•  

ಅಪಾರ್ಟ್‌ಮೆಂಟಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸಬೇಕಾ?

ಬುಧವಾರ, ಫೆಬ್ರವರಿ 15, 2012, 18:48 [IST]
Teach Kannada to non-Kannadigas
‘ನನ್ನ ಹೆಸರು ಅರ್ಪಿತಾ. ನಿಮ್ಮ ಹೆಸರು ಏನು?’ ಎಂಬ ಪ್ರಶ್ನೆಗೆ ’ನನ್ನ ಹೆಸರು ನಿಖಿಲ್ ಲಾಡ್’ ಎಂದು ಅಲ್ಲಿ ಕುಳಿತವರೊಬ್ಬರು ಉತ್ತರ ಕೊಡುತ್ತಿದ್ದರು. ’ನನ್ನ ಮನೆ ಜಯನಗರದಲ್ಲಿದೆ. ನಿಮ್ಮ ಮನೆ ಎಲ್ಲಿ ಇದೆ?’ ಎಂಬ ಪ್ರಶ್ನೆಗೂ ಥಟ್ಟನೇ ಉತ್ತರ ಬರುತ್ತಿತ್ತು. ಅರೇ! ಇದರಲ್ಲೇನು ವಿಶೇಷ ಎಂದು ಯೋಚಿಸುತ್ತಿದ್ದೀರಾ? ವಿಶೇಷವಿದೆ. ಪ್ರಶ್ನೆ ಕೇಳುತ್ತಿದ್ದವರು ಕನ್ನಡ ಕಲಿಸುತ್ತಿದ್ದವರು, ಉತ್ತರ ಹೇಳುತ್ತಿದ್ದವರು ಕನ್ನಡ ಕಲಿಯಲು ಬಂದ ಕನ್ನಡೇತರರು. ಕಳೆದ ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಸುಮಾರು 200 ಅಪಾರ್ಟ್‌ಮೆಂಟ್‌ಗಳಲ್ಲಿ ಕಂಡುಬರುತ್ತಿದ್ದ ದೃಶ್ಯ ಇದು. ಅಲ್ಲಿ ನಡೆಯುತ್ತಿದ್ದುದು ’ಕನ್ನಡ ಪರಿಚಯ ವರ್ಗ’.

’ಬೆಂಗಳೂರು ಅಡ್ಡಾದಿಡ್ಡಿ ಬೆಳೀತಿದೆ. ಎಲ್ಲೆಲ್ಲಿಂದಲೋ ಬಂದವರೇ ಇಲ್ಲಿ ಜಾಸ್ತಿಯಾಗಿದ್ದಾರೆ. ಕೆಲವು ಕಡೆ ಹೋದ್ರಂತೂ ಕನ್ನಡಾನೇ ಕಿವಿಗೆ ಬೀಳಲ್ಲ. ಇದು ಕರ್ನಾಟಕ ಹೌದೋ ಅಲ್ವೋ ಅನ್ನೋ ಥರಾ ಆಗಿಬಿಟ್ಟಿದೆ. ಬೆಂಗಳೂರಲ್ಲಿ ಇನ್ನು ಕನ್ನಡಕ್ಕೆ ಉಳಿಗಾಲವಿಲ್ಲ!’ – ಇಂಥಾ ಮಾತುಗಳನ್ನು ನಾವೆಲ್ಲಾ ಆಗಾಗ ಕೇಳುತ್ತಿರುತ್ತೇವೆ. ಕನ್ನಡದ ಬಗ್ಗೆ ಕಾಳಜಿಯಿರುವ ಅನೇಕರಿಗೆ ಹೊರಗಡೆಯಿಂದ ಬಂದವರು ಕನ್ನಡ ಕಲೀತಿಲ್ಲ, ಹಾಗಾಗಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಕೊರಗು ಇರುವುದು ಸುಳ್ಳಲ್ಲ. ಆದರೆ, ನಾವೇ ಅವರ ಹತ್ತಿರ ಹಿಂದಿಯಲ್ಲೋ, ಇಂಗ್ಲಿಷಿನಲ್ಲೋ ಮಾತನಾಡಿದರೆ ಅವರು ಕನ್ನಡವನ್ನು ಕಲಿಯುವುದಾದರೂ ಹೇಗೆ ಎನ್ನುವುದೂ ಸತ್ಯವೇ. ಹಾಗಾದರೆ, ಅವರಿಗೆ ಕನ್ನಡ ಕಲಿಸುವರು ಯಾರು? ಅದಕ್ಕೇನು ವ್ಯವಸ್ಥೆಯಿದೆ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು ಎಂಬುದು ಪ್ರಶ್ನೆ.

ಇದನ್ನು ಗಮನಿಸಿದ ಆರೆಸ್ಸೆಸ್ ಐಟಿ ಮಿಲನ್‌ನ ಸ್ವಯಂಸೇವಕರಾದ ಕೆಲವು ಸಾಫ್ಟ್‌ವೇರಿಗರು, ತಾವೇಕೆ ಈ ಕೆಲಸ ಮಾಡಬಾರದು ಎಂದು ಯೋಚಿಸಿದರು. ಅದರ ಫಲವಾಗಿಯೇ ಕಳೆದ ಫೆಬ್ರವರಿ 11 ಮತ್ತು 12ರ ಶನಿವಾರ ಭಾನುವಾರದಂದು ’ಕನ್ನಡ ಪರಿಚಯ ವರ್ಗ’ ನಡೆಯಿತು! ಎರಡೂ ದಿನ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಕನ್ನಡ ಕಲಿಕೆಯ ಈ ಕಾರ್ಯಕ್ರಮದಲ್ಲಿ ಸುಮಾರು 3,000 ಜನ ಕನ್ನಡಿಗರಲ್ಲದವರು ಕನ್ನಡದ ಪರಿಚಯ ಮಾಡಿಕೊಂಡರು. ಐಟಿ ಮಿಲನ್‌ನ ಸ್ವಯಂಸೇವಕರಲ್ಲದೇ ಇತರ ಸಾಫ್ಟ್‌ವೇರ್ ಉದ್ಯೋಗಿಗಳೂ ಸೇರಿದಂತೆ ಸುಮಾರು 330 ಜನರು ಕನ್ನಡ ಕಲಿಸಲು ಉತ್ಸಾಹದಿಂದ ಇದರಲ್ಲಿ ತೊಡಗಿಸಿಕೊಂಡಿದ್ದರು. ಕೆಲವೆಡೆ ಗಂಡ ಹೆಂಡರಿಬ್ಬರೂ, ಇನ್ನು ಕೆಲವೆಡೆ ಸಾಫ್ಟ್‌ವೇರಿನ ಹುಡುಗಿಯರೂ ಶಿಕ್ಷಕರಾಗಿ ದೂರದ ಅಪಾರ್ಟ್‌ಮೆಂಟಿಗೆ ಹೋಗಿ ಕನ್ನಡ ಕಲಿಸಿದ್ದು ವಿಶೇಷವಾಗಿತ್ತು. ಕನ್ನಡದ ಗಂಧಗಾಳಿಯೂ ಇಲ್ಲದವರು ಕೇವಲ ಎರಡೇ ದಿನದಲ್ಲಿ ’ನನ್ನ ಹೆಸರು... ನಿಮ್ಮ ಹೆಸರು ಏನು?’ ಎಂಬ ಮಂತ್ರ ಶುರು ಮಾಡಿದರು. ದಿನಬಳಕೆಯಲ್ಲಿ ಮಾತನಾಡಲು ಬೇಕಾಗುವಷ್ಟು ಕನ್ನಡ ಕಲಿತರು, ಅದೂ ಯಾವುದೇ ಶುಲ್ಕ ನೀಡದೇ!

’ನಮಸ್ಕಾರ ಅಣ್ಣಾ’ ಎಂದೇ ಮಾತಿಗೆ ಶುರುಮಾಡಿದ ಗ್ಲೋಮಂತ್ರ ಕಂಪನಿಯಲ್ಲಿ ಕೆಲಸ ಮಾಡುವ ಒರಿಸ್ಸಾ ಮೂಲದವರಾದ, ಐಟಿ ಮಿಲನ್‌ನ ಪ್ರಭಾತಚಂದ್ರ ಪಾತ್ರ (ಅಂದ ಹಾಗೆ, ಐಟಿ ಮಿಲನ್ ಎನ್ನುವುದು ಸಾಫ್ಟ್‌ವೇರ್ ಉದ್ಯೋಗಿಗಳಿಗಾಗಿಯೇ ರಚಿಸಲಾಗಿರುವ ಆರೆಸ್ಸೆಸ್ಸಿನ ಶಾಖೆ.) ಹೇಳುವ ಹಾಗೆ ಕನ್ನಡ ಕಲಿಸುವ ಈ ಐಡಿಯಾ ಬಂದಿದ್ದೇ ತಡ, ಅವರ ಮಿತ್ರರೆಲ್ಲಾ ಯಾವುದೇ ಚರ್ಚೆಯಿಲ್ಲದೇ ಇದನ್ನು ಒಪ್ಪಿದರಂತೆ.

ಸರಿ, ಇನ್ನೇಕೆ ತಡ ಎಂದು ತಮ್ಮ ಇಡೀ ತಂಡವನ್ನು ಇದಕ್ಕಾಗಿ ತೊಡಗಿಸಿದರು. ಬೇರೆ ಬೇರೆ ಅಪಾರ್ಟ್‌ಮೆಂಟ್‌ಗಳನ್ನು ಸಂಪರ್ಕಿಸಿ ಅಲ್ಲಿ ಕಲಿಕಾ ಕೇಂದ್ರಗಳನ್ನು ಗುರುತಿಸುವ ಗುಂಪು ಒಂದಾದರೆ, ತಮ್ಮ ತಮ್ಮ ಸ್ನೇಹಿತರು ಸಹೋದ್ಯೋಗಿಗಳು ಮತ್ತು ಸಂಬಂಧಿಕರ ಬಳಿ ಮಾತನಾಡಿ ಶಿಕ್ಷಕರಾಗಿ ಬರಲು ಮನವೊಲಿಸಿ, ಅವರಿಗೆ ಒಂದು ಗಂಟೆಯ ಪ್ರಾತ್ಯಕ್ಷಿಕೆ ನಡೆಸಿ ತರಬೇತಿ ಕೊಡುವ ಗುಂಪು ಇನ್ನೊಂದು. ಯಾರ‍್ಯಾರು ಯಾವ್ಯಾವ ಅಪಾರ್ಟ್‌ಮೆಂಟಿಗೆ ಹೋಗಬೇಕು ಎನ್ನುವುದನ್ನು ನಿರ್ಧರಿಸಿ ಅವರಿಗೆ ವಾಹನ ವ್ಯವಸ್ಥೆ ಮಾಡುವ ಗುಂಪು ಮತ್ತೊಂದು. ಹೀಗೆ ಸುಮಾರು 600 ಜನ ಕಾರ್ಯಕರ್ತರು ಇದರಲ್ಲಿ ಮೂರು ತಿಂಗಳಿನಿಂದ ತೊಡಗಿಸಿಕೊಂಡಿದ್ದಾರೆ. ಅದರಿಂದಾಗಿಯೇ ಏಕಕಾಲದಲ್ಲಿ ಇಷ್ಟು ಅಪಾರ್ಟ್‌ಮೆಂಟ್‌ಗಳಲ್ಲಿ ಕನ್ನಡ ಪರಿಚಯ ವರ್ಗ ನಡೆಸಲು ಸಾಧ್ಯವಾಯಿತು ಎಂಬ ಪ್ರಭಾತಚಂದ್ರರ ಮಾತಿಗೆ, ಅಲ್ಲಿ ಕಲಿಸುವ ಸಿಲಬಸ್ ಏನಿರಬೇಕು ಎನ್ನುವುದನ್ನು ಸಿದ್ಧಪಡಿಸಿ ಪರಿಷ್ಕರಿಸಲು ಮತ್ತೊಂದು ಗುಂಪು ಒಂದು ತಿಂಗಳಿನಿಂದ ಕೆಲಸ ಮಾಡಿದೆ ಎಂದು ಇನ್ನೊಬ್ಬ ಕಾರ್ಯಕರ್ತ ಅಕಾರ್ಡ್ ಸಾಫ್ಟ್‌ವೇರ್‌ನ ಉದ್ಯೋಗಿ ರಾಘವೇಂದ್ರ ಕುಲಕರ್ಣಿ ದನಿಗೂಡಿಸಿದರು.

ಹೊರ ರಾಜ್ಯಗಳಿಂದ ಬಂದವರಿಗೆ ಕನ್ನಡ ಕಲಿಯಲು ಆಸಕ್ತಿಯಿಲ್ಲ ಎನ್ನುವುದು ಸತ್ಯವಲ್ಲ ಎನ್ನುವುದು ನಮಗೆ ಮನವರಿಕೆಯಾಯಿತು. ಸುಮಾರು 5 ಕೇಂದ್ರಗಳಲ್ಲಿ 40ಕ್ಕೂ ಹೆಚ್ಚು ಜನ ಕನ್ನಡ ಕಲಿಯಲು ಬಂದಿದ್ದು, ಹೆಚ್ಚೂ ಕಮ್ಮಿ ಎಲ್ಲಾ ಕೇಂದ್ರಗಳಲ್ಲೂ ಇದನ್ನು ಪ್ರತೀವಾರವೂ ಮುಂದುವರಿಸಿ ಎಂಬ ಬೇಡಿಕೆ ಬಂದಿದ್ದು ಇದಕ್ಕೆ ಸಾಕ್ಷಿಯಾಗಿತ್ತು ಎನ್ನುತ್ತಾರೆ ಶಿಕ್ಷಕರಾಗಿ ಭಾಗವಹಿಸಿದ್ದ ಸಾಫ್ಟ್‌ವೇರಿಗ ಸುಪ್ರದೀಪ್ ಸುಬ್ರಹ್ಮಣ್ಯ ಅವರು. ಅಲ್ಲದೇ, ಆಂಧ್ರ, ಮಹಾರಾಷ್ಟ್ರ, ಒರಿಸ್ಸಾ, ಪಂಜಾಬ್, ಬಿಹಾರ ಮೊದಲಾದ ರಾಜ್ಯಗಳಿಂದ ಬಂದ ಕಾರ್ಯಕರ್ತರು ಇದರಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು ಎನ್ನುತ್ತಾರೆ. ಒಟ್ಟಿನಲ್ಲಿ, ಸಾಫ್ಟ್‌ವೇರಿಗರ ಕನ್ನಡ ಕಾಳಜಿಗೆ, ಸಂಘಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಂತಿತ್ತು ಈ ವಿನೂತನ ಪ್ರಯೋಗ ಎಂದರೆ ತಪ್ಪಾಗಲಾರದು. (ಕೃಪೆ : ವಿಶ್ವ ಸಂವಾದ ಕೇಂದ್ರ)
User Comments
sanjay 19 Feb 2012 03:03 pm
ಇದು ಆರಂಭ. ಇದನ್ನು ಸತತವಾಗಿ ಮುನ್ನಡೆಸಬೇಕು. ಕನ್ನಡೇತರರೀಗೆ ಆದಷ್ಟು ಸರಳವಾಗಿ ಕನ್ನಡವನ್ನು ಕಲಿಸಬೇಕು, ಅವರಿಗೆ ಸುಲಭವಾಗಿ ಅರ್ಥವಾಗುವ ಹಾಗೆ ಕಲಿಕಾ ಸಾಮಗ್ರಿಯನ್ನು ಬಳಸಬೇಕು. ಅವರಾಗಿಯೇ ಕಲಿಯಲೇಬೇಕಾದ್ದನ್ನು ನಾವಾಗಿಯೇ ಕಲಿಸಬೇಕಾಗಿರುವದು ನಮ್ಮ ದುರಾದೃಷ್ಟ. ಬೆಂಗಳೂರಿನಲ್ಲಿ ಕನ್ನಡದಲ್ಲಿ ಮಾತಾಡುವದು ಬೆಂಗಳೂರಿಗರ ಅದ್ಯ ಕರ್ತವ್ಯ.
ram 16 Feb 2012 11:06 am
ತುಂಬಾ ಸಂತೋಷ ಆಯಿತು. ಈ ತರ ವರದಿ ನೋಡಿ. ದಯವಿಟ್ಟು ಕನ್ನಡ ಉಳಿಯಲು ನಾವೆಲ್ಲಾ ಪ್ರಯತ್ನಿಸಬೇಕು
Ashoka T 15 Feb 2012 10:27 pm
ತುಂಬ ಒಳ್ಳೆಯ ಕೆಲಸ.. ಇದು ನಿಜವಾಗಲು ದೇವರು ಮೆಚ್ಚುವ ಕೆಲಸ ಅಂದರೆ ತಪ್ಪಾಗಲಾರದು... ಹ್ಯಾಟ್ಸ್ ಅಪ್ ಟು ಟೀಂ.... ಇನ್ನ್ಮೇಲೆ ನಾನು ಸಹ ನನ್ನ ಅಕ್ಕ ಪಕ್ಕದ ಕನ್ನಡೇತರಿಗೆ ಕಲಿಸಲು ಪ್ರಯತ್ನಿಸುತ್ತೇನೆ...
Subramanya B A 15 Feb 2012 09:40 pm
ಇಂತಹ ಕಾರ್ಯಕ್ರಮಗಳು ಮತ್ತಷ್ಟು ಹೆಚ್ಚಾಗಿ ಮಾಡಬೇಕಾದ ಸಂಧರ್ಬ ನಮ್ಮ ಮುಂದೆ ಇದೆ. ಸುಬ್ಬು - ಪುಟ್ಟೇನಹಳ್ಳಿ
Balaraj 15 Feb 2012 08:51 pm
ತುಂಬಾ ಒಳ್ಳೆ ಲೇಖನ. ಕನ್ನಡೇತರರು ಕನ್ನಡ ಕಲಿಯುವಂತಾಗಲಿ. ಈ ವಿಷಯದಲ್ಲಿ ರಾಜಕೀಯದವರನ್ನು ನಂಬಿದರೆ ಚೊಂಬೆ.
[ ಅಭಿಪ್ರಾಯ ಬರೆಯಿರಿ ]
   
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article