Englishবাংলাગુજરાતીहिन्दीമലയാളംதமிழ்తెలుగు

ಸೆಂಚುರಿ ಸ್ಟಾರ್ ಶಿವ ವಿಮರ್ಶೆ: 'ಓಂ' ನಮಃ ಶಿವಾಯ

Written by: ಉದಯರವಿ
Updated: Friday, April 26, 2013, 17:51 [IST]
 

Rating:
2.5/5

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 101ನೇ ಚಿತ್ರ ಎಂದರೆ ಅಭಿಮಾನಿಗಳ ಕನಸುಗಳು ನೂರೆಂಟು ಇರುತ್ತವೆ. ಮಾಸ್ ನಿರ್ದೇಶಕರೆಂದೇ ಗುರುತಿಸಿಕೊಂಡಿರುವ ಓಂ ಪ್ರಕಾಶ್ ರಾವ್ ಅವರ ಆಕ್ಷನ್ ಕಟ್ ಬಗ್ಗೆಯೂ ಕುತೂಹಲ ಇದ್ದೇ ಇತ್ತು. ಚಿತ್ರದಲ್ಲೂ ಸಾಕಷ್ಟು ಪಳಗಿದ ತಂತ್ರಜ್ಞರು, ಮಾಗಿದ ಕಲಾವಿದರು ಇದ್ದಾರೆ. ಆದರೂ ಚಿತ್ರ ಎಲ್ಲ ನಿರೀಕ್ಷೆಗಳನ್ನೂ ಹುಸಿ ಮಾಡಿದೆ.

ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿರುವ ಅವರ ಅಭಿನಯದಲ್ಲಿ ಪುಟಿಯುವ ಚೆಂಡಿನ ಉತ್ಸಾಹ ಕಾಣುತ್ತದೆ. ಲವರ್ ಬಾಯ್ ಆಗಿ, ಮಾಸ್ ರೋಲ್ ನಲ್ಲಿ ಅವರು ಮಿಂಚಿದ್ದಾರೆ. ಈ ಬಾರಿ ಹಾಡುಗಳಲ್ಲೂ ಶಿವಣ್ಣ ಮಸ್ತ್ ಆಗಿ ಹೆಜ್ಜೆ ಹಾಕಿರುವುದು ವಿಶೇಷ.

ಮೊದಲು ಚಿತ್ರದ ಮೈನಸ್ ಪಾಯಿಂಟ್ ಗಳನ್ನು ಪಟ್ಟಿ ಮಾಡುವುದಾದರೆ. ಚಿತ್ರದಲ್ಲಿ ಕತೆಗಿಂತಲೂ ಹೆಚ್ಚಾಗಿ ಮಾಸ್ ಅಂಶಗಳನ್ನೇ ತುರುಕಿರುವುದು ಕತೆಗೆ ಮುಳುವಾಗಿದೆ. ಇರುವ ಕತೆಗೆ ಚಿತ್ರಕತೆ ಹೆಣೆಯುವಲ್ಲಿ ಓಂ ಪ್ರಕಾಶ್ ರಾವ್ ನಿಜಕ್ಕೂ ಎಡವಿದ್ದಾರೆ. ಇನ್ನು ಹಾಡುಗಳ ಟೈಮಿಂಗ್ ಮಿಸ್ ಆಗಿರುವುದು ನಿಜಕ್ಕೂ ಬೇಸರದ ಸಂಗತಿ.

ಕತೆಗೆ ಪೂರಕವಾಗಿ ಮೂಡಿಬರಬೇಕಾದ ಹಾಡುಗಳು ಇದ್ದಕ್ಕಿದ್ದಂತೆ 'ಶಿವ' ಪೂಜೆಯಲ್ಲಿ ಕರಡಿ ಬಿಟ್ಟಂಗಾಗಿವೆ. ಊಟಕ್ಕಿಂತಲೂ ಉಪ್ಪಿನಕಾಯಿಯೇ ಜಾಸ್ತಿಯಾಗಿದೆ. ಬಹುಶಃ ಓಂ ಪ್ರಕಾಶ್ ರಾವ್ ಈ ಬಾರಿ ತಮ್ಮ ಎಂದಿನ ಶೈಲಿಯನ್ನು ಕೈಬಿಟ್ಟಂತಿದೆ. ಇನ್ನು ಕತೆಯ ವಿಚಾರಕ್ಕೆ ಬರುವುದಾದರೆ...

ಇದೊಂದು ಸೇಡಿನ ಕತೆ. ತಮ್ಮ ತಂದೆ ತಾಯಂದಿರನ್ನು ಕೊಂದ ಪಾಪಿಷ್ಠರನ್ನು ಕೊಂದು ಹಾಕುವುದು. ಅದರಲ್ಲೂ ನಾಯಕಿಯ ಪೋಷಕರನ್ನು ಶವಪೆಟ್ಟಿಗೆಯಲ್ಲಿಟ್ಟು ಜೀವಂತ ಹೂತಿರುತ್ತಾರೆ ದುಷ್ಟರು. ಚಿತ್ರದ ನಾಯಕ ಶಿವ (ಶಿವಣ್ಣ) ನಾಯಕಿ ಜೂಲಿ (ರಾಗಿಣಿ) ಸೇರಿ ತಮ್ಮ ತಂದೆತಾಯಂದಿರನ್ನು ಕೊಂದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಾರೆ.

ಇದಿಷ್ಟು ಕತೆಯನ್ನಿಟ್ಟುಕೊಂಡು ಓಂ ಪ್ರಕಾಶ್ ರಾವ್ ಅತ್ತ ಪಕ್ಕಾ ಮಾಸ್ ಚಿತ್ರವನ್ನೂ ಮಾಡಲಾಗದೆ ಇತ್ತ ಡ್ಯಾಶ್ ಅಂಡ್ ಡೇರಿಂಗ್ ಚಿತ್ರವನ್ನೂ ಮಾಡಲಾಗದೆ ಚಡಪಡಿಸಿದ್ದಾರೆ. ಬರೀ ಡ್ಯಾಶ್ ಡ್ಯಾಶ್ ನಲ್ಲೇ ಅವರು ಕೈತೊಳೆದುಕೊಂಡಿದ್ದಾರೆ. ಹತ್ತು ವರ್ಷಗಳ ಬಳಿಕ ಶಿವಣ್ಣನಿಗೆ ಆಕ್ಷನ್ ಕಟ್ ಹೇಳಿದ್ದಕ್ಕೋ ಏನೋ ಅವರು ಇಲ್ಲಿ ಸಂಪೂರ್ಣ ಸೋತಿದ್ದಾರೆ. ಬಹುಶಃ ಅವರಲ್ಲಿನ ಸರಕು ಖಾಲಿಯಾಯಿತೇನೋ.

ಇನ್ನು ಪಾಂಡುರಂಗ ಶೆಟ್ಟಿಯಾಗಿ ರಂಗಾಯಣ ರಘು ಅವರ ಪಾತ್ರವಂತೂ ಸಂಪೂರ್ಣಂ ತೆಲುಗುಮಯಂ. ಅವರು ಆದಿಯಿಂದ ಅಂತ್ಯದವರೆಗೂ ತೆಲುಗಿನಲ್ಲೇ ವೆಂಕಟರಮಣಸ್ವಾಮಿ ಗೋವಿಂದ ಗೋವಿಂದ. ಇನ್ನು ಸಾಯಿಕುಮಾರ್ ಅವರ ಸಹೋದರ ರವಿಶಂಕರ್ ಅವರ ಪಾತ್ರ ಬರೀ ಅಬ್ಬರಕ್ಕಷ್ಟೇ ಸೀಮಿತವಾಗಿದೆ. ರವಿಶಂಕರ್ ಅಬ್ಬರಕ್ಕೆ ತಕ್ಕಂತೆ ಗುರುಕಿರಣ್ ಸಂಗೀತವೂ ಆರ್ಭಟಿಸಿದೆ.

ಗುರುದತ್ ಅವರ ಪಾತ್ರದಲ್ಲೂ ಹೊಸತನವಿಲ್ಲ. ಉಳಿದಂತೆ ರವಿಕಾಳೆ, ಸುಚೇಂದ್ರ ಪ್ರಸಾದ್, ಸರಿಗಮ ವಿಜಿ,ಜಾನ್ ಕೊಕಿನ್, ಶೋಭರಾಜ್, ಬುಲೆಟ್ ಪ್ರಕಾಶ್,ಚಿತ್ರಾ ಶೆಣೈ, ಮನದೀಪ್ ರಾಯ್ ಪಾತ್ರಗಳು ಸಾಂದರ್ಭಿಕವಾಗಿ ಬಂದು ಹೋಗಿವೆ.

ಇನ್ನು ಚಿತ್ರದ ಪ್ಲಸ್ ಪಾಯಿಂಟ್ ಗಳ ಬಗ್ಗೆ ಹೇಳಬೇಕೆಂದರೆ ಚಿತ್ರದಲ್ಲಿನ ಒಂದೆರಡು ಹಾಡುಗಳ ಮೇಕಿಂಗ್ ಚೆನ್ನಾಗಿ ಮೂಡಿಬಂದಿದೆ. ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಕವಿರಾಜ್ ಹೆಣೆದಿರುವ ಅಪ್ಪು ಅಪ್ಪು, ಕೊಳ್ಳೆಗಾಲದಲ್ಲಿ ಹಾಗೂ ಊಸರವಳ್ಳಿ ಹಾಡುಗಳ ಕಾಸ್ಟ್ಯೂಮ್ಸ್, ಮೇಕಿಂಗ್ ಚೆನ್ನಾಗಿದೆ. ಗುರುಕಿರಣ್ ಸಂಗೀತದಲ್ಲಿ ಅಬ್ಬರ ಒಂಚೂರು ಕಡಿಮೆಯಾಗಿದ್ದಿದ್ದರೆ ಇನ್ನೊಂದಿಷ್ಟು ಸುಶ್ರಾವ್ಯವಾಗಿ ಇರುತ್ತಿತ್ತೇನೋ.

ಎಂ ಎಸ್ ರಮೇಶ್ ಅವರ ಸಂಭಾಷಣೆಗೆ ಹೆಚ್ಚಿನ ಅಂಕಗಳನ್ನು ಕೊಡಬಹುದು. "ಫುಟ್ ಪಾತ್ ಇರೋದು ಜನ ನಡೆದಾಡೋಕೆ, ಜೀವನ ಮಾಡೋದಕ್ಕಲ್ಲ..." ಎಂಬಂತಹ ಡೈಲಾಗ್ಸ್ ಹೇರಳವಾಗಿವೆ. ಫೈಟ್ ಇಷ್ಟಪಡುವವರಿಗೆ ಶಿವ ಎರಡು ಕಣ್ಣು ತೆರೆದರೆ ಕ್ಲಾಸ್. ಮೂರನೇ ಕಣ್ಣು ತೆರೆದರೆ ಮಾಸ್. ಮೂರೂ ಕಣ್ಣು ತೆರೆದರೆ ಖಲ್ಲಾಸ್.

ಸತ್ಯ ಹೆಗಡೆ ಅವರ ಛಾಯಾಗ್ರಹಣದಲ್ಲಿ ಗಮನಾರ್ಹವಾದ ಅಂಶಗಳೇನೂ ಇಲ್ಲ. ಈ ಚಿತ್ರದಲ್ಲೂ ಅಷ್ಟೇ, ರಾಗಿಣಿ ಗ್ಲಾಮರ್ ಗಷ್ಟೇ ಸೀಮಿತವಾಗಿದ್ದಾರೆ. ಅವರಿಗೆ ಚಿತ್ರದಲ್ಲಿ ಪವರ್ ಫುಲ್ ಪಾತ್ರ ಸಿಕ್ಕಿದ್ದರೂ ಅವರ ಅಭಿನಯದಲ್ಲಿ ಪಕ್ವತೆ ಕಾಣುವುದಿಲ್ಲ. ಅಭಿನಯದಲ್ಲಿ ಪೇಲವಾಗಿ ಕಾಣುವ ರಾಗಿಣಿ ಗ್ಲಾಮರ್ ಪಾತ್ರದಲ್ಲಿ ಪುಷ್ಕಳವಾಗಿ ಮಿಂಚಿದ್ದಾರೆ. ಚಿತ್ರವನ್ನು ಒಮ್ಮೆ ನೋಡಬೇಕು ಅನ್ನಿಸಿದರೆ ಅದೇ ನಿಮ್ಮ ಪುಣ್ಯ!

ಶಿವಣ್ಣ ಅಭಿನಯದ ಚಿತ್ರಗಳ ವಿಮರ್ಶೆ: ಜೋಗಯ್ಯ | ಮೈಲಾರಿ | ತಮಸ್ಸು | ಚೆಲುವೆಯೇ ನಿನ್ನೇ ನೋಡಲು

Story first published:  Friday, August 24, 2012, 15:34 [IST]
English summary
Read Kannada film Shiva review. Century Star Shivarajkumar most awaited 101st film Shiva. Shiva is lavish and colourful. The action sequences are brilliant and songs have been well shot. But the film fails in direction and screenplay.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons