ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಾಯದಲ್ಲಿದ್ದ ಉಲೂಕ ಕಾಪಾಡಿದ ಒನ್ಇಂಡಿಯಾ ಪತ್ರಕರ್ತ

By ಚೇತನ್ ಕೃಷ್ಣ, ಬೆಂಗಳೂರು
|
Google Oneindia Kannada News

Oneindia employee rescues owl
ಸೌತ್ ಎಂಡ್ ವೃತ್ತವನ್ನು ಜಯನಗರ 9ನೇ ಬ್ಲಾಕಿಗೆ ಸಂಪರ್ಕಿಸುವ ಡಬಲ್ ರಸ್ತೆ ಶನಿವಾರ ಕೂಡ ವಿಭಿನ್ನವಾಗಿರಲಿಲ್ಲ. ರಸ್ತೆಯ ನಟ್ಟನಡುವಿನಲ್ಲಿ ನಮ್ಮ ಮೆಟ್ರೋ ಕಾಮಗಾರಿ ಎಂದಿನಂತೆ ನಿಧಾನಗತಿಯಲ್ಲಿ ಸಾಗಿತ್ತು. ಕೆಎಸ್ಸಾರ್ಟಿಸಿ, ಬಿಎಂಟಿಸಿ ಮುಷ್ಕರದಿಂದಾಗಿ ಎರಡು ದಿನ ರೆಸ್ಟ್ ತೆಗೆದುಕೊಂಡಿದ್ದ ಬಸ್ಸುಗಳು ಮತ್ತೆ ಧೂಳೆಬ್ಬಿಸುತ್ತ ಸಾಗುತ್ತಿದ್ದವು. ಜೊತೆಗೆ ಕಾರು, ಬೈಕು, ವ್ಯಾನುಗಳ ಪಾಂಪಾಂ ನಿನಾದ.

ಪಕ್ಕದ ಶಾಮರಾವ್ ಪಾರ್ಕಿನಲ್ಲಿ ಮಕ್ಕಳು ಅಲ್ಲಲ್ಲಿ ಆಡುತ್ತಿದ್ದರು, ಬೆಂಚಿನ ಮೇಲೆ ಪ್ರಣಯಪಕ್ಷಿಗಳು ಒಂದಕ್ಕೊಂದು ಮೆತ್ತಿಕೊಂಡು ಕೂತಿದ್ದವು, ಕೆಲವರು ಈ ಪ್ರಣಯ ದೃಶ್ಯವನ್ನು ನೋಡಿಯೂ ನೋಡದಂತೆ ತಮ್ಮಷ್ಟಕ್ಕೆ ತಾವು ವಾಕ್ ಮಾಡುತ್ತಿದ್ದರು. ಇದೆಲ್ಲ ಒನ್ಇಂಡಿಯಾ ಕಚೇರಿಗೆ ಬರುವಾಗ ನನಗೆ ಪ್ರತಿದಿನ ಕಾಣುವ ನೋಟವೆ. ಆದರೆ, ಪ್ರತಿದಿನ ಈ ಎಲ್ಲ ಚಟುವಟಿಕೆಗಳನ್ನು ಬೈಕ್ ಮೇಲಿಂದಲೇ ವೀಕ್ಷಿಸುತ್ತ ಬರುವ ನನಗೆ ಅಲ್ಲೊಂದು ಅಚ್ಚರಿ ಕಾದಿತ್ತು.

ಯಾವತ್ತೂ ಬೈಕ್ ಇಳಿದು ಅಲ್ಲಿ ನಿಲ್ಲದವನನ್ನು ಆ ಅಚ್ಚರಿ ನಿಲ್ಲುವಂತೆ ಮಾಡಿತ್ತು. ಪಾರ್ಕಿಗೆ ಹೊಂದಿಕೊಂಡಿರುವ ಮರದ ಪೊಟರೆಯಲ್ಲಿ ದೊಡ್ಡ ಗಾತ್ರದ ಗೂಬೆಯೊಂದು ಮಿಣಿಮಿಣಿ ನೋಡುತ್ತ ಕುಳಿತಿತ್ತು. ಇಷ್ಟು ದೊಡ್ಡ ಗೂಬೆಯನ್ನು ಎಂದೂ ಕಂಡಿರದ ನಾನು ಸಹಜವಾಗಿ ಅದರತ್ತ ದೃಷ್ಟಿ ಹಾಯಿಸಿದೆ. ಮೊದಲಿಗೆ ಯಾವುದೋ ಬೊಂಬೆ ಇರಬಹುದು ಎಂದು ಅಂದುಕೊಂಡ ನನಗೆ, ಅದರ ಗೋಣಿನ ಚಲನವಲನ ಇದು ಜೀವಂತ ಪಕ್ಷಿಯೇ ಎಂದು ಮನವರಿಕೆ ಮಾಡಿಕೊಟ್ಟಿತು.

ಅಷ್ಟರಲ್ಲಿ ನನ್ನ ಪ್ರಜ್ಞೆಯೂ ಜಾಗೃತವಾಯಿತು. ಜೊತೆಗೆ, ಹಗಲು ಹೊತ್ತಿನಲ್ಲಿ ಇದು ಇಲ್ಲೇಕೆ ಬಂದಿತು, ಯಾರಾದರೂ ಏನಾದರೂ ಅಪಾಯ ಮಾಡಿಬಿಟ್ಟರೆ ಎಂಬ ಪ್ರಶ್ನೆಗಳೂ ನನ್ನ ಮನದ ಪಟಲದಲ್ಲಿ ಹಾದುಹೋದವು. ಕೂಡಲೆ ತಲೆಯನ್ನು ಓಡಿಸಿ, ಬೆಂಗಳೂರಿನ ಪೀಪಲ್ ಫಾರ್ ಎನಿಮಲ್ಸ್ ಸಂಸ್ಥೆಗೆ ಫೋನ್ ಮಾಡಿದೆ. ಅವರಿಗೆ ನಾನು ಕಂಡ ದೃಶ್ಯವನ್ನು ಮತ್ತು ಆ ಅಪರೂಪದ ಪಕ್ಷಿ ಅಪಾಯದಲ್ಲಿ ಇರುವ ಪರಿಸ್ಥಿತಿಯನ್ನು ಸ್ಥೂಲವಾಗಿ ವಿವರಿಸಿ, ಅದನ್ನು ಕಾಪಾಡಬೇಕೆಂದು ಕೋರಿದೆ.

ನನ್ನ ಕೋರಿಕೆಗೆ ಸಕಾರಾತ್ಮಕ ಪ್ರತಿಸ್ಪಂದನೆ ದಕ್ಕಿತು ಮತ್ತು ತಾವು ಅಲ್ಲಿಗೆ ಬರುವವರೆಗೆ ಅದರ ಮೇಲೆ ಒಂದು ಕಣ್ಣಿಟ್ಟಿರಬೇಕು ಮತ್ತು ಕಾಪಾಡಲು ಯತ್ನಿಸಬೇಕು ಎಂಬ ಕೋರಿಕೆಯೂ ಬಂದಿತು. ಅಷ್ಟರಲ್ಲಾಗಲೆ ಅಲ್ಲಿ ಹತ್ತಾರು ಮಂದಿ ಜಮಾಯಿಸಿದ್ದರು. ಎಲ್ಲರಲ್ಲಿಯೂ ಒಂದು ಬಗೆಯ ವಿಚಿತ್ರ ಕುತೂಹಲ. ಗೂಬೆಯನ್ನು ಕಂಡರೆ ಅಪಶಕುನವೆಂದು ಬಗೆಯುವ ಮೂಢನಂಬಿಕೆಯ ದಾಸರಾರಾದರೂ ಅಲ್ಲಿದ್ದರೆ ಅದನ್ನು ಕಲ್ಲು ಹೊಡೆದು ಕೊಂದೇಬಿಟ್ಟಾರು ಎಂಬ ದುಗುಡ ನನ್ನಲ್ಲಿ. ಅಪ್ಪಿತಪ್ಪಿ ಯಾರ ಮನೆಯ ಮೇಲೆ ಬಂದು ಕುಳಿತರೆ ಅಥವಾ ಮನೆ ಹೊಕ್ಕರೆ ಅಪಶಕುನ ಎಂದು ಬಗೆಯುವ ಜನರೂ ಇದ್ದಾರೆ ಎಂದು ತಿಳಿದಿದ್ದೆ.

ಜನ ಸೇರುತ್ತಿದ್ದಂತೆ ಅಲ್ಲಿ ಗುಜುಗುಜು ಪ್ರಾರಂಭವಾಯಿತು. ಗೂಬೆ ಕಣೋ ಗೂಬೆ ಕಣೋ ಅಂತ ಗುಸುಗುಸು ಕೂಡ ಶುರುವಾಯಿತು. ಅಷ್ಟರಲ್ಲೊಬ್ಬ, ಅದು ಗೂಬೆ ಅಲ್ಲಲೋ ನನ್ ಮಗ್ನೆ, ಅದು ಗಿಡುಗ ಅಂತ ದೊಡ್ಡದಾಗಿ ಕೂಗಿ ತನ್ನ ಜಾಣ್ಮೆ ಪ್ರದರ್ಶಿಸಿದ. ಥೂ ಅದು ಗಿಡುಗ ಅಲ್ಲಲೋ ಗೂಬೆ, ಅದು ಗೂಬೆಯೆ ಎಂದು ಮಾರುತ್ತರ ಕೂಡ ನಗುವಿನೊಡನೆ ಬಂದಿತು. ಇವರ ಮಾತುಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಗೂಬೆ ಸುಮ್ಮನೆ ಕುಳಿತಿತ್ತು. ಇವರ ಮಾತು ಕೇಳಿ ಯಾಕೋ ಪಿಚ್ಚೆನಿಸಿತು. ನಿಂತಲ್ಲಿಯೇ ಗೂಬೆಗೆ ಮತ್ತೇನಾದರೂ ಹೆಸರಿದೆಯಾ ಎಂದು ಮೊಬೈಲಲ್ಲಿ ಹುಡುಕಿದಾಗ, ಅದಕ್ಕೆ ಉಲೂಕ, ಹಂದಿಗೀರನ ಹಕ್ಕಿ ಎಂತಲೂ ಹೆಸರಿರುವುದು ತಿಳಿಯಿತು. ಇದನ್ನು ಈ ಹುಡುಗರಿಗೆ ಹೇಳಿ ಪ್ರಯೋಜನವಿಲ್ಲವೆಂದು ಸುಮ್ಮನೆ ನಿಂತೆ.

ಕೆಲ ತರಲೆಗಳೂ ಅಲ್ಲಿದ್ದವು. ಹುಷ್ ಹುಷ್ ಎಂದು ಅವರು ಕೂಗಲು ಪ್ರಾರಂಭಿಸಿದ ಕೂಡಲೆ ಅದು ಚಟಪಡಿಸಲು ಪ್ರಾರಂಭಿಸಿತು. ಆದರೆ, ಅದಕ್ಕೆ ಹಾರಲಾಗಲಿ, ಅಲ್ಲಿಂದ ಸರಿಯಲಾಗಲಿ ಸಾಧ್ಯವಾಗಲಿಲ್ಲ. ಉಲೂಕಗೆ ಹಗಲಿನಲ್ಲಿ ಕಣ್ಣು ಕಾಣುವುದಿಲ್ಲ ಎಂಬ ಅರಿವಿದ್ದರೂ ಜನರ ಕಲರವದಿಂದ ಬಹುಶಃ ಹೆದರಿರಬಹುದು ಅಥವಾ ಗಾಯಗೊಂಡಿದ್ದರಿಂದ ಹಾರಲು ಸಾಧ್ಯವಾಗದಿರಬಹುದು ಎಂದು ಅಂದುಕೊಂಡೆ. ಪೀಪಲ್ ಫಾರ್ ಅನಿಮಲ್ಸ್ (ಪಿಎಫ್ಎ) ಸಂಸ್ಥೆಯ ಜನರು ಬರಲು ಹೆಚ್ಚೂ ಕಡಿಮೆ ಒಂದು ಗಂಟೆಯಾಯಿತು. ಅಷ್ಟರಲ್ಲಿ ಜನರ ಸಂಖ್ಯೆಯೂ ದ್ವಿಗುಣಿಸಿತ್ತು.

ಆ ಉಲೂಕ ಕೈಗೆಟಕುವ ಎತ್ತರದ ಪೊಟರೆಯಲ್ಲಿ ಕುಳಿತಿದ್ದರಿಂದ ಓರ್ವ ಮಹಿಳೆ ಅದನ್ನು ಮುಟ್ಟಲು ಹೋದಾಗಲೇ ಅದು ಗಾಯಗೊಂಡಿರುವ ವಿಷಯ ಖಚಿತವಾಯಿತು. ರೆಕ್ಕೆ ಪಟಪಟಿಸಲು ಸಾಧ್ಯವಾಗದೆ ರಸ್ತೆ ಬದಿಯ ಚರಂಡಿಯೊಳಗೆ ಉಲೂಕ ಬಿದ್ದುಬಿಟ್ಟಿತು. ಕೂಡಲೆ ಒಂದು ರಟ್ಟಿನ ಡಬ್ಬಿಯನ್ನು ತರಲು ಪಿಎಫ್ಎ ಸಂಸ್ಥೆಯ ಸದಸ್ಯರು ನನ್ನನ್ನು ದೌಡಾಯಿಸಿದರು. ಕೊನೆಗೆ ಸ್ವಲ್ಪ ಪ್ರಯತ್ನದ ನಂತರ ಉಲೂಕ ಸಂಸ್ಥೆಯ ಕೈವಶವಾಯಿತು. ಅದಕ್ಕೆ ಕೆಂಗೇರಿಯ ಬಳಿಯಿರುವ ಉತ್ತರ ರಸ್ತೆಯಲ್ಲಿರುವ ಸಂಸ್ಥೆಯ ಆಲಯದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅದನ್ನು ಕಾಡಿಗೆ ಬಿಡುವುದಾಗಿ ಅವರು ಹೇಳಿ ಅದನ್ನು ಕೊಂಡೊಯ್ದರು.

ನಶಿಸಿಹೋಗುತ್ತಿರುವ ಪಕ್ಷಿಗಳ ಪಟ್ಟಿಯಲ್ಲಿರುವ ಈ ಅಪರೂಪದ ಗೂಬೆ (ಉಲೂಕ) ಸುರಕ್ಷಿತವಾಗಿ ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಯ ಸ್ವಯಂಸೇವಕರ ಕೈಸೇರಿದ್ದು ಒಂದು ಸಮಾಧಾನದ ಸಂಗತಿಯಾದರೆ, ಆ ಪಕ್ಷಿಯನ್ನು ಕಾಪಾಡುವಲ್ಲಿ ನಾನು ಸಹಕರಿಸಿದ್ದು ಹೆಚ್ಚಿನ ಸಮಾಧಾನ ನೀಡಿತ್ತು. ಹಾಗೆಯೆ, ಈ ಪಕ್ಷಿ ನೋಡಿದರೆ ಅಪಶಕುನವಲ್ಲ ಮತ್ತು ಇದನ್ನು ನೋಡಿದರೆ ಯಾವುದೇ ಕೇಡಾಗುವುದಿಲ್ಲ ಎಂಬ ಸಂಗತಿಯನ್ನು ಒನ್ಇಂಡಿಯಾದ ಓದುಗರ ಮುಖಾಂತರ ಇಡೀ ಜಗತ್ತಿಗೆ ಸಾರಬಯಸುತ್ತೇನೆ.

English summary
Human interest story : Oneindia employee Chetan Krishna saves an endangered bird Barn Owl, which was unable to fly as it was injured, with the help of People for Animals organization, in Jayanagar, Bangalore on Saturday, 15th September, 2012. Owl is not symbol of bad omen, save it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X