•  

ಇದು ಮಾಯಬಜಾರು, ಉಡುಪಿ ಆಚಾರ್ಯರ ಮಾಯೆ ಜೋರು

ಸೋಮವಾರ, ಮೇ 20, 2002, 5:30 [IST]
*ಚರಣ್‌ ಸಿ. ಎಸ್‌

Acharya performing a gravity-defying act on a ladyನೋಡ ನೊಡುತ್ತಿದ್ದಂತೆ ಮೇಜಿನ ಮೇಲೆ ಮಲಗಿದ್ದ ಬಾಲೆ ಮೆಲ್ಲನೆ ಗಾಳಿಯಲ್ಲಿ ತೇಲುತ್ತಾಳೆ. ನಂತರ ಒಬ್ಬ ಹುಡುಗನನ್ನು ಒಂದು ಖಾಲಿ ಡಬ್ಬಿಯಾಳಗೆ ತಳ್ಳಿ, ನಾಲ್ಕೈದು ಕತ್ತಿಗಳನ್ನು ಡಬ್ಬಿಯಾಳಗೆ ತೂರಿಬರುವಂತೆ ಚುಚ್ಚುತ್ತಾರೆ. ಮತ್ತೆ ಕತ್ತಿಗಳನ್ನು ಹೊರತೆಗೆದ ಕೂಡಲೇ ಡಬ್ಬಿಯಿಂದ ಏನೂ ಆಗಿಲ್ಲವೆಂಬಂತೆ ಹುಡುಗ ಎದ್ದು ಬರುತ್ತಾನೆ. ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಿದ್ದ ಜನರ ಬಾಯಿಂದ ‘ವಾವ್‌!’ ಉದ್ಗಾರ.

ಮೈನವಿರೇಳುವ ಚಮತ್ಕಾರಗಳಿಂದ ಜನರನ್ನು ಮಂತ್ರಮುಗ್ಧಗೊಳಿಸಿ ಮನರಂಜನೆಯ ಜೊತೆಗೆ ಜನಜಾಗೃತಿ ಉಂಟು ಮಾಡುವ ನಿಟ್ಟಿನಲ್ಲಿ ತನ್ನ ಮುಂದಿನ ಐಟಂಗೆ ಸಜ್ಜಾಗುತ್ತಿದ್ದವರು ಪ್ರಹ್ಲಾದ್‌ ಆಚಾರ್ಯ. ಉಡುಪಿ ಮೂಲದ ಯಕ್ಷಿಣಿಗಾರ ಮೋಡಿ ಮಾಡಿದ್ದು ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ, ಮೇ 9ರಂದು. ಈ ಮೋಡಿ ಅಭಿಯಾನ ಇನ್ನೂ ಒಂದು ತಿಂಗಳು ಜಾರಿ.

ಆಚಾರ್ಯರ ಜಾದೂ ವರಸೆಗಳು ಮುಂದುವರೆದಂತೆ ಜನರ ಬಿಟ್ಟ ಕಣ್ಣು ಬಿಟ್ಟ ಹಾಗೇ...!

‘ನೀನು ಬಾರಪ್ಪಾ’ ಅಂತ ಒಬ್ಬರನ್ನು ವೇದಿಕೆಗೆ ಕರೆದು, ಕೈಗೆ ಹಗ್ಗ ಕಟ್ಟಿಸಿಕೊಳ್ಳುತ್ತಾರೆ. ಕೂಡಲೇ ಅದರಿಂದ ಬಿಡಿಸಿಕೊಂಡು, ತಮ್ಮ ತಂಡದ ಇನ್ನೊಬ್ಬರಿಗೆ ಮತ್ತೆ ಹಗ್ಗ ಕಟ್ಟಲು ಹೇಳುತ್ತಾರೆ. ಈಗ ಎಷ್ಟೇ ಪ್ರಯತ್ನ ಪಟ್ಟರೂ ಬಿಡಿಸಿಕೊಳ್ಳಲಾಗದೆ, ಹಗ್ಗ ಕಟ್ಟಿದವನ ಹೆಸರನ್ನು ಆಚಾರ್ಯ ಕೇಳುತ್ತಾರೆ. ಹಗ್ಗ ಕಟ್ಟಿದವನು ಮಾತನಾಡದೆ ವೇದಿಕೆಗೆ ಬೆನ್ನು ಮಾಡಿ ನಿಲ್ಲುತ್ತಾನೆ. ತಿರುಗಿ ನಿಂತ ಅವನ ಬೆನ್ನಿನ ಮೇಲೆ ಬರೆದದ್ದನ್ನು ಓದಿದ ಜನರ ಚಪ್ಪಾಳೆ ತಟ್ಟುತ್ತಿದ್ದ ಕೈಗಳು ಸುಮ್ಮನಾಗುತ್ತವೆ. ತಲೆಗಳು ತೂಗುತ್ತವೆ. ಕಾರಣ, ಬೆನ್ನಿನ ಮೇಲೆ ಬರೆದಿದ್ದು ಎರಡೇ ಎರಡು ಅಕ್ಷರಗಳ ಪದ-ಏಡ್ಸ್‌!

ಇಪ್ಪತ್ತು ಜನರ ಯಕ್ಷಲೋಕವಿದು. ಹೆಸರೂ’ ಯಕ್ಷಲೋಕ ಮ್ಯಾಜಿಕಲ್‌ ಎಂಟರ್‌ಟೈನರ್ಸ್‌’. ಜಾದೂ ಮಾಡಿ, ಜನಮನಸೂರೆಗೊಂಡು ಸುಖಾ ಸುಮ್ಮನೆ ಮನರಂಜನೆ ಒದಗಿಸುವುದಷ್ಟೇ ಆಚಾರ್ಯರ ಉದ್ದಿಶ್ಯವಲ್ಲ, ಜನರಲ್ಲಿ ಜಾಗೃತಿ ಮೂಡಿಸುವ ಉಮೇದಿಯೂ ಅವರದ್ದು. ಅದಕ್ಕೇ ಇದ್ದಕ್ಕಿದ್ದಂತೆ ಮೂಡಿದ್ದು ಏಡ್ಸ್‌ ಬಗೆಗಿನ ಜಾಗೃತಿ ಸಂದೇಶ.

ಈ ಜಾದೂ ಹೇಗೆ ಅನನ್ಯ?
ಪಾಶ್ಚಾತ್ಯ ಶೈಲಿಯ ಯಕ್ಷಿಣಿಯನ್ನು ಅರೆದು ಕುಡಿದಿರುವ ಆಚಾರ್ಯ, ದೇಶಭಕ್ತ. ಈ ಕಾರಣಕ್ಕೆ ಅವರ ವರಸೆಗಳಲ್ಲೂ ಭಾರತೀಯತೆಯ ಬಿಂಬ. ಅವರ ಜಾದೂ ಖದರಿರುವುದೇ ದೇಶೀ ಸೊಗಡಿನಲ್ಲಿ. ಏನು ಕಲಿತರೇನು, ಸಂಪ್ರದಾಯವೇ ಸೊಗಸೆನ್ನುವುದು ಆಚಾರ್ಯರ ನಂಬುಗೆ. ಅದಕ್ಕೇ ಕಾಡಿನಲ್ಲಿ ಜಾತ್ರೆ, ನಾಡ ಹಬ್ಬ, ಇಂಡಿಯನ್‌ ಬ್ಯಾಸ್ಕೆಟ್‌ ವರಸೆಗಳನ್ನೆಲ್ಲಾ ಪುಟ್ಟ ಪುಟ್ಟ ಪ್ರಹಸನಗಳಂತೆ ಹೊಸೆದು, ಜಾದೂ ಲೋಕಕ್ಕೇ ಹೊಸ ವೇಗ ಕೊಟ್ಟಿದ್ದಾರೆ ಆಚಾರ್ಯ.

ಮಕ್ಕಳಿಗೆ ಕಚಗುಳಿಯಿಡುವ ಡಿಸ್ನಿಲ್ಯಾಂಡ್‌ನಲ್ಲಿ ಜಾದೂ, ಶ್ಯಾಡೋ ಪ್ಲೇ (ನೆರಳು-ಬೆಳಕಿನಾಟ) ಮತ್ತು ಮಾತನಾಡುವ ಕೋತಿಗೆ ದೊಡ್ಡವರಿಂದಲೂ ಡಿಮ್ಯಾಂಡ್‌ ಇದೆ. ಈ ಐಟಂಗಳಿಗೆ ಒನ್ಸ್‌ ಮೋರ್‌ ಅನ್ನುವವರೇ ಹೆಚ್ಚು. ಆಚಾರ್ಯರ ಅಭಿಮಾನಿಗಳಿಗೆ ವಯೋಮಿತಿಯೇ ಇಲ್ಲ. ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಆಚಾರ್ಯ ನೆಚ್ಚು. ಅದಕ್ಕೇ ಇವರು ‘ಭಾರತದ ಹೌದಿನಿ’.

ಇತ್ತ ಸಂಪೂರ್ಣ ಡ್ರಾಮಾ ಅಲ್ಲದ, ಅತ್ತ ಸಂಪೂರ್ಣ ಮ್ಯಾಜಿಕ್‌ ಅಲ್ಲದ ತಮ್ಮ ಮಾಯಾ ಜಾದೂವನ್ನು ಆಚಾರ್ಯರು ‘ಡ್ರಾಮಾಜಿಕ್‌’ ಅಂತ ಕರೆಯುತ್ತಾರೆ. ಸೆಪ್ಟೆಂಬರ್‌ 2001 ರಲ್ಲಿ ಪ್ರಾರಂಭಿಸಿದ ಮಾಯಾಜಾದೂ ತಂಡ ಇದುವರೆವಿಗೆ 1600ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮುಗಿಸಿದೆ. ವರ್ಷದಲ್ಲಿ ಹತ್ತು ತಿಂಗಳು ಸತತವಾಗಿ ಪ್ರದರ್ಶನಗಳಲ್ಲಿ ನಿರತರಾಗಿರುವ ಇವರ ತಂಡಕ್ಕೆ ಉಳಿದ ಎರಡು ತಿಂಗಳು ಮಾತ್ರ ವಿರಾಮ.

ವಿಶ್ವವಿಖ್ಯಾತ dare-devil ಯಕ್ಷಿಣಿಗಾರ ಹೌದಿನಿಯ illusionist ಚಮತ್ಕಾರಗಳಿಂದ ಪ್ರಭಾವಿತರಾಗಿ, ಒಮ್ಮೆ ಅವರಂತೆಯೇ ಕೋಳಗಳಿಂದ ಬಂಧಿತರಾಗಿ, ಪೆಟ್ಟಿಗೆಯಲ್ಲಿ ಕುಳಿತು ನಂತರ ಅದನ್ನೂ ಹಗ್ಗಗಳಿಂದ ಬಂಧಿಸಿಕೊಂಡು ಅತಿ ಎತ್ತರದ (960 ಅಡಿ) ಜೋಗ ಜಲಪಾತದಿಂದ ಕೆಳಕ್ಕೆ ಜಿಗಿದಾಗ ಇನ್ನೇನು ‘ಇವನ ಕಥೆ ಮುಗಿಯಿತು’ ಎನ್ನುವಷ್ಟರಲ್ಲೇ ಇದನ್ನೆಲ್ಲಾ ನೋಡುತ್ತಿದ್ದವರ ಪಕ್ಕ ನಗುತ್ತಾ ನಿಂತು ಅವರನ್ನು ದಂಗು ಬಡಿಸಿದ ಆಚಾರ್ಯರ ಸಾಹಸಗಾಥೆ ಅಂತಿಂಥದ್ದಲ್ಲ.

ಕೇರಳದ ತಿರುವನಂತಪುರದಲ್ಲಿ ನಡೆದ ಅಂತರರಾಷ್ಟ್ರೀಯ ಜಾದೂ ಮೇಳದಲ್ಲಿ ಎಲ್ಲರ ಗಮನ ಸೆಳೆದ ಆಚಾರ್ಯ, ಸೆಪ್ಟೆಂಬರ್‌ 2001ರಲ್ಲಿ ತಮ್ಮ ತೌರೂರಾದ ಉಡುಪಿಯಲ್ಲಿ ಕೋಟಿ ರೂಪಾಯಿ ಬೆಲೆ ಬಾಳುವ ಶ್ರೀ ಕೃಷ್ಣನ ಚಿನ್ನದ ರಥವನ್ನೇ ಮಾಯಮಾಡಿಬಿಟ್ಟಿದ್ದರು! ಅಂದಹಾಗೆ, ಬೆಂಗಳೂರು ಮತ್ತು ಬಳ್ಳಾರಿಯ ಬಿಗಿ ಪಹರೆಯ ಜೈಲುಗಳಲ್ಲಿ ಕೂಡ ಇವರನ್ನು ಬಂಧಿಸಲಾಗುವುದಿಲ್ಲವಂತೆ. ಯಾಕೆಂದರೆ, ಆಚಾರ್ಯರು ಪರಾರಿ ಪ್ರವೀಣರೂ ಹೌದು. ಪುಣ್ಯಕ್ಕೆ ಯಾವ ಕಳ್ಳನೂ ಇವರನ್ನು ಹೈಜಾಕ್‌ ಮಾಡಿಲ್ಲ ! ಅಗತ್ಯವಾದ ಪರಿಕರ ಕೊಡಿ- ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡವನ್ನೇ ಮಾಯಮಾಡಿಬಿಡುತ್ತೇನೆ ಅಂತ ಆತ್ಮವಿಶ್ವಾಸದಿಂದ ಬೀಗುತ್ತಾರೆ ಆಚಾರ್ಯ.

1995ರಲ್ಲಿ ಉಡುಪಿಯಿಂದ ಗೋವಾದವರೆಗೆ ಸರ್ರನೆ ಬೈಕಿನಲ್ಲಿ ಸಾಗಿದ್ದರು. ಅದೇನು ಮಹಾ, ಅಂದಿರಾ? ಆಚಾರ್ಯರು ಬೈಕು ಓಡಿಸಿದ್ದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು! ಅದು ಯಃಕಶ್ಚಿತ್‌ ಸಾಹಸವಲ್ಲ, ಏಡ್ಸ್‌ ಜಾಗೃತಿಯ ಅಭಿಯಾನವಾಗಿತ್ತು. ಜಾದೂ ವರಸೆಗಳ ತೋರುತ್ತಲೇ ಚುನಾವಣೆ, ಪಲ್ಸ್‌ ಪೋಲಿಯೋ, ದೇಶಪ್ರೇಮ ಮುಂತಾದ ವಿಷಯಗಳ ಬಗೆಗೂ ಆಚಾರ್ಯ ತಮ್ಮದೇ ಆದ ರೀತಿಯಲ್ಲಿ ಮಾಹಿತಿ ಕೊಡುತ್ತಾರೆ. ಮನರಂಜನೆ ಊಟವಾದರೆ, ಮಾಹಿತಿ ಉಪ್ಪಿನ ಕಾಯಿ.

‘ಮುಂಚೆ ಜಾದೂ ಎಂದರೆ ಬರೀ ಮನೋರಂಜನೆಗೆ ಮಾತ್ರ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈಗ ಜಾದೂವನ್ನು ಜನರು ಮನರಂಜನೆಯ ಜತೆಗೆ ತಮ್ಮ ದೈನಂದಿನ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ಧಾರೆ. ಸುಮಾರು ಸಿನಿಮಾಗಳ ಮುಹೂರ್ತಗಳಿಗೆ ಜಾದೂಗಾರರ ಸಹಾಯವನ್ನು ನಿರ್ಮಾಪಕರು ಪಡೆದುಕೊಳ್ಳುತ್ತಾರೆ. ಅಂತೆಯೇ ದಿನಬಳಕೆಯ ವಸ್ತುಗಳನ್ನು ಮಾರ್ಕೆಟಿಂಗ್‌ ಮಾಡಲು ಸಹ ಮ್ಯಾಜಿಕ್‌ಗೆ ಬಹಳ ಅವಕಾಶಗಳು ಬರುತ್ತಿವೆ’ ಎನ್ನುವ ಆಚಾರ್ಯ ಅನೇಕ ಸಾಮಾಗ್ರಿಗಳನ್ನು ಮ್ಯಾಜಿಕ್‌ ಮೂಲಕ ಮಾರ್ಕೆಟಿಂಗ್‌ ಮಾಡಿದ್ದಾರೆ. ಮ್ಯಾಜಿಕ್‌ ಅಂಡ್‌ ಅಲೈಡ್‌ ಆರ್ಟ್ಸ್‌ ಡೆವಲಪ್‌ಮೆಂಟ್‌ ಅಂಡ್‌ ರೀಸರ್ಚ್‌ ಇನ್ಸ್ಟಿಟ್ಯೂಟ್‌ (MAADRI) ಎಂಬ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಜಾದೂವನ್ನು ಒಂದು ಕಲಾಪ್ರಕಾರವಾಗಿ ಬೆಳೆಸುವ ಹಾದಿ ಹಿಡಿದಿದ್ದಾರೆ.

‘ಮ್ಯಾಜಿಕ್‌ ಒಂದು ಶಕ್ತಿಯುತ ಮಾಧ್ಯಮ. ಮ್ಯಾಜಿಕ್‌ ಮೂಲಕ ಏನೇ ಹೇಳಿದರೂ ಅದು ಬಹುಬೇಗ ಜನಮನದಲ್ಲಿ ನಿಲ್ಲುತ್ತದೆ. ಆದ್ದರಿಂದ ನಾವು
MAADRIಯಲ್ಲಿ ಜಾದೂವನ್ನು ಬಹು ಉಪಯೋಗಿ ಮಾಧ್ಯಮವಾಗಿ ಹೇಗೆ ಬೆಳೆಸಬೇಕೆಂಬುದರ ಬಗ್ಗೆಯೂ ಸಂಶೋಧನೆ ನಡೆಸುತ್ತಿದ್ದೇವೆ’ ಎನ್ನುತ್ತಾರೆ MAADRIಯ ಸ್ಥಾಪಕ ಕಾರ್ಯದರ್ಶಿ ನಕುಲ್‌ ಶೆಣೈ.

ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದುಕೊಳ್ಳುವವರ ಬಾಯಿಗಳನ್ನು ಪ್ರಹ್ಲಾದ್‌ ಆಚಾರ್ಯ ತಮ್ಮ ಜಾದೂ ಮೂಲಕವೇ ಮುಚ್ಚಿಸುತ್ತಾರೆ. ಇದುವರೆಗೂ ಅನೇಕ ಅನಾಥಾಶ್ರಮ, ವೃದ್ಧಾಶ್ರಮ, ಆಸ್ಪತ್ರೆಗಳಲ್ಲಿ ಮುಫತ್ತು ಪ್ರದರ್ಶನಗಳನ್ನು ನೀಡಿರುವ ಆಚಾರ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ನಿಮಗೆ ಖುಷಿಕೊಟ್ಟ ಸಂದರ್ಭ ಯಾವುದು ಅಂತ ಕೇಳಿದರೆ, ನಗುತ್ತಲೇ ಈ ಪ್ರಸಂಗವನ್ನು ನೆನಪಿಸಿಕೊಳ್ಳುತ್ತಾರೆ- ‘ಒಮ್ಮೆ ಪ್ರದರ್ಶನ ಮುಗಿದ ಮೇಲೆ ಒಂದು ಮಗುವಿನ ತಂದೆ-ತಾಯಿ ಬಂದು, ಯಾವತ್ತೂ ಒಂದು ಕಡೆ ಸುಮ್ಮನೆ ಕೂರದ ನಮ್ಮ ಮಗು, ನಿಮ್ಮ ಜಾದೂವನ್ನು ಎರಡು ಗಂಟೆಗಳ ಕಾಲ ತುಟಿ ಪಿಟಿಕ್‌ ಅನ್ನದೆ ಕೂತು ನೋಡುತ್ತಿತ್ತು. ಜಾದೂ ಅಂದರೆ ನಿಮ್ಮದಪ್ಪಾ ಅಂದರು. ಆವತ್ತು ನನಗಾದದ್ದು ಸಾರ್ಥಕ ಭಾವ’.

ಅಂದ ಹಾಗೆ, ಬೆಂಗಳೂರಿನ ಟೌನ್‌ಹಾಲ್‌ನಲ್ಲಿನ ಮಾಯಾಜಾದೂ ಪ್ರದರ್ಶನ ಬರುವ ಜೂನ್‌ 10ರವರೆಗೆ ನಡೆಯುತ್ತದೆ. ಆಚಾರ್ಯರ ಮಾಯಾಲೋಕದಲ್ಲಿ ನೀವೂ ವಿಹರಿಸಬಹುದು.

ಪ್ರಹ್ಲಾದ್‌ ಆಚಾರ್ಯರ ಬಗ್ಗೆ ಇನ್ನಷ್ಟು ತಿಳಿಯಬೇಕಾದರೆ, ಕ್ಲಿಕ್ಕಿಸಿ.

Post your views

ಇದನ್ನೂ ಓದಿ...
ಮಾಯಾಬಜಾರಿನಲ್ಲಿ ಶೃತಿ

Click here to go to top
ಮುಖಪುಟ
/ ಲೋಕೋಭಿನ್ನರುಚಿ


User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Feroz Shah Kotla, Delhi
Delhi Daredevils: 69 / 2, 7.6 Overs
1st Test , Lord's Cricket Ground, St John's Wood
West Indies: 219 / 7, 81.6 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article