Englishবাংলাગુજરાતીहिन्दीമലയാളംதமிழ்తెలుగు
 
Share This Story

ಸುವರ್ಣ ಟಿವಿ ರಂಗನಾಥ್ ಬಗ್ಗೆ ಏಳು ಪ್ಯಾರ

Written by: * ಶಾಮ್
Published: Saturday, June 18, 2011, 22:55 [IST]

ಸುವರ್ಣ ಟಿವಿ ರಂಗನಾಥ್ ಬಗ್ಗೆ ಏಳು ಪ್ಯಾರ

ಮೈಸೂರಿನಲ್ಲಿ ಪುಟಗೋಸಿ ವರದಿಗಾರನಾಗಿ ವೃತ್ತಿ ಆರಂಭ. ಅಲ್ಲಿಂದ ಕೆಎಸ್ಆರ್ ಟಿಸಿ ಬಸ್ಸು ಹತ್ತಿ ಬೆಂಗಳೂರಿಗೆ ಪ್ರಯಾಣ. ಮೆಜೆಸ್ಟಿಕ್ ನಿಂದ ಬಿಟಿಎಸ್ ಬಸ್ ಏರಿ ಕ್ವೀನ್ಸ್ ರಸ್ತೆಯವರೆಗೆ ಬಂದು ಕನ್ನಡಪ್ರಭಕ್ಕೆ ಸೇರ್ಪಡೆ. ಅಲ್ಲಿ ಮೊದಲು ವರದಿಗಾರ, ಆನಂತರ ಮುಖ್ಯ ವರದಿಗಾರ. ಕ್ರಮೇಣ ಅದೇ ಪತ್ರಿಕೆಯ ಸಂಪಾದಕ ಹುದ್ದೆಯವರೆಗೆ ಬೆಳೆದು ನಿಂತವರು ಎಚ್.ಆರ್. ರಂಗನಾಥ್. ಗೆಳೆಯರ ಬಳಗಕ್ಕೆ ಮತ್ತು ಆಗಾಗ ತಮ್ಮನ್ನು ತಾವೇ ಕರೆದುಕೊಳ್ಳುವಂತೆ ಅವರ ಹೆಸರು ರಂಗ.

ಆಗ ಕನ್ನಡಪ್ರಭ ಸಂಪಾದಕರಾಗಿದ್ದ ವಂಡರ್ ಕಣ್ ವೈ ಎನ್ ಕೆ ಹಠಾತ್ ಸಾವಿನಿಂದ ತೆರವಾದ ಜಾಗಕ್ಕೆ ಬಂದವರು ಕೆ. ಸತ್ಯನಾರಾಯಣ. ಕರ್ನಾಟಕ ಪತ್ರಕರ್ತರಿಗೆ ಗುರು ಸಮಾನರಾದ ಇವರು ನನಗೂ, ನಿಮಗೂ ಎಲ್ಲರಿಗೂ ಜಸ್ಟ್ ಸತ್ಯ. ಸತ್ಯ ಅವರ ನಿವೃತ್ತಿಯಿಂದ ಖಾಲಿಯಾದ ಕುರ್ಚಿಯಲ್ಲಿ ರಂಗ ಅವರನ್ನು ಕುಳ್ಳಿರಿಸಿದವರು news in English ಗುರು ಟಿ ಜೆ ಎಸ್ ಜಾರ್ಜ್.

ರಂಗ ಪಕ್ಕಾ ಪತ್ರಕರ್ತ. ದೂಸರಾ ಮಾತಿಲ್ಲ. ಅಪರಾಧ, ಕಾನೂನು, ಪೊಲೀಸು, ಕೋರ್ಟು, ಕೇಸು, ಜಾಮೀನು, ತೀರ್ಪು, ಮೇಲ್ಮನವಿ, ವಿಧಾನಸಭಾ ಕಲಾಪಗಳು, ಅಲ್ಲಿನ ನಡಾವಳಿಗಳು, ರಾಜಕಾರಣಿಗಳ ಸೋಗು, ರಾಜಕೀಯದ ಒಳಸುಳಿಗಳನ್ನು ಪದರಪದರವಾಗಿ ವರದಿ ಮಾಡುವುದು ಮತ್ತು ವಿಶ್ಲೇಷಣೆ ಮಾಡುವುದರಲ್ಲಿ ಬಲೇ ನಿಪುಣ.

ಮೂರೂವರೆ ದಶಕಗಳ ಕಾಲ ಒಂದೇ ಗೇರಿನಲ್ಲಿ ಓಡುತ್ತಿದ್ದ ಕನ್ನಡಪ್ರಭ ಲಾರಿಯ ಗೇರು ಬದಲಾಯಿಸಿದ್ದು ಸಂಪಾದಕ ರಂಗ. ಎಳೆಯರನ್ನು ಹುರಿದುಂಬಿಸುವುದೇನು, ತಂಡ ಕಟ್ಟುವುದೇನು, ಸುದ್ದಿಗೆ, ಸುದ್ದಿ ನಿರ್ವಹಣೆಗೆ, ಪುಟಕ್ಕೆ, ಪುಟ ನಿರ್ವಹಣೆಗೆ ಹೊಸ ಮಜಲು ಕೊಡುವುದೇನು, ಪತ್ರಿಕೆಗೆ ಹೊಸ ಕಳೆ ಬೆಳೆ ತಂದು ಕೊಟ್ಟದ್ದು ಇದೇ ರಂಗ. ಪರಂತು, ಆರು ವರ್ಷ ಏನೇ ತಿಪ್ಪರಲಾಗ ಹಾಕಿದರೂ ಪತ್ರಿಕೆಯ ಪ್ರಸಾರ ಸಂಖ್ಯೆ 2 ಲಕ್ಷದ ಗಡಿ ದಾಟಿಸಲಾಗಲಿಲ್ಲ. ಅದು ಬೇರೆ ವಿಷ್ಯ.

ಕೇವಲ ಕಂಟೆಂಟಿನಿಂದ ಪತ್ರಿಕೆ ಬೆಳೆಯದು ಎನ್ನುವ ಸತ್ಯ ನನಗೂ ಗೊತ್ತು, ಸೀತಾರಾಮ ಶಾಸ್ತ್ರಿಗಳಿಂದ ಮೊದಲುಗೊಂಡು ರಂಗಾವರೆಗೂ ನಾಲಕ್ಕು ದಶಕಗಳ ಅವಧಿಯಲ್ಲಿ ಕನ್ನಡಪ್ರಭ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಪ್ರತಿಯೊಬ್ಬರಿಗೂ ಗೊತ್ತು. ನಿಮಗೂ ಗೊತ್ತು. ಪತ್ರಿಕೆಯ ಸಂಪಾದಕರಾಗಿ ಈಗ ಚುಕ್ಕಾಣಿ ಹಿಡಿದಿರುವ ವಿಶ್ವೇಶ್ವರ ಭಟ್ಟರಿಗೂ ಗೊತ್ತಿದೆ.

ಹೀಗಿರುವಾಗ ಒಂದು ದಿನ ಏನಾಯಿತೆಂದರೆ ಏಶಿಯಾ ನೆಟ್ ಸುಪರ್ದಿನಲ್ಲಿ ಕುಂಟಾಪಿಲ್ಲೆ ಆಡುತ್ತಿದ್ದ ಸುವರ್ಣ ಟಿವಿ ಕನ್ನಡ ಚಾನಲ್ಲಿನಲ್ಲಿನ ಕಂಟೆಂಟ್ ಮುಖ್ಯಸ್ಥ ಶಶಿಧರ ಭಟ್ ಅವರ ಬಗ್ಗೆ ಮ್ಯಾನೇಜ್ ಮೆಂಟಿಗೆ ಅದ್ಯಾಕೋ ಬೋರು ಹೊಡೆಯಿತು. ಮಾತಿನ ಮಲ್ಲ ರಂಗಾ ಅವರಿಗೆ ಬುಲಾವ್ ಹೋಯಿತು. ತಾನಲ್ಲದೆ ಕನ್ನಡಪ್ರಭದಲ್ಲಿ ತನ್ನ ಜತೆ ಕೆಲಸ ಮಾಡುತ್ತಿದ್ದ ಎಲ್ಲ "ಟ್ಯಾಲೆಂಟೆಡ್ ಜರ್ನಲಿಸ್ಟು"ಗಳನ್ನು ಕಟ್ಟಿಕೊಂಡು ಡಬ್ಬಲ್ ತ್ರಿಬ್ಬಲ್ ಸಂಬಳ ಸಾರಿಗೆಗೆ ಸುವರ್ಣ ನ್ಯೂಸ್ ಚಾನಲ್ಲಿಗೆ ದಾಂಗುಡಿ ಇಟ್ಟಿತು ರಂಗಾ ಅಂಡ್ ಕಂಪನಿ.

"ಹದಿನೆಂಟು ತಿಂಗಳ ಕಾಲ ಸುವರ್ಣ ನ್ಯೂಸ್ ಚಾನಲ್ ಹೆಡ್ ಆಗಿ ಅಪಾರ ಅನುಭವ ಸಂಪಾದಿಸಿಕೊಂಡೆ. ಪ್ರಿಂಟ್ ಮೀಡಿಯಂ ಜನ ವಿದ್ಯುನ್ಮಾನ ಮಾಧ್ಯಮದಲ್ಲಿ ಮಿಂಚುವುದಿಲ್ಲ ಎಂಬ ಮಿಥ್ ಅನ್ನು ಡಿಮಿಸ್ಟಿಫೈ ಮಾಡಿದ ತೃಪ್ತಿ ನನ್ನದು. ಸುವರ್ಣ ಟಿವಿಯಿಂದಾಗಿ ನಾನೂ ಒಂದು ಬ್ರಾಂಡ್ ಆದೆ, ಚಾನಲ್ಲೂ ಒಂದು ಬ್ರಾಂಡ್ ಆಯಿತು" ಎಂದು ಹೇಳುತ್ತಾ ಜಯನಗರದ ಜಾವಾ ಸಿಟಿ ಕಾಫಿ ಶಾಪಿನಲ್ಲಿ ಮಾತಿಗೆ ಕುಳಿತರು ಹಂಚಿಕಡ್ಡಿಯ ತೂಕ, ಕುರುಚಲು ಗಡ್ಡ, ಎರಡು ಬೇಬಿನ ಬುಷ್ ಶರ್ಟ್, ಒಂದು ಸಲಕ್ಕೆ ಒಂದೇ ಸಿಗರೇಟು ಸೇದುವ ಜರ್ನಲಿಸ್ಟ್ ರಂಗ. (ಫೋಟೋ : ಕೆಎಂ ವೀರೇಶ್)

ಸೋಮವಾರ ಓದಿ : ರಂಗನ ಮುಂದೆ ಸಿಂಗ...

English summary
Brief introduction of Kannada journalist H R Ranganath, alias Ranga, ex-editor of Kannada Prabha, ex-editor of Suvarna news 24/7.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons