ಈಟಿವಿ ಕನ್ನಡ ವಾಹಿನಿ 'ಬಿಗ್' ರಿಯಾಲಿಟಿ ಶೋಗೆ ಕೈಹಾಕಿರುವ ಸುದ್ದಿ ಕಿರುತೆರೆ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಕಲರ್ಸ್ ವಾಹಿನಿ ನಡೆಸಿಕೊಡುತ್ತಿರುವ 'ಬಿಗ್ ಬಾಸ್' ರಿಯಾಲಿಟಿ ಶೋ ಈಗ ಕನ್ನಡದಲ್ಲೂ ಪ್ರಸಾರವಾಗಲು ವೇದಿಕೆ ಸಿದ್ಧವಾಗುತ್ತಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ 'ಬಿಗ್ ಬಾಸ್ ಶೋ' ನಿರೂಪಕರು ಎಂಬುದು ಈಗಾಗಲೆ ಎಲ್ಲೆಡೆ ಸುದ್ದಿಯಾಗಿದೆ. ಈಗಾಗಲೆ ಕಾರ್ಯಕ್ರಮದ ರೂಪರೇಷಗಳು ಆರಂಭವಾಗಿದ್ದು ಚಿತ್ರೀಕರಣ ಮುಂಬೈನಲ್ಲೇ ನಡೆಸಲು ತೀರ್ಮಾನಿಸಲಾಗಿದೆ. ಮುಂಬೈನ ಲೋನಾವಾನಾದಲ್ಲಿರುವ ಬಿಗ್ ಬಾಸ್ ಸೆಟ್ಸ್ ನಲ್ಲೇ ಕನ್ನಡ ಕಾರ್ಯಕ್ರಮ ಚಿತ್ರೀಕರಿಸಲಾಗುತ್ತದಂತೆ.
ಸರಿ ಸುಮಾರು ಮೂರು ತಿಂಗಳುಗಳ ಕಾಲ ಅಲ್ಲಿದ್ದು ಬಿಗ್ ಬಾಸ್ ಸ್ಪರ್ಧಿಗಳಿಗಾಗಿ ಬಲೆ ಬೀಸಲಾಗಿದೆ. ಸಿನಿಮಾ ತಾರೆಯರು, ಕ್ರೀಡಾಪಟುಗಳು, ಫ್ಯಾಷನ್ ಲೋಕದವರು, ಜನಪ್ರಿಯ ವ್ಯಕ್ತಿಗಳನ್ನು ಕಣಕ್ಕಿಳಿಸಲಿದೆ ಈಟಿವಿ ಕನ್ನಡ ವಾಹಿನಿ.
ವಿಭಿನ್ನ ಕ್ಷೇತ್ರದ, ಮನೋಭಾವದ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ ವಿವಿಧ ಸ್ಪರ್ಧೆಗಳನ್ನು ಒಡ್ಡಲಾಗುತ್ತದೆ. ಕಡೆಗೆ 'ಬಿಗ್ ಬಾಸ್' ಮನೆಯಲ್ಲಿ ಉಳಿದವರೇ ಗೆದ್ದಂತೆ. ಮೂಲಗಳ ಪ್ರಕಾರ ಈಟಿವಿ ಕನ್ನಡ ವಾಹಿನಿ ಈಗಾಗಲೆ ಹಲವಾರು ಜನಪ್ರಿಯ ವ್ಯಕ್ತಿಗಳನ್ನು ಬಿಗ್ ಬಾಸ್ ಕಣಕ್ಕೆ ಇಳಿಸಲು ಮಾತುಕತೆ ನಡೆಸಿದೆ.

































