ ನಮ್ಮ ಕೆಂಪೇಗೌಡರ ಕಥೆಯನ್ನ!

By ಪ್ರಸಾದ ನಾಯಿಕ
|
Google Oneindia Kannada News

Kempegowda
ಇದು ಕೆಂಪೇಗೌಡರ ಕಥೆ. 16ನೇ ಶತಮಾನದಲ್ಲಿ ಬೆಂಗಳೂರನ್ನು ಸಂಸ್ಥಾಪಿಸಿ ಆಳಿದ ಕೆಂಪೇಗೌಡರ ಕಥೆಯಂತೂ ಅಲ್ಲವೇ ಅಲ್ಲ. ವರ್ತಮಾನದಲ್ಲಿ ಬೆಳೆದಿರುವ ಮಕ್ಕಳನ್ನು ಮೈಸೂರಿನ ಬಳಿಯ ಹಳ್ಳಿಯಲ್ಲಿಯೇ ಬಿಟ್ಟು, ಬದುಕಿಗಾಗಿ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸವನ್ನು ಕಳೆದ ಐದಾರು ವರ್ಷಗಳಿಂದ ಮಾಡುತ್ತಿರುವ ಕಡಕೋಳದ ಕೆಂಪೇಗೌಡರ ಕಥೆ.

ಇವರ ಕಥೆ ಇತರ ಸಾಮಾನ್ಯ ನಾಗರಿಕರಿಗಿಂತ ವಿಭಿನ್ನವಾಗೇನೂ ಇಲ್ಲ. ಅನೇಕರಂತೆಯೇ ಇವರು ಕೂಡ ಕಾಲ್ನಡಿಗೆಯಲ್ಲಿ ಕಚೇರಿಗೆ ಬರುತ್ತಾರೆ, ಮನೆಯಿಂದ ತಂದ ಡಬ್ಬಿಯನ್ನು ಕಟ್ಟಡದ ಸೆಲ್ಲರ್ ನಲ್ಲಿರುವ ಕಾರ್ ಪಾರ್ಕಿಂಗ್ ಸ್ಥಳದ ಮೂಲೆಯೊಂದರಲ್ಲಿ ಕುಳಿತು ಪಟ್ಟಾಗಿ ಕುಳಿತು ತಿಂದು ಮತ್ತೆ ತಮ್ಮ ಕೆಲಸದಲ್ಲಿ ಮುಳುಗುತ್ತಾರೆ. ಡ್ಯೂಟಿ ಮುಗಿದ ಕೂಡಲೆ ಮತ್ತೆ ಕಾಲ್ನಡಿಗೆಯಲ್ಲಿ ಗೂಡನ್ನು ಸೇರುತ್ತಾರೆ.

ವಾಹನ ಪಾರ್ಕಿಂಗ್ ಮಾಡಲು ತಲೆತುಂಬ ಹೆಲ್ಮೆಟ್ ಧರಿಸಿ ಬಂದವರು ಪರಿಚಿತರೆನಿಸಿದರೂ ಅವರ ಬೈಕಿಗೆ ಪಾರ್ಕಿಂಗ್ ಸ್ಟಿಕ್ಕರ್ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ಪಾರ್ಕಿಂಗ್ ಮಾಡಲು ಅನುವು ಮಾಡಿಕೊಡುವುದು ಮತ್ತು ಶಿಫ್ಟ್ ಇದ್ದಾಗ ಕಣ್ಣಲ್ಲಿ ಕಣ್ಣಿಟ್ಟು ವಾಹನಗಳನ್ನು ಕಾಯುವುದು ಅವರ ಡ್ಯೂಟಿಯ ಒಂದು ಭಾಗ. ಇದನ್ನು ಅವರು ನಿಯತ್ತಾಗಿ ಮಾಡಿಕೊಂಡು ಬರುತ್ತಿದ್ದಾರೆ.

ಮೈಸೂರು-ನಂಜನಗೂಡು ಮಧ್ಯದಲ್ಲಿರುವ ಕಡಕೋಳ ಗ್ರಾಮದ 55ರ ಆಸುಪಾಸಿನಲ್ಲಿರುವ ಕೆಂಪೇಗೌಡರು ಜಯನಗರದ 3ನೇ ಬ್ಲಾಕಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಯಡಿಯೂರು ಕರೆಯ ಬಳಿಯಲ್ಲಿರುವ ಪುಟ್ಟ ಮನೆಯೊಂದರಲ್ಲಿ ಹೆಂಡತಿಯೊಡನೆ ಸಂಸಾರ ಸಾಗಿಸುತ್ತಿದ್ದಾರೆ. ಅವರಿಬ್ಬರು ಮಕ್ಕಳು. ಇಬ್ಬರೂ ಕಡಕೋಳದಲ್ಲಿ ಗಾರೆ ಕೆಲಸ ಮಾಡಿ ಹೊಟ್ಟೆ ಹೊರೆಯುತ್ತಿದ್ದಾರೆ. ಇಷ್ಟಿದ್ದರೂ ಎಲ್ಲರಂತಲ್ಲ ನಮ್ಮ ಕೆಂಪೇಗೌಡರು.

ಮಕ್ಕಳು ಅಷ್ಟಿಷ್ಟು ದುಡಿಯುತ್ತಿದ್ದಾರೆ. ಇವರು ಕೂಡ ಬೆಂಗಳೂರಿನ ಜೀವನಕ್ಕೆ ಸಾಕಾಗುವಷ್ಟು ದುಡಿಮೆ ಮಾಡುತ್ತಿದ್ದಾರೆ. ಸುಖೀ ಕುಟುಂಬ. ತಾವು ಕೂಡ ಮೂಲತಃ ಗಾರೆ ಕೆಲಸ ಮಾಡುವವರಾಗಿದ್ದರೂ, ಬೆಂಗಳೂರಿನಲ್ಲಿ ಮನೆಮಠ ಕಟ್ಟಬೇಕೆಂಬ ಹಂಬಲವಂತೂ ಇಲ್ಲವೇ ಇಲ್ಲ. ಮತ್ತೊಂದು ವಿಸ್ಮಯಕರ ಸಂಗತಿಯೆಂದರೆ, ಇಡೀ ದೇಶದಾದ್ಯಂತ ಭಾರತ್ ಬಂದ್‌ನಿಂದಾಗಿ ಬೆಂಗಳೂರಿಗೆ ಬೆಂಗಳೂರೇ ಸ್ತಬ್ಧವಾಗಿರುವುದು ಇವರಿಗೆ ಗೊತ್ತೂ ಇಲ್ಲ, ಅದರ ಬಗ್ಗೆ ತಲೆ ಕೆಡಿಸಿಕೊಂಡೂ ಇಲ್ಲ.

ಕೆಂಪೇಗೌಡರಿಗೆ ಬಂದ್ ಯಾಕೆ ಕರೆಯಲಾಗಿದೆ? ಯಾರು ಕರೆದಿದ್ದಾರೆ? ಎಂಬುದರ ಬಗ್ಗೆ ಎಳ್ಳಷ್ಟೂ ಅರಿವಿಲ್ಲ. ಡೀಸೆಲ್ ಬೆಲೆಯನ್ನಾದರೂ ಏರಿಸಲಿ, ಅಡುಗೆ ಅನಿಲದ ಸಿಲಿಂಡರನ್ನು 6ಕ್ಕೇ ಮಿತಿಗೊಳಿಸಲಿ, ರೀಟೈಲಲ್ಲಿ ಎಫ್‌ಡಿಐಗೆ ಅವಕಾಶವನ್ನಾದರೂ ಮಾಡಿಕೊಡಲಿ, ಇವರಿಗೆ ಅದಾವುದೂ ಸಂಬಂಧಿಸಿದ್ದೇ ಅಲ್ಲ. ಯಾಕೆಂದ್ರೆ, ಕೆಂಪೇಗೌಡರು ಇದಾವುದನ್ನೂ ಬಳಸುವುದಿಲ್ಲ!

ಬೆಂಗಳೂರಿನಲ್ಲಿಯೇ ಆಗಲಿ, ಕಡಕೋಳದಲ್ಲಿಯೇ ಆಗಲಿ ಇವರು ಬದುಕು ಸಾಗಿಸುತ್ತಿರುವುದು ಸೀಮೆ ಎಣ್ಣೆ ಸ್ಟೌ ಮೇಲೆ. ಅದರ ಮೇಲೆಯೇ ಅನ್ನ, ಸಾರು, ಮುದ್ದೆ, ಹೋಳಿಗೆಗಳೆಲ್ಲ ಬೇಯುವುದು. ಅಡುಗೆ ಅನಿಲದ ಸಿಲಿಂಡರನ್ನು ಗ್ಯಾಸ್ ಏಜೆನ್ಸಿಯಿಂದ ಹೇಗೆ ಪಡೆದುಕೊಳ್ಳಬೇಕು, ಅದರ ಬೆಲೆ ಎಷ್ಟು ಎಂಬುದು ಅವರಿಗೆ ಗೊತ್ತೂ ಇಲ್ಲ, ಅವರಿಗೆ ಬೇಕಾಗಿಯೂ ಇಲ್ಲ. ಹಾಗೆಯೆ, ಇವುಗಳ ಬೆಲೆ ಏರಿಸಿದರೆ ಅವರು ಬೆಚ್ಚಿಬೀಳುವುದೂ ಇಲ್ಲ. ಅಷ್ಟೇ ಏಕೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟರೆ ಹಿಗ್ಗುವುದೂ ಇಲ್ಲ, ಇಡದಿದ್ದರೆ ಕುಗ್ಗುವುದೂ ಇಲ್ಲ.

ಅವರು ಬೆಚ್ಚಿಬೀಳುವುದು ಯಾವಾಗೆಂದರೆ, ಡೀಸೆಲ್, ಪೆಟ್ರೋಲಿನಂತೆ ಸೀಮೆಎಣ್ಣೆ ದರವನ್ನೂ ಕೇಂದ್ರ ಸರಕಾರ ಸದ್ಯದಲ್ಲಿಯೇ ಹೆಚ್ಚಿಸಲಿದೆ ಎಂಬ ಸೀಮೆಎಣ್ಣೆ ಬಾಂಬನ್ನು ಅವರ ಮೇಲೆ ಹಾಕಿದಾಗ. ಸದ್ಯಕ್ಕೆ ಲೀಟರಿಗೆ ಅವರು 40ರಿಂದ 45ರು. ವ್ಯಯಿಸುತ್ತಿದ್ದಾರೆ. ಇದರ ಬೆಲೆಯನ್ನು ನಾಲ್ಕು ರು. ಎರಿಸಿದರೂ ಸಾಕು ಅವರ ಜೀವನವೇ ಅಸ್ತವ್ಯಸ್ತವಾಗಿಬಿಡುತ್ತದೆ. ಸೀಮೆಎಣ್ಣೆ ಬೆಲೆ ಏರಿಸುತ್ತಾರೆ ಎಂಬ ಸುದ್ದಿ ಅವರ ಕಿವಿಗೆ ಹಾಕಿದಾಗಲೇ ಅವರ ಹಣೆಯ ಮೇಲೆ ಚಿಂತೆಯ ಗೆರೆಗಳು ದಟ್ಟವಾಗಿ ಕಾಣಿಸುತ್ತವೆ.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಸಿಲಿಂಡರ್ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದ ಇಂಥ ಕೆಂಪೇಗೌಡರು ಬೆಂಗಳೂರಿನಲ್ಲಿ, ಕರ್ನಾಟಕದಲ್ಲಿ ಮತ್ತು ಭಾರತದಲ್ಲಿ ಇನ್ನೆಷ್ಟಿದ್ದಾರೋ? ಪೆಟ್ರೋಲ್ ಡೀಸೆಲ್ ಬಗ್ಗೆಯೇ ತಲೆಕೆಡಿಸಿಕೊಳ್ಳದ ಇವರು ವಿದೇಶಿ ನೇರ ಹೂಡಿಕೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರಾ?

English summary
Meet Mr Kempegowda, working in Jayanagar 3rd block, Bangalore working as security guard. His life is not different from other poor people. But, he is least bothered about Diesel price hike, LPG subsidy. As he never uses these commodities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X