ಬೆಂಗಳೂರು: ಬರಹ ಕೃಷಿ, ವಿಜ್ಞಾನ, ಛಾಯಾಗ್ರಹಣ, ಚಿತ್ರಕಲೆ ಮುಂತಾದ ವಿಭಿನ್ನ ರಂಗಗಳಲ್ಲಿ ಪರಿಣತಿ ಸಾಧಿಸಿ ಹೆಸರು ಮಾಡಿದ್ದ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ಡಾ.ಕೃಷ್ಣಾನಂದ ಕಾಮತ್ ತೀವ್ರ ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು .‘ನಾನು ಅಮೆರಿಕೆಗೆ ಹೋಗಿದ್ದೆ ’ ಪ್ರವಾಸ ಕಥನದ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಸಿದ್ಧಿಗೆ ಬಂದ ಕೃಷ್ಣಾನಂದ ಕಾಮತರು ಚಿಕಿತ್ಸಕ ಮನಸ್ಸಿನ ಲೇಖಕ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ - 1934 ರ ಸೆ.29 ರಂದು ಜನಿಸಿದ ಅವರು, ನ್ಯೂಯಾರ್ಕ್ ಸ್ಟೇಟ್ ವಿಶ್ವ ವಿದ್ಯಾಲಯದಿಂದ ಪರಿಸರ ಮತ್ತು ಅರಣ್ಯ ವಿಜ್ಞಾನ ಪ್ರಬಂಧಕ್ಕೆ 1965 ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದರು.
ಅಮೆರಿಕ ಮಾತ್ರವಲ್ಲದೆ ರಾಜಸ್ತಾನ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ಮುಂತಾದ ಕಡೆ ವೃತ್ತಿ ಹಾಗೂ ಪ್ರವೃತ್ತಿಯ ದೆಸೆಯಿಂದ ಅಲೆದಿದ್ದ ಕಾಮತರ ಕೃತಿ ಪ್ರಪಂಚದ ವೈವಿಧ್ಯತೆ ದಂಗುಬಡಿಸುವಂಥದ್ದು . ಅವರ ಕೆಲವು ಕೃತಿಗಳ ಹೆಸರುಗಳನ್ನೇ ನೋಡಿ : ವಂಗ ದರ್ಶನ, ಪ್ರೇಯಸಿಗೆ ಪತ್ರಗಳು, ನಾ ರಾಜಸ್ತಾನದಲ್ಲಿ , ಕಾಲರಂಗ, ಬಸ್ತರ ಪ್ರವಾಸ, ಪ್ರಾಣಿ ಪ್ರಪಂಚ, ಸಸ್ಯ ಪ್ರಪಂಚ!
ಬಹುಮುಖ ಪ್ರತಿಭೆಯ ಜೀವನ ಪ್ರೇಮಿ ಕೃಷ್ಣಾನಂದ ಕಾಮತರೀಗ ನಮ್ಮೊಂದಿಗಿಲ್ಲ . ಕಳೆದ ವರ್ಷವಷ್ಟೇ (2001, ಆಗಸ್ಟ್ 15) ಅವರ ‘ದಿ ರಿಟರ್ನ್ ಜರ್ನಿ’ (ಮರು ಪಯಣ) ಪುಸ್ತಕ ಧಾರವಾಡದಲ್ಲಿ ಬಿಡುಗಡೆಯಾಗಿತ್ತು .
ವಾರ್ತಾ ಸಂಚಯ
ಕೃಷ್ಣಾನಂದ ಕಾಮತರು ಹೀಗಿದ್ದರು..
ಮುಖಪುಟ / ಇವತ್ತು... ಈ ಹೊತ್ತು...














