ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೂರದಿಂದ ಬಂದವರೆ ....

By Super
|
Google Oneindia Kannada News

ಹೊರಗಿನಿಂದ ಬಂದವರನ್ನು ಕುತೂಹಲದಿಂದ, ಮರ್ಯಾದೆಯಿಂದ, ಅನುಮಾನದಿಂದ ಕೆಲವೊಮ್ಮೆ ಮತ್ಸರದಿಂದ ನೋಡುವುದು ನಮ್ಮ ಚಿತ್ರೋದ್ಯಮದ ಜಾಯಮಾನ. ಅದರಲ್ಲೂ ಹಾಲಿವುಡ್‌ ಅಂದರೆ ತಮಾಷೆನಾ ?

ಅಶೋಕ್‌ ಪಾಟೀಲ್‌ ಸದ್ಯಕ್ಕೆ ಇಡೀ ಕನ್ನಡ ಚಿತ್ರೋದ್ಯಮದ ಕುತೂಹಲಕ್ಕೆ ಗುರಿಯಾಗಿದ್ದಾರೆ. ಬಿ. ಸಿ. ಪಾಟೀಲ್‌ ತಮ್ಮ ಅನ್ನೋದು ಮೊದಲ ಕ್ವಾಲಿಫಿಕೇಷನ್‌. ಇಲ್ಲದೇ ಇದ್ದಲ್ಲಿ ಕನ್ನಡದಲ್ಲೊಂದು ಚಿತ್ರ ನಿರ್ದೇಶಿಸುವ ಅವಕಾಶ ಅವರಿಗೆ ಸಿಗ್ತಾನೇ ಇರಲಿಲ್ಲ. ಹಾಲಿವುಡ್‌ನಲ್ಲಿ ತರಬೇತಿ ಪಡೆದಿದ್ದಾರೆ ಎನ್ನುವುದು ಎರಡನೇ ಅರ್ಹತೆ. ಹಾಲಿವುಡ್‌ ಅಕ್ಕ ಪಕ್ಕ ಅಂದರೆ 200 ಕಿ.ಮಿ. ಪರಿಧಿಯಲ್ಲಿ ಹತ್ತಾರು ಸಿನಿಮಾ ತರಬೇತಿ ಇನ್‌ಸ್ಟಿಟ್ಯೂಷನ್‌ಗಳಿವೆ. ಅದರಲ್ಲಿ ಯಾವುದೋ ಒಂದು ಶಾಲೆಯಲ್ಲಿ ಅಶೋಕ್‌ ತರಬೇತಿ ಪಡೆದಿದ್ದಾರಂತೆ. ಜೊತೆಗೆ ಅವರ ಇನ್ನೊಬ್ಬ ಪಾರ್ಟ್ನರ್‌ ಜೊತೆ ಸೇರಿಕೊಂಡು ಕಂಪ್ಯೂಟರ್‌ ಬಿಸಿನೆಸ್‌ ಮಾಡ್ತಾ ಇದ್ದಿದ್ದರಿಂದ ಫುಲ್‌ ಟೈಂ ಸಿನಿಮಾ ಸ್ಟೂಡೆಂಟ್‌ ಅನ್ನುವ ಹಾಗಿಲ್ಲ. ಅಂತೂ ಎರಡು ವರ್ಷ ಅಲ್ಲಿ ಕಳೆದು ಪಾಟೀಲ್‌ ತವರೂರಿಗೆ ಮರಳಿದ್ದಾರೆ. ವಾಪಾಸ್‌ ಮರಳುವ ಇಂಗಿತವನ್ನೇನೂ ಅವರು ವ್ಯಕ್ತಪಡಿಸಿಲ್ಲ.

ಪಾಟೀಲ್‌ ಸೋದರರ ಚಿತ್ರಯಾತ್ರೆ ಕುತೂಹಲಕಾರಿಯಾಗಿದೆ. ಬಿ. ಸಿ. ಪಾಟೀಲ್‌ ಪೋಲೀಸ್‌ ವೃತ್ತಿಯಲ್ಲಿದ್ದರೂ ನಾಟಕಗಳನ್ನಾಡುತ್ತಿದ್ದವರು. ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳಲ್ಲಿ ಗರ್ಜಿಸುವ ದರ್ಪದ ಪಾತ್ರಗಳಲ್ಲಿ ಮಿಂಚಿದವರು. ಯಾವುದೇ ಸಿನೆಮಾ ಸಮಾರಂಭದಲ್ಲಿ ವೇದಿಕೆ ಏರಿದರೆ ಪಾಟೀಲ್‌ ಎಚ್ಚಮನಾಯಕರಾಗುತ್ತಾರೆ. ಅಥವ ಬಲಭೀಮನಾಗುತ್ತಾರೆ. ಅಶೋಕ್‌ ಪಾಟೀಲ್‌ ಅಣ್ಣನ ಪಾತ್ರಗಳನ್ನು ನೋಡುತ್ತಾ ಬೆಳೆದವರು. ಒಂದಲ್ಲ ಒಂದು ದಿನ ಸಿನಿಮಾ ಕ್ಷೇತ್ರಕ್ಕೆ ಇಳಿಯಬೇಕು ಅಂತ ಕನಸು ಕಂಡವರು. ಅಣ್ಣ ಯಾವುದೇ ತರಬೇತಿಯಿಲ್ಲದೆ ಸಿನಿಮಾಕ್ಕೆ ಧುಮುಕಿದರೆ, ತಮ್ಮ ಸಾಕಷ್ಟು ಪೂರ್ವಸಿದ್ಧತೆಗಳೊಂದಿಗೆ ಸಜ್ಜಾಗಿ ಬಂದಿದ್ದಾರೆ. ಸಧ್ಯಕ್ಕೆ ತಮ್ಮನ ಕೈಗೆ ಅಣ್ಣ ತನ್ನನ್ನು ತಾನು ಒಪ್ಪಿಸಿಕೊಂಡಿದ್ದಾರೆ. ' ಶಾಪ ' ಮಡಿಕೇರಿಯಲ್ಲಿ ನಡೆದಿದೆ.

ಸ್ಥಳದಲ್ಲೇ ಡಬ್ಬಿಂಗ್‌ ಕಂಪ್ಯೂಟರ್‌ ಫೀಡಿಂಗ್‌ ಇವೆರಡು ' ಶಾಪ' ಚಿತ್ರದ ಹೈ ಲೈಟ್ಸ್‌. ಈ ಚಿತ್ರದ ಮೂಲಕ ರಮೇಶ್‌ ರೆಬೆಲ್‌ ಸ್ಟಾರ್‌ ಆಗುತ್ತಾರೆ ಅನ್ನೋದು ದೂರದ ಮತು.

ಪಾಟೀಲ್‌ ಬಂದು ನಾಲ್ಕು ತಿಂಗಳೊಳಗೆ ಇಬ್ಬರು ಅನಿವಾಸಿ ಭಾರತೀಯರು ಬೆಂಗಳೂರಿಗೆ ಬಂದು ಹೋಗಿದ್ದಾರೆ. ಮೊದಲನೆಯವನು ಮನೋಮೂರ್ತಿ. ಎರಡನೆಯವನು ಬಿ. ಕೆ. ಚಂದ್ರಶೇಖರ್‌. ಮೂರ್ತಿ ಸ್ಯಾನ್‌ ಪ್ರಾನ್ಸಿಸ್ಕೋದಲ್ಲಿ ಸಾಫ್ಟ್‌ವೇರ್‌ ಕಂಪೆನಿಯಾಂದರ ಮ್ಯಾನೇಜರ್‌. ಸಂಗೀತದ ಬಗ್ಗೆ ವಿಪರೀತ ಆಸಕ್ತಿ. ಮನೆಯನ್ನೇ ಸ್ಟುಡಿಯೋ ಮಾಡಿದ್ದಾರೆ. ನಾಲ್ಕೈದು ಡಾಕ್ಯುಮೆಂಟರಿಗಳಿಗೆ ಸಂಗೀತ ನೀಡಿದ್ದಾರೆ. ಇವರಿಗೆ ಕನ್ನಡ ಚಿತ್ರರಂಗದ ಕನೆಕ್ಷನ್‌ ಸಿಕ್ಕಿದ್ದು 'ಅಮೆರಿಕಾ ಅಮೆರಿಕಾ' ಚಿತ್ರದ ಮೂಲಕ. ಈ ಚಿತ್ರಕ್ಕೆ ಲೊಕೇಷನ್‌ ನೋಡೋದಕ್ಕೆ ಅಮೆರಿಕಾಕ್ಕೆ ತೆರಳಿದ ನಾಗತಿ ಹಳ್ಳಿ ಚಂದ್ರಶೇಖರ್‌ಗೆ ಅಲ್ಲಿ ಕನ್ನಡ ಸಂಘದವರು ಮನೋಮೂರ್ತಿಯವರನ್ನು ಪರಿಚಯಿಸಿದರು. ಅವರು ' ಅಮೆರಿಕಾ ಮೆರಿಕಾ ' ಚಿತ್ರದ ಹಾಡುಗಳಿಗೆ ರಾಗ ಸಂಯೋಜನೆ ಮಾಡುವ ಇರಾದೆ ವ್ಯಕ್ತಪಡಿಸಿದರು. ನಾಗತಿ ಹಳ್ಳಿ ಅನುಮಾನಿಸಿದಾಗ ಮಾರನೇ ದಿನವೇ 52 ಟ್ಯೂನ್‌ಗಳೊಂದಿಗೆ ಹಾಜರಾದರಂತೆ. ' ಅಮೆರಿಕಾ ಅಮೆರಿಕಾ ' ಚಿತ್ರ ತೆರೆಕಂಡ ನಂತರ ' ನೂರು ಜನ್ಮಕೂ ನೂರಾರು ಜನ್ಮಕೂ ' ಹಾಡು ಆವರ್ಷದ ಹಿಟ್‌ ಗೀತೆಯಾಯಿತು. ಈ ತಿಂಗಳಲ್ಲೇ ಸೆಟ್ಟೇರಲಿರುವ ನಾಗತಿಹಳ್ಳಿ ಅವರ ಮುಂದಿನ ಚಿತ್ರಕ್ಕೂ ಮನೋಮೂರ್ತಿ ಅವರದ್ದೇ ಸಂಗೀತ.

ಈ ಮಧ್ಯೆ ಮನೋಮೂರ್ತಿ ಲಕ್ಷ್ಮಿನಾರಾಯಣ ಭಟ್ಟರ ಆಯ್ದ ಕವನಗಳಿಗೆ ರಾಗ ಸಂಯೋಜನೆ ಮಾಡಿ ' ಅಮೆರಿಕಾ ಭಾರತ ' ಕ್ಯಾಸೆಟ್‌ ಹೊರತಂದಿದ್ದಾರೆ. ಇದನ್ನು 'ವಿಚಿತ್ರ ರಾಗ ಸಂಯೋಜನೆಯಾದರೂ ಮತ್ತೆ ಮತ್ತೆ ಕೇಳಿದರೆ ಇಷ್ಟವಾಗುವ ಕ್ಯಾಸೆಟ್‌' ಎಂದು ಭಟ್ಟರೇ ವಿಮರ್ಶಿಸಿದ್ದಾರೆ. ಸಿದ್ಧ ಸೂತ್ರಕ್ಕಿಂತ ಭಿನ್ನವಾದ ರೀತಿಯಲ್ಲಿ ರಾಗಸಂಯೋಜನೆ ಮತ್ತು ವಾದ್ಯ ಸಂಯೋಜನೆ ಇರುವದರಿಂದ ಇಂಥಾದ್ದಕ್ಕೆ ಕಿವಿ-ಮನಸ್ಸು ಒಗ್ಗಬೇಕಾದರೆ ಕೆಲ ಕಾಲ ಹಿಡಿಯಬಹುದು ಅನ್ನೋದು ಅವರ ಅನಿಸಿಕೆ. ಅಡಿಗರ ' ಚಂಡ ಮದ್ದಳೆ ' ಯನ್ನೂ 'ಇದೇನು ಮಹಾ' ಅಂತ ಜನ ಅಂದಿಲ್ಲವೇ?

English summary
Will Sandalwood accept Ashok Patil, brother of B.C. Patil
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X