Englishবাংলাગુજરાતીहिन्दीമലയാളംதமிழ்తెలుగు

ಯೋಗರಾಜ್ ಭಟ್ಟರ ಡ್ರಾಮಾ ಚಿತ್ರ ವಿಮರ್ಶೆ ಓದಿ

Posted by:
Updated: Friday, April 26, 2013, 17:46 [IST]
 

Rating:
3.5/5
ಯೋಗರಾಜ್ ಭಟ್ಟರು ಬದಲಾಗಿಲ್ಲ. ಇಲ್ಲೂ ಅದೇ ವರಸೆ. ಪ್ರೇಮ ಕೇಸರಿ ಬಾತು, ಕಾಮ ಖಾರಾ ಬಾತು, ಜೀವನ ಚೌ ಚೌ ಬಾತು ಎಂದು ಡೈಲಾಗ್ ಗಳಲ್ಲೇ 'ಡ್ರಾಮಾ' ಆಡಿದ್ದಾರೆ. ಒಂದಕ್ಕಿಂತ ಒಂದು ಸೂಪರ್ ಡೈಲಾಗ್ ಗಳನ್ನು ಹೆಣೆದು ತುಂಡ್ ಹೈಕ್ಲ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದ್ದಾರೆ. ಹಾಡುಗಳಲ್ಲೇ ಮೈಮರೆಸಿದ್ದಾರೆ. ಪಾತ್ರಗಳಲ್ಲಿ ಪರವಶಗೊಳಿಸಿದ್ದಾರೆ.

ಯೋಗರಾಜ್ ಭಟ್ಟರ ಸಿನೆಮಾಗಳನ್ನು ನೆಚ್ಚಿಕೊಂಡ ಪ್ರೇಕ್ಷಕ ವರ್ಗ ಎಂದರೆ ನವ ಪ್ರೇಮಿಗಳು, ಯುವ ಪ್ರೇಮಿಗಳು, ವಿದ್ಯಾರ್ಥಿಗಳು, ಫ್ಯಾಮಿಲಿ ಆಡಿಯನ್ಸ್. ಚಿತ್ರಮಂದಿರದಲ್ಲಿ ಇದೇ ವರ್ಗ ತುಂಬಿ ತುಳುಕುತ್ತಿತ್ತು. ಈ ಬಾರಿ ಭಟ್ಟರು ತಮ್ಮ 'ಡ್ರಾಮಾ'ದಲ್ಲಿ ಯಾರಿಗೂ ನಿರಾಸೆ ಮಾಡಿಲ್ಲ.

ಡ್ರಾಮಾ ಚಿತ್ರದ ಪ್ಲಸ್ ಪಾಯಿಂಟ್ ಗಳೇನು?

ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಕಥೆ, ಸಂಭಾಷಣೆ. ಭಟ್ಟರ ಸಾಹಿತ್ಯದಂತೆಯೇ ಅವರ ಡೈಲಾಗ್ ಗಳು ಚಿತ್ರದ ಉದ್ದಕ್ಕೂ ಪ್ರೇಕ್ಷಕರನ್ನು ಕೆಣಕುತ್ತವೆ. ಕೃಷ್ಣ ಅವರ ಛಾಯಾಗ್ರಹಣ ಕಣ್ಣಿಗೆ ಹಿತಮಿತವಾಗಿದೆ. ಚಿತ್ರದಲ್ಲಿರುವ ಒಂದೇ ಒಂದು ಫೈಟ್ ನೋಡಿದರೆ ಒಂದು ಕ್ಷಣ ಯಾರಪ್ಪಾ ಫೈಟ್ ಮಾಸ್ಟರ್ ಅಂತ ಅನ್ನಿಸುತ್ತದೆ. ರವಿವರ್ಮಾ ಅವರ ಚಮತ್ಕಾರಕ್ಕೆ ಮರುಳಾಗಲೇ ಬೇಕು.

ಇಷ್ಟಕ್ಕೂ ಚಿತ್ರದಲ್ಲಿ ಕಥೆ ಇದೆಯೇ ಇಲ್ಲವೇ?

ಸಾಮಾನ್ಯವಾಗಿ ಭಟ್ಟರ ಸಿನೆಮಾಗಳಲ್ಲಿ ಕಥೆನೇ ಇರಲ್ಲ. ಕೇವಲ ಡೈಲಾಗ್ ಗಳಲ್ಲೇ ಆಟವಾಡುತ್ತಾರೆ ಎಂಬ ಮಹಾನ್ ಅಪವಾದ ಇದೆ. ಆದರೆ ಇಲ್ಲಿ ಅವರು ಸೊಗಸಾದ ಕತೆಯನ್ನು ಕೊಟ್ಟಿದ್ದಾರೆ. ಯಂಕ್ಟೇಶ, ಸತೀಶ ಏನೋ ಮಾಡಲು ಹೋಗಿ ಇನ್ನೇನು ಆಗುತ್ತದೆ. ನಂದಿನಿ (ರಾಧಿಕಾ ಪಂಡಿತ್) ಕಣ್ಣಿಗೆ ಬಿದ್ದು ಕತೆ ಮತ್ತೊಂದು ತಿರುವು ಪಡೆಯುತ್ತದೆ.

ಡ್ರಾಮಾ ಕಡೆಗೆ ಏನಾಗುತ್ತದಪ್ಪಾ ಯಂಕ್ಟೇಶ?

ನಂದಿನಿ ಹಿಂದೆಯೇ ಹೋಗಿ ಯಂಕ್ಟ ಸಂಕಟಕ್ಕೆ ಸಿಕ್ಕಿಬೀಳುತ್ತಾನೆ. ಇನ್ನೊಂದು ಕಡೆ ಸತೀಶ ಮೂಕ ಹುಡುಗಿ (ಸಿಂಧು ಲೋಕನಾಥ್)ಯನ್ನು ಎಂಜಾಯ್ ಮಾಡಲು ಸ್ಕೆಚ್ ಹಾಕುತ್ತಾನೆ. ಸತೀಶನಿಗೆ ಮೂಕ ಹುಡುಗಿ ಸಿಕ್ತಾಳಾ? ಯಂಕ್ಟನಿಗೆ ನಂದಿನಿ ಒಲೀತಾಳಾ? ಎಂಬುದೇ ಚಿತ್ರದ ಕಥಾಹಂದರ.

ಸುಚೇಂದ್ರ ಪ್ರಸಾದ್ ಮನಮಿಡಿಯುವ ಪಾತ್ರ

ಕಾಲೇಜು ಪ್ರಿನ್ಸಿಪಾಲರಾಗಿ ಸುಚೇಂದ್ರ ಪ್ರಸಾದ್ ಅವರದು ಮನಮಿಡಿಯುವ ಅಭಿನಯ. ಅವರ ಪತ್ನಿಯಾಗಿ ಮಾಳವಿಕಾ ಅವರು ಗಮನಸೆಳೆಯುತ್ತಾರೆ. ಹೊನ್ನವಳ್ಳಿ ಕೃಷ್ಣ, ಅಚ್ಯುತ ಕುಮಾರ್, ಅಭಿನಯಶ್ರೀ, ಉಮೇಶ್ ಅವರದು ಹಾಗೆ ಬಂದು ಹೀಗೆ ಹೋಗುವ ಪಾತ್ರವಾದರೂ ನೆನಪಿನಲ್ಲಿ ಉಳಿಯುತ್ತಾರೆ.

ಸಂಗೀತಕ್ಕಿಂತ ಸಾಹಿತ್ಯವೇ ಮೇಲು ಗುರು

ಡಾನ್ ಗಳ ಪಾತ್ರದಲ್ಲಿ ಹಿರಿಯ ನಟ ಲೋಹಿತಾಶ್ವ ಹಾಗೂ ಸಂಪತ್ (ರಾಧಿಕಾ ಪಂಡಿತ್ ತಂದೆ) ಅವರು ಮಿಂಚಿದ್ದಾರೆ. ಸನತ್ ಹಾಗೂ ಸುರೇಶ್ ಅವರ ಸಂಕಲನ ನೀಟಾಗಿದೆ. ವಿ ಹರಿಕೃಷ್ಣ ಸಂಗೀತಕ್ಕಿಂತಲೂ ಇಲ್ಲಿ ಸಾಹಿತ್ಯವೇ ಕಿವಿಗಳಲ್ಲಿ ಟುಟ್ಟಿ ಟುವ್ವಿ ಹಾಡುತ್ತದೆ.

ಮೂಕ ಹುಡುಗಿಯಾಗೊ ಸಿಂಧು ಪಾತ್ರ ಬೇಕಿತ್ತಾ?

ಮೊದಲರ್ಧದಲ್ಲಿ ನಿಧಾನಕ್ಕೆ ಸಾಗುವ ಕಥೆ ನಂತರ ಹೊಸ ಹೊಸ ತಿರುವು, ಸಸ್ಪೆನ್ಸ್ ಅಂಶಗಳಿಂದ ಪ್ರೇಕ್ಷಕರನ್ನು ಸೀಟಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ಮೂಕ ಹುಡುಗಿಯಾಗಿ ಸಿಂಧು ಲೋಕನಾಥ್ ಪಾತ್ರ ಬೇಕಿತ್ತಾ ಅನ್ನಿಸುತ್ತದೆ. ಆ ಪಾತ್ರವನ್ನು ಯಾಕೆ ಮೂಕ ಮಾಡಿದರೋ ಏನೋ? ಎಂಬ ಡೌಟು ಬರುತ್ತದೆ.

ದೇವರ ಇಚ್ಛೆಯಾ ಈ ಬೊಂಬೆ ಹೇಳ್ತದೆ, ಹಿಡ್ಕೋ ಹಿಡ್ಕೋ ಹಿಡ್ಕೋ

ಇಲ್ಲಿ ಮುಖ್ಯವಾಗಿ ಹೇಳಬೇಕಾಗಿರುವುದು ಅಂಬರೀಶ್ ಅವರ ಪಾತ್ರದ ಬಗ್ಗೆ. ಬೊಂಬೆ ತಿರುಗಿಸಿ ಭವಿಷ್ಯ ಹೇಳುವ ಪಾತ್ರದಲ್ಲಿ ಅವರು ಗಮನಸೆಳೆಯುತ್ತಾರೆ. "ಅವ್ನು ಹುಟ್ಸ್ತಾನೆ ಹುಟ್ಬೇಕು, ಬೆಳಸ್ತಾನೆ ಬೆಳೀಬೇಕು, ಹೊಗೆ ಹಾಕ್ತಾನೆ ಹಾಕಿಸ್ಕಬೇಕು..ದೇವರ ಇಚ್ಛೆಯಾ ಈ ಬೊಂಬೆ ಹೇಳ್ತದೆ, ಹಿಡ್ಕೋ ಹಿಡ್ಕೋ ಹಿಡ್ಕೋ ಬೊಂಬೆಯಾ" ಎಂದು ಅವರು ಒಂದು ಕಡೆ ಭಯ ಹುಟ್ಟಿಸಿ ಇನ್ನೊಂದು ಕಡೆ ಆಪ್ತರಾಗುತ್ತಾರೆ. ಬಹಳ ದಿನಗಳ ಬಳಿಕ ಅಂಬಿಗೆ ಒಳ್ಳೆಯ ಪಾತ್ರ ಸಿಕ್ಕಿದೆ. ಅದನ್ನು ಅವರು ಚೆನ್ನಾಗಿಯೇ ನಿಭಾಯಿಸಿದ್ದಾರೆ.

ನಮ್ಮ ಹಿತವಚನ ಏನಂದ್ರೆ ಒಮ್ಮೆ ನೋಡಿ ಎಂಜಾಯ್ ಮಾಡಿ

ಕಡೆಗೆ ಚಿತ್ರದಲ್ಲಿ ಒಂದು ಸಂದೇಶವೂ ಇದೆ. ಅದೇನೆಂದರೆ, ಚಿತ್ರ ಮೊದಲೇ ತುಂಡ್ ಹೈಕ್ಲ ಕಥೆಯಾದ ಕಾರಣ. ಅವರು ಎಲ್ಲಿ ದಾರಿ ತಪ್ಪಬಾರದು. ಚೆನ್ನಾಗಿ ಓದಿಕೊಳ್ಳಬೇಕು ಎಂಬ ಉದ್ದೇಶಕ್ಕೆ ಭಟ್ಟರು "ಚೆನ್ನಾಗಿ ಓದ್ಕೊಳ್ರಪ್ಪಾ" ಎಂಬ ಮಹಾನ್ ಸಂದೇಶವನ್ನೂ ನೀಡಿದ್ದಾರೆ. ಚಿತ್ರವನ್ನು ಸೀರಿಯಸ್ಸಾಗಿ ತಗೊಳ್ಳದೆ ಹೋಗಿ ನೋಡಿ ಹಗುರಾಗಿ ಎಂಬುದೇ ನಮ್ಮ ಹಿತವಚನ.


ಚಿತ್ರದಲ್ಲಿ ಕಾಮಿಡಿ ಇದೆ, ಆಕ್ಷನ್ ಇದೆ, ಕ್ರೈಂ ಇದೆ, ಥ್ರಿಲ್ಲಿಂಗ್ ಇದೆ, ಸಸ್ಪೆನ್ಸ್ ಇದೆ, ರೊಮ್ಯಾನ್ಸ್ ಇದೆ. ಮಂಡ್ಯದ ತುಂಡ್ ಹೈಕ್ಲಾಗಿ ಯಂಕ್ಟೇಶ (ಯಶ್) ಹಾಗೂ ಸತೀಶ (ನೀನಾಸಂ ಸತೀಶ್) ಚಿತ್ರದ ಉದ್ದಕ್ಕೂ ಚಿಂದಿ ಉಡಾಯಿಸಿದ್ದಾರೆ. ತಮ್ಮ ಅಭಿನಯದಲ್ಲೇ ರಾಧಿಕಾ ಪಂಡಿತ್ ತುಂಡ್ ಹೈಕ್ಲನ್ನು ತುಂಡ್ ತುಂಡ್ ಮಾಡಿದ್ದಾರೆ.

ಯಂಕ್ಟೇಶ ಹಾಗೂ ಸತೀಶನ ಬಾಯಲ್ಲಿ ಚಿತ್ರದ ಉದ್ದಕ್ಕೂ ಮಂಡ್ಯ ಭಾಷೆಯ ಡೈಲಾಗ್ ಗಳು ಪ್ರೇಕ್ಷಕರನ್ನು ಪಕಪಕ ಎಂದು ನಗಿಸುತ್ತವೆ. ಹಾಡು ಹಸೆ ಕವಿತೆ ಪೋಲಿ ಕತೆ ಬರೆಯೋದರಲ್ಲಿ ಎತ್ತಿದ ಕೈ ಯಂಕ್ಟ. ಇನ್ನು ಪರಮ ಪೋಲಿ ಹುಡುಗನಾಗಿ ನೀನಾಸಂ ಸತೀಶ್ ತಮ್ಮ ತಮ್ಮ ಪಾತ್ರಗಳಲ್ಲಿ ಲೀಲಾಜಾಲವಾಗಿ ವಿಹರಿಸಿದ್ದಾರೆ.

ಡ್ರಾಮಾ ಗ್ಯಾಲರಿ | ಡ್ರಾಮಾ ವಿಡಿಯೋ

Story first published:  Friday, November 23, 2012, 15:38 [IST]
English summary
Kannada film Drama review. Kannada romantic-comedy film written, directed and co-produced by Yograj Bhat. It stars Yash, Radhika Pandit, Satish Neenasam and Sindhu Lokanath in leading roles.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter