ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೌವನದ ಹೊಳೆಯಲ್ಲಿ ಈಜಾಟ ಆಡಿದರೆ...

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Lover Soma of Magadi
ಮಾಗಡಿ, ಫೆ. 2 : ತಂದೆತಾಯಿ ಪ್ರೀತಿಗಿಂತ ಪ್ರಿಯಕರನ ಹುಚ್ಚು ಪ್ರೀತಿಯಲ್ಲಿ ಕೊಚ್ಚಿಹೋಗಿ ಆತನೊಂದಿಗೆ ಪಲಾಯನಗೈದು ಮದುವೆಯಾಗಿದ್ದ ಹದಿನೈದರ ಬಾಲೆ ಮತ್ತು ಪ್ರಿಯತಮ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾರೆ. ಪೊಲೀಸರ ಅತಿಥಿಯಾಗಿರುವ ಪ್ರಿಯಕರ ಅಪಹರಣ ಮತ್ತು ಅತ್ಯಾಚಾರವೆಸಗಿತ ಆರೋಪ ಹೊತ್ತು ಕಂಬಿ ಎಣಿಸುತ್ತಿದ್ದಾನೆ.

ರಾಮನಗರ ಜಿಲ್ಲೆ ಮಾಗಡಿಯ 15ರ ಬಾಲೆ ರಾಣಿ ಮತ್ತು 22ರ ಹರೆಯದ ಯುವಕ ಸೋಮ ಬೇರೆಬೇರೆ ಜನಾಂಗದವರಾಗಿರುವುದರಿಂದ ಪ್ರೇಮಪ್ರಕರಣ ಜಾತಿವೈಷಮ್ಯಕ್ಕೆ ಕಾರಣವಾಗಿದೆ. ಪೋಲೀಸ್ ಠಾಣೆ ಮೆಟ್ಟಿಲೇರಿರುವ ಅಪ್ರಾಪ್ತ ಪ್ರೇಮ ಪ್ರಕರಣದಿಂದಾಗಿ ಎರಡು ಗುಂಪುಗಳ ನಡುವೆ ವೈಷಮ್ಯ ಮೂಡಿದ್ದು ಅಶಾಂತಿಗೆ ಕಾರಣವಾಗಿದೆ.

ಟೀನೇಜು ಪ್ರೀತಿಯ ಸೆಳೆತದಿಂದ ಇನ್ನೂ ಹೊರಬರಲಾಗದ 15ರ ಬಾಲೆ ತಾನು ಪಲಾಯನ ಮಾಡಿ ಮದುವೆಯಾಗಿದ್ದೇ ಸರಿ ಎಂದು ವಾದಿಸುತ್ತಿದ್ದಾಳೆ. ಗೆಳತಿಯರೊಂದಿಗೆ ಕುಂಟೇಬಿಲ್ಲೆ ಆಡಿಕೊಂಡು ಓದಿನ ಕಡೆ ಗಮನ ಹರಿಸಬೇಕಾದ ಎಳೆಯ ಹುಡುಗಿಯ ಕತ್ತಿನಲ್ಲಿ ಅರಿಶಿನದಾರದ ತಾಳಿ ತೂಗಾಡುತ್ತಿದೆ, ಆ ಬಾಲೆಯ ಮನಸು ಆಕಾಶದಲ್ಲಿ ತೇಲಾಡುತ್ತಿದೆ.

ಹುಡುಗಿ ರಾಮನಗರ ಜಿಲ್ಲೆ ಮಾಗಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದಾಳೆ. ಶಾಲೆಗೆ ಹೋಗಿ ಬರುವಾಗ ತನ್ನ ಮನೆಯ ಎದುರಿನ ಸೋಮನಕಣ್ಣನೋಟಕ್ಕೆ ಮನಸೋತು ಹುಚ್ಚುಪ್ರೀತಿಯ ಹೊಳೆಯಲ್ಲಿ ಈಜಾಟಕ್ಕೆ ಬಿದ್ದಿದ್ದಾಳೆ. ಹೆತ್ತುಹೊತ್ತ ಅಪ್ಪ ಅಮ್ಮನಿಗಿಂತ ಪ್ರೀತಿಯ ಹೊಳೆಯಲ್ಲಿ ತೇಲಿಸಿದ ತನ್ನ ಪ್ರಿಯಕರನೇ ದೊಡ್ಡವನು, ಆದ್ದರಿಂದ ನಾನು ಅವನ ಜತೆಯಲ್ಲೇ ಇರುತ್ತೇನೆಂದು ಹೇಳುತ್ತಾಳೆ. ವಯಸ್ಸಿನ ಆಕರ್ಷಣೆಯಿಂದ ಈ ಬಾಲೆಯೊಂದಿಗೆ ಓಡಿಹೋದ ಪ್ರಿಯಕರ ಸೋಮ ಕೂಡ ತಾನು ಮಾಡಿದ್ದೇ ಸರಿ, ಅವಳು ನಿನ್ನನ್ನ ಬಿಟ್ಟು ಬದುಕುವುದಿಲ್ಲವೆಂದು ಹೇಳಿದಳು ಅದಕ್ಕಾಗಿ ಪ್ರೇಮಪಲಾಯನ ಮಾಡಿದ್ದಾಗಿ ಹೇಳುತ್ತಾನೆ.

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹೋಗುತ್ತೇನೆಂದು ಹೇಳಿ ರಾಣಿ ಮತ್ತೆ ಮನೆಗೆ ಮರಳದಿದ್ದಾಗ ಪೋಷಕರು ಆತಂಕಗೊಂಡು ಪೋಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿ 5 ದಿನಗಳಾದರೂ ಮಗಳು ಪತ್ತೆಯಾಗದಿದ್ದರಿಂದ ರಾಣಿಯ ಪೋಷಕರ ಮತ್ತು ಸಂಬಂಧಿಕರು ಪೋಲೀಸ್ ಠಾಣೆಯ ಮುಂದೆ ಮೊಕ್ಕಾಂ ಹೂಡಿ ತಮ್ಮ ಮಗಳನ್ನ ಹುಡುಕಿಕೊಡುವಂತೆ ಒತ್ತಾಯಿಸಿದ್ದಾರೆ. ರಾಣಿ ಮತ್ತು ಸೋಮನ ಮೊಬೈಲ್ ಕಾಲ್‌ಗಳನ್ನ ಟ್ರೇಸ್ ಮಾಡಿ ಇಬ್ಬರನ್ನೂ ಪೊಲೀಸರು ಹುಡುಕಿ ಕರೆತಂದಿದ್ದಾರೆ. ಮಗಳ ಕುತ್ತಿಗೆಯಲ್ಲಿದ್ದ ತಾಳಿಯನ್ನ ನೋಡಿ ಮತ್ತಷ್ಟು ಕೋಪಗೊಂಡ ಪೋಷಕರು ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿ ಎಂದು ಆಗ್ರಹಪಡಿಸುತ್ತಿದ್ದಾರೆ.

ಬದುಕು ಎಂಬುದೇ ಗೊತ್ತಿಲ್ಲದ ಅಪ್ರಾಪ್ತರು ವಿವಾಹವಾದರೆ ಭವಿಷ್ಯದ ಬದುಕು ದುರ್ಗಮವಾಗುತ್ತದೆ. ಆದ್ದರಿಂದ ಶಾಲಾ ಮಕ್ಕಳು ಪ್ರೀತಿ ಪ್ರೇಮದ ಹಿಂದೆ ಬೀಳದೆ ಓದಿನ ಬಗ್ಗೆ ಹೆಚ್ಚು ಗಮನಹರಿಸಿ ಪೋಷಕರ ಪ್ರೀತಿಯ ನಡುವೆ ಬೆಳೆಯಬೇಕೆಂದು ಸಿ.ಪಿ.ಐ ರಾಮಚಂದ್ರಪ್ಪ ತಿಳಿವಳಿಕೆ ನೀಡಿದರು.

ಪರಸ್ಪರ ದೂರು ದಾಖಲು : ಅಪ್ರಾಪ್ತ ಹುಡುಗಿ ಪಲಾಯನಗೈಯ್ಯಲು ಬೇರೊಂದು ಗುಂಪು ಕಾರಣವೆಂದು ಹೇಳಿ ಹುಡುಗಿಯ ಕಡೆಯವರು ನಿಂದಿಸುತ್ತಿದ್ದ ವೇಳೆ ತಿರುಮಲೆ ಕುರುಬಗೇರಿಯಲ್ಲಿ ಘರ್ಷಣೆ ಸಂಭವಿಸಿದೆ. ಹುಡುಗಿಯ ಕಡೆಯವರು ಒಂದು ಗುಂಪಿನ ಯುವಕರು ಹಲ್ಲೆ ಮಾಡಿದ್ದಾರೆಂದು ಹೇಳಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದೇ ವೇಳೆ ಹುಡುಗಿಯ ಕಡೆಯವರು ಖಾರದಪುಡಿ ಕಣ್ಣಿಗೆ ಎರಚಿ ಹಲ್ಲೆ ಮಾಡಲು ಪ್ರಯತ್ನ ಮಾಡಿದರೆಂದು ಮತ್ತೊಂದು ಗುಂಪಿನ ಯುವಕರು ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ತಿರುಮಲೆ ಕುರುಬಗೇರಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಬಿಗಿ ಪೋಲೀಸ್ ಬಂಧೋಬಸ್ತ್ ನಿಯೋಜಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X