ಮೇ 23ರಂದು ಜನಪ್ರತಿನಿಧಿಗಳ ಸರ್ಕಾರವಿಲ್ಲದೆ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ. ಈ ರೀತಿ ಕದ್ದು ಮುಚ್ಚಿ ಉದ್ಘಾಟನೆ ಮಾಡುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು. ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು. ಎಲ್ಲ ರಾಜ್ಯಗಳ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸ್ಥಳೀಯ ಇತಿಹಾಸ ಪುರುಷರ ಹೆಸರಿಡಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಸಿದ್ದಾರೆ. ವಿಮಾನ ನಿಲ್ದಾಣದ ಕಾಮಗಾರಿ ಆರಂಭವಾದಾಗಿನಿಂದಲೂ ಕೆಂಪೇಗೌಡರ ಹೆಸರಿಡಲು ಆಗ್ರಹಿಸುತ್ತಿದ್ದೇವೆ ಆದರೆ ವಿಮಾನ ನಿಲ್ದಾಣ ಪ್ರಾಧಿಕಾರ ಇದನ್ನು ನಿರ್ಲಕ್ಷಿಸುತ್ತಿದೆ ಎಂದು ನಾರಾಯಣಗೌಡರು ಗುಡುಗಿದರು.
ಮೇ 21ರಂದು ಯಲಹಂಕದ ಕೆಂಪೇಗೌಡ ಅವರ ಪ್ರತಿಮೆಯಿಂದ ರಾಜಭವನದವರೆಗೆ ಸಾಹಿತಿ, ಬುದ್ಧಿಜೀವಿಗಳು, ದಲಿತರು, ಯುವಕರು, ರೈತರೊಂದಿಗೆ ಪಾದಯಾತ್ರೆ ಮೂಲಕ ತೆರಳಿ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲಿದ್ದೇವೆ. ಪಾದಯಾತ್ರೆಗೆ ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ 50 ಸಾವಿರ ಜನ ಆಗಮಿಸಲಿದ್ದಾರೆ. ಆದಿಚುಂಚನಗಿರಿ ಮಠಾಧೀಶ ಬಾಲಗಂಗಾಧರನಾಥ ಸ್ವಾಮೀಜಿ ಪಾದಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಕೊಳದ ಮಠದ ಸ್ವ್ವಾಮೀಜಿ, ಬೇಲಿ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ನಾರಾಯಣಗೌಡ ತಿಳಿಸಿದರು.
ಪಾದಯಾತ್ರೆಗೂ ಮಣಿಯದಿದ್ದರೆ ಮೇ 23ರಂದು ವಿಮಾನ ನಿಲ್ದಾಣ ಉದ್ಘಾಟನೆಗೆ ಅಡ್ಡಿಪಡಿಸುತ್ತೇವೆ. ಆಗಲೂ ನಿರ್ಲಕ್ಷ ವಹಿಸಿದರೆ ವಿಮಾನ ನಿಲ್ದಾಣವನ್ನು ಧ್ವಂಸ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವುದರ ಜೊತೆಗೆ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಬಳಸಲು, ಕನ್ನಡಿಗರಿಗೆ ಉದ್ಯೋಗವಕಾಶ ನೀಡಲು ಅವರು ಆಗ್ರಹಿಸಿದ್ದಾರೆ. ಎಚ್‌ಎಎಲ್ ವಿಮಾನ ನಿಲ್ದಾಣ ಮುಚ್ಚುವುದರಿಂದ ಅನೇಕ ಜನ ಟ್ಯಾಕ್ಸಿ ಚಾಲಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಅವರಿಗೆಲ್ಲಾ ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಬೇಕು ಎಂದರು.
(ದಟ್ಸ್‌ಕನ್ನಡ ವಾರ್ತೆ)
















